Udayavani | Aug 05, 2012
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತಿ ತಿಂಗಳು ನಡೆಸುವ ಬಸ್ ದಿನಾಚರಣೆ ಸೋಮವಾರ ನಡೆಯಲಿದ್ದು, ಈ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ಬಸ್‌ಗಳು ಹೆಚ್ಚುವರಿ ಕಾರ್ಯಾಚರಣೆ ಮಾಡಲಿವೆ.
ಹಳೇ ವಿಮಾನ ನಿಲ್ದಾಣ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಹಳೇ ಮದ್ರಾಸ್ ರಸ್ತೆಯಲ್ಲಿ ಬಸ್ ದಿನಾಚರಣೆ ಆಚರಿಸಲಾಗುವುದು.
ಸಂಸ್ಥೆಯ ವತಿಯಿಂದ ನಿತ್ಯ 6,124 ಅನುಸೂಚಿಗಳು 80,700 ಟ್ರಿಪ್‌ಗ್ಳ ಕಾರ್ಯಾಚರಣೆ ನಡೆಯುತ್ತಿದೆ. ಬಸ್ ದಿನಾಚರಣೆಯಂದು 1,500ಕ್ಕಿಂತ ಹೆಚ್ಚು ಸಾಮಾನ್ಯ ಪಾಳಿಯ ಅನುಸೂಚಿಗಳು ರಾತ್ರಿ 7ರಿಂದ 10ರವರೆಗೆ ಹೆಚ್ಚುವರಿ ಕಾರ್ಯಾಚರಣೆ ಮಾಡಲಿವೆ. ಇದರಿಂದ ಸುಮಾರು ಮೂರು ಸಾವಿರ ಅಧಿಕ ಟ್ರಿಪ್‌ಗ್ಳ ಸೇವೆ ನೀಡಿದಂತಾಗುತ್ತದೆ.
'ಬಸ್ ಬಂತು ಬಸ್ಸು' ನಾಟಕ
ಬಸ್ ದಿನಾಚರಣೆ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10ಕ್ಕೆ ಬನಶಂಕರಿ ಬಸ್ ನಿಲ್ದಾಣ (ಟಿಟಿಎಂಸಿ)ದಲ್ಲಿ ಬಿಎಂಟಿಸಿಯ 'ಸಾಂಸ್ಕೃತಿಕ ಕಲಾ ಕುಟೀರ' ಕಲಾವಿದರಿಂದ 'ಬಸ್ ಬಂತು ಬಸ್ಸು' ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕದಲ್ಲಿ ಬಸ್‌ಗಳಲ್ಲಿ ನಡೆಯುವ ನಿತ್ಯದ ಕೆಲವು ಸನ್ನಿವೇಶಗಳನ್ನು ವಿವರಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಶ್ಯಾವಳಿಗಳು ಪ್ರದರ್ಶನಗೊಳ್ಳಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.