Udayavani | Aug 11, 2012
ಕಾಸರಗೋಡು: ಯಕ್ಷಗಾನದ ಅಂತ:ಸತ್ವದ ಚೆಲುವು-ನಿಲುವುಗಳ ಅಖಂಡತೆಗೆ ಧಕ್ಕೆ ಬಾರದಂತೆ ಯಥಾಸ್ಥಿತಿಯಲ್ಲಿ ಅದನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ 1975 ರಲ್ಲಿ ಅಸ್ತಿತ್ವಕ್ಕೆ ಬಂದ ಕಲಾಸಂಸ್ಥೆ ಬಡಗು ತಿಟ್ಟಿನ ಸಾಲಿಗ್ರಾಮ ಮಕ್ಕಳ ಮೇಳ. ಇದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರತಿಭಾನ್ವಿತ ಶಿಕ್ಷಕದ್ವಯರಾದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್.ಶ್ರೀಧರ ಹಂದೆ ಇವರಿಬ್ಬರ ಕಲ್ಪನೆಯ ಕೂಸು.
ಶಾಲಾ ವಾರ್ಷಿಕೋತ್ಸವದ ತರಬೇತಿಗಾಗಿ ಹೋಗುತ್ತಿದ್ದ ಈ ಶಿಕ್ಷಕದ್ವಯರು ಮಕ್ಕಳ ಪ್ರತಿಭೆ ಮೊಟಕುಗೊಳ್ಳದಿರಲೆಂದು ಈ ಮೇಳವನ್ನು ಕಟ್ಟಿದರು. ಈ ಮೇಳದ ಕಲಾವಿದರು ಹೆಚ್ಚಿನವರು ಹದಿಹರೆಯದ ಪ್ರೌಢ ಶಾಲೆಯ ಮಕ್ಕಳು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗದಂತೆ ಅವರ ಬಿಡುವಿನ ವೇಳೆಯಲ್ಲಿ ಅವರವರ ಮನೆಗಳಲ್ಲಿ ವಾ ನಿರ್ದೇಶಕರ ಮನೆಯಲ್ಲಿ ನೀಡಿದ ತರಬೇತಿಗಳಿಂದ ನಿರ್ದಿಷ್ಟವಾದ ಶಿಸ್ತಿಗೆ ಒಳಪಟ್ಟು ತಂಡವು ನಿರ್ಮಾಣವಾಗಿ ಕೊಟ್ಟ ಪ್ರದರ್ಶನಗಳಿಂದ ಜನಪ್ರಿಯತೆಗೆ ಹೆಚ್ಚು ಕಾಲ ಕಾಯಬೇಕಾಗಿ ಬರಲಿಲ್ಲ. ಪ್ರೌಢ ಶಾಲೆಯ ವಿದ್ಯಾರ್ಥಿಗಳಾದುದರಿಂದ ಎಸ್.ಎಸ್.ಎಲ್.ಸಿ. ಮುಗಿದ ಮೇಲೆ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಜೀವನಕ್ಕಾಗಿ ಬೇರೆ ಬೇರೆ ಕಡೆ ಬಲಿತ ಪುಕ್ಕಗಳ ಹಕ್ಕಿಗಳಂತೆ ಹಾರಿಹೋಗಲೆಡೆಯಿದೆ. ಆದರೂ ಮೇಳದಲ್ಲಿ ಮಕ್ಕಳಿಗೆ ಚಿಕ್ಕವರಿರುವಾಗಲೇ ತರಬೇತುಗೊಡುವುದರಿಂದ ಮಕ್ಕಳ ಮೇಳದಲ್ಲಿ ಕಲಾವಿದರ ಸಂಖ್ಯೆಗೆ ಕೊರತೆಯಾಗುವುದಿಲ್ಲ. ಇದಕ್ಕಾಗಿಯೇ ಶಿಕ್ಷಕರು ಶ್ರಮಿಸುತ್ತಾರೆ.
