Sunday, May 26, 2013
Last Updated: 7:08:10 AM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಿ 8 -1 ಹಾರಾಟಕ್ಕೆ ಸಿದ್ಧ
    • ಸಾಗರ ಯುದ್ಧ ವಿಮಾನ ''''ಪಿ8-1''ನ ಉತ್ಪಾದನೆ ಇದೀಗ ಅಂತಿಮ ಹಂತದಲ್ಲಿ.

      • Udayavani | Aug 06, 2012

        ಸಿಯಾಟ್ಲ (ಅಮೆರಿಕ) : ಭಾರತದ ಅಮೆರಿಕ ನಿರ್ಮಿತ ಬಹು ಉದ್ದೇಶಿತ ಸಾಗರ ಯುದ್ಧ ವಿಮಾನ 'ಪಿ8-1'ನ ಉತ್ಪಾದನೆ ಇದೀಗ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಆಗಸದಲ್ಲಿ ಹಾರಾಟ ನಡೆಸುವ ಸಿದ್ಧತೆಯಲ್ಲಿದೆ. ಈ ಸರಣಿಯ ಮೊದಲ ವಿಮಾನದ ಪರೀಕ್ಷಾ ಹಾರಾಟವನ್ನು ಈಗಾಗಲೇ ನಡೆಸಲಾಗಿದ್ದು, ಇದೀಗ ಎರಡನೇ ವಿಮಾನದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಸದ್ಯದಲ್ಲಿಯೇ ಪರೀಕ್ಷಾರ್ಥ ಹಾರಾಟ ನಡೆಯಲಿದೆ.

        ಭಾರತೀಯ ನೌಕಾ ಪಡೆಗೆ ಈ ವಿಶೇಷ ತಂತ್ರಜ್ಞಾನದ ವಿಮಾನ ಸೇರ್ಪಡೆಗೊಳ್ಳಲಿದ್ದು, ಸಾಗರದಲ್ಲಿ ನಿಗಾವಣೆ ಹಾಗೂ ಜಲಾಂತರ್ಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿಯೂ ಇದು ಬಳಕೆಯಾಗಲಿದೆ. ದೇಶದ 7,500 ಕಿ.ಮೀ. ಕರಾವಳಿ ತೀರದ ನಿಗಾವಣೆ ಮತ್ತು ರಕ್ಷಣೆಯಲ್ಲಿ ನೌಕಾಪಡೆಯ ಸಾಮರ್ಥ್ಯವನ್ನು ಈ ವಿಮಾನ ಬಲಪಡಿಸಲಿದೆ. ಅಮೆರಿಕ ನೌಕಾ ಪಡೆಯ ಯುದ್ಧ ವಿಮಾನ ಪಿ8-ಎ ಮಾದರಿಯಲ್ಲಿ ಈ ವಿಮಾನವೂ ಸಿದ್ಧಗೊಳ್ಳುತ್ತಿದ್ದು, ಇದು ಮಾರಕ ಹಾರ್ಪೂನ್‌ ಕ್ಷಿಪಣಿಯನ್ನು ಹೊಂದಿರುವುದು. ಈ ವಿಮಾನವು ಕಳೆದ ಕೆಲ ವರ್ಷಗಳಲ್ಲಿ ಅಮೆರಿಕ ನೌಕಾಪಡೆಯ ಪ್ರಮುಖ ಆಧಾರಸ್ತಂಭವಾಗಿದ್ದು, ಈ ವಿಮಾನದ ಪ್ರಥಮ ವಿದೇಶೀ ಗ್ರಾಹಕ ರಾಷ್ಟ್ರ ಭಾರತವಾಗಿದೆ.

        ಪಿ8-1 ಮಾದರಿಯ ಎರಡನೇ ವಿಮಾನದ ನಿರ್ಮಾಣ ಕಾರ್ಯ ಇದೀಗ ಭರದಿಂದ ಸಾಗಿದ್ದು, ಅರಕೋಣಂನಲ್ಲಿ ಅಂತಿಮ ಹಂತದ ಜೋಡಣಾ ಕಾರ್ಯಗಳು ನಡೆಯುತ್ತಿವೆ. ಈ ಮಾದರಿಯ ಮೊದಲ ವಿಮಾನದ ಪ್ರಯೋಗಾರ್ಥ ಹಾರಾಟವನ್ನು ಈ ವರ್ಷದ ಆರಂಭದಲ್ಲಿ ನಡೆಸಲಾಗಿದ್ದು, ಇದೀಗ ಎರಡನೇ ವಿಮಾನದ ಪರೀಕ್ಷೆಗೆ ಸೇನೆ ಸಿದ್ಧತೆ ಆರಂಭಿಸಿದೆ.

        ಪಿ8-1 ವಿಮಾಗಳ ಸರಣಿಯಲ್ಲಿ ಪ್ರಥಮ ಹಂತದಲ್ಲಿ ಮೂರು ವಿಮಾನಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದ್ದು, ಇವುಗಳನ್ನು ಚೆನ್ನೈ ಸಮೀಪದ ಅರಕೋಣಂ ನೌಕಾನೆಲೆಯಲ್ಲಿ ನಿಯೋಜಿಸಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷದ ಮೇ ವೇಳೆಗೆ ಈ ಸರಣಿಯ ಪ್ರಥಮ ವಿಮಾನವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗುವುದು ಎಂದು ಯೋಜನೆಯ ವ್ಯವಸ್ಥಾಪಕರಾದ ಲೇಲ್ಯಾಂಡ್‌ ವೈಟ್‌ ತಿಳಿಸಿದರು.

        2009ರಲ್ಲಿ ಭಾರತ, ಪಿ8-1 ಸರಣಿಯ ಎಂಟು ವಿಮಾನಗಳನ್ನು 210 ಕೋಟಿ ಡಾಲರ್‌ ವೆಚ್ಚದಲ್ಲಿ ನಿರ್ಮಿಸಲು ಅಮೆರಿಕವನ್ನು ಕೇಳಿಕೊಂಡಿತ್ತು. ಈ ವಿಮಾನಗಳನ್ನು ಬೋಯಿಂಗ್‌ 737-800ನ ಮಾದರಿಯ ವಿಮಾನಗಳ ಸುಧಾರಿತ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುತ್ತಿದೆ. ಈ ವಿಮಾನಗಳನ್ನು ಬಳಸಿ, ಸಾಗರದಲ್ಲಿನ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳನ್ನು ಧ್ವಂಸ ಮಾಡಬಹುದಾಗಿದ್ದು, ಬಾಂಬ್‌, ಕ್ಷಿಪಣಿಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರಲಿದೆ. ಸಾಗರ ತೀರದಲ್ಲಿ ಬಹು ದೂರ ಕ್ರಮಿಸಬಲ್ಲ ಈ ಯುದ್ಧ ವಿಮಾನಗಳಲ್ಲಿ ಭಾರತೀಯ ಸಂಸ್ಥೆಗಳಾದ ಎಚ್‌ಎಎಲ್‌, ಇಸಿಐಎಲ್‌, ಬಿಇಎಲ್‌ ಮತ್ತಿತರ ಕಂಪೆನಿಗಳು ಉತ್ಪಾದಿಸಿದ ಹಲವಾರು ಸಾಧನ, ಯಂತ್ರಗಳು ಹಾಗೂ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ವಿಮಾನದಲ್ಲಿ 9 ಮಂದಿ ನೌಕಾಪಡೆ ಯೋಧರು ಪ್ರಯಾಣಿಸಬಹುದಾಗಿದ್ದು, ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಇನ್ನಷ್ಟು ಯಾನಿಗಳನ್ನು ಈ ವಿಮಾನ ಕರೆದೊಯ್ಯಬಹುದಾಗಿದೆ. ಅಷ್ಟೇ ಅಲ್ಲದೆ ಸಾಗರ ತಳದಲ್ಲಿನ ಗುಪ್ತ ಕಾರ್ಯಾಚರಣೆಗಳ ಬಗೆಗೆ ವಿವರ ಕಲೆ ಹಾಕಲು ಅನುಕೂಲವಾಗುವ ಶಬ್ದಗ್ರಾಹಿ ಉಪಕರಣಗಳನ್ನು ಹಾಗೂ ಜಲಾಂತರ ಶೋಧಕಗಳನ್ನು ಸಮುದ್ರಕ್ಕೆ ಇಳಿಯಬಿಡುವ ವ್ಯವಸ್ಥೆಯನ್ನೂ ಇದು ಹೊಂದಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus