ಬೆಂಗಳೂರು: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಕೇಂದ್ರದ ನೂತನ ಇಂಧನ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿ ರಾಜ್ಯದ ವಿದ್ಯುತ್ ಸ್ಥಿತಿ-ಗತಿ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.ನಗರದ ಆರ್.ಟಿ.ನಗರದಲ್ಲಿರುವ ಮೊಯ್ಲಿ ಅವರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿದ ಶೋಭಾ ಅವರು ಸುಮಾರು ಅರ್ಧಗಂಟೆ ಮಾತುಕತೆ ನಡೆಸಿದರು. ಇದೊಂದು ಸೌಜನ್ಯದ ಭೇಟಿ ಎನ್ನಲಾಗಿದ್ದರೂ, ತಮ್ಮ ಭೇಟಿ ವೇಳೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ವಿದ್ಯುತ್ ಕೊರತೆ ಎದುರಾಗುವ ಸಂಭವವಿದೆ. ಹೀಗಾಗಿ, ರಾಜ್ಯದ ವಿದ್ಯುತ್ ಸಮಸ್ಯೆಗೆ ಕೇಂದ್ರ ಸರ್ಕಾರ ಸೂಕ್ತ ರೀತಿ ಸ್ಪಂದಿಸುವಂತೆ ಮೊಯ್ಲಿಗೆ ಶೋಭಾ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಅಲ್ಲದೆ ರಾಜ್ಯದ ವಿದ್ಯುತ್ ಪರಿಸ್ಥಿತಿ, ಬರಗಾಲದಿಂದ ಉಂಟಾಗಿರುವ ವಿದ್ಯುತ್ ಸಮಸ್ಯೆ, ಕೇಂದ್ರ ಸರ್ಕಾರದಿಂದ ದೊರೆಯುತ್ತಿರುವ ವಿದ್ಯುತ್ ಪ್ರಮಾಣ, ವಿದ್ಯುತ್ ಬೇಡಿಕೆ, ಹೆಚ್ಚುವರಿ ವಿದ್ಯುತ್-ಕಲ್ಲಿದ್ದಲು ಖರೀದಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಶೋಭಾ ಅವರು ಮೊಯ್ಲಿಗೆ ವಿವರಿಸಿದ್ದಾರೆ. ಆ ಮೂಲಕ ರಾಜ್ಯದ ವಿದ್ಯುತ್ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.ರಾಜ್ಯದವರೇ ಆಗಿರುವ ವೀರಪ್ಪ ಮೊಯ್ಲಿ ಅವರು ಇದೀಗ ಕೇಂದ್ರದ ಇಂಧನ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಧನ ಖಾತೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಶೋಭಾ ಅವರು ಮೊಯ್ಲಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಭೇಟಿ ವೇಳೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಕೂಡ ಉಪಸ್ಥಿತರಿದ್ದರು.