Wednesday, June 19, 2013
Last Updated: 5:15:18 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಡಿಕೆ ನಿಷೇಧ ತೀರ್ಪು ತಡೆಯಿರಿ:ಜಯಪ್ರಕಾಶ್‌ ಹೆಗ್ಡೆ
    • ತೀರ್ಪು ಹೊರಬೀಳುವ ಮುನ್ನ ಅಡಿಕೆ ಬೆಳೆಗಾರರು ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು..

      • Udayavani | Aug 05, 2012

        ಬೆಂಗಳೂರು: 'ಮಲೆನಾಡು ಭಾಗದ ಜನರ ಜೀವನಾಧಾರವಾಗಿರುವ ಅಡಿಕೆ ಮಾರಕವಾಗಿದ್ದು, ಅದನ್ನು ನಿಷೇಧಿಸಬೇಕೆಂಬುದರ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ತೀರ್ಪು ಹೊರಬೀಳುವ ಮುನ್ನ ಅಡಿಕೆ ಬೆಳೆಗಾರರು ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು' ಎಂದು ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದ ಜಯಪ್ರಕಾಶ್‌ ಹೆಗ್ಡೆ ಸಲಹೆ ನೀಡಿದ್ದಾರೆ.

        'ದೇಹಕ್ಕೆ ಮಾರಕವಾಗಿರುವ ಗುಟ್ಕಾ ವಿಷಯವನ್ನಿಟ್ಟುಕೊಂಡು ಅಡಿಕೆ ನಿಷೇಧಿಸಬೇಕೆಂದು ಕೆಲವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಅಂತಿಮ ಆದೇಶ ಬರುವ ಮುನ್ನ ಅಡಿಕೆ ಕೇವಲ ಗುಟ್ಕಾ ತಯಾರಿಕೆಗೆ ಮಾತ್ರವಲ್ಲದೆ ಪರ್ಯಾಯ ವಸ್ತುಗಳ ತಯಾರಿಕೆಗೂ ಬಳಕೆ ಮಾಡಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಅಡಿಕೆ ಬೆಳೆಗಾರರು ಮನವರಿಕೆ ಮಾಡಿಕೊಡಬೇಕು' ಎಂದೂ ಅವರು ತಿಳಿಸಿದ್ದಾರೆ.

        ನಗರದ ಗಾಂಧಿಭವನದಲ್ಲಿ ಭಾನುವಾರ ಸಹ್ಯಾದ್ರಿ ಸಂಘ ಆಯೋಜಿಸಿದ್ದ 'ಮಲೆನಾಡಿನ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಡಾ. ಗೋರಖ್‌ ಸಿಂಗ್‌ ಸಮಿತಿ ವರದಿ' ಕುರಿತ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಅವರು ಮಾತನಾಡಿದರು.

        ಅಡಿಕೆ ಬೆಳೆ ಎಷ್ಟು ಕುಟುಂಬಗಳಿಗೆ ಜೀವಾನಾಧಾರವಾಗಿದೆ. ಅದರಿಂದಾಗುವ ಲಾಭ ಹಾಗೂ ವಹಿವಾಟು ಎಷ್ಟು ಎಂಬುದರ ಸಂಪೂರ್ಣ ವಿವರವನ್ನು ನ್ಯಾಯಾಲಯದ ಗಮನಕ್ಕೆ ತಂದಾಗ ಮಾತ್ರ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದಿದ್ದರೆ ವ್ಯತಿರಿಕ್ತವಾಗಿ ಆದೇಶ ಬರುವ ಸಾಧ್ಯತೆ ಇದೆ. ಬಳಿಕ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

        ಅಡಿಕೆ ಬೆಳೆಯುವುದರಿಂದ ಹಿಡಿದು ಅದನ್ನು ಮಾರುಕಟ್ಟೆಗೆ ಸಾಗಿಸುವವರೆಗೂ ಬೆಳೆಗಾರರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪರ್ಯಾಯ ಬೆಳೆ ಬೆಳೆಯುವುದರ ಕಡೆ ಅಡಿಕೆ ಬೆಳೆಗಾರರು ಗಮನಹರಿಸಬೇಕು. ಪರ್ಯಾಯ ಬೆಳೆ ಕಂಡುಕೊಳ್ಳುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದರಿಂದ ಪಾರಾಗಬಹುದು. ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸೇರಿದಂತೆ ಹಲವರ ಜತೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಹಣಕಾಸು ಸಚಿವ ಚಿದಂಬರಂ ಅವರೊಂದಿಗೂ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

        ಕೃಷಿ ವಿಶ್ವವಿದ್ಯಾಲಯದ ಕೃಷಿ ಆರ್ಥಿಕ ವಿಜ್ಞಾನಿ ಪ್ರೊ. ಕಮ್ಮರಡಿ ಪ್ರಕಾಶ್‌ ಮಾತನಾಡಿ, ಅಡಿಕೆ ಬೆಳೆಗಾರರು ಹಾಗೂ ಅಡಿಕೆ ಉತ್ಪನ್ನದಾರರು ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದರೂ ಇಂದು ಇಬ್ಬರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋರಖ್‌ಸಿಂಗ್‌ ವರದಿಯಿಂದ ಬೆಳೆಗಾರರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಗದಿದ್ದರೂ, ಸ್ಪಲ್ಪ ಪ್ರಮಾಣದಲ್ಲಾದರೂ ಪರಿಹಾರ ಲಭ್ಯವಾಗುತ್ತದೆ ಎಂದರು.

        ಅಡಿಕೆ ಆಹಾರ ಉತ್ಪನ್ನ ಪಟ್ಟಿಯಲ್ಲಿದೆ. ಆದರೆ, ಕೆಲವರು ಇದನ್ನು ಉತ್ಪನ್ನ ಪಟ್ಟಿಯಿಂದ ತೆಗೆದುಹಾಕುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆಹಾರ ಪಟ್ಟಿಯಿಂದ ಅಡಿಕೆಯನ್ನು ತೆಗೆದುಹಾಕುವುದು ಸರಿಯಲ್ಲ. ಆಹಾರಪಟ್ಟಿಯಲ್ಲಿರುವುದರಿಂದ ಆಹಾರ ಧಾನ್ಯಗಳಿಗೆ ಸಿಗುವ ಪ್ರಯೋಜನಗಳು ಅಡಿಕೆಗೆ ಬೆಳೆಗೂ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

        ಅಡಿಕೆ ಬೆಳಗೆ ಪೇಟೆಂಟ್‌ ಪಡೆದುಕೊಳ್ಳುವತ್ತ ಬೆಳೆಗಾರರು ಹೋರಾಟ ನಡೆಸಬೇಕು. ಅಲ್ಲದೆ, ಅಡಿಕೆ ಬೆಳಗಾರರ ಉತ್ತೇಜನಕ್ಕಾಗಿ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಟೆಕ್‌ ಪಾರ್ಕ್‌ ಆರಂಭಿಸಬೇಕು. ತರುವಾಯ ಅಲ್ಲಿ ಸಂಶೋಧನೆ ಕಾರ್ಯಗಳಿಗೆ ಚಾಲನೆ ನೀಡಬೇಕು. ಅಡಿಕೆಗೆ ಭವಿಷ್ಯ ಹೇಗಿದೆ ಎಂಬುದಕ್ಕಿಂತ ಭವಿಷ್ಯದಲ್ಲಿ ಅಡಿಕೆಯನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಬಿ.ಎಲ್‌.ಶಂಕರ್‌, ಸಹ್ಯಾದ್ರಿ ಸಂಘದ ಅಧ್ಯಕ್ಷ ಕೆ.ವಿ.ಆರ್‌.ಟ್ಯಾಗೂರ್‌, ಶಿವಮೊಗ್ಗ ಜಿಲ್ಲೆ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್‌ ಹೆಗ್ಗಡೆ ಉಪಸ್ಥಿತರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus