Udayavani | Aug 05, 2012
ಬೆಂಗಳೂರು: 'ಖ್ಯಾತ ಲೇಖಕಿ ಕೊಡಗಿನ ಗೌರಮ್ಮ ಈಜುತ್ತಿದ್ದ ಸಂದರ್ಭದಲ್ಲಿ ಮರಣ ಹೊಂದಿದರು ಎನ್ನಲಾಗುತ್ತಿದೆ. ಆದರೆ ನನಗೆ ಅನ್ನಿಸಿದ ಮಟ್ಟಿಗೆ ಇದರ ಹಿಂದೆ ಕಟು ಸತ್ಯವಿದ್ದು, ಅವರ ಈ ರೀತಿಯ ಸಾವಿನ ಬಗ್ಗೆಯೇ ಗುಮಾನಿ ಇದೆ' ಎಂದು ಲೇಖಕಿ ಡಾ| ವಿಜಯಾ ಹೇಳಿದ್ದಾರೆ.
ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ 'ಕೊಡಗಿನ ಗೌರಮ್ಮ' ಕುರಿತ ವಿಚಾರಗೋಷ್ಠಿ ಮತ್ತು ಎಚ್.ನಾಗವೇಣಿ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಅವರ ಸಾವಿನ ಬಗ್ಗೆ ಇಂದಿಗೂ ಈ ಸಂಶಯ ಹಾಗೇ ಉಳಿದುಕೊಂಡಿದೆ. ಇದು ಅತ್ಯಂತ ನೋವಿನ ಸಂಗತಿ ಎಂದರು.
ಕೊಡಗಿನ ಗೌರಮ್ಮ, ಕನ್ನಡ ಸಾಹಿತ್ಯ ಲೋಕದ ನಕ್ಷತ್ರ ಇದ್ದಂತೆ. ಸ್ತ್ರೀ ಸಂವೇದನೆ ಮತ್ತು ಸಂವೇದನಾಶೀಲ ಚಿಂತನೆಗಳಿಗೆ ವಿಶಿಷ್ಟ ಅರ್ಥ ತಂದುಕೊಟ್ಟವರು. ನವೋದಯದ ಕಾಲಕ್ಕೆ ಪುನರ್‌ಜೀವ ನೀಡಿದವರು. ಸ್ತ್ರೀ ತೊಳಲಾಟಗಳನ್ನು ಸಾಹಿತ್ಯದಲ್ಲಿ ಅನಾವರಣ ಮಾಡಿದವರು. ಇಂತಹ ಕೆಲಸಗಳಿಗೆ ಗಾಂಧೀಜಿಯಿಂದ ಸ್ಫೂರ್ತಿ ಪಡೆದಿದ್ದರು ಎಂದು ನೆನಪಿಸಿಕೊಂಡರು.
ಕೊಡಗು ಯಾವತ್ತೂ ಸ್ವತಂತ್ರ ಬಯಸಿರಲಿಲ್ಲ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬ್ರಿಟಿಷರು ಇಲ್ಲಿಂದ ಹೊರಟಿದ್ದರು. ಆಗಲೂ ಕೊಡಗು, ಬ್ರಿಟಿಷರು ಇಲ್ಲಿಂದ ಯಾಕೆ ಬಿಟ್ಟುಹೋದರು ಎಂದೇ ಯೋಚಿಸುತ್ತಿತ್ತು. ಇಂತಹ ಸೂಕ್ಷ್ಮ ವಿಚಾರಗಳನ್ನು ಸಾಹಿತ್ಯದಲ್ಲಿ ತಂದಿದ್ದರು. ಇದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ. ಅವರಿಗೆ ಸಮಗ್ರ ರಾಜಕೀಯದ ಪರಿಚಯ ಇತ್ತು. ರಾಜಕೀಯ ಸಂದರ್ಭ, ಸನ್ನಿವೇಶಗಳನ್ನು ಸಹ ಕೃತಿಗಳಲ್ಲಿ ಅನಾವರಣಗೊಳಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ವೈದೇಹಿ, ನಾಡಿನ ಕೆಲವು ಪ್ರಸಿದ್ಧ ಲೇಖಕಿಯರಲ್ಲಿ ಕೊಡಗಿನ ಗೌರಮ್ಮ ಒಬ್ಬರು. ಅವರನ್ನು ಬರವಣಿಗೆಯ ತವರುಮನೆ ಎಂದೇ ಕರೆಯಬಹುದಿತ್ತು. ಆಧುನೀಕರಣದ ಸೌಲಭ್ಯ ಇದ್ದರೆ ಕವಿತೆ, ಕವನ ಬರೆಯಲು ಅನುಕೂಲ ಎನ್ನುತ್ತಾರೆ. ಆದರೆ, ಗೌರಮ್ಮ ಇದ್ದ ಸೌಲಭ್ಯವನ್ನೇ ಬಳಸಿ ಬರೆಯುತ್ತಿದ್ದುದೇ ಹೆಚ್ಚು ಎಂದರು.
