Friday, May 24, 2013
Last Updated: 2:27:14 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ವರ್ಣೆ ಹೂಳೆತ್ತಲು ಅನುಮತಿ ಕೋರಿಕೆ
    • ನಗರಸಭಾಧ್ಯಕ್ಷ ಕಿರಣ್‌ಕುಮಾರ್‌
    • ನಗರಸಭಾಧ್ಯಕ್ಷರು ಮುಖಾಮುಖೀಯಲ್ಲಿ ಪಾಲ್ಗೊಂಡರು.

      • Udayavani | Aug 17, 2012

        ಉಡುಪಿ : ಈ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದಿರಾದದ್ದು ಸ್ವರ್ಣಾ ನದಿಯಲ್ಲಿ ಹೂಳೆತ್ತಲು ಅವಕಾಶ ಕೊಡದೆ ಇದ್ದ ಕಾರಣ. ಮುಂದಿನ ಬಾರಿ ಹೀಗಾಗದಂತೆ ಆಗಲು ಹೂಳೆತ್ತುವ ಕುರಿತು ಅನುಮತಿ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಲಾಗಿದೆ ಎಂದು ನಗರಸಭಾಧ್ಯಕ್ಷ ಕಿರಣ್‌ಕುಮಾರ್‌ ಹೇಳಿದ್ದಾರೆ.

        ಉಡುಪಿ ಬಳಕೆದಾರರ ವೇದಿಕೆ ನಗರಸಭೆಯಲ್ಲಿ ಆ.17ರಂದು ಏರ್ಪಡಿಸಿದ ಮುಖಾಮುಖೀಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಯಾಂತ್ರೀಕೃತ ಹೂಳೆತ್ತಲು ಬಿಡಲಿಲ್ಲ. ಆದರೆ ನಾನು ಪದೇ ಪದೇ ಒತ್ತಾಯಿಸಿದ್ದೆ. ಮೇಲೆ ಕಂಡು ಬಂದ ನೀರಿನಡಿ ಇಷ್ಟೊಂದು ಹೂಳು ತುಂಬಿಕೊಂಡಿದೆ ಎನ್ನುವುದು ನಮಗೆ ಅರಿವಿಗೆ ಬರಲಿಲ್ಲ. ಕೊನೆಯ ಐದೇ ದಿನಗಳಲ್ಲಿ ನೀರು ಬತ್ತಿ ಹೋಯಿತು. ಆದರೂ ಬೇರೆ ನಗರಗಳಿಗೆ ಹೋಲಿಸಿದರೆ ನಾವು ಎರಡು ದಿನಗಳಿಗೆ ಒಮ್ಮೆಯಾದರೂ ನೀರು ಕೊಟ್ಟಿದ್ದೇವೆಂಬ ಸಮಾಧಾನವಿದೆ ಎಂದರು.

        ಮುಂದಿನ ಬಾರಿಯೂ ಹೀಗಾಗಬಾರದೆಂಬ ಕಾರಣಕ್ಕೆ ಸದಸ್ಯರು ಮತ್ತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಜನವರಿಯಲ್ಲಿ ಒಳಹರಿವು ನಿಂತ ಬಳಿಕ ಇರುವ ಸಂಗ್ರಹ ಆಧರಿಸಿ ನಿತ್ಯ ನೀರು ಸರಬರಾಜು ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷರು ತಿಳಿಸಿದರು.

        ಪ್ರತಿ ಕಟ್ಟಡಕ್ಕೂ ಸ್ಥಳ ಭೇಟಿ

        ಯಾವುದೇ ಕಟ್ಟಡಗಳಿಗೆ ಯೋಜನೆಯನ್ನು ಮಂಜೂರಾತಿ ಮಾಡುವುದು ನಗರ ಯೋಜನಾ ಪ್ರಾಧಿಕಾರ. ಅಲ್ಲಿ ತಿಳಿಸಿದ ನಕಾಶೆಯಂತೆ ಕಟ್ಟಡ ಇದೆಯೋ ಇಲ್ಲವೋ ಎಂದು ನೋಡುವುದಷ್ಟೆ ನಮ್ಮ ಕೆಲಸ. ಅಗ್ನಿಶಾಮಕ ದಳದವರು ನಿರಾಕ್ಷೇಪಣಾ ಪ್ರಮಾಣಪತ್ರ ಕೊಟ್ಟ ಬಳಿಕ ನಾವು ಅನುಮತಿ ಕೊಡಲೇಬೇಕು. ಎಷ್ಟೋ ಕಡೆಗಳಲ್ಲಿ ಕೆಲಸವನ್ನು ನಿಲ್ಲಿಸಿದ್ದು ನೀರಿನ ಮತ್ತು ವಿದ್ಯುತ್‌ ಸಂಪರ್ಕಕ್ಕೆ ಅವಕಾಶ ನೀಡಿಲ್ಲ. ಇನ್ನು ಮುಂದೆ ಯಾವುದೇ ಕಟ್ಟಡವಿದ್ದರೂ 2-3 ಬಾರಿ ಎಂಜಿನಿಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂಬ ಆದೇಶ ಬಂದಿದೆ. ಆದ್ದರಿಂದ ಉಡುಪಿಯಲ್ಲಿ ಸೆಟ್‌ಬ್ಯಾಕ್‌ ಬಿಡದ, ಕಾನೂನು ಬಾಹಿರ ಕಟ್ಟಡಗಳು ಮುಂದೆ ಬರಲಿಕ್ಕಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.

        ಸದ್ಯ 22 ದೊಡ್ಡ ಕಟ್ಟಡಗಳು ನಗರದಲ್ಲಿ ಬರುತ್ತಿವೆ. ನಿವೇಶನದ ಒಟ್ಟು ವಿಸ್ತೀರ್ಣ, ಎತ್ತರದ ಆಧಾರದಲ್ಲಿ ಸೆಟ್‌ಬ್ಯಾಕ್‌ ಬಿಡಬೇಕಾಗುತ್ತದೆ. ಎಷ್ಟೊ ಕಡೆಗಳಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡಿರಬಹುದು. ಆದರೆ ಕಟ್ಟಡದ ನಿಯಮಾವಳಿಯಲ್ಲಿಯೇ ಕೆಲವು ದೋಷಗಳಿವೆ. ಇವುಗಳನ್ನು ನಗರ ಯೋಜನಾ ಪ್ರಾಧಿಕಾರ ಅಥವಾ ಸರಕಾರದ ಮಟ್ಟದಲ್ಲಿ ಸರಿಪಡಿಸಬೇಕು ಎಂದರು.

        ಮಾನವ ಹಕ್ಕಿನ ಗುಮ್ಮ!

        ಕೆಲವು ಬಾರಿ ಮಾನವೀಯತೆ ಪ್ರಶ್ನೆ ಇದಿರಾಗುತ್ತದೆ. ಇರುವುದು ಐದೇ ಸೆಂಟ್ಸ್‌ ಜಾಗ. ಇದರಲ್ಲಿ ಸೆಟ್‌ಬ್ಯಾಕ್‌ ಬಿಡಲು ಹೇಳಿದರೆ ಮಧ್ಯಮವರ್ಗದವರು ಮನೆ ಕಟ್ಟುವುದು ಎಲ್ಲಿ ಎಂಬ ಪ್ರಶ್ನೆ ಬರುತ್ತದೆ. ಈಗಂತೂ ಮಾನವ ಹಕ್ಕುಗಳ ಪ್ರಶ್ನೆ ದೊಡ್ಡದಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

        ಜಿಲ್ಲಾಸ್ಪತ್ರೆ, ಬ್ರಹ್ಮಗಿರಿ ಬಳಿ ಬಸ್‌ ನಿಲುದಾಣವನ್ನು ನಿರ್ಮಿಸಲು ಜಾಗ ಹುಡುಕುತ್ತಿದ್ದೇವೆ. ಕೆಎಸ್ಸಾರ್ಟಿಸಿ ನಿಲ್ದಾಣ ಬಳಿಯ ಶೌಚಾಲಯ ವೀಕ್ಷಣೆ ನಡೆಸಿ ಸರಿಯಾಗಿ ನಡೆಸಿಕೊಂಡು ಹೋಗಲು ಸೂಚನೆ ನೀಡುತ್ತೇನೆ. ಎಲ್ಲೆಲ್ಲಿ ಪಾದಚಾರಿ ಮಾರ್ಗ ಸರಿ ಇಲ್ಲವೋ ಅವುಗಳನ್ನು ತಿಳಿಸಿದರೆ ದುರಸ್ತಿಪಡಿಸುತ್ತೇವೆ ಎಂದರು.

        ಸರ್ಕಲ್‌ ಅಭಿವೃದ್ಧಿ

        ದಾನಿಗಳ ನೆರವಿನಿಂದ ಸೂಕ್ತವೆನಿಸಿದ ಜಾಗದಲ್ಲಿ ಸರ್ಕಲ್‌ಗ‌ಳನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತೇವೆ ಎಂದರು. ನಗರಸಭೆಯಲ್ಲಿ ಈಗಾಗಲೇ ನಾಗರಿಕ ಸನ್ನದು ಇದೆ ಎಂದರು. ಈ ಬಾರಿ ನಗರದಲ್ಲಿ ನೆರೆ ಹಾವಳಿಯನ್ನು ಸಮರ್ಥವಾಗಿ ನಿಯಂತ್ರಿಸಲಾಗಿದೆ ಎಂದರು.

        ವೇದಿಕೆ ಸಂಚಾಲಕ ಕೆ.ದಾಮೋದರ ಐತಾಳ್‌ ಸ್ವಾಗತಿಸಿದರು. ನಗರಸಭೆ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್‌, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ರಬೀಂದ್ರ ನಾಯಕ್‌ ಉಪಸ್ಥಿತರಿದ್ದರು. ಎ.ಪಿ.ಕೊಡಂಚ ಪ್ರಸ್ತಾವನೆಗೈದರು. ಲಕ್ಷ್ಮೀಬಾಯಿ, ಸುಧೀರ್‌ ಕಾಂಚನ್‌, ಜಯಶ್ರೀ ಕೃಷ್ಣರಾಜ್‌, ರವೀಂದ್ರ ಕಾಮತ್‌, ಆರ್‌.ಎಲ್‌.ಡಾಯಸ್‌, ಅಲ್ತಾಫ್ ಮೊದಲಾದವರು ಪ್ರಶ್ನೆ ಕೇಳಿದರು.

        ತಳ್ಳುಗಾಡಿಗಳೂ ಬೀದಿನಾಯಿಗಳೂ...!

        ಬೀದಿನಾಯಿಗಳು ಏಕೆ ಹೆಚ್ಚಾಗುತ್ತವೆ? ಸಾರ್ವಜನಿಕರು ರಸ್ತೆ ಮೇಲೆ ತಿಂಡಿಗಳನ್ನು ಹಾಕುವುದರಿಂದ. ಗೂಡಂಗಡಿಗಳು, ತಳ್ಳುಗಾಡಿಗಳು ಏಕೆ ಹೆಚ್ಚಾಗುತ್ತವೆ? ಸಾಮಾನ್ಯ ಅಂಗಡಿಗಳನ್ನು ಬಿಟ್ಟು ಗೂಡಂಗಡಿಗಳಲ್ಲಿ ಹಣ್ಣುಗಳನ್ನು ಖರೀದಿಸಿದರೆ ಗೂಡಂಗಡಿಗಳು ಹೆಚ್ಚಾಗುತ್ತವೆ. ಇದು ನಗರಸಭಾಧ್ಯಕ್ಷ ಕಿರಣ್‌ಕುಮಾರ್‌ ವಾದ.

        ತಳ್ಳುಗಾಡಿಗಳ ಸಮಸ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಇವರನ್ನು ನಿಯಂತ್ರಿಸಬೇಕಾದವರು ಸಂಚಾರಿ ಪೊಲೀಸರು. ನಾವು ನೆರವು ಕೊಡಬಹುದು. ಒಂದು ಬಾರಿ ಹಲವು ತಳ್ಳುಗಾಡಿಗಳನ್ನು ವಶಕ್ಕೆ ತೆಗೆದುಕೊಂಡು ಪುಡಿ ಮಾಡಿ ಹಾಕಿದ್ದೆ. ಆದರೆ ಮತ್ತೆ ಅಷ್ಟೇ ಹುಟ್ಟಿಕೊಂಡವು. ಕಾಯಿದೆಯಲ್ಲಿ 'ತಳ್ಳುಗಾಡಿ' ಮತ್ತು 'ಗೂಡಂಗಡಿ' ಶಬ್ದವೇ ಇಲ್ಲ. ವಿಶೇಷ ದಿನಗಳು, ಜಾತ್ರೆಗಳಲ್ಲಿ ಮಾತ್ರ ಮೂರು ದಿನ, ಒಂದು ವಾರ ಮೀರದಂತೆ ಅವಕಾಶ ಕೊಡಬಹುದು ಎಂದಿದೆ ಎಂದರು.

        ಸಿಟಿ ಬಸ್‌ ನಿಲ್ದಾಣದಲ್ಲಿ ಕಂಡು ಬರುವ ಗೂಡಂಗಡಿಗಳು ಸರಕಾರಿ ಜಾಗದಲ್ಲಿಲ್ಲ. ಖಾಸಗಿ ಜಾಗದಲ್ಲಿವೆ. ಖಾಸಗಿ ಜಾಗದಲ್ಲಿ ನಾವು ಹೋಗಿ ನಿರ್ಬಂಧ ಹೇರಲು ಆಗುವುದಿಲ್ಲ. ಒಂದು ಹೊಟೇಲ್‌ನಿಂದ ನಾಲ್ಕು ಕುಟುಂಬ ನಡೆದರೆ ಒಂದು ಗೂಡಂಗಡಿ ಇಟ್ಟರೆ ಒಂದು ಕುಟುಂಬ ನಡೆಯುತ್ತದೆ. ಆದರೆ ಹೊಟೇಲ್‌ನ ನಾಲ್ಕು ಕುಟುಂಬ ಬೀದಿಪಾಲಾಗುತ್ತದೆ. ಆದ್ದರಿಂದ ನಾನು ವೈಯಕ್ತಿಕವಾಗಿ ಗೂಡಂಗಡಿಗಳಿಗೆ ವಿರೋಧಿ. ಸಾರ್ವಜನಿಕರು ಇಂತಹವರಲ್ಲಿ ವ್ಯಾಪಾರ ಮಾಡದೆ ಇದ್ದರೆ ಮಾತ್ರ ಇವರ ನಿಯಂತ್ರಣ ಸಾಧ್ಯ ಎಂದು ಕಿರಣ್‌ಕುಮಾರ್‌ ಹೇಳಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus