ಲಂಡನ್ : ದಾಖಲೆ 17 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ಸ್ವಿಟ್ಸರ್ಲಂಡ್‌ನ ರೋಜರ್ ಫೆಡರರ್ ಅವರ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕದ ಕನಸು ಭಗ್ನಗೊಂಡಿದೆ. ತವರಿನ ಆ್ಯಂಡಿ ಮರ್ರೆ ಈ ಚಿನ್ನವನ್ನು ಕೊರಳಿಗೆ ಅಲಂಕರಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿದರು.ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಫೆಡರರ್ ಅವರನ್ನು ಮರ್ರೆ 6-4, 6-1, 6-4 ನೇರ ಸೆಟ್‌ಗಳಿಂದ ಮಣಿಸಿದರು. ಇದರೊಂದಿಗೆ ಒಂದು ತಿಂಗಳ ಹಿಂದಷ್ಟೇ ವಿಂಬಲ್ಡನ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡ ಮರ್ರೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪ್ರತಿಷ್ಠಿತ 'ಒಲಿಂಪಿಕ್ ಗೋಲ್ಡ್' ಗೆದ್ದ ಸಾಧನೆ ಮಾಡಿದರು.ಕಂಚಿನ ಪದಕ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಪಾಲಾಯಿತು. ಅವರು ಸರ್ಬಿಯಾದ ನೊವಾಕ್ ಜೊಕೋವಿಕ್ ವಿರುದ್ಧ 7-5, 6-4 ಅಂತರದ ಜಯ ಸಾಧಿಸಿದರು.