ಹಿಂದೂ-ಮುಸ್ಲಿಂ ಗಲಭೆ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯ ಲೇಖನ ಬರೆಯುತ್ತಾರೆ. ಆದರೆ, ಗೌರಮ್ಮ ವಾಸ್ತವಿಕತೆಯನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರು. ಆ ಕಾಲದಲ್ಲೇ ವರದಕ್ಷಿಣೆ ಪಿಡುಗು ಮತ್ತು ಕೇಶಮುಂಡನೆ ಕುರಿತು ವಿರೋಧ ವ್ಯಕ್ತಪಡಿಸಿ ಲೇಖನ ಬರೆದ ದಿಟ್ಟ ಲೇಖಕಿ. ಗೌರಮ್ಮನವರ ಲೇಖನಗಳಿಂದ ಈಗಿನ ಲೇಖಕಿಯರಿಗೆ ಸಂವೇದನೆ ಮಾಹಿತಿ ಸಿಗುತ್ತದೆ ಎಂದು ಹೇಳಿದರು.
ಸಾಹಿತ್ಯ ಅಕಾಡೆಮಿ ಸದಸ್ಯೆ ಮತ್ತು ಕೃತಿಯ ಕತೃì ಎಚ್. ನಾಗವೇಣಿ ಮಾತನಾಡಿ, ಗೌರಮ್ಮ ನಾನು ಹತ್ತಿರದಿಂದ ಕಂಡವರು. ಅವರ ಬಗ್ಗೆ ಬರೆಯುವುದು ಸುಲಭವಲ್ಲ. ಮಾಹಿತಿ ಕ್ರೋಢಿಕರಣದೊಂದಿಗೆ ಮಗನನ್ನೂ ಮಾತನಾಡಿಸಿ ಬರೆದಿದ್ದೇನೆ. ಈಜುವ ಸಂದರ್ಭದಲ್ಲಿ ಅವರು ಬಿಕಿನಿ ಧರಿಸಿ ಈಜುತ್ತಿದ್ದರು. ಅವರ ಚಿಕ್ಕಪ್ಪ ಪುಣೆಯಿಂದ ಬಿಕಿನಿ ತಂದುಕೊಟ್ಟಿದ್ದರು. ಆದರೆ ಈಜುವಾಗ ಸತ್ತಿದ್ದರೂ, ಸೀರೆ ಉಟ್ಟಿದ್ದರು. ಹಾಗಾಗಿ, ಅವರ ಸಾವಿನ ಬಗ್ಗೆ ಸಂಶಯ ಅಡಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಸಾಹಿತಿ ಕೆ. ಮರುಳಸಿದ್ಧಪ್ಪ, ಲೇಖಕಿಯರ ಸಂಘ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ, ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎನ್.ಸಿ. ಮಹೇಶ್ ಇತರರು ಇದ್ದರು.