Wednesday, May 22, 2013
Last Updated: 1:59:53 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗುಜರಾತ್‌, ಹಿ.ಪ್ರ. ಚುನಾವಣೆಯಲ್ಲಿ ಸ್ಪರ್ಧೆ
    • ಇನ್ನೂ ನಿರ್ಧಾರ ಕೈಗೊಳ್ಳದ ಅಣ್ಣಾ ತಂಡ
    • ಚುನಾವಣಾ ರಾಜಕೀಯಕ್ಕೆ ಧುಮುಕುವ ಘೋಷಣೆಯನ್ನು ಈಗಾಗಲೇ ಮಾಡಿರುವ ಅಣ್ಣಾ ತಂಡ.

      • Udayavani | Aug 05, 2012

        ಹೊಸದಿಲ್ಲಿ : ಚುನಾವಣಾ ರಾಜಕೀಯಕ್ಕೆ ಧುಮುಕುವ ಘೋಷಣೆಯನ್ನು ಈಗಾಗಲೇ ಮಾಡಿರುವ ಅಣ್ಣಾ ತಂಡ, ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗೆಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಚುನಾವಣೆಗಳು, ಅಣ್ಣಾ ತಂಡಕ್ಕೆ ಸವಾಲಾಗಿ ಪರಿಣಮಿಸಿದ್ದು, ತಂಡ ಸ್ಪರ್ಧಾಕಣಕ್ಕೆ ಇಳಿಯುವ ಸಾಧ್ಯತೆಗಳ ಕುರಿತಂತೆ ಚರ್ಚೆಗಳು ಆರಂಭಗೊಂಡಿವೆ.

        ಭ್ರಷ್ಟಾಚಾರ ವಿರೋಧಿ ನಿಲುವನ್ನು ಮುಂದಿಟ್ಟು 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿರುವ ಅಣ್ಣಾ ಹಜಾರೆ ತಂಡ, ಈವರೆಗೆ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಂಬಂಧ ಚಕಾರ ಎತ್ತಿಲ್ಲ. ಕಳೆದ 16 ತಿಂಗಳಿನಿಂದ ಕೇಂದ್ರದ ಯುಪಿಎ ಸರಕಾರವನ್ನು ಗುರಿಯಾಗಿಟ್ಟುಕೊಂಡು ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸುತ್ತಾ ಬಂದಿರುವ ಅಣ್ಣಾ ತಂಡ, ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಗುಜರಾತ್‌, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ.

        ಜನಕೇಂದ್ರಿತ ರಾಜಕೀಯ ಪರ್ಯಾಯವನ್ನು ದೇಶದಲ್ಲಿ ಅಸ್ತಿತ್ವಕ್ಕೆ ತರಲಾಗುವುದು. ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ವಿಚಾರವಾಗಿ ಇನ್ನಷ್ಟೇ ತೀರ್ಮಾನಿಸಬೇಕಿದೆ ಎಂದು ತಂಡದ ಸದಸ್ಯ ಪ್ರಶಾಂತ್‌ ಭೂಷಣ್‌ ಹೇಳಿದರು. ಈ ಬಗೆಗೆ ಹಾಗೂ ಇನ್ನಿತರ ಪ್ರಮುಖ ವಿಚಾರಗಳ ಕುರಿತಂತೆ ಚರ್ಚಿಸಲು ತಂಡದ ಕೋರ್‌ ಕಮಿಟಿ ಅತೀ ಶೀಘ್ರದಲ್ಲಿ ಸಭೆ ಸೇರಲಿದೆ ಎಂದವರು ತಿಳಿಸಿದರು.

        ದೇಶದಲ್ಲಿ ರಾಜಕೀಯ ಪರ್ಯಾಯವನ್ನು ಸ್ಥಾಪಿಸುವ ವಿಚಾರವಾಗಿ ಜನಬೆಂಬಲ ಕ್ರೋಢೀಕರಿಸಲು 'ಸ್ವರಾಜ್‌ ಯಾತ್ರಾ'ವನ್ನು ಹಮ್ಮಿಕೊಳ್ಳಲಾಗುವುದು. ತಂಡದ ರಾಜಕೀಯ ಪ್ರವೇಶ ನಿರ್ಧಾರಕ್ಕೆ ಅಪಸ್ವರ ಕೇಳಿ ಬಂದಿರುವ ಹೊರತಾಗಿಯೂ ಹೊಸ ಮೈತ್ರಿಗಳನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ಈ ಯಾತ್ರೆಯ ಮೂಲಕ ನಡೆಸಲು ತಂಡ ತೀರ್ಮಾನಿಸಿದೆ. ತಂಡದ ಸದಸ್ಯರಾದ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹಾಗೂ ಮೇಧಾ ಪಾಟ್ಕರ್‌ ಅವರು ತಂಡದ ರಾಜಕೀಯ ಪ್ರವೇಶದ ಬಗೆಗೆ ಈಗಾಗಲೇ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಗೆಡಹಿದ್ದಾರೆ.

        ಪಕ್ಷದ ಹೊರತಾದ ರಾಜಕೀಯ ಪರ್ಯಾಯದ ಅಗತ್ಯವಿದೆ ಎಂದು ಮೇಧಾ ಅಭಿಪ್ರಾಯ ಪಟ್ಟಿದ್ದರೆ, ಸಂತೋಷ್‌ ಹೆಗ್ಡೆ ಅವರು ಅಣ್ಣಾ ತಂಡದ ರಾಜಕೀಯ ಪಕ್ಷದ ವಿಚಾರದ ಬಗೆಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿ, ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರ ಪರವಾಗಿ ಪ್ರಚಾರಕ್ಕೆ ತೆರಳುವುದಾಗಿ ಭರವಸೆ ನೀಡಿದ್ದಾರೆ.

        ತಂಡ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಪರ್ಯಾಯ ರಚನೆಯ ನಿರ್ಧಾರ ಕೈಗೊಂಡಿದೆ. ತಂಡದ ಸದಸ್ಯರು ನೀಡುತ್ತಿರುವ ಹೇಳಿಕೆಗಳು ಕೇವಲ ಅಭಿಪ್ರಾಯ ಭೇದಗಳೇ ಹೊರತು ಭಿನ್ನಮತ ಅಲ್ಲ ಎಂದು ತಂಡದ ಇನ್ನೋರ್ವ ಸದಸ್ಯ ಕುಮಾರ್‌ ವಿಶ್ವಾಸ್‌ ನುಡಿದರು. ತಂಡದ ಎಲ್ಲಾ ಸದಸ್ಯರು ಅತೀ ಶೀಘ್ರದಲ್ಲಿ ಸಭೆ ಸೇರಿ, ಜನತೆಯ ಅಭಿಪ್ರಾಯವನ್ನು ಸಂಗ್ರಹಿಸುವ ಸಲುವಾಗಿ ದೇಶಾದ್ಯಂತ ಪ್ರವಾಸವನ್ನು ಕೈಗೊಳ್ಳುವ ಬಗೆಗೆ ರೂಪುರೇಶೆಗಳನ್ನು ಅಂತಿಮಗೊಳಿಸಲಿದೆ ಎಂದವರು ತಿಳಿಸಿದರು.

        ಲೋಕಸಭಾ ಚುನಾವಣೆಗೂ ಮುನ್ನ ಲೋಕಪಾಲ್‌ ಮಸೂದೆ 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಲೋಕಪಾಲ್‌ ಮಸೂದೆಯನ್ನು ಸರಕಾರ ಅಂಗೀಕರಿಸಲಿದೆ ಎಂದು ಕಾನೂನು ಸಚಿವ ಸಲ್ಮಾನ್‌ ಖುರ್ಷಿದ್‌ ತಿಳಿಸಿದರು. ಅಣ್ಣಾ ಹಜಾರೆ ತಂಡ ಇದೀಗ ನಿರಶನವನ್ನು ಕೈಬಿಟ್ಟಿರುವುದರಿಂದ ಇಂತಹ ಸನ್ನಿವೇಶಗಳನ್ನು ನಿಭಾಯಿಸಲು ಸರಕಾರಕ್ಕೆ ಮತ್ತಷ್ಟು ಸಾಧನಗಳು ಲಭಿಸಿದಂತಾಗಿದೆ ಎಂದವರು ಹೇಳಿದರು.

        ಲೋಕಪಾಲ್‌ ಮಸೂದೆಯನ್ನು ಸಂಸತ್‌, ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಅಂಗೀಕರಿಸಲಿದೆ. ಆದರೆ ಈ ಬಗ್ಗೆ ನಿರ್ದಿಷ್ಟ ದಿನಾಂಕವನ್ನು ತಾನು ಹೇಳಲಾರೆ ಎಂದವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

        ಹಜಾರೆ ಅವರೊಂದಿಗಿನ ಭೇಟಿಯನ್ನು ಪ್ರಸ್ತಾಪಿಸಿದ ಖುರ್ಷಿದ್‌, ಹಜಾರೆ ಅವರು, ಸರಕಾರದ ಎ,ಬಿ,ಸಿ, ಡಿ. ಗ್ರೂಪ್‌ನ ಅಧಿಕಾರಿಗಳು ಲೋಕಪಾಲದಡಿಯಲ್ಲಿಬರಬೇಕು ಹಾಗೂ ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ಹಾಗೂ ನಾಗರಿಕ ಸನ್ನದನ್ನು ಜಾರಿಗೊಳಿಸಬೇಕೆಂಬ ಬೇಡಿಕೆಗಳನ್ನು ತನ್ನ ಮುಂದಿಟ್ಟಿದ್ದರು. ತಾನು ಸರಕಾರ, ಮಸೂದೆಯ ಅಂಗೀಕಾರಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗೆಗೆ ಅವರಿಗೆ ವಿವರಿಸಿದುದಾಗಿ ಹೇಳಿದರು.

        ಅವಸರದ ನಿರ್ಧಾರ : ಮೇಧಾ ಪಾಟ್ಕರ್‌

        ರಾಜಕೀಯವನ್ನು ಪ್ರವೇಶಿಸುವ ಅಣ್ಣಾ ತಂಡದ ನಿರ್ಧಾರವನ್ನು ಅವಸರದ ತೀರ್ಮಾನ ಎಂದು ಟೀಕಿಸಿರುವ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್‌ ಅವರು, ತಂಡದ ಈ ನಿರ್ಧಾರವನ್ನು ತಾನು ವಿರೋಧಿಸಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.

        ದೇಶದ ಇನ್ನಷ್ಟು ಜನರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ತಂಡ ರಾಜಕೀಯ ಪ್ರವೇಶದ ನಿರ್ಧಾರವನ್ನು ಕೈಗೊಳ್ಳಬಹುದಾಗಿತ್ತು. ಪ್ರತಿಯೊಂದು ಹೋರಾಟದ ಹಿಂದೆಯೂ ರಾಜಕೀಯ ಅಂತರ್ಗತವಾಗಿರುವಾಗ ಅಣ್ಣಾ ತಂಡದ ಈ ನಿರ್ಧಾರ, ತನಗೇನೂ ದೊಡ್ಡ ನಿರ್ಧಾರ ಎಂದು ಅನಿಸುತ್ತಿಲ್ಲ. ಚುನಾವಣೆಯನ್ನು ಎದುರಿಸದೆ ಯಾವುದೇ ಪರಿಣಾಮಕಾರಿ ಬದಲಾವಣೆ ಸಾಧ್ಯವಿಲ್ಲ ಎಂದು ಭಾವಿಸಿ, ಅಣ್ಣಾ ತಂಡ ಈ ನಿರ್ಧಾರ ಕೈಗೊಂಡಿರಬಹುದು ಎಂದವರು ಅಭಿಪ್ರಾಯಪಟ್ಟರು.

        ದೇಶದಲ್ಲಿ ಬೃಹತ್‌ ಪ್ರಮಾಣದಲ್ಲಿ ಚುನಾವಣಾ ಸುಧಾರಣೆಗಳು ನಡೆಯುವ ಅಗತ್ಯವಿದ್ದು, ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸುವಂತಾಗಬೇಕು ಎಂದು ಮೇಧಾ ಪಾಟ್ಕರ್‌ ಹೇಳಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus