Sunday, May 26, 2013
Last Updated: 8:00:22 AM IST
  • ನಾನೆಲ್ಲಿರುವೆ:
  • ಮುಖಪುಟ ಪಯಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಖಾಜನಗೌಡರ ಸಿರಿಮನೆ ನೋಡಾ...


      • ರಾಯಚೂರು ನಗರದ ಮಡ್ಡಿಪೇಟೆ ಬಡಾವಣೆಯಲ್ಲಿರುವ ಸಿರಿಮನೆ ಈ ಭಾಗದ ಕಲಾ ಶ್ರೀಮಂತಿಕೆಗೆ ಮಾದರಿಯಾಗಿದೆ. ವಾಸ್ತು ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ನಿರ್ಮಾಣಗೊಂಡ ಈ ಮನೆ ರಾಯಚೂರು ನಗರದ ಮನೆಗಳಲ್ಲಿ ಅತ್ಯಂತ ಪುರಾತನ ಮನೆಯಾಗಿದೆ.

        ಮನೆ ಒಳಗಿನ ಕಲಾ ಸೌಂದರ್ಯ ಇಂದಿಗೂ ನೋಡುಗರ ಮೈಮನ ಮರೆಯುವಂತೆ ಮಾಡುತ್ತದೆ. ಎರಡು ಶತಮಾನಗಳ ಹಳೆಯ ಈ ಮನೆ ಅಂದಿನ ಆಗರ್ಭ ಶ್ರೀಮಂತ ಖಾಜನಗೌಡರಿಗೆ ಸೇರಿದ್ದು. ಗೌಡರು ತನ್ನ ಶ್ರೀಮಂತಿಕೆಗೆ ಪ್ರತಿರೂಪವಾಗಿ ಈ ಮನೆಯನ್ನು ನಿರ್ಮಿಸಿ ಇದಕ್ಕೆ ದೌಲತ್‌ ಮಹಲ್‌ (ಸಿರಿಮನೆ) ಎಂದು ನಾಮಕರಣ ಮಾಡಿದ್ದರು. ಇಂದಿಗೂ ಈ ಮನೆಯಲ್ಲಿ ಅವರ ವಂಶಸ್ಥರು ವಾಸಿಸುತ್ತಾರೆ. ಸರಿಯಾದ ನಿರ್ವಹಣೆ ಇಲ್ಲದೆ ಈ ಐತಿಹಾಸಿಕ ಮನೆ ಅನೇಕ ಕಡೆ ದುರ್ಬಲಗೊಂಡಿದೆ.

        ಪೂರ್ವಾಭಿಮುಖವಾಗಿ ನಿಂತಿರುವ ಈ ಮನೆ 5600 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ವಿಶಾಲ ಹೆಬ್ಟಾಗಿಲು ಮತ್ತು ಮನೆ ಮುಂದಿನ ಎರಡು ವಿಶಾಲ ಕಟ್ಟೆಗಳು ಮನೆ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಮುಖ್ಯ ದ್ವಾರದಿಂದ ಮನೆ ಒಳಗೆ ಪ್ರವೇಶಿಸುತ್ತಿರುವಂತೆ ಒಳಗಿನ ಕಲಾಕೌಶಲ್ಯ ನಿಬ್ಬೆರಗಾಗುವಂತೆ ಮಾಡುತ್ತದೆ. ಎರಡು ಶತಮಾನಗಳ ಹಳೆಯ ಕಟ್ಟಿಗೆ ಕಂಬಗಳು ಇಂದಿಗೂ ತಮ್ಮ ಗತವೈಭವದ ಅಂದ-ಚಂದವನ್ನು ಉಳಿಸಿಕೊಂಡು ನಿಂತಿವೆ.

        ಭಾರಿ 16 ಕಟ್ಟಿಗೆ ಕಂಬಗಳಿಂದ ನಿರ್ಮಾಣಗೊಳಿಸಿದ ತೊಟ್ಟಿ ಆಕಾರದ ಪಡಸಾಲೆಯಿಂದ ತಲೆ ಎತ್ತಿ ನೋಡಿದರೆ ಆಕಾಶವನ್ನು ಕಾಣಬಹುದು. ಹವಾನಿಯಂತ್ರಣ ಯಂತ್ರಗಳ ಪರಿಕಲ್ಪನೆ ಇಲ್ಲದ ಅಂದಿನ ಜನರು ನೈಸರ್ಗಿಕ ಹವಾನಿಯಂತ್ರಣಕ್ಕೆ ಮಾಡಿಕೊಂಡ ಈ ತೊಟ್ಟಿ ನಿರ್ಮಾಣ ಇಂದಿಗೂ ಅನುಕರಣೀಯವಾಗಿದೆ.

        ಮೂರು ಅಂತಸ್ತಿನ ಈ ಮನೆಯಲ್ಲಿ ಸುಮಾರು 40 ವಿವಿಧ ಕೋಣೆಗಳಿವೆ. ಒಂದೊಂದು ಕೋಣೆಯದು ಒಂದೊಂದು ಚೆಲುವು. ನೆಲ ಮಾಳಿಗೆಯಲ್ಲಿ ಇರುವ ಕಟ್ಟಿಗೆ ಕಂಬಗಳು ಸಿರಿಮನೆಯ ಮೂರು ಅಂತಸ್ತಿನ ಭಾರವನ್ನು ಹೊತ್ತು ಎರಡು ಶತಮಾನಗಳಿಂದ ನಿಂತಿವೆ.

        ಸಿರಿಮನೆಯ ಕಾಷ್ಠಶಿಲ್ಪ ಎಂಥವರನ್ನೂ ಬೆರಗುಗೊಳ್ಳುವಂತೆ ಮಾಡುತ್ತದೆ. 40 ಕೋಣೆಗಳನ್ನು ಹೊಂದಿದ ಮನೆಯ ಎಲ್ಲ ಕೋಣೆಗಳ ಬಾಗಿಲು ಮತ್ತು ಕಿಟಕಿಗಳನ್ನು ದೇಶೀಯ ಮರಗಳಿಂದ ನಿರ್ಮಿಸಲಾಗಿದೆ. ಮನೆಯ ಕಂಬ ಮತ್ತು ಬೋದಿ, ನಾಗವಂದಿಗೆ, ತೊಲೆಗಳನ್ನು ತೇಗ ಮತ್ತು ನೆಲಮದ್ದು ಕಟ್ಟಿಗೆ ಬಳಸಿದ್ದರೆ ಉಳಿದ ಕೆಲಸಗಳಿಗೆ ಬೇವು, ಜಾಲಿ ಮತ್ತು ಮಾವಿನ ಮರದ ಕಟ್ಟಿಗೆ ಬಳಸಲಾಗಿದೆ.

        ಕಾಷ್ಠಶಿಲ್ಪ ಮತ್ತು ವಾಸ್ತುಶಿಲ್ಪಗಳಲ್ಲದೆ ಮನೆಯ ಕೋಣೆಗಳಲ್ಲಿ ಬರೆಯಲಾದ ಚಿತ್ರಕಲೆ ಅದ್ಭುತವಾಗಿದೆ. ದೇಶಿ ಬಣ್ಣದೊಂದಿಗೆ ಚಿತ್ರಗಳಿಗೆ ಜೀವಂತಿಕೆ ಬರಲೆಂಬ ಉದ್ದೇಶದಿಂದ ವಿದೇಶಿ ಬಣ್ಣವನ್ನು ನೇರವಾಗಿ ಬಳಸಿಕೊಳ್ಳಲಾಗಿದೆ.

        ವೈಷ್ಣವ ಪಂಥಕ್ಕೆ ಸೇರಿದ ಕೃಷ್ಣಲೀಲೆ ಚಿತ್ರಗಳನ್ನು ಬರೆಯಲಾಗಿದೆ. ಇಂದಿಗೂ ಈ ಚಿತ್ರಗಳ ಅದೇ ರೀತಿ ಇವೆ. ಕೆಲವೆಡೆ ಮಕ್ಕಳ ಆಟದಿಂದಾಗಿ ಕೆಟ್ಟುಹೋಗಿವೆ. ಈ ಮನೆ ಗೌಡರ ಕಲಾ ಪ್ರೇಮವನ್ನು ಬಿಂಬಿಸುವ ರೀತಿಯಲ್ಲಿ ನಿರ್ಮಾಣಗೊಂಡಿದೆ.


        ಈ ದೊಡ್ಡ ಮನೆಯನ್ನು ನಿರ್ವಹಿಸಲಾಗದೆ ಗೌಡರ ವಂಶಸ್ಥರು ಕೆಲದಿನಗಳು ಮನೆಗೆ ಬೀಗಹಾಕಿ ಬೇರೆ ವಾಸವಾಗಿದ್ದರು. ಸರಕಾರ ಈ ಮನೆಯನ್ನು ವಹಿಸಿಕೊಂಡು ವಸ್ತು ಸಂಗ್ರಹಾಲಯ ಮಾಡಲಿ ಎಂಬುವುದು ಮನೆಯವರ ಬೇಡಿಕೆಯಾಗಿದೆ. ಆದರೆ ಸರಕಾರ ಇತ್ತ ಇನ್ನೂ ಗಮನ ಹರಿಸುತ್ತಿಲ್ಲ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus