Udayavani | Aug 05, 2012
ನವದೆಹಲಿ : ಸಾಕಷ್ಟು ಬಿಸಿ ಬಿಸಿ ಚರ್ಚೆ, ವಾಗ್ಧಾದ, ಟೀಕಾ ಪ್ರಹಾರಕ್ಕೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳಿರುವ ಸಂಸತ್ತಿನ ಮುಂಗಾರು ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ. ವಿಪಕ್ಷಗಳು ದಾಳಿಗೆ ಸಜ್ಜಾಗಿದ್ದರೆ, ಪ್ರಮುಖ ಸೇನಾನಿ ಪ್ರಣಬ್ ಮುಖರ್ಜಿ ಅವರನ್ನು ಕಳೆದುಕೊಂಡ ಯುಪಿಎ ಸರ್ಕಾರ, ಲೋಕಸಭೆಯಲ್ಲಿ ಹೊಸ ಸೇನಾಪತಿಯ ನೇತೃತ್ವದಲ್ಲಿ ದಾಳಿ ಎದುರಿಸಲು ಸಜ್ಜಾಗಿದೆ.
ಎಂದಿನಂತೆ ಬೆಲೆ ಏರಿಕೆ ಸಮಸ್ಯೆ, ಗಂಭೀರವಾಗಿ ಕಾಡಿರುವ ಆರ್ಥಿಕ ಕುಸಿತ, ಅಸ್ಸಾಂನಲ್ಲಿ ಮರುಕಳಿಸಿರುವ ಜನಾಂಗೀಯ ಸಂಘರ್ಷ, ಮುಂಗಾರು ವೈಫಲ್ಯ. ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು ಆತಂಕದ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಎರಡು ರೈಲು ಅಪಘಾತಗಳು, ಪುಣೆ ಸರಣಿ ಸ್ಫೋಟ, ದೇಶದ ಹಲವು ಭಾಗಗಳಲ್ಲಿ ಕಾಡಿರುವ ಬರ ಪರಿಸ್ಥಿತಿ, ಆಹಾರ ಭದ್ರತಾ ಮಸೂದೆ, ಮನೇಸರ್ ಮಾರುತಿ ಘಟಕದಲ್ಲಿ ಹಿಂಸಾಚಾರ ಪ್ರಮುಖವಾಗಿ ಸರ್ಕಾರದ ನಿದ್ದೆಗೆಡಿಸುವ ಸಾಧ್ಯತೆಗಳಿವೆ.
ಮುಂಗಾರು ಅಧಿವೇಶನ ಸೆ.7ರವರೆಗೆ ನಡೆಯಲಿದ್ದು, ಈ ವೇಳೆಯಲ್ಲಿ ಒಟ್ಟು 31 ಮಸೂದೆ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಈ ಪೈಕಿ ಲೋಕಪಾಲ ಮಸೂದೆ ಸೇರಿಲ್ಲವಾದರೂ, ಮಸೂದೆ ಕುರಿತು ಪರಿಶೀಲನೆ ನಡೆಸುತ್ತಿರುವ ರಾಜ್ಯಸಭೆಯ ಸ್ಥಾಯಿ ಸಮಿತಿ ತನ್ನ ವರದಿಯನ್ನು ಬೇಗ ನೀಡಿದ ಪಕ್ಷದಲ್ಲಿ ಅದು ಕೂಡಾ ಮಂಡನೆಯಾದರೂ ಆಗಬಹುದು ಎಂದು ಮೂಲಗಳು ಹೇಳಿವೆ.
ಟಿಎಂಸಿ ವಿರೋಧ
ಈ ನಡುವೆ ಸರ್ಕಾರದ ಪ್ರಸ್ತಾವಿತ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ಪಿಂಚಣಿ ನಿಧಿಯನ್ನು ಖಾಸಗೀಕರಣಗೊಳಿಸುವುದು ಮತ್ತು ಫಾರ್ವಡ್ ಟ್ರೇಡಿಂಗ್ ಮಸೂದೆಗೆ ವಿರೋಧ ವ್ಯಕ್ತಪಡಿಸುವುದಾಗಿ ತೃಣಮೂಲ ಕಾಂಗ್ರೆಸ್ ಘೋಷಿಸಿದೆ. ಆದರೆ ಉಪರಾಷ್ಟ್ರಪತಿ ಚುನಾವಣೆ ಕಾರಣ ಸೋನಿಯಾ ಸೋಮವಾರ ಕರೆದಿರುವ ಭೋಜನ ಕೂಟಕ್ಕೆ ತಮ್ಮ ಸಂಸದರಿಗೆ ಹೋಗಿ ಬನ್ನಿ ಎಂಬ ಸಂದೇಶವನ್ನು ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಸಂಸದರಿಗೆ ರವಾನಿಸಿದ್ದಾರೆ.
ಇದೇ ವೇಳೆ, ಮುಂಗಾರು ಅಧಿವೇಶನಕ್ಕೂ ಮುನ್ನ ಸುಗಮ ಕಲಾಪ ನಡೆಸುವ ನಿಟ್ಟಿನಲ್ಲಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.