Saturday, May 25, 2013
Last Updated: 9:50:51 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಮೂಲ ಸೌಲಭ್ಯಗಳಿಲ್ಲದ ಮನೆ
  • ತಾಯಿ - ಮಗಳ ಕತ್ತಲ ಜೀವನ
  • ಬಾಲೆಗೆ ಐಎಎಸ್‌ ಓದುವಾಸೆ
  • ಪುಷ್ಪಾ ಪೂಜಾರ್ತಿ ಮತ್ತು ಶ್ವೇತಾ ವಾಸಿಸುತ್ತಿರುವ ಮನೆ

    • ರಾಕೇಶ್‌ ಕುಂಜೂರು | Aug 06, 2012

      ಕಾಪು: ಆ ಮನೆಯಲ್ಲಿ ಕರೆಂಟಿಲ್ಲ. ಶೌಚಾಲಯ, ಸ್ನಾನಗೃಹದ ವ್ಯವಸ್ಥೆಯೇ ಇಲ್ಲ. ದುಡಿಯುವ ಕೈಗಳ ಆಸರೆಯಂತೂ ಈ ಕುಟುಂಬಕ್ಕೆ ಇಲ್ಲವೇ ಇಲ್ಲ. ಏನೂ ಇಲ್ಲಗಳ ನಡುವೆ ಈ ಸಂಸಾರದ ಜೀವನ ರಥ ಸಾಗುವುದೇ ಒಂದು ದೊಡ್ಡ ಪವಾಡ. ಆದರೂ ಹಟ್ಟಿಗೆ ಸಮಾನವಾದ ಮನೆಯಲ್ಲಿ ಅಂಗವಿಕಲೆ ತಾಯಿಯೊಂದಿಗೆ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿರುವ ಈ ಮನೆಯ ಬಾಲಕಿಗೆ ಮಾತ್ರ ಐಎಎಸ್‌ ಓದುವ ಆಸೆಯಂತೆ. ಆ ಮೂಲಕ ತಾಯಿಯ ಕಣ್ಣೀರನ್ನು ಒರೆಸಬೇಕೆಂಬ ಹಂಬಲ.

      ತಿನ್ನಲು - ಉಣ್ಣಲು ಇಲ್ಲದವಳಿಗೆ ಎಂತಹ ಆಸೆ? ಎಂದು ಹುಬ್ಬೇರಿಸಬೇಡಿ. ಈ ಮಾತುಗಳು ಆಶ್ಚರ್ಯವೆಂದೆನಿಸಿದರೂ ನೂರಕ್ಕೆ ನೂರರಷ್ಟು ಸತ್ಯ. ಎಲ್ಲೂರು ಗ್ರಾಮದ ಕುಂಜೂರಿನ ದುರ್ಗಾ ನಗರದ ಐದು ಸೆಂಟ್ಸ್‌ ಕಾಲನಿಯಲ್ಲಿ ಎಲ್ಲವೂ ಉಳ್ಳವರ ನಡುವೆ ವಾಸಕ್ಕೂ ಯೋಗ್ಯವಲ್ಲದ ಮನೆಯಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಬಡ ಕುಟುಂಬದ ಪುಷ್ಪಾ ಪೂಜಾರ್ತಿ ಅವರ ಜೀವನದ ಕರುಣಾಜನಕ ಕಥೆಯಿದು.

      ಟಾಯ್ಲೆಟ್‌ನ ಅವಸ್ಥೆ.


      ಕುಂಜೂರು ದುರ್ಗಾ ನಗರದ ದಿ| ಹರಿಯಪ್ಪ ಸಾಲ್ಯಾನ್‌ ಅವರ ಪತ್ನಿ ಪುಷ್ಪಾ ಹುಟ್ಟಿನಿಂದಲೂ ಪೊಲೀಯೋ ಪೀಡಿತೆ. ಒಬ್ಬಳೇ ಮಗಳು ಎಂಟನೇ ತರಗತಿಯಲ್ಲಿ ಓದುತ್ತಿರುವ ಶ್ವೇತಾಳೇ ಸರ್ವಸ್ವ. ಒಂದು ಕಾಲಿನ ಸ್ವಾಧೀನವಿಲ್ಲದೇ, ಗಂಡನನ್ನು ಕಳೆದುಕೊಂಡಿರುವ ಪುಷ್ಪಾ ಪೂಜಾರ್ತಿ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ.

      ಯಾವುದೂ ಇಲ್ಲ...

      ಯಾವುದೇ ಮೂಲಸೌಕರ್ಯಗಳಿಲ್ಲದ 'ಮನೆ' ಎನ್ನಲೂ ಆಸಾಧ್ಯವಾದ ಈ ಮನೆಗೆ ಸರಿಯಾದ ಬಾಗಿಲುಗಳೇ ಇಲ್ಲ. ಟಾಯ್ಲೆಟ್‌ - ಬಾತ್‌ ರೂಂಗಳಿಲ್ಲ. ಪ್ರಾಯಕ್ಕೆ ಬಂದಿರುವ ಮನೆ ಮಗಳು ಬಹಿರ್ದೆಸೆಗೆ ಹೋಗಬೇಕಾದರೆ ಕತ್ತಲಾಗುವುದನ್ನು ಕಾಯಬೇಕು ಅಥವಾ ಶಾಲೆಗೆ ಹೋಗಿ ಅಲ್ಲಿರುವ ಶೌಚಾಲಯ ಬಳಸಬೇಕು. ಜನವಸತಿ ಕಾಲನಿಯಲ್ಲಿರುವ ಇವರು ಇನ್ನು ಸ್ನಾನ ಮಾಡಲೂ ಪರದಾಡ ಬೇಕು. ಮಗಳು ಸ್ನಾನ ಮಾಡಬೇಕಾದರೆ ತಾಯಿ ವಸ್ತ್ರವನ್ನು ಅಡ್ಡ ಹಿಡಿಯಬೇಕು. ತಾಯಿ ಸ್ನಾನ ಮಾಡಬೇಕಾದರೆ ಮಗಳು ವಸ್ತ್ರವನ್ನು ಅಡ್ಡ ಹಿಡಿಯಬೇಕು. ಕರೆಂಟಿಲ್ಲದ ಮನೆಯಲ್ಲಿ ಓದಿಗಾಗಿ ಚಿಮಿಣಿ ದೀಪದ ಬೆಳಕು ಅನಿವಾರ್ಯ. (ಈ ಹಿಂದೆ ಭಾಗ್ಯಜ್ಯೋತಿ ಲೈನ್‌ ಇದ್ದು, ಬಿಲ್‌ ಪಾವತಿಸದ ಕಾರಣ ಸಂಪರ್ಕ ಕಡಿತ ಮಾಡಲಾಗಿದೆ)

      ದಿ| ಹರಿಯಪ್ಪ ಅವರು ತೋಡಿರುವ ಟಾಯ್ಲೆಟ್‌ ಗುಂಡಿ.


      ಶೌಚಾಲಯ ಗುಂಡಿ ರೆಡಿಯಾಗುಷ್ಟರಲ್ಲೇ ದೂರಾದ ಪತಿ

      ಪುಷ್ಪಾ ಪೂಜಾರ್ತಿ ಅವರ ಪತಿ ಹರಿಯಪ್ಪ ಅವರು ಚಾಲಕ/ಮೇಸ್ತ್ರಿಯಾಗಿದ್ದರು. ಅನಿರೀಕ್ಷಿತವಾಗಿ ಕಂಡುಬಂದ ಲಿವರ್‌ ಸಂಬಂಧಿತ ತೊಂದರೆಯಿಂದಾಗಿ ಮನೆಯಲ್ಲೇ ಉಳಿದ ಹರಿಯಪ್ಪ ಅವರು ಅನಾರೋಗ್ಯದ ನಡುವೆಯೇ ಎಲ್ಲೂರು ಗ್ರಾ.ಪಂ. ಶೌಚಾಲಯ ನಿರ್ಮಾಣಕ್ಕಾಗಿ ನೀಡಿದ ಹಣವನ್ನು ಬಳಸಿಕೊಂಡು ಶೌಚಾಲಯಕ್ಕಾಗಿ ಗುಂಡಿ ತೋಡುವ ಕಾರ್ಯ ನಡೆಸಿದ್ದರು. ಆದರೆ ಈ ನಡುವೆಯೇ ಅವರು ಮತ್ತಷ್ಟು ಅನಾರೋಗ್ಯಕ್ಕೀಡಾಗಿ ಅಸುನೀಗಿದ್ದು ಈ ಕುಟುಂಬಕ್ಕೆ ದೊಡ್ಡ ಹೊಡೆತವನ್ನೇ ನೀಡಿತ್ತು. ಸುಮಾರು ಎಂಟು ವರ್ಷಗಳಿಂದಲೂ ಟಾಯ್ಲೆಟ್‌ನ ಗುಂಡಿ ಹಾಗೆಯೇ ಉಳಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

      ಹೊಟ್ಟೆ ತುಂಬಿಸುವ ಅಂಗವಿಕಲ ವೇತನ

      ಈ ಕುಟುಂಬಕ್ಕೆ ಸರಕಾರದ ಅಂತ್ಯೋದಯ ಕಾರ್ಡ್‌ ಸಿಕ್ಕಿದೆ. ಪುಷ್ಪಾ ಅವರಿಗೆ 400 ರೂ. ಅಂಗವಿಕಲ ವೇತನ ಬರುತ್ತದೆ. ಈ 400 ರೂಪಾಯಿಯೇ ಇವರ ಜೀವನದ ಮೂಲ ಆದಾಯ. ತಿಂಗಳಿಗೊಮ್ಮ ಬರುವ ಅಂಗವಿಕಲ ವೇತನದಲ್ಲಿ ಮನೆಗೊಂದಿಷ್ಟು ಅಡುಗೆ ಸಾಮಾನು ತರುತ್ತಾರೆ. ಕುಚ್ಚಿಗೆ ಅಕ್ಕಿಯ ಊಟಕ್ಕಾಗಿ ಅಕ್ಕಿಯನ್ನು ಅಂಗಡಿಯಿಂದ ಸಾಲ ಮಾಡಿ ತರಬೇಕಾದ ಅನಿವಾರ್ಯತೆಯಿರುತ್ತದೆ. ನೆರೆ ಮನೆಯವರು ಕೆಲವೊಮ್ಮೆ ಮಗಳಿಗೆ ಹೊಸ ಬಟ್ಟೆ ನೀಡುತ್ತಾರೆ ಅಂದೇ ಇವರಿಗೆ ಹಬ್ಬದ ದಿನವಾಗಿ ಬಿಡುತ್ತದೆ.

      ತಾಯಿಗೆ ಕಲಿಸುವಾಸೆ - ಮಗಳಿಗೆ ಐಎಎಸ್‌ ಓದುವಾಸೆ

      ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಪುಷ್ಪಾ ಪೂಜಾರ್ತಿ ಅವರಿಗೆ ಮಗಳನ್ನು ವಿದ್ಯೆಯಲ್ಲಾದರೂ ಶ್ರೀಮಂತಳನ್ನಾಗಿಸಬೇಕು ಎಂಬ ಆಸೆ. ತಾಯಿಗೆ ತಕ್ಕ ಮಗಳ ಹಾಗೆ ಇರುವ ಶ್ವೇತಾಗೂ ತಾಯಿಯ ಕನಸನ್ನು ನನಸಾಗಿಸ ಬೇಕೆಂಬ ಮಹದಾಸೆ. ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ತಾನು ವಿದ್ಯಾವಂತಳಾಗಬೇಕು. ಆ ಮೂಲಕ ತಾಯಿ ಮತ್ತು ಸಮಾಜದ ಋಣವನ್ನು ತೀರಿಸಬೇಕೆಂಬ ಕನಸು ಕಾಣುತ್ತಿರುವ ಶ್ವೇತಾ ಎಳೆವೆಯಲ್ಲಿಯೇ ದೊಡ್ಡದಾದ ಗುರಿಯನ್ನಿಟ್ಟುಕೊಂಡಿದ್ದಾಳೆ.

      ಸಮಾಜ ತನಗೆ ಮತ್ತು ತನ್ನ ಆಸೆಗಳಿಗೆ ನೆರವು ನೀಡಿ, ಅವಕಾಶಗಳನ್ನೇನಾದರೂ ಕಲ್ಪಿಸಿ ಕೊಟ್ಟಿತೆಂದರೆ ತಾನು ಚೆನ್ನಾಗಿ ಕಲಿತು ಐಎಎಸ್‌ ಪರೀಕ್ಷೆ ಬರೆಯಬೇಕು. ಅಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಮುಂದೆ ದೊಡ್ಡ ಅಧಿಕಾರಿಯಾಗಿ ದೇಶಕ್ಕಂಟಿರುವ ಬಡತನದ ಶಾಪವನ್ನು ತೊಲಗಿಸಬೇಕು ಎನ್ನುವುದು ಶ್ವೇತಾಳ ಮನದಾಳದ ಬಯಕೆ.

      ತಾಯಿ ಅಳುವಾಗ ಕಣ್ಣೀರು ಒರೆಸಿ ನಾನು ದೊಡ್ಡವಳಾದ ಮೇಲೆ ನಿನ್ನ ಪರಿಸ್ಥಿತಿ ಸರಿಯಾಗುತ್ತಮ್ಮಾ ಎಂದು ಸಮಾಧಾನವನ್ನೂ ಹೇಳುತ್ತಾಳಂತೆ. ಇವಳ ಈ ಆಸೆಗೆ ಪೂರಕವಾದ ಪ್ರೇರಣೆ ನೀಡುತ್ತಿರುವವರು ಶಾಲೆಯ ಅಧ್ಯಾಪಕ ವೃಂದದವರಂತೆ. ಆದರೆ ಈ ಬಯಕೆ ಈಡೇರುವುದೇ ಎಂಬ ಸಂಶಯವೂ ಶ್ವೇತಾಳ ಮನದಲ್ಲಿದೆ.

      ಈ ಕುಟುಂಬಕ್ಕೆ ಈಗಾಗಲೇ ಕುಂಜೂರು ಫ್ರೆಂಡ್ಸ್‌ನ ಯುವಕರು ಕ್ರಿಕೆಟ್‌ ಮ್ಯಾಚ್‌ ಮಾಡಿ ಉಳಿಸಿದ್ದರಲ್ಲಿ ಸಹಾಯ ಧನ ನೀಡಿದ್ದು, ಉಳಿದಂತೆ ಸ್ಕಾಲರ್‌ಶಿಪ್‌ನ ಸರ್ವೆಗಾಗಿ ಆಗಮಿಸಿದ್ದ ಬಿಲ್ಲವಾಸ್‌ ದುಬಾೖ ಬಳಗದವರು ಮತ್ತು ಇವರ ಮನೆಯ ಸ್ಥಿತಿಯನ್ನು ಕಂಡವರು ಒಂದಿಷ್ಟು ಹಣವನ್ನು ನೀಡಿದ್ದಾರೆ. ಆದರೆ ಈ ಹಣ ಇವರ ಬಾಕಿ ಸಾಲಕ್ಕೇ ಸಾಕಾಗಲಿಲ್ಲ ಎನ್ನುವುದು ನಿಜ.

      ಸಹಕಾರಕ್ಕೆ ಮನವಿ: ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಈ ಬಡ ಕುಟುಂಬಕ್ಕೆ ಸಹೃದಯಿಗಳ ಸಹಾಯದ ಆವಶ್ಯಕತೆ ಇದೆ. ದಾನಿಗಳು ಉಚ್ಚಿಲ - ಪಣಿಯೂರಿನ ರೈಲ್ವೇ ಸೇತುವೆ ಬಳಿಯ ಕುಂಜೂರು ದುರ್ಗಾ ನಗರದ ದ್ವಾರದ ಬಳಿಯಿರುವ ಪುಷ್ಪಾ ಪೂಜಾರ್ತಿ ಅವರ ಮನೆಗೆ ತೆರಳಿ ಧನ ಸಹಾಯ ಮಾಡಬಹುದು ಅಥವಾ ಪುಷ್ಪಾ ಅವರ ಉಚ್ಚಿಲ ವಿಜಯ ಬ್ಯಾಂಕ್‌ನ ಖಾತೆ ಸಂಖ್ಯೆ 121001011001265 (IFSC VIJB 0001210)ಕ್ಕೆ ರವಾನಿಸ ಬಹುದು.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus