ಲಂಡನ್ : 40 ವರ್ಷದ ಹಿಂದೆ 1972ರ ಆಗಸ್ಟ್‌ನ ಮೈಕೊರೆಯುವ ಚಳಿಯ ಒಂದು ಮುಂಜಾನೆ ಭಾರತೀಯ ಮೂಲದ ಜರ್ಜರಿತ ಸುಮಾರು 10,000 ಮಂದಿ ಈದಿ ಅಮಿನ್‌ನ ಉಗಾಂಡದಿಂದ ದೇಶಭ್ರಷ್ಟರಾಗಿ ಬಂದಿಳಿದಾಗ ಅವರು ಲೈಸಿಸ್ಟೆರ್‌ನ ಪಾಲಿಗೆ ಅನಪೇಕ್ಷಿತ ವಲಸೆಗಾರರಾಗಿದ್ದರು.ಅವರ ಬದುಕು ಎಷ್ಟು ಹೀನಾಯವಾಗಿತ್ತೆಂದರೆ ನಿಮ್ಮ ಮತ್ತು ನಿಮ್ಮ ಪರಿವಾರದ ಹಿತಾಸಕ್ತಿಗಾಗಿ ದಯವಿಟ್ಟು ಲೈಸಿಸ್ಟೆರ್‌ಗೆ ಬರಬೇಡಿ ಎಂದು ನಗರಾಡಳಿತ ಪತ್ರಿಕೆಗಳಲ್ಲಿ ಜಾಹೀರಾತನ್ನು ಕೂಡ ಪ್ರಕಟಿಸಿತ್ತು.40 ವರ್ಷಗಳಲ್ಲಿ ದೇಶಭ್ರಷ್ಟರಾಗಿ ಓಡಿ ಬಂದಿದ್ದ ಭಾರತೀಯರ ಪರಿಸ್ಥಿತಿ ಎಷ್ಟು ಬದಲಾಗಿದೆ ಎಂದರೆ ಸಮಸ್ತ ಬ್ರಿಟನ್‌ನಲ್ಲಿ ಈಗ ಅವರಿಗೆ ಮಾನ್ಯತೆಯಿದೆ. ಈ ಸಾಧನೆಯ ಹಿಂದಿರುವುದು ಅವರ ಪರಿಶ್ರಮ ಮತ್ತು ಛಲ. ಭಾರತೀಯ ಸಮುದಾಯದವರು ತಾವು ಮಾತ್ರ ಏಳಿಗೆಯಾದದ್ದಲ್ಲ ತಮಗೆ ಆಶ್ರಯ ಕೊಟ್ಟ ನಗರವನ್ನೂ ಸಮೃದ್ಧಿಯತ್ತ ಒಯ್ದಿದ್ದಾರೆ. ಕೆಲವೇ ಸಾವಿರ ಭಾರತೀಯರ ಈ ಯಶೋಗಾಥೆ ಈಗ ಯುರೋಪ್‌ನ ಅನೇಕ ನಗರಗಳಿಗೆ ಅಧ್ಯಯನದ ವಸ್ತು. ಲೈಸಿಸ್ಟೆರ್‌ನ ಈ ಭಾರತೀಯ ಸಮುದಾಯದ ಸಾಧನೆ ಜಗತ್ತಿನ ಯಾವುದೇ ನಗರದಲ್ಲಿರುವ ಅನಿವಾಸಿ ಭಾರತೀಯರ ಸಾಧನೆಗಿಂತ ಶ್ರೇಷ್ಠ ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ.ಉಗಾಂಡದಿಂದ ಬರಿಗೈಲಿ ಬಂದಿದ್ದ ಈ ವಿದ್ಯಾವಂತ ಭಾರತೀಯರು ಕೇವಲ ತಮ್ಮ ಪರಿಶ್ರಮ, ಶ್ರದ್ಧೆ ಮತ್ತು ಛಲದಿಂದ ಅಕ್ಷರಶಃ ಲೈಸಿಸ್ಟೆರ್‌ನಲ್ಲಿ ತಮ್ಮದೇ ಆದ ಸಾಮ್ರಾಜ್ಯವೊಂದನ್ನು ಕಟ್ಟಿಕೊಂಡಿದ್ದಾರೆ.ಸರ್ವಾಧಿಕಾರಿ ಈದಿ ಅಮೀನ್ 55 ಪೌಂಡಿಗಿಂತ ಹೆಚ್ಚು ಹಣ ಇಟ್ಟುಕೊಳ್ಳದೆ 90 ದಿನಗಳಲ್ಲಿ ತನ್ನ ದೇಶ ಬಿಟ್ಟು ಹೋಗಬೇಕೆಂದು ಆದೇಶಿಸಿದಾಗ ಈ ಭಾರತೀಯರ ನಿರ್ಗತಿಕರಾಗಿ ಬಂದಿದ್ದರು. ಬದುಕಿಗೆ ಬೇಕಾದ ಕನಿಷ್ಠ ವಸ್ತುಗಳು ಕೂಡ ಅವರ ಬಲಿ ಇರಲಿಲ್ಲ. ಇಂದು ಅವರು ಲೈಸಿಸ್ಟರ್ ನಗರವನ್ನು ಭಾರತೀಯರು ಮತ್ತು ಏಶ್ಯಾ ಮೂಲದವರ ಪ್ರಾಬಲ್ಯದ ಬಹು ಸಂಸ್ಕೃತಿಯ ನಗರವನ್ನಾಗಿ ಕಟ್ಟಿ ಬೆಳೆಸಿದ್ದಾರೆ. ಅಂತೆಯೇ ಅನೇಕ ಸರಕಾರಿ ಹುದ್ದೆಗಳಲ್ಲಿ ತಮ್ಮ ಆಡಳಿತ ಕೌಶಲವನ್ನು ಮೆರೆಯುತ್ತಿದ್ದಾರೆ.40 ವರ್ಷದ ಹಿಂದೆ ದಯವಿಟ್ಟು ಇಲ್ಲಿಗೆ ಬರಬೇಡಿ ಎಂದಿದ್ದ ಅದೇ ನಗರಾಡಳಿತ ಇಂದು ಭಾರತೀಯ ಸಮುದಾಯದವರನ್ನು ಹಾಡಿ ಹೊಗಳುತ್ತಿದೆ. ವರ್ಷಕ್ಕೊಮ್ಮೆ ಆಚರಿಸುವ ದೀಪಾವಳಿ ಹಬ್ಬದ ಸಂಭ್ರಮ ಅಂದಿನಿಂದ ಇಂದಿನ ತನಕದ ಸ್ಥಿತ್ಯಂತರಕ್ಕೆ ಕೈಗನ್ನಡಿ ಹಿಡಿಯುತ್ತದೆ. ಯಾವುದೇ ಭಾರತೀಯ ಪಟ್ಟಣಕ್ಕೆ ಕಡಿಮೆಯಿಲ್ಲದ ದೀಪಾವಳಿ ಸಂಭ್ರಮ ಮೈದಾಳುತ್ತದೆ ಲೈಸಿಸ್ಟರ್‌ನಲ್ಲಿ. ಲೈಸಿಸ್ಟರ್‌ನ ದೀಪಾವಳಿ ಹಬ್ಬದಲ್ಲಿ ಭಾಗವಹಿಸುವ ಸಲುವಾಗಿ ಬ್ರಿಟನ್‌ನಾದ್ಯಂತವಿರುವ ಭಾರತೀಯರು ಮತ್ತು ಏಶ್ಯಾದವರು ಆಗಮಿಸುತ್ತಾರೆ.ಪೂರ್ವ ಲೈಸಿಸ್ಟೆರ್‌ನ್ನು ಪ್ರತಿನಿಧಿಸುತ್ತಿರುವ ಲೇಬರ್ ಪಕ್ಷದ ಸಂಸದ ಕೀತ್ ವಾಝ್ ಮೂಲತಃ ಗೋವಾದವರು. ಬೆಂಡ್ ಇಟ್ ಲೈಕ್ ಬೆಕಮ್‌ನಲ್ಲಿ ನಟಿಸಿರುವ ಪರ್ಮಿಂದರ್ ನಗ್ರ ಅವರಂತಹ ತಾರೆಯರು, ಸ್ಥಳೀಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿರುವ ನಾಯಕರು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು ತಾವು ಲೈಸಿಸ್ಟರ್‌ನ ಭಾರತೀಯ ಮೂಲದವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.ಇಂಗ್ಲಂಡ್‌ನ ಸುಮಾರು 800 ವರ್ಷಗಳ ಇತಿಹಾಸದಲ್ಲಿ ಬ್ರಿಟನ್‌ಗೆ ಮೇಯರ್ ಆದ ಮೊದಲ ಏಶ್ಯಾದ ಮಹಿಳೆ ಎನ್ನುವ ಅಪೂರ್ವವಾದ ಗೌರವಕ್ಕೆ 2008ರಲ್ಲಿ ಲೂಧಿಯಾನ ಮೂಲದ ಮಂಜುಳಾ ಸೂದ್ ಪಾತ್ರರಾಗಿದ್ದಾರೆ. ಲೈಸಿಸ್ಟರ್ ಮರ್ಕುರಿ ಎನ್ನುವ ಪತ್ರಿಕೆ ಈ ಭಾರತೀಯರ ಯಶೋಗಾಥೆಯ ಕುರಿತು ವಿಶೇಷ ಲೇಖನವನ್ನು ಪ್ರಕಟಿಸಿದೆ. 40 ವರ್ಷದ ಹಿಂದೆ ಪೂರ್ವ ಆಫ್ರಿಕದ ಸರ್ವಾಧಿಕಾರಿ ಈದಿ ಅಮಿನ್ ಕೈಗೊಂಡ ಒಂದು ನಿರ್ಧಾರ ಲೈಸಿಸ್ಟರ್‌ನ ಭವಿಷ್ಯವನ್ನು ಬದಲಾಯಿಸಿತು ಎಂದು ಈ ಪತ್ರಿಕೆ ಬರೆದಿದೆ.1972ರಲ್ಲಿ ಈದಿ ಅಮೀನ್ ತನ್ನ ದೇಶದಲ್ಲಿರುವ ಎಲ್ಲ ಏಶ್ಯಾದವರನ್ನು ಓಡಿಸಲು ನಿರ್ಧರಿಸಿದ. ಆಗ ಉಗಾಂಡದಲ್ಲಿದ್ದವರ ಭಾರತೀಯರ ಪೈಕಿ ಹೆಚ್ಚಿನವರು ಗುಜರಾತಿಗಳು ಮತ್ತು ಪಂಜಾಬಿನವರು. ಆ ದಿನಗಳಲ್ಲಿ ಲೈಸಿಸ್ಟರ್ ವಲಸಿಗರಿಂದ ತುಂಬಿ ಹೋಗಿ ನಗರಾಡಳಿತ ಇನ್ನು ಯಾರೂ ಬರುವುದು ಬೇಡ ಎಂದು ಹೇಳಿದರೂ ಸುಮಾರು 10,000 ಮಂದಿ ಬಂದು ನೆಲೆಯೂರಿದ್ದರು. ಅವರ ಬಳಿ ಇದ್ದ ಸಂಪತ್ತು ಕೇವಲ ಕೌಶಲ ಮತ್ತು ವ್ಯವಹಾರ ಜ್ಞಾನ. ಅದನ್ನೇ ಬಂಡವಾಳ ಮಾಡಿಕೊಂಡು ಅವರು ತಾವು ಮಾತ್ರ ಉದ್ದಾರವಾದದ್ದಲ್ಲ ಲೈಸಿಸ್ಟರ್‌ನ್ನು ಕೂಡ ಉದ್ಧರಿಸಿದರು.