ವಾಷಿಂಗ್ಟನ್ : ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆವಲ ಮೂರು ತಿಂಗಳು ಉಳಿದಿರುವಂತೆಯೇ ಬಬಾಕ್ ಒಬಾಮಾ ಮತ್ತು ಅವರ ಎದುರಾಳಿ ಮಿಟ್ ರೋಮ್ನಿ ಪ್ರಚಾರ ಕಾವೇರಿದ್ದು, ಅಮೆರಿಕ ರಾಜಕೀಯದಲ್ಲಿ ಭಾರತೀಯ ಸಂಜಾತರ ಪ್ರಾಮುಖ್ಯತೆಯನ್ನು ಮನಗಂಡಿರುವ ಉಭಯ ನಾಯಕರು ಭಾರತೀಯ ಸಮುದಾಯದವರಿಗೆ ಪ್ರಚಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿದ್ದಾರೆ.ರೋಮ್ನಿಯ ಪ್ರಚಾರದಲ್ಲಿ ಭಾರತೀಯ ಸಂಜಾತರಾದ ಸೌತ್ ಕರೋಲಿನದ ಗವರ್ನರ್ ನಿಕ್ಕಿ ಹ್ಯಾಲಿ ಮತ್ತು ಲೂಸಿಯಾನದ ಗವರ್ನರ್ ಬಾಬ್ಬಿ ಜಿಂದಾಲ್ ಮುಂಚೂಣಿಯಲ್ಲಿದ್ದಾರೆ. ಇದಲ್ಲದೆ ದೇಶದಾದ್ಯಂತವಿರುವ ಅನೇಕ ಭಾರತೀಯ ಸಂಜಾತರಿಗೆ ರೋಮ್ನಿ ತನ್ನ ಪ್ರಚಾರದ ಹಲವು ಮಹತ್ವದ ಹುದ್ದೆಗಳನ್ನು ವಹಿಸಿದ್ದಾರೆ.ಮಿಸಿಸಿಪಿಯ ಓರ್ವ ಪ್ರಮುಖ ಭಾರತೀಯ ಸಂಜಾತರಾಗಿರುವ ಡಾ| ಸಂಪತ್ ಶಿವಾಂಗಿ ಅವರು ಇತ್ತೀಚೆಗೆ ರೋಮ್ನಿಯ ನಿಧಿ ಎತ್ತುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ರೋಮ್ನಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರೋಮ್ನಿಗೆ 1.7 ದಶಲಕ್ಷ ಡಾಲರ್ ಸಂಗ್ರಹವಾಗಿದ್ದು, ಮಿಸಿಸಿಪಿಯಂತಹ ಸಣ್ಣ ಪ್ರಾಂತದಲ್ಲಿ ಸಂಗ್ರಹವಾಗಿರುವ ದೊಡ್ಡ ಮೊತ್ತವಿದು.ಭಾರತಕ್ಕೆ ನೌಕರಿ ಹೊರಗುತ್ತಿಗೆ ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತಿರುವ ಅಧ್ಯಕ್ಷ ಬರಾಕ್ ಒಬಾಮಾ ಧೋರಣೆಯಿಂದಾಗಿ ಭಾರತೀಯರು ಅವರ ಬಗ್ಗೆ ಹೊಂದಿದ್ದ ನಿಲುವು ಕೂಡ ಬದಲಾಗಿದೆ. ಟಿವಿಗಳಲ್ಲಿ ಬರುತ್ತಿರುವ ಒಬಾಮಾ ಜಾಹೀರಾತುಗಳು ಭಾರತವನ್ನು ಅವಮಾನಿಸಲು ಸಮರ ಸಾರಿದಂತಿವೆ. ಅಮೆರಿಕದ ನಿರುದ್ಯೋಗ ಸಮಸ್ಯೆಗೆ ಭಾರತ ಹೊಣೆ ಎನ್ನುವ ಅವರ ಆರೋಪ ನಿಜವಲ್ಲ ಎಂದು ಶಿವಾಂಗಿ ಹೇಳಿದ್ದಾರೆ.ನಾವೀಗ ಜಾಗತಿಕ ಆರ್ಥಿಕತೆಯ ಯುಗದಲ್ಲಿದ್ದೇವೆ ಹಾಗೂ ಇನ್ಫೋಸಿಸ್, ವಿಪ್ರೊದಂತಹ ಭಾರತೀಯ ಐಟಿ ಕಂಪೆನಿಗಳು ಅನೇಕ ಅಮೆರಿಕನರಿಗೆ ನೌಕರಿ ನೀಡಿವೆ. ಒಬಾಮಾ ಇತ್ತೀಚೆಗೆ ಭಾರತದ ಕುರಿತಾಗಿ ನೀಡಿರುವ ಹೇಳಿಕೆಗಳು ಭಾರತೀಯರಿಗೆ ಇಷ್ಟವಾಗಿಲ್ಲ. ಮೃದು ಮಾತಿನ ಭಾರತದ ಪ್ರಧಾನಮಂತ್ರಿಯವರೂ ಒಬಾಮಾ ಹೇಳಿಕೆಯನ್ನು ಪ್ರತಿಭಟಿಸಿದ್ದಾರೆ ಎಂದಿದ್ದಾರೆ.ಆ.25ರಿಂದ 31ರ ತನಕ ಫ್ಲೋರಿಡಾದ ಟಂಪಾದಲ್ಲಿ ಜರಗಲಿರುವ ರಿಪಬ್ಲಿಕನ್ ಪಾರ್ಟಿಯ ರಾಷ್ಟ್ರೀಯ ಸಮಾವೇಶದಲ್ಲಿ ಮಿಸಿಸಿಪಿಯ ಪೂರ್ಣಾವಧಿ ಪ್ರತಿನಿಧಿಯಾಗಿ ಶಿವಾಂಗಿ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಅವರು ಪಾತ್ರರಾಗುತ್ತಿರುವುದು ಇದು ಸತತ ಮೂರನೇ ಸಲ.ಅಕ್ಷಯ್ ದೇಸಾಯಿ, ರೋಮ್ನಿ ಪ್ರಚಾರ ತಂಡದಲ್ಲಿರುವ ಇನ್ನೋರ್ವ ಭಾರತೀಯ ಸಂಜಾತ. ಫ್ಲೋರಿಡಾವರಾಗಿರುವ ದೇಸಾಯಿಗೆ ರೋಮ್ನಿ ಏಶ್ಯಾ ಸಂಜಾತರ ಮತಗಳನ್ನು ಗಳಿಸುವ ಹೊಣೆ ವಹಿಸಿದ್ದಾರೆ. ಅಂತೆಯೇ ಟಂಪಾ ಸಮಾವೇಶ ಹಾಗೂ ನಿಧಿ ಸಂಗ್ರಹದ ಜವಾಬ್ದಾರಿಯೂ ಅವರಿಗಿದೆ.ಭಾರತೀಯ ಸಂಜಾತರ ಮತಗಳ ಮಹತ್ವವನ್ನು ಅರಿತಿರುವ ರೋಮ್ನಿ ಈ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಪ್ರತ್ಯೇಕ ಇಂಡಿಯನ್ - ಅಮೆರಿಕನ್ ಸೆಲ್ ಸ್ಥಾಪಿಸಿದ್ದಾರೆ.ಬರಾಕ್ ಒಬಾಮಾ ಪಾಳಯದಲ್ಲೂ ಅನೇಕ ಭಾರತೀಯರಿದ್ದಾರೆ. ಕ್ಯಾಲಿಫೋರ್ನಿಯದವರಾಗಿರುವ ಶೆಫಾಲಿ ರಾಜ್‌ಧಾನ್ ದುಗ್ಗಲ್ ಮತ್ತು ಕಮಲ ಹ್ಯಾರಿಸ್ ಅವರನ್ನು ಪ್ರತಿಷ್ಠಿತ 2012ರ ಕನ್ವೆನ್ಶನ್ ಸ್ಟಾಂಡಿಂಗ್ ಕಮಿಟಿಗೆ ನಾಮ ನಿರ್ದೇಶನ ಮಾಡಲಾಗಿದೆ. ಕ್ಯಾಲಿಫೋರ್ನಿಯ ಅಟಾರ್ನಿ ಜನರಲ್‌ನಲ್ಲಿ ಒಬಾಮಾ ಪ್ರಚಾರಕ್ಕಾಗಿ ದುಗ್ಗಲ್ ನಿಧಿ ಸಂಗ್ರಹಿಸುತ್ತಿದ್ದಾರೆ.ನ.6ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆಯನ್ನು ಬಯಸಿರುವ ಒಬಾಮಾ ಪರವಾಗಿ ದುಗ್ಗಲ್ ಈಗಾಗಲೇ 5 ಲಕ್ಷದಿಂದ 10 ಲಕ್ಷ ಡಾಲರ್ ಮೊತ್ತವನ್ನು ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ಒಬಾಮಾ ಅವರ ರಾಷ್ಟ್ರೀಯ ಹಣಕಾಸು ಸಮಿತಿಯ ಸದಸ್ಯರಾಗಿ ಮತ್ತು ಒಬಾಮಾ ವಿಕ್ಟರಿ ಟ್ರಸ್ಟ್‌ನ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಕ್ಯಾಲಿಫೋರ್ನಿಯದ ಪ್ರಮುಖ ಉದ್ಯಮಿಯಾಗಿರುವ ಶೆಲ್ಲಿ ಕಪೂರ್ ಅವರನ್ನು ಸ್ಟಾಂಡಿಂಗ್ ಪ್ಲ್ರಾಟ್‌ಫಾರ್ಮ್ ಕಮಿಟಿಯ ಸದಸ್ಯೆಯಾಗಿ ನೇಮಿಸಲಾಗಿದೆ. ಅಂತೆಯೇ ಕ್ಯಾಲಿಫೋರ್ನಿಯದ ಖ್ಯಾತ ಅಟಾರ್ನಿ ಪಂಕಿತ್ ದೋಷಿ ಎನ್ನುವವರು ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಇವರಲ್ಲದೆ ಭಾರತೀಯ ಸಂಜಾತ ಮತದಾರರನ್ನು ಸೆಳೆಯುವ ಸಲುವಾಗಿ ಇನ್ನೂ ಮೂವರು ಭಾರತೀಯ ಸಂಜಾತನರಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿದ್ದಾರೆ.