Udayavani | Aug 18, 2012
ಡೊಂಬಿವಲಿ: ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ ವತಿಯಿಂದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ಕಾರ್ಯಕ್ರಮವು ಆ. 11 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪ್ರಾರಂಭದಲ್ಲಿ ಶ್ರೀಗಳನ್ನು ಮಂಡಳಿಯ ಸದಸ್ಯರು ಮತ್ತು ಭಕ್ತಾದಿಗಳು ಕಲಶ ಹಿಡಿದು, ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಮಂದಿರದ ಪ್ರಧಾನ ಅರ್ಚಕ ಪ್ರಕಾಶ್ ಭಟ್ ಅವರು ಸ್ವಾಮೀಜಿ ಅವರ ಪಾದಪೂಜೆಗೈದು ಫಲಪುಷ್ಪ-ಕಾಣಿಕೆಗಳನ್ನಿತ್ತು, ಶಾಲು ಹೊದಿಸಿ, ಆರತಿ ಬೆಳಗಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಭಕ್ತಾದಿಗಳನ್ನು ಉದ್ಧೇಶಿಸಿ ಮಾತನಾಡಿದ ಶ್ರೀಗಳು, ಇಂದಿನ ನಮ್ಮ ಸರಕಾರ ಜನಸಾಮಾನ್ಯರಿಗೆ ಏನನ್ನು ಕೊಡುತ್ತಾರೋ ಅದನ್ನು ಬಡ್ಡಿಸಮೇತವಾಗಿ ನಮ್ಮಿಂದಲೇ ವಸೂಲಿ ಮಾಡುತ್ತಾರೆ.

ವಿದ್ಯುತ್ ಪೂರೈಕೆಯನ್ನು ಉದಾಹರಣೆಗೆ ಪಡೆದರೆ ಅದರಿಂದ ಬೆಳಕು, ನೀರು, ಗಾಳಿ ಹೀಗೆ ಎಲ್ಲ ಉಪಯೋಗವು ಆಗುತ್ತದೆ. ಆದರೆ ವಿದ್ಯುತ್ ಬಿಲ್ ಪಾವತಿ ಮಾಡದಿದ್ದ ಪಕ್ಷದಲ್ಲಿ ಅದನ್ನು ಕಡಿತಗೊಳಿಸುವ ಕಾಯಕದಲ್ಲೂ ಸರಕಾರ ನಿರತವಾಗುತ್ತದೆ. ಆದರೆ ಭಗವಂತ ಯಾವ ಪಕ್ಷ ಭೇದ-ಭಾವವಿಲ್ಲದೆ ಎಲ್ಲರಿಗೂ ಸಮಾನ ರೀತಿಯಿಂದಲೇ ಗಾಳಿ, ಬೆಳಕು, ನೀರನ್ನು ನೀಡುತ್ತಿರುವುದು ನಮ್ಮ ಪುಣ್ಯ. ದೇವರು ನಮ್ಮಿಂದ ಏನನ್ನೂ ಬಯಸುವುದಿಲ್ಲ. ಆ ಪರಮಾತ್ಮನ ಸನಿಹಕ್ಕೆ ತಲುಪಲು ಭಕ್ತಿಮಾರ್ಗ ಒಂದೆ ದಾರಿಯಾಗಿದೆ. ಆದ್ದರಿಂದ ನಾವು ಆಧ್ಯಾತ್ಮಿಕತೆಯನ್ನು ಬೆಳೆಸಿಕೊಂಡು ಜೀವನವನ್ನು ಪಾವನವನ್ನಾಗಿಸಲು ಮುಂದಾಗಬೇಕು. ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವಪೀಳಿಗೆಗೆ ಪರಿಚಯಿಸುವ, ಅರಿವು ಮೂಡಿಸುವ ಕಾರ್ಯದಲ್ಲಿ ನಾವೆಲ್ಲರು ತೊಡಗಬೇಕು. ಶ್ರೀ ರಾಧಾಕೃಷ್ಣ ಮಂದಿರ ಇಷ್ಟೊಂದು ವಿಶಾಲವಾಗಿದ್ದರೂ, ತುಂಬಿ ತುಳುಕುತ್ತಿರುವ ಭಕ್ತ ಸಮೂಹವನ್ನು ನೋಡುವಾಗ ಸಂತೋಷವಾಗುತ್ತದೆ. ಇದೊಂದು ದೊಡ್ಡ ವಿಶಾಲವಾದ ಸ್ವತಂತ್ರ ಮಂದಿರವಾಗಿ ಬೆಳಗಲಿ. ಇಲ್ಲಿ ಬರುವ ಭಕ್ತಾದಿಗಳ ಕಷ್ಟ-ಕಾರ್ಪಣ್ಯಗಳನ್ನು ದೇವರು ಸಿದ್ಧಿಸಲೆಂದು ನುಡಿದು ಶುಭಹಾರೈಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ಎಸ್. ಟಿ. ವಿಜಯಕುಮಾರ್ ಮತ್ತು ಬಾಲಕೃಷ್ಣ ಆರ್. ಕೋಟ್ಯಾನ್, ಮಂಡಳಿಯ ಭುವಾಜಿ ಶೇಖರ ಎ. ಕೋಟ್ಯಾನ್, ಮಂಡಳಿಯ ಸದಸ್ಯರುಗಳು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶ್ರೀಗಳು ಭಕ್ತಾದಿಗಳನ್ನು ಮಂತ್ರಾಕ್ಷತೆ ಮತ್ತು ಫಲವನ್ನಿತ್ತು ಆಶೀರ್ವದಿಸಿದರು.