Udayavani | Aug 05, 2012
ಬಿಜೆಪಿಯ ಪಾಲಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪದಂತಾಗಿರುವ ಗುಜರಾತ್ ಸಿಎಂ ನರೇಂದ್ರ ಮೋದಿಯವರನ್ನು ಪ್ರಧಾನಿ ಪದವಿಯತ್ತಲಿನ ಓಟದಿಂದ ಬದಿಗೆ ಸರಿಸುವ ಸಾಹಸಕ್ಕೆ ಆಡ್ವಾಣಿ ವ್ಯವಸ್ಥಿತವಾಗಿ ನಾಂದಿ ಹಾಡಿದ್ದಾರೆ.
ಬಿಜೆಪಿಯ ಉನ್ನತ ನಾಯಕರಲ್ಲಿ ಒಬ್ಬರಾಗಿರುವ ಎಲ್. ಕೆ. ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಮುಂದಿನ ಮಹಾಚುನಾವಣೆಯ ಫಲಿತದ ಬಗ್ಗೆ ಬರೆದುಕೊಂಡಿರುವ "ಭವಿಷ್ಯ ನುಡಿ' ರಾಜಕೀಯ ವಲಯದಲ್ಲಿ ಸಾಕಷ್ಟು ತೀವ್ರತೆಯ ಸಂಚಲನಕ್ಕೆ ಕಾರಣವಾಗಿದೆ. 2014ರ ಮಹಾಚುನಾವಣೆಯ ಬಳಿಕ ಬಿಜೆಪಿಯ ಅಥವಾ ಕಾಂಗ್ರೆಸಿಗನಲ್ಲದ ವ್ಯಕ್ತಿಯೊಬ್ಬರು ಪ್ರಧಾನಿಯಾಗಬಲ್ಲರು ಎಂದು ತಮ್ಮ ಬ್ಲಾಗ್ ಬರಹದಲ್ಲಿ ಹೇಳಿರುವ ಆಡ್ವಾಣಿ, ಈ ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಯಾವುದಾದರೂ ಒಂದರ ಬೆಂಬಲ ಇದ್ದರೆ ಮಾತ್ರ ಮೂರನೆಯ ಯಾರಾದರೂ ಪ್ರಧಾನಿಯಾಗುವುದು ಸಾಧ್ಯ ಎಂದಿದ್ದಾರೆ. ಆಡ್ವಾಣಿ, ಮುಂದಿನ ಮಹಾಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಾರದು ಎಂಬ ತಥ್ಯವನ್ನು ಪರೋಕ್ಷವಾಗಿ ಸೂಚಿಸಿದ್ದಾರೆಯೇ ಎಂಬುದು ಪ್ರಶ್ನೆ. ಅವರ ಹೇಳಿಕೆಗೆ ತತ್‌ಕ್ಷಣ ಪ್ರತಿಕ್ರಿಯಿಸಿದ ಕಾಂಗ್ರೆಸ್, ಆಡ್ವಾಣಿಯ ಬಿಜೆಪಿಯ ಸೋಲನ್ನೊಪ್ಪಿಕೊಂಡಿದ್ದಾರೆ ಎಂದು ಹೇಳಿದೆ. ಸ್ವತಃ ಬಿಜೆಪಿ ಕೂಡ ಆಡ್ವಾಣಿ ಏನನ್ನು ಬರೆದಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿರಬಹುದು.
ಆಡ್ವಾಣಿ ಸಾಕಷ್ಟು ರಾಜಕೀಯ ಜಾಣತನದ ಲೆಕ್ಕಾಚಾರ ಪೂರ್ವಕ ವಾಗಿಯೇ ಸಂಭಾವ್ಯ "ಮೂರನೆಯ ಪ್ರಧಾನಿ'ಯ ಪ್ರಸ್ತಾಪವನ್ನು ಉರುಳಿಸಿದ್ದಾರೆ. ತಮ್ಮ ಭವಿಷ್ಯನುಡಿಗೆ ಪುಷ್ಟಿಯಾಗಿ ಅವರು ಉದಾಹರಿಸಿದ್ದು ಈ ಹಿಂದೆ ಆಗಿಹೋದ ಚರಣ್ ಸಿಂಗ್, ಚಂದ್ರಶೇಖರ್, ಐ.ಕೆ. ಗುಜ್ರಾಲ್, ದೇವೇಗೌಡ ಮತ್ತು ವಿ. ಪಿ. ಸಿಂಗ್ ಮುಂತಾದ ಪ್ರಧಾನಿಗಳನ್ನು. ಎಲ್ಲರಿಗೂ ತಿಳಿದಿರುವ ಹಾಗೆ ಈ ಪ್ರಧಾನಿಗಳ ನೇತೃತ್ವದ ಸರಕಾರಗಳು ಹೆಚ್ಚು ಕಾಲ ಬಾಳಿಲ್ಲ. ಆಡ್ವಾಣಿಯವರು ಅದನ್ನೂ ಹೇಳಿದ್ದಾರೆ.
ಮಹಾಚುನಾವಣೆಯಲ್ಲಿ ಬಿಜೆಪಿ ಪರಾಭವ ಅನುಭವಿಸೀತು ಎಂಬುದನ್ನು ಆಡ್ವಾಣಿಯವರು ಪರೋಕ್ಷವಾಗಿ ಹೇಳಿದ್ದಾರೆ ಎಂದು ಅನ್ನಿಸಿದರೂ ಅವರ ಉದ್ದೇಶ ಅದಲ್ಲ. ಈಗ ಬಿಜೆಪಿಯ ಪಾಲಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪದಂತಾಗಿರುವ ಗುಜರಾತ್ ಮುಖ್ಯಮಂತ್ರಿ ಮೋದಿಯವರನ್ನು ಪ್ರಧಾನಿ ಪದವಿಯತ್ತಲಿನ ಓಟದಿಂದ ಬದಿಗೆ ಸರಿಸುವ ಸಾಹಸಕ್ಕೆ ಆಡ್ವಾಣಿ ವ್ಯವಸ್ಥಿತವಾಗಿ ನಾಂದಿ ಹಾಡಿದ್ದಾರೆ ಅಷ್ಟೆ.
ಬಿಜೆಪಿ ಹಿಂದೊಮ್ಮೆ ನರೇಂದ್ರ ಮೋದಿ ತನ್ನ ಪ್ರಧಾನಿ ಅಭ್ಯರ್ಥಿ ಎಂದದ್ದುಂಟು. ಆದರೆ ಈಗ ಮೋದಿ ಸೆರಗಿನಲ್ಲಿ ಬಿದ್ದಿರುವ ಬಿಸಿಕೆಂಡ ಎಂಬಂತೆ ಅದಕ್ಕೆ ಭಾಸವಾಗುತ್ತಿದೆ. ಗೋಧಾÅ ಪ್ರಕರಣದಲ್ಲಿ ಮೋದಿಯವರು ಅಪರಾಧಿಯೋ ನಿರಪರಾಧಿಯೋ ಎಂಬುದು ಬದಿಗಿರಲಿ, ಆದರೆ ಬಿಜೆಪಿ "ಮೋದಿ' ಎಂಬ ಎರಡಕ್ಷರ ಉಚ್ಚರಿಸಿದ ಕೂಡಲೆ 2002ರ ಗುಜರಾತ್ ಮತೀಯ ಹಿಂಸೆಯನ್ನು ಎತ್ತಿಹಿಡಿದು ಅರಚುವ ನೂರು ಗಂಟಲುಗಳು ಅದಕ್ಕೆ ಎದುರಾಗುತ್ತವೆ. ಇತ್ತ ಜೆಡಿಯುನ ನಿತೀಶ್ ಕುಮಾರ್, ಬಾಳಾ ಠಾಕ್ರೆ ಸೇರಿದಂತೆ ಎನ್‌ಡಿಎಯ ಹಲವು ಮಿತ್ರರು ನರೇಂದ್ರ ಮೋದಿಯವರನ್ನು ಪ್ರಧಾನಿ ಪದಕ್ಕೆ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಮೋದಿಯವರನ್ನೇ ಅಪ್ಪಿಕೊಂಡರೆ ಮಿತ್ರಪಕ್ಷಗಳನ್ನು ಕಳೆದುಕೊಳ್ಳುವ ಭಯ ಬಿಜೆಪಿಯದ್ದು. ಇದೇವೇಳೆ, ಸಾಕಷ್ಟು ಜನಪ್ರಿಯರೂ ಆಗಿರುವ ಮೋದಿಯವರನ್ನು ಸಾರಾಸಗಟಾಗಿ ನಿವಾರಿಸಿಕೊಳ್ಳುವುದಕ್ಕೂ ಅಸಾಧ್ಯವಾಗಿಬಿಟ್ಟಿದೆ. ಅಪವಾದ ಕೇಳಿಬಂದಾಕ್ಷಣ ಪದತ್ಯಾಗ ಮಾಡಿದ ಉದಾಹರಣೆಗಳು ಸ್ವತಃ ಆಡ್ವಾಣಿಯವರನ್ನೂ ಸೇರಿಸಿ ಬಿಜೆಪಿಯಲ್ಲಿ ಬೇಕಷ್ಟಿದ್ದರೂ ನರೇಂದ್ರ ಮೋದಿ ಆ ಹಾದಿ ತುಳಿಯುವ ಯಾವುದೇ ಲಕ್ಷಣಗಳಿಲ್ಲ.
ಹೀಗೆ, ಆಡ್ವಾಣಿ ಬರೆದುಕೊಂಡದ್ದು ಪ್ರಧಾನಿ ಹುದ್ದೆಯೆಡೆಗೆ ನರೇಂದ್ರ ಮೋದಿಯವರ ನಡಿಗೆಯನ್ನು ತಡೆಯುವ ಪ್ರಯತ್ನ ಎಂಬುದಾಗಿ ವ್ಯಾಖ್ಯಾನಿಸಲು ಸಾಕಷ್ಟು ಕಾರಣಗಳು ಸಿಗುತ್ತಿವೆ. ಮುಂದಿನ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿಯ ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಗಿ ಮುಖಭಂಗ ಅನುಭವಿಸುತ್ತದೆ ಎಂದು ಕೂಡ ಆಡ್ವಾಣಿ ಬರೆದಿರುವುದು ಅವರ ಮೊದಲನೆಯ ಹೇಳಿಕೆಗೆ ವಿರೋಧಾಭಾಸದ ಅರ್ಥವನ್ನು ಸೂಚಿಸುತ್ತದೆ.
ಆಡ್ವಾಣಿ ಹೇಳಿರುವ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲಿತ ತೃತೀಯ ಸರಕಾರ ದೇಶದ ಸ್ಥಿರ ಆಡಳಿತ ನೀಡುವುದು ಅಸಾಧ್ಯ ಎಂಬುದು ಒಪ್ಪತಕ್ಕ ಮಾತು. ವ್ಯಕ್ತಿಗತ ಕಹಿ-ಸಿಹಿಗಳೇನೇ ಇರಲಿ, ಗುರಿ ದೇಶಕ್ಕೆ ಉತ್ತಮ ಆಡಳಿತವನ್ನು ನೀಡುವುದು ಎಂಬುದನ್ನು ಜವಾಬ್ದಾರಿಯುತ ರಾಷ್ಟ್ರೀಯ ರಾಜಕೀಯ ಪಕ್ಷವಾಗಿರುವ ಬಿಜೆಪಿ ಮರೆಯಕೂಡದು.