Friday, May 24, 2013
Last Updated: 7:47:01 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇದು ನಮ್ಮ ಗ್ರಾಮೀಣ ಬದುಕು
    • ಸ್ವಾತಂತ್ರ್ಯ ಬಂತು ಸೌಲಭ್ಯಗಳೇ ಇಲ್ಲ
    • ಕಾಡಿನ ನಡುವಿನ ಹದಗೆಟ್ಟ ರಸ್ತೆ.

      • Udayavani | Aug 06, 2012

        ಶಿರಸಿ: ಇಲ್ಲಿ ಹಿಡಿ ಉಪ್ಪು ಬೇಕಾದರೂ ನಡೆದೇ ಬರಬೇಕು. ಬರೋಬ್ಬರಿ 10 ಕಿ.ಮೀ. ದೂರದಿಂದಲೂ ನಡೆದು ಮುಖ್ಯ ಹೆದ್ದಾರಿಯಲ್ಲಿನ ಪಕ್ಕದ ಅಂಗಡಿಗೇ ಆಗಮಿಸಬೇಕು. ಸಂಚಾರ, ವಿದ್ಯುತ್‌ ಕೇಳಲೇ ಬೇಡಿ, ಸ್ವಾತಂತ್ರ್ಯ ಬಂದು ಬರೋಬ್ಬರಿ ಆರು ದಶಕಗಳು ಉರುಳಿದರೂ ಇಲ್ಲಿನ ಕಾಡಿನ ನಡುವಿನ ಹಳ್ಳಿಗಳು ಮಾತ್ರ ಬೆಳಕು, ದಾರಿ ಎರಡೂ ಕಾಣಲಿಲ್ಲ.

        ಮಳೆಗಾಲದಲ್ಲಿ ಅನಾರೋಗ್ಯ ಬಂದರೆ ವಾಹನವೂ ಬರುವದಿಲ್ಲ. ಹೊಳೆಯ ಮೇಲಿನ ಮುರುಕಲ ಸಂಕ ದಾಟಿ, ಉಂಬಳ (ಲೀಚಸ್‌)ಕಚ್ಚಿಸಿಕೊಳ್ಳುತ್ತ, ಮಳೆಗೆ, ಗಾಳಿಗೆ ಎದೆಯೊಡ್ಡಿ ನಡೆದು ಊರು ತಲುಪಬೇಕಾದ ಸ್ಥಿತಿ ಇದೆ.

        ಶಿರಸಿ ಕುಮಟಾ ರಾಜ್ಯ ಹೆದ್ದಾರಿ ಬಂಡಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾಗಿಹೊಸಳ್ಳಿಯಿಂದ ಬರೋಬ್ಬರಿ ಐದರಿಂದ ಹತ್ತು ಕಿಲೋಮೀಟರ್‌ ಅಂತರದೊಳಗಿನ ಹಳ್ಳಿಗಳ ವ್ಯಥೆ ಇದು.

        ಸಂಕಟದ ಬದುಕು: ಸಂಪೇಕಟ್ಟು, ತೋಟದಗದ್ದೆ, ಲಕೀRಕುಣಿ, ಬುಗಡಿ, ದೇವಿಮನೆ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್‌ ಬಿಡಿ, ಊರು ತಲುಪಲು ಸರ್ವ ಋತು ರಸ್ತೆಯೂ ಇಲ್ಲ. ಹೊಳೆ ಪಕ್ಕದ ಐದಡಿ ಅಗಲದ ರಸ್ತೆಯಲ್ಲೇ ಊರು ತಲುಪಬೇಕು. ಊರು ತಲುಪಲು ಒಂದೇ ಹೊಳೆ ಐದು ಕಡೆ ಸಿಗುತ್ತದೆ. ಈ ವರ್ಷ ರಾಗಿಹೊಸಳ್ಳಿ ಬಳಿ ಬಾಂದಾರ ಸಹಿತ ಮಿನಿ ಸೇತುವೆ ಆಗಿದೆ. ಸಂಪೇಕಟ್ಟಿನ ಬಳಿ ಒಂದು ಕಾಲು ಸಂಕ ನಿರ್ಮಾಣ ಅರಬರೆಯಾಗಿದೆ. ಊರವರೇ ಸೇರಿಕೊಂಡು ಇದರ ಮೇಲೆ ಕಾಲು ಸಂಕ ಮಾಡಿಕೊಂಡಿದ್ದಾರೆ. ಸುಮಾರು 30 ಅಡಿ ಉದ್ದನೆ ಹೊಳೆ ದಾಟಿಯೇ ಪೇಟೆಗೆ ದಾರಿ ನೋಡಬೇಕಾದ ಸ್ಥಿತಿ ಇಲ್ಲಿನವರದ್ದು.

        ಈ ಊರುಗಳಲ್ಲಿ ಸುಮಾರು 90 ಮನೆಗಳಿದ್ದು, ಸುಮಾರು 600 ಜನಸಂಖ್ಯೆ ಇದೆ. ಇಲ್ಲಿನ 40ಕ್ಕೂ ಅಧಿಕ ಮನೆಗಳಿಗೆ ಬೆಳಕಿಲ್ಲ. ರಾಜೀವಗಾಂಧಿ ವಿದ್ಯುದ್ಧೀಕರಣ ಯೋಜನೆಯಲ್ಲಿ ಬೆಳಕು ಬರಬೇಕಿದ್ದರೂ, ತಾಂತ್ರಿಕ ಕಾರಣಗಳ ನೆಪದಲ್ಲೇ ಇನ್ನೂ ಸಾಧ್ಯವಾಗಿಲ್ಲ.

        ದಾಸ್ತಾನೇ ಗತಿ: ಮಳೆಗಾಲ ಆರಂಭವಾಯಿತೆಂದರೆ ಇಲ್ಲಿನ ಗ್ರಾಮಸ್ಥರಿಗೆ ಬಹುತೇಕ ಹೊರ ಜಗತ್ತಿನ ಸಂಪರ್ಕ ಕಡಿದು ಹೋಗುತ್ತದೆ. ಮಳೆಗಾಲದ ನಾಲ್ಕು ತಿಂಗಳಿಗೆ ಬೇಕಾದ ದಿನಸಿ ಸಾಮಗ್ರಿಗಳು, ಪಶು ಆಹಾರ, ಅಕ್ಕಿ ಎಲ್ಲವನ್ನೂ ಬೇಸಗೇಯೊಳಗೆ ತರಿಸಿಟ್ಟುಕೊಳ್ಳುತ್ತಾರೆ. ಅಪ್ಪಿ ತಪ್ಪಿ ಮಳೆಗಾಲದಲ್ಲಿ ಉಪ್ಪು ಬೇಕಾದರೂ 10 ಕಿ.ಮೀ. ನಡೆದು ರಾಗಿಹೊಸಳ್ಳಿಗೆ ಹೋಗಿ, ಮರಳಿ ಅಷ್ಟೇ ದೂರ ನಡೆದೇ ಬರಬೇಕು. ಶಿರಸಿ ಪೇಟೆ ತಲುಪಬೇಕಾದರೆ ಬಸ್‌ ಏರಿ 32 ಕಿ.ಮೀ. ದೂರ ಕ್ರಮಿಸಬೇಕು ಎನ್ನುತ್ತಾರೆ ದೇವಿಗದ್ದೆಯ ಮಹಾಬಲೇಶ್ವರ ನಾರಾಯಣ ಭಟ್ಟ.

        ನಾಲ್ಕೈದು ಹಳ್ಳಿಗೆ ಸೇರಿ ಸಂಪೇಕಟ್ಟಿನಲ್ಲಿ ಶಾಲೆ ಇದೆ. ಐದನೇ ವರ್ಗದ ವರೆಗೆ ಏಕೋಪಾಧ್ಯಾಯರ ಶಾಲೆ ಇದ್ದರೂ ಇರುವ ಮಕ್ಕಳು ಕೇವಲ 6. ಈ ಶಾಲೆ ಇಲ್ಲ ಎಂದರೆ ಮತ್ತೆ ಶಾಲೆಗೆ ಹೋಗಿ ಬರಲು 20 ಕಿ.ಮೀ. ನಡೆಯಬೇಕು. ಆರನೇ ತರಗತಿಗೆ ರಾಗಿಹೊಸಳ್ಳಿಗೆ ಇದೇ ಕೊಚ್ಚಟೇ (ಸುಲಭವಿರದ) ದಾರಿಯಲ್ಲೇ ನಡೆದು ಹೋಗುತ್ತಿದ್ದಾರೆ. ಬಹುತೇಕ ಪಾಲಕರು ಶಾಲೆ ಸಮೀಪ ಇರುವ ಪರ ಊರಿನ ಸಂಬಂಧಿಗಳ ಮನೆಯಲ್ಲೇ ಮಕ್ಕಳನ್ನು ಶಿಕ್ಷಣಕ್ಕೆ ಕಳಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.

        ಸರ್ವ ಋತು ರಸ್ತೆ, ಅಗತ್ಯ ಇರುವಲ್ಲಿ ಆರಡಿ ಅಗಲದ ಸೇತುವೆ, ವಿದ್ಯುತ್‌ ಇಲ್ಲದ ಮನೆಗಳಿಗೆ ಬೆಳಕಿನ ವ್ಯವಸ್ಥೆ ಆಗಬೇಕು ಎಂಬುದು ಹಳ್ಳಿಗರ ಆಗ್ರಹ. ಅಕ್ಷರಶಃ ಸಮಸ್ಯೆ ಅರಿತ ಸಂಸದರು, ಅಧಿಕಾರಿಗಳು, ನಾಲ್ಕು ಸಲ ಆಯ್ಕೆಯಾಗಿ ಸಚಿವರಾದವರು ಈ ಬಗ್ಗೆ ಗಮನ ಹರಿಸುವವರೇ? ಗ್ರಾಮಸ್ಥರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

        * ಈ ಊರುಗಳು ರಾಜೀವಗಾಂಧಿ ವಿದ್ಯುದ್ದೀಕರಣ ಎರಡನೇ ಹಂತದ ಯೋಜನೆಯಲ್ಲಿ ಆಯ್ಕೆಯಾಗಿದೆ. 150 ಕಂಬ, ಎಂಟು ಟಿಸಿಗಳು ಬೇಕಾಗಿದೆ. ರಸ್ತೆ ಅಭಿವೃದ್ಧಿಗೂ ಮುನ್ನ ಸೇತುವೆ, ಕಾಲ್ಸಂಕಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ರಸ್ತೆ ನಿರ್ಮಾಣಕ್ಕೆ, ಸೇತುವೆಗೆ ಗೊಚ್ಚು ಮಣ್ಣು, ಜೆಲ್ಲಿ ಕಲ್ಲುಗಳನ್ನೂ ಹೊರ ಭಾಗದಿಂದಲೇ ತರಬೇಕಾಗುವುದರಿಂದ ವಿಳಂಬ ಆಗುತ್ತಿದೆ. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ.

        -ಆರ್‌.ಡಿ. ಹೆಗಡೆ ಜಾನ್ಮನೆ ,ಜಿ.ಪಂ. ಸದಸ್ಯ

        ಹುಗಿದು ಬಿತ್ತು ಸಂಸದರ ಕಾರು

        ರವಿವಾರ ಸೋಲಾರ ದೀಪ ವಿತರಣೆ ಮಾಡಲು ತೆರಳಿದ್ದ ಉತ್ತರ ಕನ್ನಡ ಸಂಸದ ಅನಂತ್‌ಕುಮಾರ ಹೆಗಡೆ ಅವರ ವಾಹನ ಕೂಡ ಸಂಪೇಕಟ್ಟು ಊರಿನ ಬಳಿ ಮಣ್ಣಿನಲ್ಲಿ ಹುಗಿದು ಹೋಗಿತ್ತು. ರಭಸದ ಮಳೆಗೆ ತಾಸುಗಳ ಕಾಲ ಶ್ರಮವಹಿಸಿದ ಬಳಿಕ ಅವರ ಕಾರು ಮೇಲೆದ್ದು ಬಂತು. ಸಂಸದರ ಜೊತೆ ಸ್ಥಳೀಯ ಸಹಾಯಕ ಆಯುಕ್ತ, ಇತರ ಜನಪ್ರತಿನಿಧಿಗಳೂ ಸಿಲುಕಿದ್ದರು. ಅಪರೂಪಕ್ಕೆ ಬಂದರೆ ಹೀಗೆ, ಇಲ್ಲೇ ವಾಸ್ತವ್ಯ ಮಾಡಿದವರ ಸ್ಥಿತಿ ಏನು ಎಂದೂ ಗ್ರಾಮಸ್ಥರು ಕೇಳುವಂತಾಗಿತ್ತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus