Udayavani | Aug 11, 2012
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ತಾಲೂಕಿಗೆ ಸಂಬಂಧಪಟ್ಟ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ರಾಜ್ಯ ಯೋಜನಾ ಸಮಿತಿ ಒಪ್ಪಿಗೆ ನೀಡಿದ್ದು, ವಿವರವಾದ ಯೋಜನಾ ವರದಿ ( ಡಿಪಿಆರ್) ಸಲ್ಲಿಸಲು ಸೂಚಿಸಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಒಟ್ಟು 14 ಗ್ರಾಮಗಳ 124 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದ್ದು, 58 ಕೋ. ರೂ. ಯೋಜನಾ ಮೊತ್ತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನೆರವಿನೊಂದಿಗೆ ಅನುಷ್ಠಾನಗೊಳ್ಳುವ ಈ ಯೋಜನೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮುನ್ನೂರು, ಅಂಬ್ಲಿಮೊಗರು, ಕೋಟೆಕಾರು, ಕಿನ್ಯ, ಸೋಮೇಶ್ವರ, ತಲಪಾಡಿ, ಮಂಜನಾಡಿ, ಕೊಣಾಜೆ, ಬೆಳ್ಮ, ಹರೇಕಳ, ಪಾವೂರು, ಬೋಳಿಯಾರು ಮುಂತಾದ ಗ್ರಾಮಗಳು ಈ ಯೋಜನೆಯಲ್ಲಿ ಒಳಗೊಂಡಿವೆ ಎಂದವರು ತಿಳಿಸಿದ್ದಾರೆ.
ಯೋಜನೆಗೆ ಒಪ್ಪಿಗೆ ಲಭಿಸುವಲ್ಲಿ ಮುತುವರ್ಜಿ ವಹಿಸಿದ ರಾಜ್ಯ ಹಾಗೂ ಕೇಂದ್ರ ನಾಯಕರನ್ನು ಅವರು ಅಭಿನಂದಿಸಿದರು.
ಇದೇ ರೀತಿ ಮಂಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಒಳಪಡುವ ಬಂಟ್ವಾಳ ತಾಲೂಕಿನ ಕುರ್ನಾಡು, ನರಿಂಗಾನ, ಕೈರಂಗಳ, ಬಾಳೆಪುಣಿ, ಇರಾ, ಪಜೀರು, ಸಜೀಪ ಪಡು ಹಾಗೂ ಸಜೀಪ ನಡು ಸೇರಿದಂತೆ 7 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಾಥಮಿಕ ಪರಿವೀಕ್ಷಣಾ ವರದಿಗೆ ಯೋಜನಾ ಸಮಿತಿ ಸೂಚಿಸಿದೆ. ಒಟ್ಟು 26 ಕೋ.ರೂ. ಮೊತ್ತದ ಯೋಜನೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.