Wednesday, May 22, 2013
Last Updated: 4:58:32 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇಲಾಖಾವಾರು ಪರಿಶೀಲನೆ
    • ಸಿಎಂ, ಡಿಸಿಎಂಗಳ ನಡುವೆ ಹಂಚಿಕೆ
    • ಆದ್ಯತೆಗಳ ಅನುಸಾರ ಇಲಾಖಾವಾರು ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಲಾಗುವುದು.

      • Udayavani | Aug 08, 2012

        ಬೆಂಗಳೂರು: ಆಡಳಿತವನ್ನು ಚುರುಕುಗೊಳಿಸುವ ಉದ್ದೇಶದಿಂದ ಸರ್ಕಾರದ ಆದ್ಯತೆಗಳನ್ನು ಪಟ್ಟಿ ಮಾಡಿ ಅವುಗಳ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಹಾಗೂ ಇಬ್ಬರು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ.

        ಖುದ್ದು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಈ ವಿಷಯ ಪ್ರಕಟಿಸಿದ್ದು, ಈ ತಂಡಗಳು ತಕ್ಷಣದಿಂದಲೇ ತಮ್ಮ ಕೆಲಸ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

        ಬುಧವಾರ ಬೆಂಗಳೂರು ಪ್ರಸ್‌ಕ್ಲಬ್‌ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆದ್ಯತೆಗಳ ಅನುಸಾರ ಇಲಾಖಾವಾರು ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದರು.

        ಈ ಮೂರು ತಂಡಗಳಲ್ಲಿ ಹಿರಿಯ ಅಧಿಕಾರಿಗಳೂ ಇದ್ದಾರೆ. ಪ್ರತಿ ತಂಡಕ್ಕೂ ಪ್ರತ್ಯೇಕ ಆದ್ಯತೆಗಳ ಪಟ್ಟಿ ಒದಗಿಸಲಾಗಿದೆ. ಆಯಾ ತಂಡದ ಅಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ಸಂಬಂಧಪಟ್ಟ ಇಲಾಖೆಗಳ ಪರಿಶೀಲನೆ ನಡೆಸುವರು. ಎರಡು ವಾರಗಳಿಗೊಮ್ಮೆ ತಾವು ಹಾಗೂ ಉಪಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ನೆರವಿನೊಂದಿಗೆ ಪರಿಶೀಲನಾ ಸಭೆ ನಡೆಸುವುದಾಗಿ ವಿವರಿಸಿದರು.

        ಸರ್ಕಾರ ಈಗ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿ ಐದನೇ ವರ್ಷದಲ್ಲಿ ಮುನ್ನಡೆದಿದೆ. ಉಳಿದಿರುವ ಅವಧಿ ಹೆಚ್ಚೇನೂ ಇಲ್ಲ. ಲಭ್ಯವಿರುವ 8ರಿಂದ 10 ತಿಂಗಳ ಅವಧಿಯಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನಮೂದಿಸಿದ್ದಂತೆ ಮತ್ತು ಬಜೆಟ್‌ಗಳಲ್ಲಿ ಪ್ರಕಟಿಸಿದ್ದ ಕಾರ್ಯಕ್ರಮಗಳ ಅನುಷ್ಠಾನವನ್ನು ಪೂರ್ಣಗೊಳಿಸಬೇಕಾಗಿದೆ. ಈ ದಿಸೆಯಲ್ಲಿ ನಾವು ಕಾರ್ಯಪ್ರವೃತ್ತವಾಗಿದ್ದೇವೆ ಎಂದು ಹೇಳಿದರು.

        ವಿಳಂಬವಿಲ್ಲದೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರದ ಸೇವೆ ಮತ್ತು ಸವಲತ್ತುಗಳನ್ನು ಜನರಿಗೆ ತಲುಪಿಸಲು ಸಕಾಲ ಯೋಜನೆ ಸಾಕಷ್ಟು ಸಹಕಾರಿಯಾಗಿದೆ. ಈ ಯೋಜನೆಯಡಿ ಇದುವರೆಗೆ 79,40,125 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 71,27,239 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಸದ್ಯಕ್ಕೆ 11 ಇಲಾಖೆಗಳ 151 ಸೇವೆಗಳನ್ನು ಈ ಸಕಾಲ ವ್ಯಾಪ್ತಿಯಡಿ ತರಲಾಗಿದ್ದು, ಸಚಿವಾಲಯವೂ ಸೇರಿದಂತೆ ಇತರ ಇಲಾಖೆಗಳ ಅಡಿ ಹೆಚ್ಚುವರಿಯಾಗಿ 72 ಸೇವೆಗಳನ್ನು ಇದರ ವ್ಯಾಪ್ತಿಯಲ್ಲಿ ತರಲು ಉದ್ದೇಶಿಸಲಾಗಿದೆ ಎಂದು ಶೆಟ್ಟರ್‌ ಮಾಹಿತಿ ನೀಡಿದರು.

        -ತಂಡಗಳು ಮತ್ತು ಆದ್ಯತೆಗಳ ಪಟ್ಟಿ ಹೀಗಿದೆ-

        ತಂಡ 1:
        ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ವಿ.ನಾಗರಾಜನ್‌ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿಂಗ್‌ ಖರೋಲಾ.

        ಆದ್ಯತೆಗಳು- ಸಾರ್ವಜವಿಕ ಸೇವೆಗಳು, ವಾಣಿಜ್ಯ ಮತ್ತು ಕೈಗಾರಿಕೆಗಳು, ವಿದ್ಯುತ್‌, ಭಾರಿ ನೀರಾವರಿ, ಮೂಲಭೂತ ಸೌಲಭ್ಯ ಅಭಿವೃದ್ಧಿ, ರಸ್ತೆಗಳು, ಬೆಂಗಳೂರು ಅಭಿವೃದ್ಧಿ.

        ತಂಡ 2: ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಸರ್ಕಾರದ ಅಭಿವೃದ್ಧಿ ಆಯುಕ್ತ ಕೌಶಿಕ್‌ ಮುಖರ್ಜಿ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆ.ವಿ.ರಾಜು.

        ಆದ್ಯತೆಗಳು- ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ನೀರಾವರಿ, ಕರಾವಳಿ ಪ್ರದೇಶ, ಪ್ರಾದೇಶಿಕ ಅಭಿವೃದ್ಧಿ, ಕುಡಿಯುವ ನೀರು ಹಾಗೂ ಸಮಾಜ ಕಲ್ಯಾಣ ವಿದ್ಯಾರ್ಥಿ ನಿಲಯಗಳು.

        ತಂಡ 3: ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭೀರ್‌ ಹರಿಸಿಂಗ್‌ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ.

        ಆದ್ಯತೆಗಳು- ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗೃಹ ನಿರ್ಮಾಣ, ಉದ್ಯೋಗ ಮತ್ತು ತರಬೇತಿ.

        ಇದೊಂದು ರೀತಿಯಲ್ಲಿ 20:20 ಮ್ಯಾಚ್‌ ಇದ್ದಂತೆ. ಸರ್ಕಾರಕ್ಕೆ ಈಗ ಹೆಚ್ಚಿನ ಅವಧಿ ಉಳಿದಿಲ್ಲ. ಇರುವ ಸಮಯದಲ್ಲೇ ಒಂದು ಅಥವಾ ಎರಡು ರನ್‌ ಹೊಡೆಯುವ ಬದಲು ಬೌಂಡರಿ ಮತ್ತು ಸಿಕ್ಸರ್‌ ಹೊಡೆಯಬೇಕಿದೆ

        -ಜಗದೀಶ್‌ ಶೆಟ್ಟರ್‌, ಮುಖ್ಯಮಂತ್ರಿ

        -ಆಡ್ವಾಣಿ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ-


        ಸರ್ಕಾರದ ಬಗ್ಗೆ ಬಿಜೆಪಿ ವರಿಷ್ಠ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಶೆಟ್ಟರ್‌ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

        ಆಡ್ವಾಣಿ ಹೇಳಿಕೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪರ-ವಿರೋಧದ ಹೇಳಿಕೆಗಳ ಬಗ್ಗೆ ಪತ್ರಕರ್ತರು ಹಲವು ಬಾರಿ ಪ್ರಶ್ನೆ ಕೇಳಿದರೂ ಶೆಟ್ಟರ್‌ ಮಾತ್ರ ತಮ್ಮ ತುಟಿ ಬಿಚ್ಚಲಿಲ್ಲ. ಕೇವಲ 'ನೋ ಕಮೆಂಟ್ಸ್‌ ಅಷ್ಟೇ' ಎಂದು ಹೇಳಿ ನಗು ಬೀರಿದರು.

        -ಬಿಪಿಎಲ್‌ ಕಾರ್ಡ್‌; 10 ದಿನಗಳಲ್ಲಿ ಸಭೆ-

        ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಹೋಗಲಾಡಿಸಲು ಬರುವ 10 ದಿನಗಳಲ್ಲಿ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಶೆಟ್ಟರ್‌ ತಿಳಿಸಿದ್ದಾರೆ.

        ಕೇವಲ ಬೆಂಗಳೂರಿನಲ್ಲಷ್ಟೇ ಅಲ್ಲದೆ, ರಾಜ್ಯದ ಇತರ ಭಾಗಗಳಲ್ಲೂ ಬಿಪಿಎಲ್‌ ಕಾರ್ಡ್‌ ಸಮಸ್ಯೆ ಹಾಗೂ ಪಡಿತರ ವಿತರಣೆಯಲ್ಲಿ ಸಮಸ್ಯೆ ಉದ್ಭವಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus