ಹೊಸದಿಲ್ಲಿ : ದೇಶದಿಂದ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಲು ಇಚ್ಛಾಶಕ್ತಿಯಿಲ್ಲ ಎಂದು ಸರಕಾರವನ್ನು ದೂಷಿಸಿರುವ ಅಣ್ಣಾ ಹಜಾರೆ ರಾಜಕೀಯ ಪರ್ಯಾಯ ಒದಗಿಸುವ ಪಕ್ಷವನ್ನು ಬೆಂಬಲಿಸಿ ಅದರ ಅಭ್ಯರ್ಥಿಗಳಿಗೆ ಮತ ಹಾಕಲು ಕರೆಕೊಟ್ಟಿದ್ದಾರೆ.ಉಪವಾಸ ನಿರಶನ ಮುಕ್ತಾಯಗೊಳಿಸಿದ ಬಳಿಕ ಮರಳಿ ತನ್ನ ಬ್ಲಾಗ್ ಬರವಣಿಗೆ ಪ್ರಾರಂಭಿಸಿರುವ ಹಜಾರೆ ದೇಶಕ್ಕೆ ಪ್ರಸ್ತುತ ಪರ್ಯಾಯ ವ್ಯವಸ್ಥೆಯೊಂದರ ಅಗತ್ಯವಿದೆ ಹಾಗೂ ಗ್ರಾಮಸಭೆಗಳು ಇದಕ್ಕೆ ಸಂಬಂಧಿಸಿ ಗೊತ್ತುವಳಿಯನ್ನು ಮಂಜೂರು ಮಾಡಿಕೊಳ್ಳುವುದರ ಜತೆಗೆ ಶೇ. 90ಕ್ಕಿಂತ ಹೆಚ್ಚು ಜನರು ಮತ ಚಲಾಯಿಸುವುದನ್ನು ಖಾತರಿಪಡಿಸಿಕೊಳ್ಳಬೇಕೆಂದಿದ್ದಾರೆ.ಈಗ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಪಾರ ಮೊತ್ತದ ಹಣ ಬೇಕಾಗುತ್ತದೆ. ಚುನಾವಣೆಯಲ್ಲಿ ಹೋರಾಡುವ ಮೂಲಕ ರಾಜಕೀಯ ಪರ್ಯಾಯ ಕೊಡುವುದಕ್ಕೆ ಹಣ ಎಲ್ಲಿಂದ ತರುವುದು? ದೇಶದ ಎಲ್ಲ ಆರು ಲಕ್ಷ ಗ್ರಾಮಸಭೆಗಳು ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ಈ ಪರ್ಯಾಯವನ್ನು ಒದಗಿಸುವ ಪಕ್ಷಕ್ಕೆ ಮತ ಹಾಕುವ ಗೊತ್ತುವಳಿಯನ್ನು ಅಂಗೀಕರಿಸಿಕೊಳ್ಳಬೇಕು. ಈ ಗೊತ್ತುವಳಿ ಮಂಜೂರಾದರೆ ನಮಗೆ ರಾಜಕೀಯ ಪರ್ಯಾಯವನ್ನು ನೀಡಲು ಸಾಧ್ಯ ಎಂದಿದ್ದಾರೆ.ಯುವ ಜನತೆ ಮತ್ತು ವಿದ್ಯಾರ್ಥಿಗಳು ಹಳ್ಳಿ ಹಳ್ಳಿಗಳಿಗೆ ಹೋಗಿ ಈ ಗೊತ್ತುವಳಿಯ ಬಗ್ಗೆ ಅರಿವು ಮೂಡಿಸಬೇಕು. ಶೇ. 90ಕ್ಕಿಂತ ಹೆಚ್ಚು ಜನರು ಮತದಾನ ಮಾಡುವುದನ್ನು ಖಾತರಿಪಡಿಸಿಕೊಳ್ಳುವ ಗೊತ್ತುವಳಿಯನ್ನು ಕೂಡ ಗ್ರಾಮಸಭೆಗಳು ಅಂಗೀಕರಿಸಿಕೊಳ್ಳಬೇಕು. ರಾಜಕೀಯ ಪರ್ಯಾಯ ಕೊಡುವುದು ಸುಲಭದ ಕೆಲಸವಲ್ಲ ಹಾಗೆಂದು ಅಸಾಧ್ಯವೂ ಅಲ್ಲ ಎಂದು ಬರೆದಿದ್ದಾರೆ.ನಾನು ಪಕ್ಷ ಕಟ್ಟುವುದಿಲ್ಲ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಉತ್ತಮ ವ್ಯಕ್ತಿಗಳು ಸಂಸತ್ತಿಗೆ ಆಯ್ಕೆಯಾಗುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ದೇಶಾದ್ಯಂತ ಪ್ರವಾಸ ಮಾಡುತ್ತೇನೆ. ಭ್ರಷ್ಟಾಚಾರದಿಂದಾಗಿ ತತ್ತರಿಸುತ್ತಿರುವ ಜನರು ರಾಜಕೀಯ ಪರ್ಯಾಯವನ್ನು ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.