*ನೀರಿನ ಕೊರತೆಯಿಂದ ಜಾನುವಾರು ಸಾವು ಆರೋಪ*ಕಬ್ಬಿನ ಮೇವು ನೀಡಿ ಸಹಕರಿಸಲು ತಹಶೀಲ್ದಾರ ಕೋರಿಕೆ ಮೋಳೆ: ಅಥಣಿ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ಬಹುತೇಕ ಬಯಲು ಸೀಮೆ ಹಳ್ಳಿಗಳಲ್ಲಿ ಕುಡಿಯುವ ಹನಿ ನೀರಿಗಾಗಿ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಾ ಆಡಳಿತದ ವತಿಯಿಂದ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿರುವ ಗೋಶಾಲೆಗಳಲ್ಲಿ ಜಾನುವಾರುಗಳು ಮೇವಿನ ಕೊರತೆಯಿಂದ ಬಳಲುತ್ತಿರುವುದು ಕಂಡು ಬರುತ್ತಿದೆ.ಕುಡಿಯುವ ನೀರಿಗಾಗಿ ಅನೇಕ ಹಳ್ಳಿಗಳಲ್ಲಿ ಸರ್ಕಾರ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾಮಗಾರಿ ಪ್ರಾರಂಭಿಸಿದ್ದರೂ ಇದರ ಪ್ರಯೋಜನ ಜನಸಾಮಾನ್ಯರಿಗೆ ದೊರೆಯುತ್ತಿಲ್ಲವೆಂಬ ದೂರುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ನಡೆದಿದೆ. ಏತನ್ಮಧ್ಯೆ ಜಾನುವಾರುಗಳ ಆಶ್ರಯಕ್ಕಾಗಿ ತಾಲೂಕಾ ಆಡಳಿತ ಆರಂಭಿಸಿದ್ದ ಗೋಶಾಲೆಗಳಲ್ಲಿ ಮೇವಿನ ತೀವ್ರ ಕೊರತೆಯಿಂದ ಹಲವು ಜಾನುವಾರುಗಳು ಸಾವನ್ನಪ್ಪಿದ ಸಂಗತಿ ಬೆಳಕಿಗೆ ಬಂದಿದ್ದು, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.ತಾಲೂಕಿನ ಮಹತ್ವಾಕಾಂಕ್ಷಿ ಹಿಪ್ಪರಗಿ ಆಣೆಕಟ್ಟೆಯ ಕಾಲುವೆಯಿಂದ ನೀರು ಹರಿದು ಬಂದು, ಬದುಕು ಹಸನಾಗಬಹುದೆಂಬ ನಿರೀಕ್ಷೆ ಕೂಡ ಹಲವಾರು ಕಾರಣಗಳಿಂದ ಆರಂಭದಲ್ಲಿಯೇ ಮುಸಕಾಗತೊಡಗಿದೆ. ಸದ್ಯ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿರುವ ನಾಲ್ಕು ಏತ ನೀರಾವರಿ ಯೋಜನೆಗಳಿಗೆ ನೀರು ಹಂಚಿಕೆ ಮಾಡುವ ವಿಷಯವಾಗಿ ಸ್ವತಃ ಅಧಿಧಿಕಾರಿಗಳಲ್ಲಿಯೇ ಗೊಂದಲ ಕಂಡು ಬಂದಿರುವುದರಿಂದ ನದಿಯ ನೀರು ಕಟ್ಟಕಡೆಯ ರೈತರ ಜಮೀನಿಗೆ ಹರಿಯುವುದು ತಾಂತ್ರಿಕ ದೃಷ್ಟಿಯಿಂದ ದುಸ್ತರವಾಗಿ ಪರಿಣಮಿಸಿದೆ.ಮೂಲ ಯೋಜನೆಯಲ್ಲಿ ನಿರಂತರವಾಗಿ ಪರಿಷ್ಕರಣೆ ಮಾಡುತ್ತಾ ಬಂದಿರುವುದರಿಂದ ಹಂಚಿಕೆ ಮಾಡಿದ ನೀರು ಮತ್ತು ಫಲಾನುಭವಿಗಳ ಕ್ಷೇತ್ರ ನಡುವಿನ ಅನುಪಾತದಲ್ಲಿ ಏರುಪೇರಾಗಿದ್ದು ಇದರ ನೇರ ಪರಿಣಾಮ ಸಾವಳಗಿ-ತುಂಗಳ ಏತ ನೀರಾವರಿ ಯೋಜನೆಯ ಫಲಾನುಭವಿಗಳ ನಡುವೆ ಮುಸುಕಿನ ಗುದ್ದಾಟ ಏರ್ಪಡಲು ಕಾರಣವಾಗಿದೆ. ವಾಸ್ತವದಲ್ಲಿ ಹಿಪ್ಪರಗಿ ನೀರಾವರಿ ಯೋಜನೆಯಡಿ ಬಚಾವತ ಬಿ ಸ್ಕೀಮ್ ಐತೀರ್ಪಿನ ಪ್ರಕಾರ ನೀರಾವರಿ ಉದ್ದೇಶಕ್ಕಾಗಿ 10.50 ಟಿಎಂಸಿ ಅಡಿ ನೀರು ಲಭ್ಯವಿದ್ದರೂ ಇಲ್ಲಿಯ ಅಧಿಧಿಕಾರಿಗಳ ರಾಜಕೀಯ ಒತ್ತಡದ ಕಾರಣದಿಂದ ಮೊದಲ ಹಂತದಲ್ಲಿ ಬರುವ ಅಚ್ಚುಕಟ್ಟು ಪ್ರದೇಶದಲ್ಲಿ ಫಲಾನುಭವಿಗಳ ಕ್ಷೇತ್ರ ಗುರುತಿಸುವಾಗ ಸಾಕಷ್ಟು ಏರಿಕೆ ಮಾಡಿದ್ದು ಈ ಯೋಜನೆಯ ವೈಫಲ್ಯಕ್ಕೆ ಕಾರಣವೆಂದು ಜಮಖಂಡಿ ತಾಲೂಕಿನ ಹಳ್ಳಿಗಳ ರೈತರು ದೂರುತ್ತಿದ್ದಾರೆ. ಇನ್ನುಳಿದಂತೆ ಕರಿ ಮಸೂತಿ, ಹಲ್ಯಾಳ ಮತ್ತು ಐನಾಪುರ ಏತನೀರಾವರಿ ಯೋಜನೆಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ ಇದರಿಂದ ಒಟ್ಟಾರೆ ತಾಲೂಕಿನ ವ್ಯಾಪ್ತಿಯಲ್ಲಿ ರೈತರಿಗೆ ವಿಪುಲ ಪ್ರಮಾಣದ ನೀರು ಲಭ್ಯವಿದ್ದರೂ ಅದನ್ನು ಬಳಸಿಕೊಳ್ಳಲು ಆಗದಂತಹ ಅನಿವಾರ್ಯತೆ ಎದುರಾಗಿದೆ.ಈ ನಡುವೆ ಕಾಲುವೆ ಮಧ್ಯೆ ಕೆಲವೊಂದು ಪ್ರಭಾವಿ ವ್ಯಕ್ತಿಗಳು ಐ.ಪಿ. ಸೆಟ್‌ಗಳನ್ನು ಅಳವಡಿಸಿ ಮಾರ್ಗಮಧ್ಯದಲ್ಲಿಯೇ ನೀರೆತ್ತಿ ತಮ್ಮ ಜಮೀನುಗಳಿಗೆ ಸಾಗಿಸುವ ಕಾರ್ಯವನ್ನು ಅವ್ಯಾಹತವಾಗಿ ಮಾಡುತ್ತಿರುವುದರಿಂದ ಉದ್ದೇಶಿತ ಯೋಜನೆಯ ಮೂಲ ಆಶಯವೇ ಒಂದು ರೀತಿಯಲ್ಲಿ ನಿಷ#ಲವಾಗಿದೆ.ಕಳೆದ ನಾಲ್ಕು ದಶಕಗಳಿಂದ ನೀರಾವರಿ ಕನಸು ಕಾಣುತ್ತಿದ್ದ ತಾಲೂಕಿನ ಉತ್ತರ ಮತ್ತು ಪೂರ್ವ ಗಡಿಭಾಗದ ಹಳ್ಳಿಗಳಿಗೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿಯೂ ಕೂಡ ನೀರಾವರಿ ಸೌಲಭ್ಯ ದೊರೆಯದಂತ ಪರಿಸ್ಥಿತಿ ನಿರ್ಮಾಣವಾದರೂ ಕೂಡ ಅಚ್ಚರಿ ಪಡಬೇಕಾಗಿಲ್ಲ.ಜಾನುವಾರು ಸಾವು ಮೇವಿನ ಕೊರತೆಯಿಂದಲ್ಲಅಥಣಿ ತಾಲೂಕಿನಲ್ಲಿ 18 ಗೋಶಾಲೆಗಳನ್ನು ಪ್ರಾರಂಭಿಸಲಾಗಿದ್ದು 26 ಸಾವಿರ ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. ಇದರಲ್ಲಿ 10 ಜಾನುವಾರುಗಳು ಸಾವನ್ನಪ್ಪಿವೆ. ಅವು ಮೇವಿನ ಕೊರತೆಯಿಂದಲ್ಲ. ಅವು ವಿವಿಧ ರೋಗಗಳಿಂದ ಮೃತಪಟ್ಟಿವೆ. ಬರ ನಿರ್ವಹಿಸಲು ಜಿಲ್ಲಾಡಳಿತ ಸಿದ್ಧವಿದ್ದು ನದಿಗೆ ನೀರು ಬಂದಿರುವುದರಿಂದ ರೈತರು ಮೇವು ನೀಡಲು ನಿರಾಕರಿಸುತ್ತಿದ್ದಾರೆ. ಬಾಗಲಕೋಟ ಹಾಗೂ ವಿಜಾಪುರ ಜಿಲ್ಲೆಗಳಿಂದ ಒಣ ಮೇವು ತರಿಸಲಾಗುತ್ತಿದ್ದು ರೈತ ಬಾಂಧವರು ಕಬ್ಬಿನ ಮೇವು ನೀಡಿ ಸಹಕರಿಸಬೇಕುಜಿ.ಆರ್.ಶೀಲವಂತರ, ತಹಶೀಲ್ದಾರರು ಅಥಣಿ