Udayavani | Aug 05, 2012
ಪಡುಬಿದ್ರಿ: ರಾಜ್ಯದ ಸಣ್ಣ ದೇವಾಲಯಗಳಿಗೆ ನೀಡುತ್ತಿರುವ ತಸ್ತೀಕು (ರಾಜ್ಯ ಸರಕಾರದ ಸಹಾಯಧನ) ಪ್ರಮಾಣವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ರವಿವಾರ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳಕ್ಕೆ ಭೇಟಿ ನೀಡಿ ದೇವರ ವರ್ಶನಗೈದು ಪತ್ರಕರ್ತರೊಂದಿಗೆ ಮಾತನಾಡಿದರು.
ಈಗ ನೀಡುತ್ತಿರುವ ವಾರ್ಷಿಕ 12,000 ರೂ.ಗಳನ್ನು ಇಲಾಖಾ ಆಯವ್ಯಯಗಳನ್ನು ಪರಿಶೀಲಿಸಿಕೊಂಡು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯದ ಎಲ್ಲಾ ದೇವಳಗಳು ಆಸ್ತಿಕರ ಸಾಮಾಜಿಕ ತಾಣಗಳಾಗಬೇಕೆಂಬುದು ತಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹಿರಿಯ ನಾಯಕ ಡಾ| ವಿ.ಎಸ್. ಆಚಾರ್ಯರ ಚಿಂತನೆಗಳ ದಾರಿಯಲ್ಲೇ ಯೋಜನೆಗಳು ಸಾಗಬೇಕಿವೆ. ಈ ನಡುವೆ ಬರುವ ಟೀಕೆ ಟಿಪ್ಪಣಿಗಳು ಸಹಜವಾಗಿದ್ದು ಅವುಗಳಲ್ಲಿನ ಒಳ್ಳೆಯ ಅಂಶಗಳನ್ನು ಪರಿಗಣಿಸಿಕೊಂಡು ತಾವು ಮುಂದುವರಿಯುವುದಾಗಿ ಸಚಿವರು ತಿಳಿಸಿದರು.
ಪಡುಬಿದ್ರಿ ದೇವಳಕ್ಕೆ ಆಗಮಿಸಿದ ಸಚಿವರನ್ನು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ ಮತ್ತು ಆನುವಂಶಿಕ ಮೊಕ್ತೇಸರ ಪೇಟೆಮನೆ ವಿಶ್ವನಾಥ ಹೆಗ್ಡೆ ಸ್ವಾಗತಿಸಿದರು. ಬಳಿಕ ಪಾದೆಬೆಟ್ಟು ಶ್ರೀ ಗುರುರಾಘವೇಂದ್ರ ಮಂದಿರಕ್ಕೆ ತೆರಳಿದ ಸಚಿವ ಪೂಜಾರಿ ಅವರನ್ನು ಪಾದೆಬೆಟ್ಟು ಗ್ರಾಮಸ್ಥರ ಪರವಾಗಿ ಸಮ್ಮಾನಿಸಲಾಯಿತು.
ಕಾಪು ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪಡುಬಿದ್ರಿ ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಆಚಾರ್ಯ, ಮಟ್ಟಾರು ರತ್ನಾಕರ ಹೆಗ್ಡೆ, ರಮಾಕಾಂತ ದೇವಾಡಿಗ, ಡಾ| ವೈ.ಎನ್. ಶೆಟ್ಟಿ, ವೈ. ಗೋಪಾಲ ಶೆಟ್ಟಿ, ರಮೇಶ ಆಚಾರ್ಯ, ವಿಶುಕುಮಾರ್ ಶೆಟ್ಟಿ, ಕೇಶವ ಅಮೀನ್ ಮತ್ತಿತರರು ಸಚಿವರ ಜತೆಗಿದ್ದರು.