ಆರಭಿ | Aug 11, 2012
ಸುಬ್ರಹ್ಮಣ್ಯ:ತುಳುನಾಡಿನ ಆಚರಣೆಯಾದ ಆಟಿಮಾಸದ ರೋಗರುಜಿನಗಳ, ಮಾರಿಯನ್ನು ಹೊತ್ತೂಯ್ಯುವ ಆಟಿಕಳಂಜ ಈಗ ಮತ್ತೆ ಮನೆಮನೆಗೆ ಬರುತ್ತಿದ್ದಾನೆ. ಅದೂ ಒಂದು ಮನೆಗಲ್ಲ, ಊರಿನ ಎಲ್ಲಾ ಮನೆಗಳಿಗೆ ದರ್ಶನ ನೀಡುವ ಆಟಿಕಳಂಜ. ಆಟಿ ಮಾಸದ ಒಂದು ದಿನ ಮುಖಕ್ಕೆ ಬಣ್ಣಬಳಿದು ವೇದಿಕೆ ಏರಿ ಆಚರಣೆಯ ಮಹತ್ವವನ್ನು ನೆನಪಿಸುವ ಅನುಕರಣೆ ಅಲ್ಲ. ಆಟಿ ಮಾಸವಿಡೀ ಊರಿನ ಮನೆಮನೆಗೆ ಭೇಟಿ ನೀಡಿ ಊರ ಜನರನ್ನು ಹರಸುವ ಜೀವಂತ ಆಟಿಕಳಂಜ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ, ಕಮಿಲ ಪರಿಸರದಲ್ಲಿ ಪ್ರತಿವರ್ಷ ಕಾಣಿಸಿಕೊಳ್ಳುತ್ತಾನೆ.

ಮೊಗ್ರ, ಕಮಿಲ ಪರಿಸರದಲ್ಲಿ ಆಟಿ ತಿಂಗಳಿಡೀ ಆಟಿ ಕಳಂಜ ಮನಮನೆಗೆ ಬರುವ ವಿಶಿಷ್ಟ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಆಟಿಕಳಂಜ ವೇಷ ಹಾಕಿ ಊರಿನಾದ್ಯಂತ ಸಂಚಿರುಸ ಸಂಪ್ರದಾಯ ಇಲ್ಲಿ ಅನೂಚಾನವಾಗಿ ನಡೆದುಕೊಂಡುಬರುತ್ತಿದೆ. ಈ ವರ್ಷವೂ ಈ ಆಚರಣೆ ಗ್ರಾಮೀಣ ಪರಿಸರದ ಪುಟ್ಟಗ್ರಾಮದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ಅಟಿಕಳಂಜ ವೇಷಧಾರಿ ಯ ಜತೆಗೆ ಕಿನ್ನಿ ಹಾಗೂ ತೆಂಬರೆ ನುಡಿಸುವವರು ಮತ್ತು ಸಹಾಯಕರು ಬರುವ ಸಂಪ್ರದಾಯಬದ್ಧ ಆಟಿಕಳಂಜವನ್ನು ಇಲ್ಲಿ ಮಾತ್ರ ಕಾಣಬಹುದಾಗಿದೆ.
ರಾಜ್ಯಪ್ರಶಸ್ತಿವಿಜೇತ ಬೊಳಿಯ ಅಜಲರ ಕುಟುಂಬಿಕರು ಈ ಆಟಿಕಳಂಜದ ಆರಾಧಕರಾಗಿದ್ದಾರೆ. ಮನೆಮಂದಿ ಕೊಡುವ ಅಕ್ಕಿ, ತೆಂಗಿನಕಾಯಿ, ಫಲ, ತರಕಾರಿಗಳನ್ನು ಧನ್ಯತಾಭಾವದಿಂದ ಪಡೆದು ಮತ್ತೂಂದು ಮನೆಗೆ ತೆರಳುತ್ತಾರೆ.

ಬೆಳಿಗ್ಗೆ 10 ಗಂಟೆಯ ವೇಳೆ ಆಟಿಕಳಂಜ ಹಾಗೂ ಕಿನ್ನಿಯ ವೇಷ ಧರಿಸಿ ತೆಂಬರೆಯೊಂದಿಗೆ ಆಟಿಕಳಂಜನ ಸವಾರಿ ಆರಂಭವಾದರೆ ಮುಸ್ಸಂಜೆವೇಳೆ ಅಂದಿನ ಸವಾರಿ ಅಂತ್ಯಗೊಳ್ಳುತ್ತದೆ. ಮರುದಿನ ಮತ್ತೆ ಬಣ್ಣ ಬಳಿದು, ವೇಷ ಧರಿಸಿ ಸವಾರಿ ಮಾಡುತ್ತಾ ಆಟಿತಿಂಗಳಿಡೀ ತಿರುಗಾಡಿ, ನಮ್ಮ ತುಳುಸಂಸ್ಕೃತಿಕ ನೈಜ ಆಚರಣೆಯನ್ನು ಸಾದರ ಪಡಿಸುವ ಇವರನ್ನು ಈವರೆಗೆ ಎಲ್ಲೂ, ಯಾವ ವೇದಿಕೆಯಲ್ಲೂ ಗುರುತಿಸದಿರುವುದು ವಿಷಾದನೀಯ.
ಚಿತ್ರ:ಮಹೇಶ ಪುಚ್ಚಪಾಡಿ
