ಕ್ಸಿಂಜಿಯಾಂಗ್ : ಮುಸ್ಲಿಮರ ಪ್ರಾಬಲ್ಯವಿರುವ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಪವಿತ್ರ ರಮ್ಜಾನ್ ಮಾಸದಲ್ಲಿ ಉಪವಾಸ ಮಾಡುವುದನ್ನು ನಿಷೇಧಿಸುವುದರ ಸಹಿತ ಧಾರ್ಮಿಕ ಚಟುವಟಿಕೆಗಳನ್ನು ನಿಬಂìಧಿಸಿ ಚೀನಾ ಸರಕಾರ ಆದೇಶ ಹೊರಡಿಸಿದೆ.ಚೀನಾದ ಸರಕಾರಿ ವೆಬ್‌ಸೈಟಿನಲ್ಲಿರುವ ಆದೇಶದ ಪ್ರಕಾರ ಕ್ಸಿಜಿಯಾಂಗ್‌ನಲ್ಲಿರುವಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ (ಸಿಪಿಸಿ) ಸದಸ್ಯರು ರಮ್ಜಾನ್ ಮಾಸದಲ್ಲಿ ಉಪವಾಸ ಮಾಡುವುದನ್ನು ಮತ್ತು ಮಸೀದಿಗಳಿಗೆ ಹೋಗುವುದನ್ನು ನಿಬಂìಧಿಸಲಾಗಿದೆ.ಕ್ಸಿಜಿಯಾಂಗ್‌ನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಅವರನ್ನು ಉಯಿಘುರ್ ಎಂದು ಕರೆಯುತ್ತಾರೆ. ಇಲ್ಲಿ ಸುಮಾರು 9 ದಶಲಕ್ಷ ಉಯಿಘುರ್ ಇದ್ದಾರೆ. ಟರ್ಕಿ ಭಾಷೆಯನ್ನು ಮಾತನಾಡುವ ಅವರು ಚೀನಾದ ನಾಯಕರು ಧಾರ್ಮಿಕ ಮತ್ತು ರಾಜಕೀಯ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ರಮದಾನ್ ಅಥವಾ ರಮ್ಜಾನ್ ಮಾಸದಲ್ಲಿ ಜನರು ಹೆಚ್ಚು ತಿಂದು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳಬೇಕೆಂದು ಸಿಪಿಸಿ ಸದಸ್ಯರಿಗೆ ಸರಕಾರ ಸೂಚಿಸಿದೆ. ರಮದಾನ್ ಮಾಸದಲ್ಲಿ ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಸಮಗ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಾಯಕರು, ಸರಕಾರಿ ನೌಕರರು (ನಿವೃತ್ತರು ಸೇರಿ) ಮತ್ತು ವಿದ್ಯಾರ್ಥಿಗಳು ಉಪವಾಸ ಮಾಡುವುದನ್ನು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ವೆಬ್‌ಸೈಟಿನಲ್ಲಿ ಸರಕಾರ ಹೇಳಿದೆ.ಸ್ಥಳೀಯ ಗ್ರಾಮ ಮಟ್ಟದ ಯಿಘುರ್ ನಾಯಕರು ಊಟ ಮಾಡುವುದನ್ನು ಖಾತರಿಪಡಿಸಿಕೊಳ್ಳಲು ಅವರಿಗೆ ಉಡುಗೊರೆ ಒಯ್ಯಿರಿ ಎಂದು ಸರಕಾರ ಸಿಪಿಸಿ ಸದಸ್ಯರಿಗೆ ಸೂಚಿಸಿದೆ. ಸ್ಥಳೀಯಾಡಳಿತಗಳ ವೆಬ್‌ಸೈಟ್‌ಗಳಲ್ಲೂ ರಮ್ಜಾನ್ ಉಪವಾಸವನ್ನು ನಿಷೇಧಿಸಿರುವ ಈ ಮಾದರಿಯ ಆದೇಶಗಳಿವೆ. ವೆನ್ಸು ಕೌಂಟಿಯ ಸರಕಾರ ರಮ್ಜಾನ್ ಮಾಸದಲ್ಲಿ ವಿದ್ಯಾರ್ಥಿಗಳು ಮಸೀದಿಗೆ ಹೋಗುವುದನ್ನು ತಡೆಯಬೇಕೆಂದು ಹೇಳಿದೆ.ಕ್ಸಿಜಿಯಾಂಗ್ ಪ್ರಾಂತ್ಯದಲ್ಲಿ ಕಳೆದ ಕೆಲವು ಸಮಯದಿಂದ ಅಸಹನೆ ಹೊಗೆಯಾಡುತ್ತಿದ್ದು, ಆಗಾಗ ಹಿಂಸಾಚಾರ ಸಂಭವಿಸುತ್ತಿದೆ. 2009ರ ಜುಲೈಯಲ್ಲಿ ಇಲ್ಲಿ ಹಿಂಸಾಚಾರಕ್ಕೆ ಸುಮಾರು 200 ಮಂದಿ ಬಲಿಯಾಗಿದ್ದಾರೆ.