ಶ್ರೀನಿವಾಸ ಬಾಡಕರ | Aug 11, 2012
ಕಾರವಾರ: ಕಾರವಾರ ಮತ್ತು ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ರಫ್ತು ಸ್ಥಗಿತಗೊಂಡು ಎರಡು ವರ್ಷ ಕಳೆದಿದೆ. ಅದಿರಿನಿಂದ ಇಲ್ಲಿನ ಪರಿಸರ, ನದಿ, ಸಮುದ್ರ ಕಲುಷಿತಗೊಳ್ಳುವುದು ನಿಂತಿದೆ ಎನ್ನುವಷ್ಟರಲ್ಲಿ, ಗೋವಾದ ಅದಿರು ಕಾಳಿ ನದಿಗೆ ಸೇರಿ, ನದಿ ನೀರು ಮಾಲಿನ್ಯವಾಗುವ ಭೀತಿ ನಿರ್ಮಾಣವಾಗಿದೆ.
ಕಾಳಿ ನದಿಯ ಉಪ ನದಿ ಎಂದು ಕರೆಯಲಾಗುವ ಸಾಕಳಿ ನದಿಯು ಉತ್ತರ ಗೋವಾದಲ್ಲಿ ಹುಟ್ಟಿ ದಕ್ಷಿಣದ ಕಡೆಗೆ ಹರಿಯುತ್ತದೆ. ಕಾರವಾರದಿಂದ ಸುಮಾರು 30 ಕಿ.ಮೀ. ದೂರದ ಕದ್ರಾ ಬಳಿ ಕಾಳಿ ನದಿಯೊಂದಿಗೆ ವಿಲೀನವಾಗುತ್ತಿದೆ. ಈ ನದಿಯು ಸಾವರ್ಡೆ, ಸಾಂಗೇ ಸೇರಿದಂತೆ ಇತರ ಕಬ್ಬಿಣದ ಅದಿರು ದೊರೆಯುವ ಪ್ರದೇಶದಿಂದ ಹರಿದು ಕರ್ನಾಟಕಕ್ಕೆ ಸೇರುತ್ತದೆ. ಇದರ ಇಕ್ಕೆಲೆಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಬಾರ್ಜ್‌ಗಳಿಗೆ ತುಂಬುವ ಜೆಟ್ಟಿಗಳಿವೆ. ಗೋವಾದಲ್ಲಿ ಕಬ್ಬಿಣ ಹಾಗೂ ಮಾಂಗನೀಸ್ ಅದಿರನ್ನು ಜೆಟ್ಟಿಗಳಲ್ಲಿ ಸಾಗಿಸಿದ ನಂತರ ಅದರ ಗುಣಮಟ್ಟ ಹೆಚ್ಚಿಸಲು ಪಂಪ್‌ಗ್ಳ ಮೂಲಕ ಸಾಕಳಿ ನದಿ ನೀರನ್ನು ಬಳಸಿಕೊಂಡು ಸತ್ಛಗೊಳಿಸಲಾಗುತ್ತದೆ. ಈ ಅದಿರನ್ನು ತೊಳೆದ ನೀರು ಮತ್ತೇ ನದಿಗೆ ಸೇರುತ್ತದೆ. ಜೊತೆಗೆ ಮಳೆಗಾಲದಲ್ಲಿ ಅದಿರು ಗಣಿಗಳು ಹಾಗೂ ಜಟ್ಟಿಗಳಿಂದ ಹರಿದು ಬರುವ ನೀರು ನದಿಗೆ ಸೇರುತ್ತದೆ. ಆ ನೀರು ಹರಿದು ಕಾಳಿ ನದಿಯೊಂದಿಗೆ ವಿಲೀನವಾಗುತ್ತಿದೆ.
ಮಳೆಗಾಲದ ವೇಳೆಗೆ ನದಿ ಕಲುಷಿತಗೊಳ್ಳುವ ಪ್ರಮಾಣ ಹೆಚ್ಚಾಗಿದ್ದು, ನೀರು ಹರಿದು ಬರುವ ರಭಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅದಿರು ಮಿಶ್ರಿತ ನೀರು ಕಾಳಿಗೆ ಸೇರುತ್ತಿದೆ. ಇದರಿಂದಾಗಿ ಕಾಳಿ ನದಿಯಲ್ಲಿರುವ ಅಪರೂಪದ ಜಲಚರಗಳಿಗೆ ಹಾನಿ ಉಂಟಾಗುತ್ತಿದೆ. ಅಪರೂಪದ ಮೀನುಗಳು ವಿನಾಶದ ಅಂಚಿಗೆ ತಲುಪಿವೆ. ಸಾಕಳಿ ನದಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅದಿರು ರಪ್ತಾಗುವುದರಿಂದ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನೇಕ ಕಡೆಗಳಲ್ಲಿ ಅದಿರು ಸಂಗ್ರಹವಾಗುವುದರಿಂದ ಸಾಕಳಿ ನದಿಯ ನೀರು ಮಳೆಗಾಲ ಬೇಸಿಗೆ ಎನ್ನದೇ ಸದಾ ಕೆಂಪಾಗಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎನ್ನವುದು ಜನರ ಅಭಿಪ್ರಾಯವಾಗಿದೆ.
ಗೋವಾ ರಾಜ್ಯದಿಂದ ಕರ್ನಾಟಕದ ಕಾಳಿ ನದಿಯನ್ನು ಕಷ್ಮಲಗೊಳ್ಳುವಂಥ ದೊಡ್ಡ ಮಾಲಿನ್ಯ ಸಮಸ್ಯೆಯಾಗಿದೆ. ಗೋವಾ ಸರಕಾರ ನೀರನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆ ಮಾಡಬೇಕಿದೆ. ಕರ್ನಾಟಕ ಸರಕಾರ ಈ ಬಗ್ಗೆ ಗಮನ ಹರಿಸಿಬೇಕಾಗಿದ್ದು ಕಾಳಿಯನ್ನು ಇನ್ನಷ್ಟು ಕಷ್ಮಲಗೊಳ್ಳುವುದನ್ನು ತಪ್ಪಿಸಬೇಕಾಗಿದೆ.
ನದಿಯ ಆಳದಲ್ಲಿ ಶೇಖರಣೆಯಾಗುತ್ತಿರುವ ಕಬ್ಬಿಣದ ಅದಿರಿನಿಂದಾಗಿ ಅಲ್ಲಿನ ತಾಪಮಾನದ ಏರುಪೇರಿಗೆ ಕಾರಣವಾಗಬಹುದು. ಮುಂದಿನ ದಿನದಲ್ಲಿ ಪರಿಸರ ಮಾಲಿನ್ಯ, ಜೀವ ವೈವಿಧ್ಯತೆ ಇರುವ ಕಾಳಿ ನದಿ ಗಂಭೀರ ಪರಿಣಾಮಕ್ಕೆ ಕಾರಣವಾಗಲಿದೆ. ಕಲುಷಿತ ನೀರು ಸಮುದ್ರ ಸೇರಿ ಮುಂದಿನ ದಿನದಲ್ಲಿ ಮೀನಿನ ಬರಕ್ಕೂ ಪ್ರಮುಖ ಕಾರಣವಾಗಬಹುದು. ಕಾಳಿ ನದಿ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಆತ್ಯವಶ್ಯಕವಾಗಿದೆ ಎನ್ನುತ್ತಾರೆ ಕದ್ರಾ ಗ್ರಾಮಸ್ಥರು.
ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗಣೇಶನ್ ಅವರನ್ನು ಪ್ರಶ್ನಿಸಿದಾಗ, ತಾನು ಸದ್ಯವೇ ಕಾರವಾರಕ್ಕೆ ವರ್ಗಾವಣೆಯಾಗಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾಗಿದ್ದು ಇದರ ಬಗ್ಗೆ ಹೆಚ್ಚಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.