Udayavani | Aug 06, 2012
ಬೆಳಗಾವಿ: ಜೀವಂತವಿರುವಾಗ ಪ್ರಾಣಿಗಳತ್ತ ಪ್ರೀತಿ ತೋರುವ ಮನುಷ್ಯ ಸತ್ತ ನಂತರ ಅದೇ ಕಾಳಜಿ ತೋರಲಾರ. ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಸತ್ತು ಬಿದ್ದಿದ್ದರೂ ಅವುಗಳಿಗೆ ಬದಿಗೆ ಸರಿಸದೇ ಅದು ತನ್ನ ಹೊಣೆಯಲ್ಲ ಎಂದುಕೊಳ್ಳುವವರೇ ಹೆಚ್ಚು. ಆದರೆ, ಬೆಳಗಾವಿಯ ಯುವ ವೈದ್ಯ ಡಾ| ಮಹಾಂತೇಶ ರಾಮಣ್ಣವರ ಅವರು ಸತ್ತ ಪ್ರಾಣಿಗೆ ಮುಕ್ತಿ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಕೆಲವರು ಸಮಾಜದಲ್ಲಿ ಪ್ರಚಾರ ಬಯಸದೇ ವಿಧಾಯಕ ಕಾರ್ಯ ಕೈಗೊಳ್ಳುವವರಿದ್ದಾರೆ. ಈ ಮಾತಿಗೆ ಈ ವೈದ್ಯರೇ ಸಾಕ್ಷಿ. ತಂದೆಯ ಶವ ಛೇದನ ಮೂಲಕ ಖ್ಯಾತಿಗಳಿಸಿದವರು. ವೈದ್ಯಕೀಯ ಕೇÒತ್ರದಲ್ಲಿ ಸಾಧನೆ ಮಾಡಿ ಹಲವು ಪ್ರಶಸ್ತಿಗಳಿಗೆ ಭಾಜನರಾದವರು ಯುವ ವೈದ್ಯ ಬೈಲಹೊಂಗಲದ ಡಾ| ಮಹಾಂತೇಶ ರಾಮಣ್ಣವರ.
ಬೆಳಗಾವಿ ಕೆಎಲ್‌ಇ ವಿಶ್ವವಿದ್ಯಾಲಯದ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಲ್ಲಿ ಮಾನವ ಶರೀರ ರಚನಾ ಶಾಸ್ತ್ರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರ ಪ್ರವೃತ್ತಿ ಮಾತ್ರ ವಿಶಿಷ್ಠ.
ಒಂದೂರಿನಿಂದ ಮತ್ತೂಂದು ಊರಿಗೆ ಸಂಚರಿಸುವ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳು ಅಪಘಾತಕ್ಕೀಡಾಗಿಯೋ ಅಥವಾ ಇತರ ಕಾರಣಗಳಿಂದಲೋ ರಸ್ತೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದರೂ ನೋಡದಂತೆ ಸಾಗುವವರೇ ಅಧಿಕ. ಇಂಥ ಪ್ರಸಂಗಗಳನ್ನು ಮಾನವ ಗಂಭೀರವಾಗಿ ಪರಿಗಣಿಸಿ ಅವುಗಳನ್ನು ತೆರವುಗೊಳಿಸಿಯೇ ಮುನ್ನೆಡೆಯಬೇಕು ಎನ್ನುತ್ತಾರೆ ಡಾ| ರಾಮಣ್ಣವರ.
ಯಾವುದೇ ಪ್ರಾಣಿಯಾಗಲಿ ಸತ್ತ ನಂತರ ರಸ್ತೆಯಿಂದ ತೆಗೆಯದೆ ಹೋದರೆ ರಸ್ತೆ ಅಪಘಾತವಾಗುವ ಸಂಭವವಿರುತ್ತದೆ. ಜತೆಗೆ ಸತ್ತ ಪ್ರಾಣಿಯ ದೇಹದ ಭಾಗಗಳು ವಾಹನಗಳ ಚಕ್ರಕ್ಕೆ ಅಂಟಿಕೊಂಡು ಸಾಂಕ್ರಾಮಿಕ ರೋಗ ಹರಡಲು ಆಸ್ಪದ ಕೊಟ್ಟಂತಾಗುತ್ತದೆ. ಪ್ರಾಣಿದಯಾ ಕಾರ್ಯ ಮಾಡುತ್ತಿರುವ ಡಾ| ಮಹಾಂತೇಶ ದಯವೇ ಧರ್ಮದ ಮೂಲ ಎಂದುಕೊಂಡು ಇಂಥ ಕಾರ್ಯ ಕೈಗೊಂಡಿದ್ದಾರೆ.
ತೆರವು ಹೇಗೆ
ಸತ್ತ ಪ್ರಾಣಿಗಳ ದೇಹ ತೆರವುಗೊಳಿಸುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಗಳನ್ನು ಕರವಸ್ತ್ರ , ಕಾಗದ ಅಥವಾ ಪ್ಲಾಸ್ಟಿಕ್ ಚೀಲ ಬಳಸಿ ಪ್ರಾಣಿಯ ಬಾಲ ಹಿಡಿದು ಅತಿ ಸರಳವಾಗಿ ಎಳೆದು ರಸ್ತೆಯ ಪಕ್ಕದಲ್ಲಿ ಹಾಕಬಹುದು. ತದನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಸ್ವತ್ಛಗೊಳಿಸಿಕೊಳ್ಳಬೇಕು. ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಜ್ಞಾವಂತ ಚಾಲಕ, ನಿರ್ವಾಹಕರು ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ಈ ಕಾರ್ಯವನ್ನು ಸರಳವಾಗಿ ಪ್ರಯಾಣಿಕರ ಸಹಕಾರದೊಂದಿಗೆ ನೆರವೇರಿಸಿ ಹಲವಾರು ಅಪಘಾತಗಳನ್ನು ತಪ್ಪಿಸುವುದರೊಂದಿಗೆ ಅಮೂಲ್ಯವಾದ ಜೀವವನ್ನು ರಕ್ಷಿಸಬಹುದು.
ವಾಹನ ಅತಿವೇಗದಲ್ಲಿದ್ದಾಗ ಅಕಸ್ಮಾತ್ ಪ್ರಾಣಿಗಳು ಅಡ್ಡಬಂದು ಅಪಘಾತವಾಗುವದು ಸಾಮಾನ್ಯ. ಅಂತಹ ಪ್ರಸಂಗದಲ್ಲಿ ವಾಹನವನ್ನು ನಿಲ್ಲಿಸಿ ಆ ಸತ್ತ ಪ್ರಾಣಿಯನ್ನು ರಸ್ತೆಯಲ್ಲೇ ಬಿಡದೆ ಪಕ್ಕಕ್ಕೆ ಸರಿಸಿ ಇಟ್ಟಾಗ ಅದಕ್ಕಿಂತ ದೊಡ್ಡ ಪುಣ್ಯ ಮತ್ತೂಂದಿಲ್ಲ. ಈ ಕುರಿತು ಅರಿವು ಬರಬೇಕು ಅಷ್ಟೆ. ಅದರೊಂದಿಗೆ ಮಾನವನ ಜೀವನ ಕಾಪಾಡುವುದು ಆದ್ಯಕರ್ತವ್ಯ. ಅದಲ್ಲದೆ ಪ್ರಜ್ಞಾವಂತ ಕಾಳಜಿಯುಳ್ಳ ಪ್ರಯಾಣಿಕರೂ ಇಂತಹ ಪ್ರಾಣಿ ದಯಾ ಕಾರ್ಯಕ್ಕೆ ಧ್ವನಿಗೂಡಿಸಿದಾಗ ಮಾತ್ರ ಸಾಧ್ಯವಾಗುವುದು.
ಹಲವು ವರ್ಷಗಳಿಂದ ಮಾಡುತ್ತಿರುವ ಸತ್ತ ಪ್ರಾಣಿಗಳನ್ನು ತೆಗೆದು ಹಾಕುವ ಈ ಮಹಾನ್ ಕಾರ್ಯಕ್ಕೆ ಅದೇ ಕಾಲೇಜಿನ ಸಹೋದ್ಯೋಗಿ ಪ್ರಾಧ್ಯಾಪಕ ಡಾ|ಆರ್.ಎಸ್. ಹಿರೇಮಠ, ಚಂದ್ರಕಾಂತ ಅರಳಿಕಟ್ಟಿ, ಯಲ್ಲಪ್ಪ ಗ್ಯಾನಪ್ಪಗೋಳ ಹಾಗೂ ಮಹಾಂತೇಶ ಅವರ ಕುಟುಂಬದ ಸದಸ್ಯರಾದ ರಾಮಣ್ಣವರ ತಾಯಿ ಡಾ| ಸುಶೀಲಾದೇವಿ, ಪತ್ನಿ ಡಾ| ಸುರೇಖಾ ಹಾಗೂ ಮಕ್ಕಳಾದ ಯೋಗಾನಂದ, ವೀರೇಶ ಇವರೆಲ್ಲರೂ ಕೈಗೂಡಿಸುವ ಸಾಮಾಜಿಕ ಕಾರ್ಯ ತುಂಬಾ ಶ್ಲಾಘನೀಯ. ಡಾ| ಮಹಾಂತೇಶ ಅವರು ಬೈಲಹೊಂಗಲದಿಂದ ಬೆಳಗಾವಿಗೆ ತಮ್ಮ ಕಾಯಕದ ನಿಮಿತ್ತ ಹಾಗೂ ಇನ್ನಿತರ ಊರುಗಳಿಗೆ ಸಂಚರಿಸುವ ಸಂದರ್ಭದಲ್ಲಿ ತಮ್ಮ ಕಾರಿನಲ್ಲಿ ಸದಾಕಾಲ ಹ್ಯಾಂಡ್‌ಗ್ಲೌಸ್, ಫೇಸ್‌ಮಾಸ್ಕ್ ಹಾಗೂ ಆ್ಯಂಟಿಸಪ್ಟಿಕ್ ಲೋಶನ್ ಇಟ್ಟುಕೊಂಡು ಸುಮಾರು 100 ಕ್ಕೂಹೆಚ್ಚು ಕಾಗೆ, ನಾಯಿ, ಹಂದಿ, ಮುಂಗುಸಿ, ಹಾವು, ನರಿ, ಮೊಲ, ಬೆಕ್ಕು, ತೋಳ, ಮುಂತಾದ ಪ್ರಾಣಿಗಳನ್ನು ತೆಗೆದು ಹಾಕಿ ಹಲವು ಅಪಘಾತಗಳನ್ನು ತಪ್ಪಿಸುವ ಕಾರ್ಯ ಮಾಡಿದ್ದಾರೆ.
ಡಾ|ಮಹಾಂತೇಶ ಅವರು ಮಾಡುವ ಈ ಮಹತ್ವದ ಕಾರ್ಯಕ್ಕೆ ಜನ ಬೆಂಬಲಿಸಬೇಕು. ಈ ಕುರಿತು ಸಲಹೆ ಸೂಚನೆಗೆ ಡಾ|ರಾಮಣ್ಣವರ ಚಾರಿಟೇಬಲ್ ಟ್ರಸ್ಟ್, ಬೈಲಹೊಂಗಲ, ಜಿ|ಬೆಳಗಾವಿ ಇದರ ಅಧ್ಯಕ್ಷ ಡಾ|ಮಹಾಂತೇಶ ರಾಮಣ್ಣವರ ಅವರನ್ನು ಸಂಪರ್ಕಿಸಬಹುದು( ಮೊ : 9242496497).
ಪರೋಪಕಾರವೇ ಪುಣ್ಯವೆಂದು ಅನುಭವಿಗಳು ಹೇಳುತ್ತಾರೆ. ಮಾನವನಾಗಿ ಪರಹಿತ ಬಯಸದಿದ್ದರೆ ಪ್ರಾಣಿ- ಪಕ್ಷಿಗಳಿಗಿಂತ ಕಡೆ ಎಂಬ ಮಾತು ಇದೆ. ಕೆಲವೊಮ್ಮೆ ಆ ಪ್ರಾಣಿ-ಪಕ್ಷಿಗಳು ಮಾನವನಿಗೆ ಎಷ್ಟು ಉಪಕರಿಸುತ್ತವೆ ಎಂದರೆ ನಿತ್ಯ ಜೀವನದಲ್ಲಿ ಅವುಗಳ ಸಂಘ, ಸಂಪರ್ಕವಿಲ್ಲದೇ ಬದುಕು ತುಂಬ ದುರ್ಲಭಗೊಳ್ಳುತ್ತದೆ.