ಹೊಸದಿಲ್ಲಿ : ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿಯ ಪಾತಾಳ ಪ್ರವೇಶದ ಬಗ್ಗೆ ಆಘಾತಗೊಂಡಿರುವ 'ಹಾಕಿ ಇಂಡಿಯಾ'ದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರ ಅವರು ಇದರ ನೈತಿಕ ಹೊಣೆಯನ್ನು ಹೊರುವುದಾಗಿ ಹೇಳಿದ್ದು, ಈ ವೈಫಲ್ಯಕ್ಕೆ ಆಂತರಿಕ ತನಿಖೆ ನಡೆಸಲು ಆದೇಶಿಸಿದ್ದಾರೆ.ಕೋಚ್ ಮೈಕಲ್ ನಾಬ್ಸ್, ತಂಡದ ಮ್ಯಾನೇಜರ್ ಮತ್ತು ಫಿಸಿಯೋ ಅವರು ಇನ್ನು 10 ದಿನಗಳೊಳಗಾಗಿ ವೈಫಲದ್ಯದ ವರದಿಯನ್ನು 'ಹಾಕಿ ಇಂಡಿಯಾ'ಕ್ಕೆ ಸಲ್ಲಿಸಬೇಕೆಂದು ಬಾತ್ರ ಸೂಚಿಸಿದ್ದು, ಹಾಕಿ ಇಂಡಿಯಾ ಒಂದು ತಿಂಗಳೊಳಗಾಗಿ ತನ್ನ ನಿಲುವನ್ನು ಪ್ರಕಟಿಸಲಿದೆ ಎಂದು ಹೇಳಿದ್ದಾರೆ.8 ಬಾರಿಯ ಒಲಿಂಪಿಕ್ ಚಾಂಪಿಯನ್ ಭಾರತ ಲಂಡನ್‌ನಲ್ಲಿ ಈವರೆಗೆ ಕಂಡು ಕೇಳರಿಯದಂಥ ದುರಂತಕ್ಕೆ ಸಿಲುಕಿ ಕಟ್ಟಕಡೆಯ ಸ್ಥಾನ ಮುಟ್ಟಿತ್ತು.'ಹಾಕಿ ಕುಟುಂಬದ ಮುಖ್ಯಸ್ಥನಾಗಿ ಈ ವೈಫಲ್ಯಕ್ಕೆ ನಾನು ನೈತಿಕ ಹೊಣೆ ಹೊರಲಿದ್ದೇನೆ. ಇಡೀ ತಂಡದ ಪರವಾಗಿ ದೇಶದ ಕ್ಷಮೆ ಯಾಚಿಸುತ್ತೇನೆ...' ಎಂದು ಬಾತ್ರ ಲಂಡನ್‌ನಿಂದ ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಮಾತುಕತೆಯ ವೇಳೆ ಹೇಳಿದರು.'ತರಬೇತುದಾರರು, ತಂಡದ ಮ್ಯಾನೇಜರ್, ಫಿಸಿಯೋಥೆರಪಿಸ್ಟ್... ಎಲ್ಲರೂ ಇನ್ನು 10 ದಿನಗಳಲ್ಲಿ ತಮ್ಮ ಪ್ರತ್ಯೇಕ ವರದಿಯನ್ನು ಹಾಕಿ ಇಂಡಿಯಾಕ್ಕೆ ಸಲ್ಲಿಸಲಿದ್ದಾರೆ. ಬಳಿಕ ಇದನ್ನು ನಾವು ನಮ್ಮ ಕೋಚಿಂಗ್ ಮತ್ತು ಡೆವಲಪ್‌ಮೆಂಟ್ ಕಮಿಟಿ ಜತೆ ಸೇರಿ ಚರ್ಚಿಸಲಿದ್ದೇವೆ. 30 ದಿನಗಳಲ್ಲಿ ನಮ್ಮ ನಿಲುವನ್ನು ಪ್ರಕಟಿಸಲಿದ್ದೇವೆ' ಎಂದು ಬಾತ್ರ ತಿಳಿಸಿದರು.'ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಕೆಲವು ಮಾಜಿ ಆಟಗಾರರ ಸಲಹೆಯನ್ನೂ ಪಡೆಯಲಿದ್ದೇವೆ. ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ...' ಎಂದರು.ಹೀನಾಯ ಸೋಲಿನ ಹಿನ್ನೆಲೆಯಲ್ಲಿ ದೊಡ್ಡ ತಲೆಗಳು ಉದುರುವ ಸಾಧ್ಯತೆಗಳಿವೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾತ್ರ, 'ನಾನು ವೈಯಕ್ತಿಕವಾಗಿ ಯಾರೆಡೆಯೂ ಬೆಟ್ಟು ಮಾಡುವುದಿಲ್ಲ, ದೂಷಿಸುವುದಿಲ್ಲ. ಹಾಕಿ ಎಂಬುದೊಂದು ಟೀಮ್ ಗೇಮ್. ಆದರೆ ನಾವು ತಂಡವಾಗಿ ಆಡಲು ವಿಫಲರಾಗಿದ್ದೇವೆ...' ಎಂದರು.