ಇಸ್ಲಾಮಾಬಾದ್: ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ವಿರುದ್ಧವಿರುವ ಭ್ರಷ್ಟಾಚಾರ ಕೇಸುಗಳನ್ನು ಮರಳಿ ತನಿಖೆಗೊಳಪಡಿಸಲು ನೀಡಿದ ಆದೇಶವನ್ನು ಪಾಲಿಸದಿರುವ ಪ್ರಧಾನಮಂತ್ರಿ ರಾಜಾ ಪರ್ವೇಜ್ ಅಶ್ರಫ್ಗೆ ಪಾಕಿಸ್ಥಾನದ ಸುಪ್ರೀಂ ಕೋರ್ಟು ಆ. 27ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಸಮನ್ಸ್ ಜಾರಿಗೊಳಿಸಿದೆ.ಅಶ್ರಫ್ ಕೂಡ ಹಿಂದಿನ ಪ್ರಧಾನಮಂತ್ರಿ ಯೂಸುಫ್ ರಝಾ ಗೀಲಾನಿ ಅವರಂತೆ ನ್ಯಾಯಾಂಗ ನಿಂದನೆ ಕೇಸಿನಲ್ಲಿ ವಿಚಾರಣೆಗೆ ಗುರಿಯಾಗಿ ಅನರ್ಹಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ನ್ಯಾ| ಆಸಿಫ್ ಸಯೀದ್ ಖೋಸ ಅವರ ನೇತೃತ್ವದ ಪಂಚ ಸದಸ್ಯ ಖಂಡಪೀಠ ಸಂವಿಧಾನದ 204ನೇ ಪರಿಚ್ಛೇದದಡಿಯಲ್ಲಿ ಅಶ್ರಫ್ಗೆ ಸಮನ್ಸ್ ಜಾರಿಗೊಳಿಸಿದೆ. ಈ ಪರಿಚ್ಛೇದ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದೆ. ಜರ್ದಾರಿ ವಿರುದ್ಧವಿರುವ ಭ್ರಷ್ಟಾಚಾರ ಕೇಸುಗಳನ್ನು ಮರಳಿ ತನಿಖೆಗೊಳಪಡಿಸುವಂತೆ ಸ್ವಿಜರ್‌ಲ್ಯಾಂಡ್ ಸರಕಾರವನ್ನು ವಿನಂತಿಸಲು ತಾನು ಪದೇ ಪದೇ ನೀಡಿರುವ ಆದೇಶವನ್ನು ಪ್ರಧಾನಮಂತ್ರಿ ಪಾಲಿಸಬೇಕೆಂದು ನ್ಯಾಯಾಲಯ ಸಮನ್ಸ್‌ನಲ್ಲಿ ಹೇಳಿದೆ.ಜರ್ದಾರಿ ವಿರುದ್ಧದ ಕೇಸುಗಳನ್ನು ತನಿಖೆಗೊಳಪಡಿಸಲು ನೀಡಿರುವ ಆದೇಶವನ್ನು ಪಾಲಿಸದಿರುವುದಕ್ಕೆ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆನ್ನುವ ಪ್ರಶ್ನೆಗೆ ಉತ್ತರಿಸಲು ಆ. 27ರಂದು ಸ್ವತಃ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಅಶ್ರಫ್ಗೆ ನ್ಯಾಯಾಲಯ ಹೇಳಿದೆ.ಆ. 27ರಂದು ನಡೆಯಲಿರುವ ವಿಚಾರಣೆಗಾಗುವಾಗ ಈ ಕೇಸಿನಲ್ಲಿ ಏನಾದರೂ ತುಸು ಪ್ರಗತಿಯಾದರೆ ಒಳ್ಳೆಯದು. ಇಲ್ಲದಿದ್ದರೆ ನ್ಯಾಯಾಲಯ ಸ್ವಯಂ ವಿವೇಚನೆಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ನ್ಯಾ|ಖೋಸ ಎಚ್ಚರಿಸಿದ್ದಾರೆ.ಭ್ರಷ್ಟಾಚಾರ ಕೇಸುಗಳನ್ನು ಮರಳಿ ತನಿಖೆಗೊಳಪಡಿಸಲು ನೀಡಿರುವ ಆದೇಶವನ್ನು ಸರಕಾರ ಉದ್ದೇಶಪೂರ್ವಕವಾಗಿ ಪದೇ ಪದೇ ನಿರ್ಲಕ್ಷಿಸಿದೆ. ಮಾಜಿ ಪ್ರಧಾನಮಂತ್ರಿ ಯೂಸುಫ್ ರಝಾ ಗೀಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸಿನ ವಿಚಾರಣೆ ನಡೆಯುತ್ತಿರುವಾಗಲೇ ಕಾನೂನು ಸಚಿವಾಲಯದ ಸಲಹೆಯನ್ನು ಕಡೆಗಣಿಸಿ ಸ್ವಿಜರ್‌ಲ್ಯಾಂಡ್ ಸರಕಾರಕ್ಕೆ ಕೇಸಿನ ಕಡತಗಳನ್ನು ಮರಳಿ ತೆರೆಯುವಂತೆ ವಿನಂತಿಸಲು ಹೇಳಿದ್ದೆವು ಎಂದು ನ್ಯಾಯಾಧೀಶರು ಹೇಳಿದ್ದಾರೆ.