ಮಕ್ಕಳ ಮೇಳ ಭಾರತ - ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ ಕರ್ನಾಟಕ ರಾಜ್ಯದಾದ್ಯಂತವಲ್ಲದೆ ಮುಂಬಯಿ, ಗೋವಾ, ಮದ್ರಾಸು, ದೆಹಲಿ, ತಿರುವದಂತಪುರ, ಕೊಚ್ಚಿ ಮೊದಲಾದ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳನ್ನು ನೀಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಯಕ್ಷಗಾನವನ್ನು ಸಾಗರೋತ್ತರ ಖಂಡಕ್ಕೆ ದಿಗ್ವಿಜಯಕ್ಕಾಗಿ ಒಯ್ದ ಶ್ರೇಯಸ್ಸು ಈ ತಂಡಕ್ಕೆ ಸಲ್ಲುತ್ತದೆ.
1978 ರಲ್ಲಿ ಈ ತಂಡವನ್ನು ಅಮೇರಿಕಾದ ವಿಶ್ವ ಮಕ್ಕಳ ಉತ್ಸವದಲ್ಲಿ ಪಾಲ್ಗೊಳ್ಳಲು ಭಾರತದ ಏಕೈಕ ತಂಡವಾಗಿ ಆಯ್ಕೆಯಾದದ್ದು ಹೆಮ್ಮೆಯ ವಿಷಯ. ಸ್ಯಾನ್‌ಜೋಸ್, ಅಟ್ಲಾಂಟಾ, ಒಫೆಲೋ, ನ್ಯೂಯಾರ್ಕ್, ವಾಷಿಂಗ್‌ಟನ್ ಮೊದಲಾದ ಮಹಾನಗರಗಳಲ್ಲಿ ಪ್ರದರ್ಶನಗಳನ್ನು ನೀಡಿ ಮುಕ್ತಕಂಠದಿಂದ ಶ್ಲಾಘನೆ ಪಡೆದಿದೆ. 1985 ರಲ್ಲಿ ಬೆಹರಿನ್ ಕನ್ನಡ ಸಂಘದವರು ಈ ತಂಡವನ್ನು ಕರೆಯಿಸಿಕೊಂಡು ವಿವಿಧೆಡೆ ಪ್ರದರ್ಶನವನ್ನು ನೀಡಿ ಮರುಭೂಮಿಯಲ್ಲಿ ಕಲೆಯ ರಸ ಒಸರುವಂತೆ ಮಾಡಿತ್ತು. 1988 ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕ ಸರಕಾರ ಪುನ: ಇದೇ ತಂಡವನ್ನು ಆಯ್ಕೆ ಮಾಡಿತು. ಮ್ಯಾಂಜೆಸ್ಟರ್, ಲಂಡನ್‌ಗಳಲ್ಲಿ ಹಲವು ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರಿಗೆ ವಿದ್ಯುತ್ ಸಂಚಲನವನ್ನುಂಟು ಮಾಡಿತು. ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಕೆ.ಎಚ್.ಶ್ರೀನಿವಾಸ ಮತ್ತು ಡಾ|ಎಚ್.ಕೆ.ರಂಗನಾಥ ಅವರ ಸಹಕಾರದಿಂದ ಇದು ಸಾಧ್ಯವಾಯಿತು.
ಈ ಮಕ್ಕಳ ಮೇಳವು ಪೌರಾಣಿಕ ಪ್ರಸಂಗಗಳನ್ನು ಸೀಮಿತ ಅವಧಿಯಲ್ಲಿ ಆಡಿ ತೋರಿಸುತ್ತದೆ. ಸಮಸ್ಯೆಗಳ ನಡುವೆಯೂ ಕಾಲದೊಂದಿಗೆ ರಾಜಿ ಮಾಡಿಕೊಳ್ಳದೆ ಗುಣಮಟ್ಟವನ್ನು ಈ ಮೇಳ ಕಾಯ್ದುಕೊಂಡಿದೆ.
ತೆಂಕು ತಿಟ್ಟಿನ ಯಕ್ಷಗಾನದ ತಲಕಾವೇರಿ ಎನಿಸಿದ ಕಾಸರಗೋಡು ತಾಲೂಕಿಗೆ ಮಕ್ಕಳ ಮೇಳ ಪಾದಾರ್ಪಣೆ ಮಾಡಿದ್ದು 24-7-2012 ರಂದು. ದಶಕಗಳ ಹಿಂದೆ ಬಡಗು ತಿಟ್ಟಿನ ಮೇಳಗಳು ಈ ಪ್ರದೇಶದಲ್ಲಿ ಪ್ರದರ್ಶನಗಳನ್ನು ನೀಡಿವೆ. ಅನಂತರ ಕಣ್ಮರೆಯಾಗಿವೆ. ಸ್ಪಿಕ್‌ವೆುಕೆಯ ಕೇರಳ ಘಟಟಕದ ಪ್ರಾಯೋಜಕತ್ವದಲ್ಲಿ ಮಕ್ಕಳ ಮೇಳವು ಮೂರು ಪ್ರದರ್ಶನಗಳನ್ನು ಕೊಟ್ಟಿದೆ. ನಾಲ್ಕು ಕಡೆಗಳಲ್ಲಿ ಅವರು ವೀರ ರಸ ಪ್ರಧಾನವಾದ 'ವೀರ ವೃಷಸೇನ' ಎಂಬ ಕಥಾನಕವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದ್ದರು.

25-7-2012 ರಂದು ಮಧ್ಯಾಹ್ನದ ಮೇಲೆ ಕಾಸರಗೋಡು ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನ ಏರ್ಪಟ್ಟಿತ್ತು. ಕಾಲೇಜಿನ ಸಭಾಂಗಣದಲ್ಲಿ ಐನೂರಕ್ಕಿಂತ ಹೆಚ್ಚಿನ ಪ್ರೇಕ್ಷಕರಿಗೆ ಕುಳಿತು ನೋಡಲು ಅವಕಾಶ. ದ್ವಿಭಾಷಾ ಸಂಗಮವಾಗಿರುವ ಕಾಲೇಜಿನ ಮಕ್ಕಳು ಕಿಕ್ಕಿರಿದ ಸಂಖ್ಯೆಯಲ್ಲಿ ಸೇರಿದ್ದು ಭಾಷಾ ಭೇದವಿಲ್ಲದೆ 'ಆಟ'ದ ಸವಿಯನ್ನುಂಡರು. ಯಕ್ಷಗಾನಕ್ಕೆ ಕೊಟ್ಟ ಪ್ರೋತ್ಸಾಹವನ್ನು ಕಂಡು ನಾನು ಸ್ಥಂಭೀಭೂತನಾದೆ. ಇತ್ತೀಚಿಗಿನ ದಿನಗಳಲ್ಲಿ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಕಷ್ಟ ಸಾಧ್ಯ. ಅಂತಹುದರಲ್ಲಿ ಕಾಲೇಜಿನ ಸಭಾಂಗಣವಿಡೀ ಎರಡು ಗಂಟೆಗಳ ಕಾಲ ಪ್ರದರ್ಶನವನ್ನು ನಿಶ್ಶಬ್ದವಾಗಿ ಕಣ್ಮನಗಳಲ್ಲಿ ತುಂಬಿದ್ದನ್ನು ಗಮನಿಸಿದರೆ ಮಕ್ಕಳ ಪ್ರದರ್ಶನಕ್ಕೆ ಮಾರುಹೋದದ್ದು ಸುಳ್ಳಲ್ಲ. ಕೇವಲ ಮಕ್ಕಳದ್ದು ಎಂಬ ಕಾರಣಕ್ಕಲ್ಲ. ಪ್ರದರ್ಶನದ ಮಟ್ಟವೂ ಅದಕ್ಕೆ ಕಾರಣ. ಮಕ್ಕಳ ವೇಷಭೂಷಣಗಳಾಗಲೀ, ನಾಟ್ಯವಾಗಲೀ, ಅಭಿನಯವಾಗಲೀ, ಸಂಭಾಷಣೆಯಾಗಲೀ ಯಾವ ಪ್ರಬುದ್ಧ ವೃತ್ತಿಪರ ಕಲಾವಿದನಿಗೆ ಕಡಿಮೆಯಾಗಿರಲಿಲ್ಲ.
ವೃಷಸೇನನಾಗಿ ಸುಹಾಸ್ ಶರಬ(ಎಂಟನೆ ತರಗತಿ) ಚುರುಕುಗತಿಯ ನಾಟ್ಯ, ಪ್ರವೇಶ, ಮಂಡಿಕುಣಿತಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ವೃಷಸೇನನ ತಾಯಿಯಾಗಿ ಆದಿತ್ಯ ಹೊಳ್ಳ(ಒಂಭತ್ತನೇ ತರಗತಿ), ಕೃಷ್ಣನಾಗಿ ಸತ್ಯನಾರಾಯಣ ಮಂಜ(ಒಂಭತ್ತನೇ ತರಗತಿ) ಮತ್ತು ಪ್ರದೀಪ(ಪ್ರಥಮ ಪಿ.ಯು), ಭೀಮನಾಗಿ ಪುನೀತ ಕುಮಾರ್(ಪ್ರಥಮ ಪಿ.ಯು), ಅರ್ಜುನನಾಗಿ ನವೀನ(ಬಿ.ಕಾಂ ವಿದ್ಯಾರ್ಥಿ) ಸೊಗಸಾದ ಅಭಿನಯವನ್ನು ನೀಡಿದರು.
ಪ್ರತಿಯೊಂದು ಪಾತ್ರವೂ ಭಾವಾಭಿನಯವಾಗಲೀ, ಆಂಗಿಕಾಭಿನಯವಾಗಲೀ, ನಾಟ್ಯಾಭಿನಯವಾಗಲೀ ಒಂದು ಸಮತೂಕವನ್ನು ಕಾಯ್ದುಕೊಂಡಿತ್ತು. ಪದ್ಯದ ಎತ್ತುಗಡೆ ಸಹಜವೆಂಬಂತೆ ತೋರುತ್ತಿತ್ತು.
26.7.2012 ರಂದು ಮತ್ತೂಂದು ಪ್ರದರ್ಶನವು ಬೆಳಗ್ಗೆ ಒಂಭತ್ತು ಗಂಟೆಗೆ ಕಾಸರಗೋಡಿನ ಚಿನ್ಮಯಾ ಮಿಶನಿನ ಚಿನ್ಮಯಾ ತೇಜಸ್ ಸಭಾಂಗಣದಲ್ಲಿ ನಡೆಯಿತು. ಶಾಲೆಯಲ್ಲಿರುವ ಎಲ್‌ಕೆಜಿಯಿಂದ ಪ್ಲಸ್ ಟು ವರೆಗಿನ ಎರಡು ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಧ್ಯಾಪಕ, ಅಧ್ಯಾಪಿಕೆಯರು, ಹೆತ್ತವರು ಯಕ್ಷಗಾನದ ರಸದೌತಣವನ್ನು ತನ್ಮಯರಾಗಿ ಸವಿದರು. ಇಷ್ಟೊಂದು ಪ್ರೇಕ್ಷಕರು ವಿದ್ಯಾಸಂಸ್ಥೆಗಳಲ್ಲಿ ಯಕ್ಷಗಾನಕ್ಕೆ ಕಾಸರಗೋಡಿನಲ್ಲಿ ಬಹು ಅಪೂರ್ವ. ಮೇಳದ ಗುಣಮಟ್ಟವನ್ನು ಇದರಿಂದಲೇ ತಿಳಿದುಕೊಳ್ಳಬಹುದು. ಪ್ರದರ್ಶನದ ಕೊನೆಗೆ ಚಿನ್ಮಯಾ ಮಿಶನಿನ ಅಧ್ಯಕ್ಷರಾದ ಶ್ರೀ ವಿವಿಕ್ತಾನಂದ ಸ್ವಾಮೀಜಿಯವರು ಸಂತುಷ್ಟರಾಗಿ ಅತ್ಯುತ್ಕೃಷ್ಟ ಕಲೆಯಾದ ಯಕ್ಷಗಾನ(ಮಕ್ಕಳ ಮೇಳ) ಕೇರಳದಾದ್ಯಂತ ಪ್ರದರ್ಶನಗೊಳ್ಳಬೇಕೆಂದು ತುಂಬು ಹೃದಯದಿಂದ ಶ್ಲಾಘಿಸಿದರು.
