ಲಂಡನ್ : ದಶಕಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಸದಾ ಚಿನ್ನ ಗೆದ್ದು ಸುದ್ದಿಯಲ್ಲಿರುತ್ತಿದ್ದ ಭಾರತೀಯ ಹಾಕಿ ತಂಡ ಇದೀಗ ಲಂಡನ್‌ನಲ್ಲಿ ಸತತ ಸೋಲುಗಳನ್ನುಂಡು ಸುದ್ದಿಗೆ ಗ್ರಾಸವಾಗುತ್ತಿದೆ. ರವಿವಾರ ದಕ್ಷಿಣ ಕೊರಿಯಾ ವಿರುದ್ಧ ಅನುಭವಿಸಿದ 1-4 ಅಂತರದ ಪರಾಜಯದೊಂದಿಗೆ ಭಾರತ ಹ್ಯಾಟ್ರಿಕ್ ಮೇಲೊಂದು ಸೋಲನುಭವಿಸಿ ಒಲಿಂಪಿಕ್ ಚರಿತ್ರೆಯಲ್ಲೇ ಅತ್ಯಂತ ಕೆಳಮಟ್ಟದ ಸ್ಥಾನ ಪಡೆಯಲು ಸ್ಪರ್ಧೆ ನಡೆಸುತ್ತಿದೆ!ಭಾರತದ ಹಾಕಿ ತಂಡವೀಗ ಸತತ 4 ಸೋಲಿನೊಂದಿಗೆ ಒಲಿಂಪಿಕ್ಸ್‌ಗೆ ಯಾಕೆ ಮರಳಿ ಅರ್ಹತೆ ಪಡೆದೆನೋ ಎಂದು ಪಶ್ಚಾತ್ತಾಪಪಡುತ್ತಿರಲೂಬಹುದು. ಕಾರಣ, ಸ್ಪರ್ಧೆಯಲ್ಲಿರುವ 12 ತಂಡಗಳಲ್ಲಿ ಅಂಕದ ಖಾತೆ ತೆರೆಯದ ಏಕೈಕ ತಂಡವೆಂದರೆ ಭಾರತ. ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಗೆದ್ದಿರುವ ಭಾರತವೀಗ ಕಟ್ಟಕಡೆಯ 11-12ನೇ ಸ್ಥಾನಕ್ಕಾಗಿ ಹೋರಾಡುವ ಸಂಕಟಕ್ಕೆ ಸಿಲುಕಿದೆ.ದಕ್ಷಿಣ ಕೊರಿಯಾ ವಿರುದ್ಧ ಭಾರತದ ರಕ್ಷಣಾ ವಿಭಾಗ ತುಸು ಚೇತರಿಸಿದಂತೆ ಕಂಡುಬಂದರೂ 3 ಅತ್ಯುತ್ತಮ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿ ಪರಿತಪಿಸಿತು. ಇದಕ್ಕೆ ತದ್ವಿರುದ್ಧವೆಂಬಂತೆ ಬಹುತೇಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿತು.ದಕ್ಷಿಣ ಆಕೊರಿಯಾ ಪರ ಜಾಂಗ್ ಜೊಂಗ್ ಹ್ಯುನ್ ಪಂದ್ಯದ 6ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರನ್ನು ಗೋಲಾಗಿಸಿ ಭಾರತಕ್ಕೆ ಆಘಾತವಿಕ್ಕಿದರು. ಇದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ 103ನೇ ಗೋಲೆನಿಸಿಕೊಂಡಿತು. ಆದರೆ 10ನೇ ನಿಮಿಷದಲ್ಲೇ ಪಂದ್ಯವನ್ನು ಸಮಬಲಕ್ಕೆ ತರುವ ಯತ್ನವನ್ನು ಗುರ್ವಿಂದರ್ ಸಿಂಗ್ ಚಾಂಡಿ ಯಶಸ್ವಿಗೊಳಿಸಿದರು. ಇದಾದ 4 ನಿಮಿಷದಲ್ಲೇ ತುಷಾರ್ ಖಾಂಡೇಕರ್ ಮುನ್ನುಗ್ಗಿದರೂ ಚೆಂಡು ನೇರವಾಗಿ ಎದುರಾಳಿ ಗೋಲಿಯ ಕಾಲಿಗೆ ಬಡಿಯಿತು. ಈ ಹಂತದಲ್ಲಿ ಸುರಿದ ಭಾರೀ ಮಳೆಯ ಲಾಭ ಪಡೆದ ಕೊರಿಯನ್ನರು ಭಾರತದ ರಕ್ಷಣಾ ವಿಭಾಗವನ್ನು ದುರ್ಬಲಗೊಳಿಸಿದರು.ಮಧ್ಯಂತರದ ವೇಳೆ ಇತ್ತಂಡಗಳು 1-1 ಸಮಬಲ ಸಾಧಿಸಿದ್ದವು.ದಕ್ಷಿಣ ಕೊರಿಯಾ ಪಂದ್ಯದ ಕೊನೆಯ ಹಂತದಲ್ಲಿ ಭಾರೀ ಆಕ್ರಮಣಕಾರಿ ಪ್ರದರ್ಶನ ನೀಡಿತು. ಪರಿಣಾಮವೆಂಬಂತೆ 10 ನಿಮಿಷಗಳ ಅಂತರದಲ್ಲಿ 3 ಗೋಲು ಸಿಡಿಸಿತು. ಹ್ಯುನ್ ವೂ ನಾಮ್ 60 ಹಾಗೂ 70ನೇ ನಿಮಿಷದಲ್ಲಿ ಹಾಗೂ ಲೀ ಸೆಂಗ್ 68ನೇ ನಿಮಿಷದಲ್ಲಿ ಈ ಗೋಲು ದಾಖಲಿಸಿದರು. ಅಲ್ಲಿಗೆ ಭಾರತದ ಕತೆ ಮುಗಿದಿತ್ತು.ಭಾರತ ತನ್ನ ಕಡೆಯ ಲೀಗ್ ಪಂದ್ಯವನ್ನು ಮಂಗಳವಾರ ಬೆಲ್ಜಿಯಂ ವಿರುದ್ಧ ಆಡಲಿದೆ.