ಬೆಳ್ತಂಗಡಿ: ಲಂಡನ್‌ನ ಪ್ರತಿಷ್ಠಿತ ಪಾರ್ಲಿಮೆಂಟಿನಲ್ಲಿ ಕನ್ನಡಿಗರೊಬ್ಬರು ಯುಕೆ ಸೌತ್ ಇಂಡಿಯಾ ಬಿಸಿನೆಸ್ ಮೀಟ್‌ನಲ್ಲಿ ಭಾಷಣ ಮಾಡಿದ್ದಾರೆ.ದಕ್ಷಿಣ ಭಾರತದ ಕೆಲವು ರಾಜ್ಯಗಳ ಪ್ರತಿನಿಧಿಗಳ ಜತೆಗೆ ಕನ್ನಡಿಗರೊಬ್ಬರಿಗೂ ಈ ಅವಕಾಶ ಪ್ರಾಪ್ತವಾಗಿದೆ. ಬೆಂಗಳೂರಿನ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಎನ್. ರವೀಂದ್ರನಾಥ ಕಾಮತ್ ಅವರು ತಮ್ಮ ಆಕರ್ಷಣೀಯ ಮಾತುಗಳ ಮೂಲಕ ವಿಶ್ವದ ಗಮನ ಸೆಳೆದವರು.ಮೂಲತಃ ಉಜಿರೆಯವರಾದ ಎನ್. ರವೀಂದ್ರನಾಥ ಕಾಮತರು ಉಜಿರೆ ಎಸ್‌ಡಿಎಂ ಕಾಲೇಜು ಹಾಗೂ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದು ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ.ಸಮಾಜದ ಗಮನ ಸೆಳೆದ ಕೆಲವೊಂದು ಕ್ಲಿಷ್ಟಕರ ಪ್ರಕರಣಗಳಲ್ಲಿ ವಾದಿಸಿ ಜಯ ಗಳಿಸಿರುವ ಇವರು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಅಲ್ಲಿನ ಪಾರ್ಲಿಮೆಂಟ್ ಸದಸ್ಯರಾದ ವೀರೇಂದ್ರ ಶರ್ಮ ಅವರ ಆಹ್ವಾನದ ಮೇರೆಗೆ ಭಾಗವಹಿಸಿದ್ದಾರೆ. ಅಲ್ಲಿನ ಸಭೆಯಲ್ಲಿ ಭಾಗವಹಿಸಿದ್ದ ಅನೇಕರ ಸಂದೇಹ, ಪ್ರಶ್ನೆಗಳಿಗೆ ಉತ್ತರಿಸಿ ಭಾರತದಲ್ಲಿ ಉದ್ಯಮಾವಕಾಶದ ಕುರಿತು ತಮ್ಮ ವಿಚಾರಧಾರೆ ಮಂಡಿಸಿದ್ದಾರೆ.ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಂಸದರಾದ ವೀರೇಂದ್ರ ಶರ್ಮ, ಲಾರ್ಡ್ ಕರನ್ ಬಿಲಿ ಮೊರಿಯಾ, ಲಾರ್ಡ್ ಒಲೇರಿ ಮೊದಲಾದವರು ವೇದಿಕೆಯಲ್ಲಿದ್ದರು.