Monday, May 20, 2013
Last Updated: 5:29:07 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮ: ಸಿದ್ಧರಾಗಲು ಸಲಹೆ
      • Udayavani | Aug 08, 2012

        ಮಡಿಕೇರಿ: ಮುಂದಿನ ಶೆ„ಕ್ಷಣಿಕ ವರ್ಷದಿಂದ ರಾಷ್ಟ್ರೀಯ ಪಠ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದ್ದು, ಈ ಬದಲಾವಣೆಗೆ ಮಕ್ಕಳನ್ನು ಸಜ್ಜುಗೊಳಿಸುವುದಲ್ಲದೆ, ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವಂತೆ ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌ ಸಲಹೆ ನೀಡಿದರು.

        ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಮತ್ತು ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘದ ವಾರ್ಷಿಕ ಮಹಾಸಭೆ ಮತ್ತು ಶೆ„ಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ 2014 ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಹಾಜರಾಗಬೇಕಾಗಿರುವುದರಿಂದ ರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುವುದು ಅನಿವಾರ್ಯ. ಅದರಂತೆ 5, 8 ಮತ್ತು 11 ನೇ ತರಗತಿಗಳಿಗೆ ಈ ಪಠ್ಯ$ಕ್ರಮವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

        ಕರ್ನಾಟಕದಲ್ಲಿ ಪ್ರವೇಶಾವಕಾಶ ನೀತಿ ಏನಿದೆ ಅದು ಬದಲಾಗದು ಎಂದ ಅವರು, ಪ್ರವೇಶದಲ್ಲಿ ಶೇ.85 ರಷ್ಟು ಮೀಸಲಾತಿ ನಿಗದಿಯಾಗಿರುವುದು ಹಾಗೆಯೇ ಇರಲಿದ್ದು, ಆದರೆ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬದಲಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ) ಬರೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದಕ್ಕಾಗಿ ಕರ್ನಾಟಕದ ಮಕ್ಕಳನ್ನು ಸಜ್ಜುಗೊಳಿಸುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಈ ರಾಜ್ಯದ ಮಕ್ಕಳು ಹಿಂದುಳಿಯುವ ಆತಂಕವಿದೆ ಎಂದು ಅವರು ಎಚ್ಚರಿಸಿದರು. ಉಳಿದಂತೆ ಶೇ.15 ರಷ್ಟು ಸೀಟುಗಳನ್ನು ಹೊರ ರಾಜ್ಯದ‌ವರಿಗೆ ನೀಡಬೇಕಾಗಿದ್ದು, ಈ ರಾಜ್ಯದವರಿಗೂ ಹೊರ ರಾಜ್ಯಗಳಲ್ಲಿ ಅಷ್ಟೇ ಅವಕಾಶ ದೊರೆಯಲಿದೆ ಎಂದರು.

        ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಈಗ 15,071 ಕೋಟಿ ರೂ.ಗಳನ್ನು ವಿನಿಯೋಗಿಸುವ ಮೂಲಕ ರಾಜ್ಯ ಈಗ ರಾಷ್ಟ್ರದಲ್ಲೇ ಅಗ್ರಸ್ಥಾನದಲ್ಲಿದೆ ಎಂದ ಅವರು, ತಮ್ಮ ಸರಕಾರ ಅಧಿಕಾರಕ್ಕೆ ಬರುವಾಗ 3600 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಆಗ ರಾಷ್ಟ್ರದಲ್ಲಿ 9 ನೇ ಸ್ಥಾನದಲ್ಲಿತ್ತು ಎಂದು ತಿಳಿಸಿದರಲ್ಲದೆ, ಇದೀಗ ಶಿಕ್ಷಣಕ್ಕೆ ಬಳಸಲಾಗುತ್ತಿರುವ ಮೊತ್ತವು ರಾಜ್ಯದ ಬಜೆಟ್‌ನ ಶೇ. 15 ರಷ್ಟಿದೆ ಎಂದು ತಿಳಿಸಿದರು.

        ರಾಜ್ಯದಲ್ಲಿರುವ ಶಾಲೆಗಳಿಗೆ ಅಗತ್ಯವಿರುವ ಕಂಪ್ಯೂಟರ್‌ ಶಿಕ್ಷಕರ ಕೊರತೆಯನ್ನು ತುಂಬಲು ಇರುವ ತೊಡಕುಗಳ ಬಗ್ಗೆ ವಿವರಿಸಿ ಅಸಹಾಯಕತೆ ವ್ಯಕ್ತಪಡಿಸಿದ ಅವರು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇರಳ, ಮಹಾರಾಷ್ಟ್ರ ಹಾಗೂ ಪಂಜಾಬ್‌ಗಳಲ್ಲಿರುವಂತೆ ಪ್ರಸ್ತುತ ಇರುವ ವಿಷಯ ಬೋಧಕರೇ ತಮ್ಮ ಬೋಧನಾಶೆ„ಲಿಯನ್ನು ಕಂಪ್ಯೂಟರ್‌ ಮೂಲಕ ಅನುಸರಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

        ಕೊಡಗಿನಲ್ಲಿ ಮಡಿಕೇರಿಯ ಸರಕಾರಿ ನೌಕರರಿಗೆ ಮಾತ್ರ ಗಿರಿಭತ್ಯೆಯ ಸೌಲಭ್ಯವಿತ್ತು. ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದ ಅವರು, ಮುಖ್ಯಶಿಕ್ಷಕರ ವಿಶೇಷ ಭತ್ಯೆ ವಿತರಣೆಗೆ ಅಂತಿಮವಾಗಿ ಮುಖ್ಯಮಂತ್ರಿಗಳು ಸಮ್ಮತಿಸುವ ಸಾಂಕೇತಿಕ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ಇನ್ನು ಇನ್ನು 15 ದಿನಗಳಲ್ಲಿ ಈ ಬೇಡಿಕೆ ಈಡೇರಲಿದೆ ಎಂದರು.

        ಸಂಘದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಧಿಸಿದಂತೆ ಸಲ್ಲಿಸಿದ ಕೋರಿಕೆಗೆ ಸ್ಪಂದಿಸಿದ ಕಾರ್ಣಿಕ್‌, 3 ಲಕ್ಷ ರೂ.ಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ವೈಯಕ್ತಿಕ ವಿಮೆಗೆ ಬದಲಾಗಿ ಕೌಟುಂಬಿಕ ವಿಮೆಗೆ ಅವಕಾಶ ನೀಡುವ ಕುರಿತಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲು ಇದೇ ಸಂದರ್ಭದಲ್ಲಿ ಅವರು ಸಲಹೆ ನೀಡಿದರು.

        ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಕೆ.ಬಿ.ಭರತ್‌, (ಪ್ರಥಮ), ಅಮ್ಮತ್ತಿಯ ಗುಡ್‌ ಶಫರ್ಡ್‌ ಪ್ರೌಢಶಾಲೆಯ ಸೋನಂ ಮುತ್ತಮ್ಮ (ದ್ವಿತೀಯ) ಹಾಗೂ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಕೆ.ಎಸ್‌.ಅಂಜು ಇವರನ್ನು ಪುರಸ್ಕರಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಜಿಲ್ಲೆಯ ಶಾಲೆಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.

        ಎರಡನೇ ಬಾರಿಗೆ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌ ಹಾಗೂ ಡಿಡಿಪಿಐ ಹುದ್ದೆಯಿಂದ ಈಚೆಗೆ ನಿವೃತ್ತರಾದ ಎನ್‌.ಎ.ರಾಮಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಕಳೆದ ಸಾಲಿನಲ್ಲಿ ನಿವೃತ್ತರಾದ ಏಳು ಮಂದಿ ಶಾಲಾ ಕಾಲೇಜು ಮುಖ್ಯಸ್ಥರನ್ನು ಗೌರವಿಸಲಾಯಿತು.

        ಸಂಘದ ಉಪಾಧ್ಯಕ್ಷೆ ಕುಂತಿ ಬೋಪಯ್ಯ, ಡಯಟ್‌ ಪ್ರಾಂಶುಪಾಲ ಎಸ್‌.ದೊಡ್ಡಮಲ್ಲಪ್ಪ, ವಿಷಯ ಪರಿವೀಕ್ಷಕ ರತ್ನಾಕರ್‌, ಕಾರ್ಯದರ್ಶಿ ಸದಾನಂದ, ಖಜಾಂಚಿ ಬಿ.ಆರ್‌.ಜೋಯಪ್ಪ ಉಪಸ್ಥಿತರಿದ್ದರು.

        ಸಂಘದ ಅಧ್ಯಕ್ಷ ಕೆ.ವಿ.ಶ್ರೀಮೂರ್ತಿ ಅಧ್ಯಕ್ಷತೆ ವಹಿಸಿ ಸಂಘದ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಪ್ರಾರ್ಥನೆ, ನಂಜರಾಯಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೊಡ್ಡ ಸಿದ್ದಪ್ಪ ಸ್ವಾಗತ, ಕುಮಾರನಾಯಕ್‌ ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus