ಲಂಡನ್ : ರವಿವಾರದ ಮೊದಲ ಅರ್ಹತಾ ಸುತ್ತಿನಲ್ಲಿ ಭಾರತದ ಟ್ರ್ಯಾಪ್ ಶೂಟರ್ ಮಾನವ್‌ಜೀತ್ ಸಿಂಗ್ ಸಂಧು ತೀರಾ ಕೆಳಮಟ್ಟದ ಸಾಧನೆ ದಾಖಲಿಸಿದ್ದು, ಫೈನಲ್ ಪ್ರವೇಶದ ಕ್ಷೀಣ ಅವಕಾಶವನ್ನಷ್ಟೇ ಹೊಂದಿದ್ದಾರೆ. ಒಟ್ಟು 34 ಮಂದಿ ಸ್ಪರ್ಧಿಗಳಲ್ಲಿ ಅವರಿಗೆ 25ನೇ ಸ್ಥಾನ ಲಭಿಸಿದೆ.3 ಸುತ್ತುಗಳ ಬಳಿಕ ಗರಿಷ್ಠ 75ರಲ್ಲಿ 70 ಅಂಕ ಗಳಿಸಿರುವ ಸಂಧು (24, 24, 22), ಸೋಮವಾರದ ಉಳಿದೆರಡು ಸುತ್ತುಗಳಲ್ಲಿ ಪೂರ್ತಿ 50 ಅಂಕ ಗಳಿಸಿದರಷ್ಟೇ ಪದಕದ ರೇಸ್‌ನಲ್ಲಿ ಕಾಣಿಸಿಕೊಳ್ಳಬಲ್ಲರು. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಸ್ಟ್ರೇಲಿಯದ ಮೈಕಲ್ ಡೈಮಂಡ್ ಪೂರ್ತಿ 75 ಅಂಕಗಳೊಂದಿಗೆ ಅರ್ಹತಾ ಸುತ್ತಿನ ಅಗ್ರಸ್ಥಾನ ಅಲಂಕರಿಸಿದ್ದಾರೆ. 5 ಮಂದಿ ಶೂಟರ್‌ಗಳು 74ರಲ್ಲಿ ಹಾಗೂ 7 ಮಂದಿ 73ರಲ್ಲಿ ಟೈ ಆಗಿದ್ದಾರೆ.ಅಮೃತಸರದ 35ರ ಹರೆಯದ ಸಂಧು ಪಾಲಿಗೆ ಇದು 3ನೇ ಒಲಿಂಪಿಕ್ಸ್ ಆಗಿದೆ. ಏಶ್ಯಾಡ್, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಪದಕ ಜಯಿಸಿದ್ದಾರೆ.