ಮುಮ್ಮೇಳಕ್ಕೆ ಶಕ್ತಿಯನ್ನು ತುಂಬಿದ ಹಿಮ್ಮೇಳವನ್ನು ಮರೆಯುವಂತಿಲ್ಲ. ಮಕ್ಕಳ ಮೇಳದ ಸಂಚಾಲಕರಾದ ಶ್ರೀಧರ ಹಂದೆಯವರು ತಮ್ಮ ಮಗನಾದ ಗಂಗೊಳ್ಳಿಯ ಕಾಲೇಜಿನಲ್ಲಿ ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿರುವ ಸುಜಯೀಂದ್ರ ಹಂದೆಯವರೊಂದಿಗೆ ಭಾಗವತಿಕೆ ನಡೆಸಿಕೊಟ್ಟರೆ ಮದ್ದಳೆಯನ್ನು ಬಾಲಕೃಷ್ಯ ಬಿ. ಮತ್ತು ಚಂಡೆಯನ್ನು ರಾಮ ಬಾಯಿರಿ ಸುಶ್ರಾವ್ಯವಾಗಿ ನುಡಿಸಿ ಸಹಕರಿಸಿದರು.
ಯಾವುದೇ ಕಲೆಯನ್ನು ಆಸ್ವಾದಿಸುವುದಕ್ಕೆ ಒಂದು ಸಿದ್ಧತೆ ಬೇಕು. ಅದಕ್ಕಾಗಿ ಪ್ರದರ್ಶನದ ಮೊದಲು ಯಕ್ಷಗಾನದ ಪ್ರಾತ್ಯಕ್ಷಿಕೆಯೂ ನಡೆಯಿತು. ಯಕ್ಷಗಾನದ ಬಡಗುತಿಟ್ಟಿನಲ್ಲಿ ಬರುವ ಅಷ್ಟ ತಾಳಗಳು ಅವುಗಳಿಗೆ ಕುಣಿಯುವ ವಿಧಾನ, ಆಂಗಿಕ ಅಭಿನಯದ ವಿವಿಧ ಭಂಗಿಗಳನ್ನು ಸಭಿಕರಿಗೆ ತೋರಿಸಿಕೊಟ್ಟರು. ಅದರೊಂದಿಗೆ ಬೇರೆ ಬೇರೆ ಮುದ್ರಿಕೆಗಳನ್ನು ತಿಳಿಯ ಹೇಳಿದರು. ನವರಸಗಳ ಅಭಿನಯವನ್ನು ಅಭಿನಯಿಸಿ ತೋರಿಸಿದರು. ಶೃಂಗಾರ ರಸದ ವಿವಿಧ ಮಜಲುಗಳನ್ನು ಅಭಿನಯಿಸಿ ತೋರಿಸಿದಾಗ ಮಕ್ಕಳು ಪುಳಕಿತರಾದದ್ದಲ್ಲಿ ಸಂಶಯವಿಲ್ಲ. ಈ ಪ್ರಾತ್ಯಕ್ಷಿಕೆಯನ್ನು ಸಮರ್ಥವಾಗಿ ಪ್ರದೀಪ(ಪ್ರಥಮ ಪಿ.ಯು) ಪ್ರತ್ಯಕ್ಷೀಕರಿಸಿದರು. ಎಳೆಯವನಾದರೂ ಪ್ರದೀಪ ಎಷ್ಟು ಪ್ರಬುದ್ಧ ಕಲಾವಿದನೆಂದು ಮನವರಿಕೆಯಾಗುವಂತಿತ್ತು. ಪ್ರಾಧ್ಯಾಪಕ ಸುಜಯೀಂದ್ರ ಹಂದೆಯವರ ಪ್ರಾತ್ಯಕ್ಷಿಕೆಯ ನಿರೂಪಣೆ ಮನಮುಟ್ಟುವಂತಿತ್ತು. ಒಟ್ಟಿನಲ್ಲಿ ಈ ಪ್ರಾತ್ಯಕ್ಷಿಕೆ ಪ್ರದರ್ಶನದ ಮೊದಲು ಸಾದರಪಡಿಸಿದುದರಿಂದ ಕಲಾಸ್ವಾದನೆಗೆ ಒಂದು ಬುನಾದಿಯನ್ನು ಹಾಕಿದಂತೆ ಆಗಿತ್ತು. ಸಾಲಿಗ್ರಾಮ ಮಕ್ಕಳ ಮೇಳ ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂಬುದೇ ನಮ್ಮ ಹಾರೈಕೆ.
- ಡಾ|ಉಪ್ಪಂಗಳ ಶಂಕರನಾರಾಯಣ ಭಟ್