ಚಿತ್ರದುರ್ಗ/ಹೈದರಾಬಾದ್: ಸತತ ಮೂರು ದಿನಗಳಿಂದ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನು ಲಂಚ ಪ್ರಕರಣದಲ್ಲಿ ಆಂಧ್ರ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ವಿಚಾರಣೆಗೆ ಒಳಗಾಗುತ್ತಿರುವ ವಿಚಾರಣೆ ಎದುರಿಸುತ್ತಿರುವ ಕೆಎಂಎಫ್ ಅಧ್ಯಕ್ಷ, ಶಾಸಕ ಸೋಮಶೇಖರ ರೆಡ್ಡಿ ಅವರ ಹುದ್ದೆಗೆ ಕುತ್ತು ಬರಲಿದೆಯೇ?ಹಾಗೊಂದು ಸಂದೇಹ ಈಗ ಸೃಷ್ಟಿಯಾಗಿದೆ. ಚಿತ್ರದುರ್ಗದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ, 'ಕಾನೂನಿನ ಅಡಿಯಲ್ಲಿ ರೆಡ್ಡಿ ವಿರುದ್ಧದ ಆರೋಪಗಳು ಸಾಬೀತಾದರೆ ಬಿಜೆಪಿ ಮತ್ತು ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ' ಎಂದು ಹೇಳಿರುವುದು ಈ ಸಂದೇಹಕ್ಕೆ ಇಂಬು ನೀಡಿವೆ.ನನ್ನ ಮೇಲೆ ಮಿಥ್ಯಾರೋಪ: ಈ ನಡುವೆ 3ನೇ ದಿನವೂ ಹೈದರಾಬಾದ್‌ನಲ್ಲಿ ಎಸಿಬಿ ಕಚೇರಿಗೆ ವಿಚಾರಣೆಗಾಗಿ ಹಾಜರಾದ ಸೋಮಶೇಖರ ರೆಡ್ಡಿ ಅವರು ವಿಚಾರಣೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿ, 'ನನ್ನ ವಿರುದ್ಧ ರಾಜಕೀಯ ಷಡ್ಯಂತ್ರದಿಂದ ಬೇಲ್ ಡೀಲ್ ಪ್ರಕರಣ ಹಾಕಲಾಗಿದೆ. ಸಂಬಂಧವಿಲ್ಲದ ಪ್ರಶ್ನೆಗಳನ್ನು ಎಸಿಬಿ ಅಧಿಕಾರಿಗಳು ಕೇಳುತ್ತಿದ್ದಾರೆ' ಎಂದು ಆರೋಪಿಸಿದರು.ಇದಲ್ಲದೆ, 'ಆ.3ರಂದು ವಿಚಾರಣೆಗೆ ಹಾಜರಾಗುವೆ ಎಂದು ಮೊದಲೇ ಹೇಳಿದಂತೆ ನಾನು ವಿಚಾರಣೆಗೆ ಬಂದಿರುವೆ. ಸತತ 3 ದಿನದಿಂದ ತನಿಖಾಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತಿದ್ದೇನೆ' ಎಂದು ಹೇಳಿಕೊಂಡರು.