'ತುಳುವೆರೆ ಆಟಿ' ಉದ್ಘಾಟಿಸಿ ಸಂಸದ ನಳಿನ್ಮಂಗಳೂರು: ಕೂಡು ಕುಟುಂಬದ ಬಾಂಧವ್ಯ ನಮ್ಮಲ್ಲಿ ಮರೆಯಾಗುತ್ತಿದೆ. ಸಂಸ್ಕೃತಿ-ಸಂಸ್ಕಾರದ ಅರಿವು ಸಂಕುಚಿತವಾಗುತ್ತಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಭವ್ಯ ಪರಂಪರೆಯ ಕುರಿತು ಜಾಗೃತಿಯ ಅರಿವು ಮೂಡಿಸುವ ಪ್ರಯತ್ನ ಮಹಿಳಾ ಸಮಾಜದಿಂದ ನಡೆಯಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಕುದ್ರೋಳಿಯ ಬಿಲ್ಲವರ ಮಹಿಳಾ ಸಂಘದ ನೇತೃತ್ವದಲ್ಲಿ ಅಖೀಲ ಭಾರತ ಬಿಲ್ಲವರ ಯೂನಿಯನ್‌ನ ಸಹಯೋಗದೊಂದಿಗೆ ರವಿವಾರ ನಗರದ ಕುದ್ರೋಳಿಯ ನಾರಾಯಣಗುರು ಕಾಲೇಜಿನಲ್ಲಿ ರವಿವಾರ ನಡೆದ 'ತುಳುವೆರೆ ಆಟಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹುಟ್ಟುಹಬ್ಬದ ಹೆಸರಿನಲ್ಲಿ ಮೋಜು ಮಸ್ತಿ ನಡೆಯುತ್ತಿದೆ. ಸ್ವೇಚ್ಛಾಚಾರ ಮಿತಿ ಮೀರುತ್ತಿದೆ. ತುಳುನಾಡಿನ ಸಂಸ್ಕೃತಿ ಸಂಸ್ಕಾರದ ಬಗ್ಗೆ ತಿಳಿಯುವ ಪ್ರಜ್ಞೆಯೇ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಆದರ್ಶಯುತ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಜಾಗೃತಿ ಅನಿವಾರ್ಯ ಎಂದು ಅವರು ಹೇಳಿದರು.ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಸಂಸ್ಕೃತಿಯ ಕುರಿತ ಜಾಗೃತಿ ಮೂಡಿಸುವ ಕಾರ್ಯ ನಡೆಯುವ ಮೊದಲು ಮಹಿಳೆಯರಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಮನೆಯ ಮಹಿಳೆ ಈ ಜ್ಞಾನವನ್ನು ಪಡೆದಾಗ ಮನೆಯ ಇತರ ಸದಸ್ಯರೆಲ್ಲರೂ ಅತ್ತ ಕಡೆ ಆಕರ್ಷಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಮನೆ-ಮನಸ್ಸುಗಳನ್ನು ಪರಿವರ್ತನೆ ಮಾಡುವ ಶಿಕ್ಷಣ ಅಗತ್ಯವಿದೆ. ಆ ಮೂಲಕ ಮಹಿಳೆಯೊಬ್ಬಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ತಿಳಿಸಿದರು.ತುಳುನಾಡಿನ ಭೂತಾರಾಧನೆ, ಯಕ್ಷಗಾನ, ನಾಗಾರಾಧನೆ ಈ ಎಲ್ಲದಕ್ಕೂ ಕೃಷಿ ಮೂಲ ಆಯಾಮವನ್ನು ನೀಡಿದೆ. ಕೃಷಿ ಕಾರ್ಯಗಳೆಲ್ಲ ಮುಗಿದು ರೈತ ಸಮೂಹ ಆರಾಮವಾಗಿರುವ ತಿಂಗಳಾದ ಆಟಿ ತಿಂಗಳು ತುಳುನಾಡಿನ ಜನತೆಗೆ ವಿಶೇಷ ದಿನ ಎಂದರು.ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪನ್ಯಾಸ ನೀಡಿದರು.ಈ ವೇಳೆ ಕೋಟಿ ಚೆನ್ನಯರ ವಂಶಸ್ಥರು ಮತ್ತು ಹಿರಿಯ ನಾಟಿ ಔಷಧ ವೈದ್ಯರಾದ ಲೀಲಾವತಿ ಅವರನ್ನು ಸಮ್ಮಾನಿಸಲಾಯಿತು. ಅಖೀಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಅವರು ಸ್ವಸಹಾಯ ಸಂಘದ ಉದ್ಘಾಟನೆ ನಡೆಸಿದರು.ಪ್ರಮುಖರಾದ ಲೋಕನಾಥ್, ಶಾರದಾ ಎಸ್. ಕರ್ಕೇರ ಮುಂತಾದವರು ಉಪಸ್ಥಿತರಿದ್ದರು. ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷರಾದ ಸುಮಲತ ಎನ್. ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ವೈ. ಸುವರ್ಣ ಪ್ರಸ್ತಾವಿಸಿದರು.