Saturday, May 25, 2013
Last Updated: 11:52:48 AM IST
  • ನಾನೆಲ್ಲಿರುವೆ:
  • ಮುಖಪುಟ ಪಯಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಶೇಡಿಕಾವು ಶಂಕರನಾರಾಯಣ ದೇವಸ್ಥಾನ


      • ಕುಂಬಳೆ  ದೇವಸ್ಥಾನಕ್ಕೆ ಅನತಿ ದೂರದಲ್ಲಿ  ಶೇಡಿಕಾವು ಶ್ರೀ ಶಂಕರನಾರಾಯಣ ದೇವಸ್ಥಾನವಿದೆ. ಇದು ಯಕ್ಷಗಾನದ ಜನಕ ಎಂದು ಹೇಳಲಾಗುತ್ತಿರುವ ಪಾರ್ತಿಸುಬ್ಬನಿಂದಾಗಿ ಹೆಚ್ಚು ಪ್ರಚಾರ  ಪಡೆದಿದೆ. 

        ಗುಡ್ಡೆಯೊಂದರಲ್ಲಿ ಮೀನುಗಾರ  ಮಹಿಳೆಯರಿಗೆ  ಕಾಣ ಸಿಕ್ಕಿರುವ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ  ಎಂಬ  ಕಥೆ ಈ ದೇವಸ್ಥಾನದ ಬಗೆಗಿದೆ. ಪಾರ್ತಿಸುಬ್ಬನು ತನ್ನ ಹೆಚ್ಚಿನ ಯಕ್ಷಗಾನದ ಹಾಡುಗಳನ್ನು ಇದೇ ದೇವಸ್ಥಾನದ ಪರಿಸರದಲ್ಲಿ ಕುಳಿತು ಬರೆದಿದ್ದಾನೆ  ಎಂದು ಹೇಳಲಾಗುತ್ತಿದೆ. ಪಾರ್ತಿಸುಬ್ಬನು ಯಕ್ಷಗಾನದ ಹಾಡುಗಳನ್ನು ಬರೆಯಲು ಕುಳಿತಿದ್ದ ಎಂದು ಹೇಳಲಾಗುವ ಜಾಗದಲ್ಲಿ ಸಣ್ಣ ಮಂಟಪವೊಂದಿತ್ತು.  ಬ್ರಹ್ಮಕಲಶೋತ್ಸವದ ಬಳಿಕವೂ  ಅದನ್ನು ಸಾಂಕೇತಿಕವಾಗಿ  ಉಳಿಸಿಕೊಳ್ಳಲಾಗಿದೆ.

        ಈ ದೇವಸ್ಥಾನದ ಪರಿಸರದಲ್ಲಿ ನಿಂತು ಕಡಲಿನ ಸೌಂದರ್ಯವನ್ನು ವೀಕ್ಷಿಸುವುದು ಒಂದು ವಿಶೇಷ ಅನುಭವ. ಅಪ್ಪಟ ಹಳ್ಳಿ ವಾತಾವಾರಣ, ಪ್ರಶಾಂತ ಪರಿಸರ. ಏಕಾಂತತೆಗೆ ಸೂಕ್ತ ಜಾಗವಿದು.

        ಮುಜಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಸ್ಥಾನ

        ಕುಂಬಳೆಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ನಾಯಿಕಾಪು ಸಮೀಪವಿರುವ ಈ ದೇವಸ್ಥಾನವು ಮುಚುಕುಂದ ಮುನಿಯಿಂದ ಸ್ಥಾಪನೆಯಾದದ್ದು  ಎಂಬ ನಂಬಿಕೆ. ಆದ್ದರಿಂದಲೇ ಇಲ್ಲಿಗೆ ಮುಜಂಗಾವು ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತಿದೆ. ವಿಶಾಲ ಬರಡು ಮೈದಾನದಲ್ಲಿರುವ ಈ ದೇವಸ್ಥಾನದ ಎದುರು ಭಕ್ತರು ತುಂಬ ಭಕ್ತಿ-ಶ್ರದ್ಧೆಯಿಂದ ಕಾಣುವ ಒಂದು ವಿಶಾಲ ಸರೋವರವಿದೆ. 

        ಈ  ಕೆರೆಯ ನೀರನ್ನು ಭಕ್ತರು ತೀರ್ಥ ಎಂದು ಪರಿಗಣಿಸುತ್ತಾರೆ. ಇಲ್ಲಿನ ಕಾವೇರಿ ತೀರ್ಥ ಸ್ನಾನಕ್ಕೆ ವಿಶೇಷ  ಮಹತ್ವವಿದೆ.  ಅಂದು ಲಕ್ಷಾಂತರ ಮಂದಿ ದೇವಸ್ಥಾನ ಸಂದರ್ಶಿಸಿ, ಪವಿತ್ರ ಕೆರೆಯಲ್ಲಿ ಮಿಂದು ಪಾವನರಾಗುತ್ತಾರೆ.  ಈ ಕೆರೆಯಲ್ಲಿ ಮಿಂದರೆ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ  ಈಗಲೂ ಉಳಿದುಕೊಂಡಿದೆ. ಆದ್ದರಿಂದಲೇ ಕಾವೇರಿ ತೀರ್ಥಸ್ನಾನದಂದು ಭಕ್ತರು ಕೆರೆಗೆ ಹುರುಳಿ ಚೆಲ್ಲುತ್ತಾ ಪ್ರದಕ್ಷಿಣೆ ಬಂದು ಮತ್ತೆ ತೀರ್ಥಸ್ನಾನ ಮಾಡುತ್ತಾರೆ.

        ಪುತ್ತಿಗೆ ಶ್ರೀ ಪೂಮಾಣಿ -ಕಿನ್ನಿಮಾಣಿ ದೈವಸ್ಥಾನ

        ಕುಂಬಳೆ ಸೀಮೆಗೆ ನಾಲ್ಕು ಪ್ರಧಾನ ದೇವಸ್ಥಾನಗಳಿದ್ದಂತೆಯೇ, ನಾಲ್ಕು ದೈವಸ್ಥಾನಗಳೂ ಇವೆ. ಪುತ್ತಿಗೆ, ಅಂಬಿಲಡ್ಕ, ಪೈಕ ಮತ್ತು ಬೆದ್ರಡ್ಡ ಎಂಬಿವುಗಳೇ ಈ ದೈವಸ್ಥಾನಗಳು. ಪ್ರತಿಯೊಂದೂ ಪೂಮಾಣಿ-ಕಿನ್ನಿಮಾಣಿ ದೈವಗಳ ಆರಾಧ್ಯ  ಕೇಂದ್ರಗಳು. ಪುತ್ತಿಗೆ, ಬೆದ್ರಡ್ಕ ಮತ್ತು ಪೈಕದಲ್ಲಿರುವ ದೈವಸ್ಥಾನದಲ್ಲಿ ಬೃಹತ್‌ ಗಾತ್ರದ ಎರಡು ಬಂಡಿಗಳು ಜನಾಕರ್ಷಣೆಯ ಬಿಂದುಗಳಾಗಿವೆ. ಪುತ್ತಿಗೆಯಲ್ಲಿರುವ ಆಕರ್ಷಕವಾಗಿರುವ  ಈ ಬಂಡಿ (ರಥ)ಗಳನ್ನು ವಾರ್ಷಿಕ ಜಾತ್ರೆ ಸಂದರ್ಭ  ಮೂರು ದಿನ ದೈವಸ್ಥಾನದ ಎದುರಿರುವ ಬಂಡಿಗದ್ದೆಯಲ್ಲಿ ಎಳೆದುಕೊಂಡು ಹೋಗಲಾಗುತ್ತಿದೆ.  ಈ ಬಂಡಿಗಳನ್ನು ನೋಡುವುದಕ್ಕಾಗಿಯೇ ಇಲ್ಲಿ ಜಾತ್ರೆ ಸಂದರ್ಭ ಸಾವಿರಾರು ಜನ ಸೇರುತ್ತಾರೆ. ಈ ಬಂಡಿ ಮತ್ತು  ದೈವಗಳ ಬಗೆಗೆ ಸಂಶೋಧಕರಿಗೂ ವಿಶೇಷ ಆಸಕ್ತಿ.   ವಾರ್ಷಿಕ ಜಾತ್ರೆ ಎಪ್ರಿಲ್‌ ಮೊದಲ ವಾರದಲ್ಲಿ ಜರಗುತ್ತದೆ.

        ದೈವಸ್ಥಾನಕ್ಕೆ ಸಮೀಪದಲ್ಲೇ  ಶ್ರೀಕುಮಾರಸ್ವಾಮಿ (ಸುಬ್ರಹ್ಮಣ್ಯ) ದೇವಸ್ಥಾನವಿದೆ. ಇದು ಸೀರೆ ಹೊಳೆಯ ದಂಡೆಯಲ್ಲಿದೆ. ಮಳೆಗಾಲದಲ್ಲಿ ದೇವಾಲಯದ ಅಂಗಳಕ್ಕೆ ನೆರೆ ಬರುವುದು ಸಾಮಾನ್ಯ.   ಅತಿಯಾದ ನೆರೆಗೆ ದೇವಸ್ಥಾನ ಪೂರ್ತಿಯಾಗಿ ಮುಳುಗಿ ಕೇವಲ ಕಲಶ ಮಾತ್ರ  ಕಾಣುವುದೂ ಇದೆ. ಸಮೀಪದಲ್ಲೇ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಹೊಳೆ ಬದಿಯ ಪ್ರಶಾಂತ ದೇವಸ್ಥಾನಗಳಿವು. ಇಲ್ಲಿಂದ ಮೂರ್‍ನಾಲ್ಕು ಕಿಲೋಮೀಟರ್‌ ದೂರದಲ್ಲಿ ಕಂಬಾರು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನವಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus