ಹೊಸದಿಲ್ಲಿ : ಬಲಿಷ್ಠ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ನಡೆಸಲಾದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯಗೊಂಡ ಬಳಿಕ ಇದೇ ಮೊದಲ ಬಾರಿಗೆ ರವಿವಾರ ಸಭೆ ಸೇರಿದ ಅಣ್ಣಾ ತಂಡದ ಸದಸ್ಯರು, ರಾಜಕೀಯ ಪರ್ಯಾಯ ರಚನೆಯ ತಮ್ಮ ನಿರ್ಧಾರದ ಕುರಿತಂತೆ ಚರ್ಚೆ ನಡೆಸಿದರು. ಚುನಾವಣಾ ರಾಜಕೀಯ ಪ್ರವೇಶಿಸುವ ಬಗೆಗೆ ಕಾರ್ಯತಂತ್ರಗಳನ್ನು ಹೆಣೆಯಲು ಈ ಸಭೆಯಲ್ಲಿ ವ್ಯಾಪಕ ವಿಚಾರವಿಮರ್ಶೆಗಳು ನಡೆದುವು.ಸಭೆಯಲ್ಲಿ ಪಾಲ್ಗೊಂಡಿದ್ದ ಅಣ್ಣಾ ಹಜಾರೆ ಹಾಗೂ ಅವರ ತಂಡದ ಸದಸ್ಯರು, ರಾಜಕೀಯ ಪರ್ಯಾಯದ ಹೆಸರು, ಪಕ್ಷದ ಸಂವಿಧಾನ ರಚನೆ ಮತ್ತಿತರ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ಹಜಾರೆ ಅವರಲ್ಲದೆ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋದಿಯಾ, ಕಿರಣ್ ಬೇಡಿ, ಪ್ರಶಾಂತ್ ಭೂಷಣ್, ಕುಮಾರ್ ವಿಶ್ವಾಸ್ ಹಾಗೂ ಸಂಜಯ್ ಸಿಂಗ್ ಅವರು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.ಜಂತರ್ ಮಂತರ್‌ನಲ್ಲಿ ಅಣ್ಣಾ ತಂಡ ಉಪವಾಸ ಸತ್ಯಾಗ್ರಹದಲ್ಲಿ ನಿರತವಾಗಿದ್ದಾಗ ಅಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು, ಅಣ್ಣಾ ತಂಡದ ರವಿವಾರದ ಸಭೆಯಲ್ಲಿ ಪಾಲ್ಗೊಂಡ ಹೊಸ ಮುಖವಾಗಿತ್ತು. ಯೋಗೇಂದ್ರ ಯಾದವ್ ಅವರು, ಆರಂಭದಿಂದಲೂ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ರಾಜಕೀಯ ಸ್ಪರ್ಶದ ಅಗತ್ಯದ ಬಗೆಗೆ ಪ್ರತಿಪಾದಿಸುತ್ತಲೇ ಬಂದಿದ್ದರು.ರಾಜಕೀಯ ಪರ್ಯಾಯದ ಘೋಷಣೆಯೊಂದಿಗೆ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ಎರಡು ದಿನಗಳ ಬಳಿಕ ಈ ಸಭೆ ನಡೆದಿದೆ.ಇದೊಂದು ಅನೌಪಚಾರಿಕ ಸಭೆಯಾಗಿದ್ದು, ಅಣ್ಣಾ ಅವರ ಆರೋಗ್ಯವನ್ನು ವಿಚಾರಿಸಲು ಹಾಗೂ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ನಾವೆಲ್ಲರೂ ಇಲ್ಲಿಗೆ ಆಗಮಿಸಿದ್ದೆವು ಎಂದು ತಂಡದ ಸದಸ್ಯೆ ಕಿರಣ್ ಬೇಡಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.ರಾಜಕೀಯ ಪರ್ಯಾಯದ ಬಗೆಗೆ ಚರ್ಚೆಗಳು ಮುಂದುವರಿದಿದ್ದು, ನಿರ್ಧಾರ ಕೈಗೊಂಡ ಬಳಿಕ ಅದನ್ನು ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದರು. ನೂತನ ಪಕ್ಷಕ್ಕೆ ಹೆಸರುಗಳನ್ನು ಸೂಚಿಸಿ 500ಕ್ಕೂ ಅಧಿಕ ಸಂದೇಶಗಳು ಹಾಗೂ ಸಲಹೆಗಳು ಬಂದಿವೆ. ಬಹಳಷ್ಟು ಮಂದಿ 'ಸ್ವರಾಜ್ ಪಾರ್ಟಿ' ಎಂಬ ಹೆಸರನ್ನು ಪ್ರಸ್ತಾಪಿಸಿದ್ದಾರೆ. ರವಿವಾರದ ಸಭೆಯಲ್ಲಿ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಚರ್ಚೆಗಳು ಮುಂದುವರಿದಿವೆ ಎಂದವರು ಹೇಳಿದರು.ಆಗಸ್ಟ್ 9ರಿಂದ ಯೋಗಗುರು ಬಾಬಾ ರಾಮ್‌ದೇವ್ ಆರಂಭಿಸಲಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಮಗೆ ಈ ವರೆಗೆ ಯಾವುದೇ ಆಹ್ವಾನ ಬಂದಿಲ್ಲ. ಆಹ್ವಾನ ಬಂದಾಗ ಈ ಬಗ್ಗೆ ನೋಡೋಣ ಎಂದು ಕೇಜ್ರಿವಾಲ್ ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.