ಪಡುಬಿದ್ರಿ: ಸರಕಾರಿ ವ್ಯವಸ್ಥೆಯ ಲೋಪದೋಷಕ್ಕೆ ನೇರ ಕಾರಣರಾಗುವ ಮಂದಿಯ ಸ್ಯಾಂಪಲ್ ಎನ್ನುವ ರೀತಿಯಲ್ಲಿ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿಗಳ ನಿವಾಸಗಳನ್ನು 1.11 ಲಕ್ಷ ರೂ. ಭರಿಸಿ ರಿಪೇರಿ ಮಾಡುವ ಕಾಮಗಾರಿಯನ್ನು ಏಕಾಏಕಿ ಆರಂಭಿಸಲಾಗಿತ್ತು. ಆದರೆ ಸರಕಾರಿ ವರ್ಕ್ ಆರ್ಡರ್ ಇಲ್ಲದೆ ಆರಂಭಿಸಲಾದ ಈ ಕಾಮಗಾರಿಯನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸ್ಥಗಿತಗೊಳಿಸಿದ್ದಾರೆ.ಈ ಕಾಮಗಾರಿಗೆ ಇದುವರೆಗೆ ಜಿ.ಪಂ. ಆಡಳಿತಾತ್ಮಕ ಅನುಮತಿ ನೀಡಿರಲಿಲ್ಲ. ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿಗಳಿಗಾಗಲೀ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗಾಗಲೀ ಈ ಕಾಮಗಾರಿ ಕುರಿತು ಎಳ್ಳಷ್ಟೂ ತಿಳಿದಿರಲಿಲ್ಲ.ಸರಕಾರಿ ನಿವಾಸಗಳ ರಿಪೇರಿ ಕಾಮಗಾರಿ ವಸ್ತುಶಃ ಆಗಬೇಕಿತ್ತು. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಇಲ್ಲಿನ ವೈದ್ಯಾಧಿಕಾರಿ ಡಾ| ಬಿ.ಬಿ. ರಾವ್ ಹಿರಿಯ ಅಧಿಕಾರಿಗಳ ಗಮನವನ್ನೂ ಸೆಳೆದಿದ್ದರು. ಆದರೆ ಆ ಹಿರಿಯ ಅಧಿಕಾರಿ ಈ ಬಾರಿ ಯಾವುದೇ ಅನುದಾನದ ಹಣವಿಲ್ಲ. ಮುಂದಿನ ವರ್ಷದಲ್ಲಿ ಈ ಕಾಮಗಾರಿಯನ್ನು ಜಿಲ್ಲಾ ಕ್ರಿಯಾ ಯೋಜನೆಯಲ್ಲಿ ಅಳವಡಿಸುವುದಾಗಿ ಹೇಳಿದ್ದಾರೆ ಎಂಬುದನ್ನು ಡಾ| ಬಿ.ಬಿ. ರಾವ್ ಸ್ಮರಿಸಿದ್ದಾರೆ.ಕೇಸ್ ವರ್ಕರ್ ಅವಾಂತರಈ ಅಧಿಕಾರಿ ಮರಳಿದ ಎರಡು ದಿನಗಳೊಳಗಾಗಿ ಇಲ್ಲಿನ ಆರೋಗ್ಯ ಕೇಂದ್ರದ ಉದ್ಯೋಗಿ ರಾಜೇಂದ್ರ ಮೂಲ್ಯ ಅವರು ರಿಪೇರಿ ಕೆಲಸಕ್ಕೆ ಅನುಮತಿ ದೊರಕಿದೆ; ಗುತ್ತಿಗೆದಾರ ಬರಲಿದ್ದಾರೆ ಎಂದರು. ಹಾಗೆಯೇ ಕೆಲಸ ಆರಂಭವೂ ಆಗಿತ್ತು. ಆದರೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿನ ಕೇಸ್ ವರ್ಕರ್ ಕಂಪ್ಯೂಟರ್ ಹಾಳೆಯೊಂದರಲ್ಲಿ ಸಹಿ ಇಲ್ಲದ ವರ್ಕ್ ಆರ್ಡರ್ ಹೊರಡಿಸಿದ್ದು, ರಾಜೇಂದ್ರ ಮೂಲ್ಯರಿಗಿದು ಲಭಿಸಿತ್ತು. 'ಯಾರದೋ ಹಣ; ಎಲ್ಲಮ್ಮನ ಜಾತ್ರೆ' ಎನ್ನುವ ರೀತಿಯಲ್ಲಿ ಬೋಗಸ್ ಆದೇಶದನ್ವಯ ಕೆಲಸ ಆರಂಭಿಸಿದ್ದ ರಾಜೇಂದ್ರ ಮೂಲ್ಯ ಇದೀಗ ನೇರವಾಗಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಶಿಸ್ತು ಕ್ರಮಕ್ಕೆ ಈಡಾಗುವ ಸಾಧ್ಯತೆ ಇದೆ. ರಾಜೇಂದ್ರ ಮೂಲ್ಯ ವಿರುದ್ಧ ಶಿಸ್ತು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಬರೆದುಕೊಂಡಿರುವುದಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಿ.ಬಿ. ರಾವ್ ಹೇಳಿದ್ದಾರೆ.ಬಹಳಷ್ಟು ಕೇಸುಗಳಿರಬಹುದುಯಾವುದೋ ಗುಮಾಸ್ತನೂ ಎಲ್ಲೋ ಕೂತು ಮಾಡಿರಬಹುದಾದ ಇಂತಹ ಬಹಳಷ್ಟು ಕೇಸುಗಳಿರಬಹುದು. ಈ ಪ್ರಕರಣ ತನ್ನ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಲು ತಾನು ಜಿಲ್ಲಾ ಆರೋಗ್ಯಾಧಿಕಾರಿಗೂ ತಿಳಿಸಿದ್ದೇನೆ. ಇಂತಹ ಆಯಕಟ್ಟಿನ ಸ್ಥಳಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸರಕಾರಿ ಗುಮಾಸ್ತರನ್ನಾಗಲೀ ಅಧಿಕಾರಿಯನ್ನಾಗಲೀ ಬದಲಿಸುವಂತಹ ಕಾರ್ಯಗಳು ನಡೆಯಬೇಕಿದೆ. ಆಗಷ್ಟೇ ಆಡಳಿತ ವ್ಯವಸ್ಥೆಯ ಶುದ್ಧೀಕರಣ ಸಾಧ್ಯ ಎಂದು ಉಡುಪಿ ಜಿ.ಪಂ. ಅಧ್ಯಕ್ಷ ಶಂಕರ ಪೂಜಾರಿ ತಿಳಿಸಿದ್ದಾರೆ.