ಲಂಡನ್ : ಲಂಡನ್ ಒಲಿಂಪಿಕ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯರು ಎದುರಾಳಿಗಳ ವಿರುದ್ಧ ಮಾತ್ರವಲ್ಲ, ರೆಫ್ರಿ ಹಾಗೂ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ (ಎಐಬಿಎ) ವಿರುದ್ಧವೂ ಹೋರಾಡಿ ಗೆಲ್ಲಬೇಕಿದೆ!69 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ದ ವಿಕಾಸ್ ಕೃಷ್ಣನ್ ಅವರನ್ನು ಎಐಬಿಎ ಜ್ಯೂರಿ ಸೋಲಿಸಿದರೆ, 81 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮಿತ್ ಸಂಗ್ವಾನ್ ಅವರಿಗೆ ಒಂದು ಅಂಕದಿಂದ ರೆಫ್ರಿಗಳೇ ಪರಾಭವಗೊಳಿಸಿದರು.ಈ ಬಾಕ್ಸಿಂಗ್ ವಿವಾದವೀಗ ಮೂರಕ್ಕೆ ಮುಟ್ಟಿದೆ. ಶನಿವಾರ ತಡರಾತ್ರಿ ನಡೆದ 64 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮನೋಜ್ ಕುಮಾರ್ ಅವರಿಗೆ ಕೊನೆಯ ಸುತ್ತಿನಲ್ಲಿ ಅಂಕ ನೀಡದ ರೆಫ್ರಿಗಳು ಭಾರತದ ಮತ್ತೂಬ್ಬ ಸ್ಪರ್ಧಿಯ ಸೋಲಿಗೆ ಕಾರಣರಾಗಿದ್ದಾರೆ.ಇದರೊಂದಿಗೆ ಭಾರತದ ಬಾಕ್ಸರ್‌ಗಳು ಬಾಕ್ಸಿಂಗ್ ರಿಂಗ್ ಹಿಂದಿನ ರಾಜಕೀಯಕ್ಕೆ ಬಲಿಯಾಗುತ್ತಿದ್ದು, ಪದಕಗಳಿಂದ ವಂಚಿತರಾಗುತ್ತಿದ್ದಾರೆ.ಎಕ್ಸೆಲ್ ಅರೆನಾದಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮನೋಜ್ ಕುಮಾರ್ 20-16 ಅಂಕಗಳಿಂದ ಆತಿಥೇಯ ಬ್ರಿಟನ್‌ನ ಥಾಮಸ್ ಸ್ಕಾಲ್ಕರ್ ವಿರುದ್ಧ ಸೋಲುಂಡರು. ಇದರೊಂದಿಗೆ ಮನೋಜ್ ಕುಮಾರ್ ಕೇವಲ ಒಂದು ಹೆಜ್ಜೆಯಿಂದ ಪದಕದಿಂದ ವಂಚಿತರಾದರು.ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ ಮನೋಜ್ ಕುಮಾರ್ ಎದುರಾಳಿಯ ಮುಖಕ್ಕೆ ಬಾರಿಸಿದರೂ ಅದಕ್ಕೆ ಅಂಕಗಳನ್ನೇ ಪಡೆಯಲಿಲ್ಲ. ಮೊದಲೆರಡು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಮನೋಜ್‌ಗೆ ಸೂಕ್ತ ಅಂಕ ನೀಡಲಾಗಲಿಲ್ಲ. ಇದರಿಂದ ಎದುರಾಳಿಗೆ ಮುನ್ನಡೆ ದೊರೆಯಿತು.ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ವಿಜೇತ ಮನೋಜ್ ಮೊದಲ ಸುತ್ತಿನಲ್ಲಿ 4-7ರಿಂದ ಹಿಂದೆ ಬಿದ್ದರೆ, ಎರಡನೇ ಸುತ್ತಿನಲ್ಲೂ ಕೂಡ ಸೂಕ್ತ ಅಂಕ ದೊರೆಯದ ಕಾರಣ 4-9ರಿಂದ ಭಾರೀ ಹಿನ್ನಡೆ ಅನುಭವಿಸಿದರು. ಆದರೆ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಹಿಂದಿನ ಎರಡು ಸುತ್ತುಗಳಲ್ಲಿ ನೀಡದ ಅಂಕಗಳನ್ನು ಸೇರಿಸುವಂತೆ ದಾಳಿ ನಡೆಸಿದರೂ ಸಿಕ್ಕಿದ್ದು 7-4 ಅಂಕ. ಹೀಗಾಗಿ ಮನೋಜ್ 4 ಅಂಕಗಳಿಂದ ಸೋಲುಂಡರು ಎಂದು ಘೋಷಿಸಲಾಯಿತು. ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಲು ಭಾರತ ತಂಡ ನಿರ್ಧರಿಸಿದೆ.ಫಲಿತಾಂಶಗಳೆಲ್ಲ ಫಿಕ್ಸ್!ಒಲಿಂಪಿಕ್ಸ್ ಗೇಮ್ಸ್ ರೀತಿ ನಡೆಯುತ್ತಿಲ್ಲ. ಇದೊಂದು ಸಾಮಾನ್ಯ ಕ್ರೀಡಾಕೂಟದಂತೆ ನಡೆಯುತ್ತಿದೆ. ಅದರಲ್ಲೂ ಗ್ರೇಟ್ ಬ್ರಿಟನ್‌ನಲ್ಲಿ ನಡೆಯುತ್ತಿರುವುದರಿಂದ ಎದುರಾಳಿ ಯಾರು ಎಂಬುದು ಮುಖ್ಯವಲ್ಲ. ಏಕೆಂದರೆ ಗೆಲುವು ಮೊದಲೇ ನಿರ್ಧಾರವಾಗಿರುತ್ತದೆ. ಇಲ್ಲಿ ನಡೆಯುತ್ತಿರುವುದು ಬರೀ ಮೋಸ, ಮೋಸ. ಮೋಸ ಎಂದು ಪಂದ್ಯದ ಅನಂತರ ಭಾವುಕರಾಗಿದ್ದ ಮನೋಜ್ ಕುಮಾರ್ ನೇರವಾಗಿ ಆರೋಪಿಸಿದರು.ಭಾರತ ತಂಡದ ಕೋಚ್ ಆಗಿರುವ ಕ್ಯೂಬಾದ ಬ್ಲಾಸ್ ಇಗ್ಲೆàಸಿಯಾಸ್ ಫೆರ್ನಾಂಡಿಜ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಮನೋಜ್ ಕುಮಾರ್ ಪರ ತೀರ್ಪು ಬರಬೇಕಿತ್ತು. ಅವರು ಹೋರಾಡಿದ ರೀತಿ ಅದ್ಭುತವಾಗಿತ್ತು. ಕೊನೆಯ ಸುತ್ತಿನಲ್ಲಿ ಮಾತ್ರ 7-4 ಅಂಕ ನೀಡಿದ್ದಾರೆ. ಹಾಗಾದರೆ ಮೊದಲೆರಡು ಸುತ್ತುಗಳಲ್ಲಿ ಏಕೆ ನೀಡಲಿಲ್ಲ? ಇದೊಂದು ಕಳಪೆ ತೀರ್ಪು...' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾರತ ಬಾಕ್ಸಿಂಗ್ ತಂಡದ ಕೋಚ್ ಗುರ್ಬಕ್ಸ್ ಸಿಂಗ್ ಸಂಧು, 'ನನ್ನ ಸ್ಪರ್ಧಿ ಅತ್ಯದ್ಭುತವಾಗಿ ಆಡಿದ. ಆತನ ಪ್ರದರ್ಶನ ನೋಡಿದ ಮೇಲೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಈ ಬಗ್ಗೆ ನೀವು ಯಾಕೆ ಪ್ರಶ್ನೆ ಮಾಡುವುದಿಲ್ಲ...' ಎಂದು ಕೇಳಿದರು.