Tuesday, May 21, 2013
Last Updated: 2:12:50 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವೈದ್ಯರ ಮುಷ್ಕರ:ನಿರ್ಧಾರ ಅಚಲ
      • Udayavani | Aug 05, 2012

        ಬೆಂಗಳೂರು: ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಈ ತಿಂಗಳ 9ರವರೆಗೆ ಗಡುವು ನೀಡಿರುವ ಸರ್ಕಾರಿ ವೈದ್ಯರು, ಅಷ್ಟರೊಳಗೆ ಸರ್ಕಾರ ಸ್ಪಂದಿಸದಿದ್ದರೆ 10ರಿಂದ ಕರ್ತವ್ಯಕ್ಕೆ ಹಾಜರಾಗದೇ ಇರುವ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

        ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಆ.9ರಂದು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಜತೆ ವಿಲೀನಗೊಂಡಿರುವ ಜಿಲ್ಲಾಸ್ಪತ್ರೆಗಳನ್ನು ಆರೋಗ್ಯ ಇಲಾಖೆಗೆ ಒಳಪಡಿಸುವುದು, ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಿ ವೈದ್ಯರ ಸಂಘ ಆಗ್ರಹಿಸಿದೆ.

        ಒಂದು ವೇಳೆ ಸರ್ಕಾರ ವೈದ್ಯರ ಬೇಡಿಕೆಗೆ ಸ್ಪಂದಿಸದಿದ್ದರೆ ಈಗಾಗಲೇ ರಾಜೀನಾಮೆ ನೀಡಿರುವ ಮೂರು ಸಾವಿರಕ್ಕೂ ಅಧಿಕ ವೈದ್ಯರು ಆ.10ರಿಂದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಅಲ್ಲದೆ, ರಾಜೀನಾಮೆಯನ್ನು ಸಹ ಹಿಂಪಡೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ರವೀಂದ್ರ 'ಉದಯವಾಣಿ'ಗೆ ತಿಳಿಸಿದ್ದಾರೆ.

        ಈ ತಿಂಗಳ 9ರವರೆಗೆ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಅರಿತು ಸರ್ಕಾರಿ ವೈದ್ಯರ ಸಂಘ ಮುಂದಿನ ಹೆಜ್ಜೆ ಇಡಲಿದೆ. ವೈದ್ಯರ ಬೇಡಿಕೆಗೆ ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಂದಲೂ ವಿರೋಧ ಇಲ್ಲ. ಬೇಡಿಕೆಗಳನ್ನು ಈಡೇರಿಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಹೀಗಿದ್ದಾಗಲೂ ಬೇಡಿಕೆಗೆ ಸ್ಪಂದಿಸದಿರುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದ್ದಾರೆ.

        ಈ ನಡುವೆ, ಕೆಲವು ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದರೂ ವೈದ್ಯರ ಸೇವೆ ಆಸ್ಪತ್ರೆಯಲ್ಲಿ ಅಲಭ್ಯವಾಗಿರುವುದು ತಿಳಿದು ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರು ಇಲ್ಲದೆ ಹಿಡಿಶಾಪ ಹಾಕಿ ಮನೆಗೆ ಹಿಂತಿರುಗಿದ ದೃಶ್ಯ ಸಾಮಾನ್ಯವಾಗಿತ್ತು.

        ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀಂದ್ರ, ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದಕ್ಕೂ, ಮುಷ್ಕರ ಹಿಂಪಡೆದಿರುವುದಕ್ಕೂ ಸಂಬಂಧ ಇಲ್ಲ. ಶನಿವಾರದಂದೇ ವೈದ್ಯರೇ ತಮ್ಮ ತಮ್ಮ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ಮಧ್ಯಾಹ್ನದಂದೇ ಮನೆಗೆ ಹಿಂತಿರುಗಿದ ಕಾರಣ ವೈದ್ಯರು ಇಲ್ಲದಿರಬಹುದು. ವೈದ್ಯರ ಕೊರತೆ ಮುಷ್ಕರದಿಂದ ಕಾಣಿಸಿಲ್ಲ. ಈ ಸಮಸ್ಯೆ ಯಾವಾಗಲೂ ಇದ್ದೇ ಇರುತ್ತದೆ ಎಂದರು.

        '' ವೈದ್ಯರು ರಾಜೀನಾಮೆ ನೀಡಿರುವ ಬಗ್ಗೆ ಹಾಗೂ ಅವರ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರ ಆ.9ರಂದು ಸಭೆ ಕರೆದಿದೆ. ಅಂದು ಚರ್ಚೆ ನಡೆಸಿದ ಬಳಿಕ ಯಾವ ತೀರ್ಮಾನಕ್ಕೆ ಬರಬೇಕು ಎಂಬುದು ಗೊತ್ತಾಗಲಿದೆ. ಅಲ್ಲಿವರೆಗೆ ಕಾದು ನೋಡಿ.''

        -ಅರವಿಂದ್‌ ಲಿಂಬಾವಳಿ, ಆರೋಗ್ಯ ಸಚಿವ


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus