Wednesday, June 19, 2013
Last Updated: 8:59:29 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಲಸಿಗರ ಸಂಖ್ಯೆ ಇಳಿಮುಖ
    • ನಗರದಲ್ಲಿರುವ ಈಶಾನ್ಯ ರಾಜ್ಯಗಳ ನಿವಾಸಿಗಳ ವಲಸೆ ಶನಿವಾರ ಏಕಾಏಕಿ ಇಳಿಮುಖವಾಗಿದೆ.

      • Udayavani | Aug 19, 2012

        ಮುಖ್ಯಾಂಶಗಳು

        * ಕೊನೆಗೂ ಫ‌ಲನೀಡಿದ ಕಸರತ್ತು

        * ಈಶಾನ್ಯ ರಾಜ್ಯಗಳ ಗುಳೆಗೆ ಬಹುತೇಕ ಬ್ರೇಕ್‌

        * ಇಡೀ ದಿನ ತೆರಳಿದವರ ಸಂಖ್ಯೆ 300ಕ್ಕಿಂತ ಕಡಿಮೆ

        * ಹಲ್ಲೆ ಮತ್ತು ಎಸ್‌ಎಂಎಸ್‌ ಹಿನ್ನೆಲೆ; ಏಳು ಜನರ ಬಂಧನ

        ಬೆಂಗಳೂರು: ರಾಜ್ಯ ಸರ್ಕಾರದ ಅಭಯ, ಖುದ್ದು ಈಶಾನ್ಯ ರಾಜ್ಯಗಳ ಸಚಿವರು ಭೇಟಿ ನಡೆಸಿದ ಮನವೊಲಿಕೆ ಪ್ರಯತ್ನಗಳು ಹಾಗೂ ಕ್ಷಿಪ್ರ ಕಾರ್ಯಪಡೆ ನಡೆಸಿದ ಪಥಸಂಚಲನ ಕೊನೆಗೂ ಫ‌ಲ ನೀಡಿದ್ದು ಇದರ ಪರಿಣಾಮ ನಗರದಲ್ಲಿರುವ ಈಶಾನ್ಯ ರಾಜ್ಯಗಳ ನಿವಾಸಿಗಳ ವಲಸೆ ಶನಿವಾರ ಏಕಾಏಕಿ ಇಳಿಮುಖವಾಗಿದೆ.

        ಸತತ ವಿವಿಧ ಪ್ರಯತ್ನಗಳ ನಂತರವೂ ಕಳೆದ ಮೂರು ದಿನಗಳಲ್ಲಿ ಎಂಟು ವಿಶೇಷ ಮತ್ತು ಮೂರು ದೈನಿಕ ಗುವಾಹಟಿ ರೈಲುಗಳ ಮೂಲಕ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ನಗರವನ್ನು ತೊರೆದಿದ್ದಾರೆ. ಆದರೆ, ಶನಿವಾರ ಗುವಾಹಟಿಗೆ ಯಾವುದೇ ರೈಲು ಇರಲಿಲ್ಲ. ನಿಲ್ದಾಣದವರೆಗೆ ಬಂದ ಜನ, ವಿಶೇಷ ರೈಲಿಗಾಗಿ ಕಾದರು. ಫ‌ಲ ಕಾಣದ್ದರಿಂದ ಪರ್ಯಾಯ ಮಾರ್ಗಗಳ ಮೂಲಕ ತವರು ಸೇರಿದ್ದಾರೆ. ಈ ರೀತಿ ತೆರಳಿದವರ ಸಂಖ್ಯೆ 300ಕ್ಕಿಂತ ಕಡಿಮೆ. ಇನ್ನು ಇಡೀ ದಿನ ಗುವಾಹಟಿಗೆ ಕಾಯ್ದಿರಿಸಿದ ಟಿಕೆಟ್‌ಗಳ ಸಂಖ್ಯೆ 22 ಮಾತ್ರ ಎಂದು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಹಾಗಾಗಿ, ಈಶಾನ್ಯ ರಾಜ್ಯಗಳ ವಲಸೆಗೆ ಬಹುತೇಕ ಬ್ರೇಕ್‌ ಬಿದ್ದಂತಾಗಿದೆ.

        ಆದರೆ, ಬೆಳಿಗ್ಗೆ ವದಂತಿಯ ಭೀತಿ ಹಿನ್ನೆಲೆಯಲ್ಲಿ ನೂರಾರು ಮಂದಿ ತವರಿಗೆ ತೆರಳಲು ಆಗಮಿಸಿದ್ದರು. ಯಾವುದೇ ಕಾರಣಕ್ಕೂ ವಿಶೇಷ ರೈಲು ಬಿಡುವುದಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌. ಮುನಿಯಪ್ಪ ಅವರಿಗೆ ಸ್ಪಷ್ಟಪಡಿಸಿದರು. ನಂತರ ಮನವೊಲಿಸುವ ಪ್ರಯತ್ನವನ್ನೂ ನಡೆಸಿದರು. ಆದರೆ, ಪಟ್ಟುಹಿಡಿದ ಅವರು, ವಿಶೇಷ ರೈಲಿಗಾಗಿ ಒತ್ತಾಯಿಸಿ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

        ಈ ಮಧ್ಯೆ ನಗರದಲ್ಲಿರುವ ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆಸುವ ವದಂತಿಯನ್ನು ಒಳಗೊಂಡ ಬಲ್ಕ್ ಎಸ್‌ಎಂಎಸ್‌ಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಹಾಗೂ ಆ ಭಾಗದ ಜನರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ರುಕುಮ್‌ ಪಚಾವ್‌ ಅವರು, 'ರಾಜ್ಯದಲ್ಲಿ ಈಶಾನ್ಯ ರಾಜ್ಯಗಳ ಜನರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಆಯಾ ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

        ಇನ್ನು ನಗರಕ್ಕೆ ಆಗಮಿಸಿದ ಆರು ಕ್ಷಿಪ್ರ ಕಾರ್ಯಪಡೆಗಳು ನಗರದಲ್ಲಿ ಈಶಾನ್ಯ ರಾಜ್ಯಗಳ ನಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು. ಶುಕ್ರವಾರ ಸಂಜೆ ಕೂಡ ಅಸ್ಸಾಂ ಸಚಿವದ್ವಯರು ತಮ್ಮ ಭಾಗದ ಜನರಿಗೆ ಮನವೊಲಿಕೆ ಮಾತುಗಳನ್ನಾಡಿದ್ದು ಜನರಲ್ಲಿ ಭದ್ರತೆ ಭರವಸೆ ಮೂಡಿತ್ತು. ಅಲ್ಲದೇ, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ನಿಗಾ ವಹಿಸಿದ್ದು ಫ‌ಲ ನೀಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಗುಳೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ, ಸಿಟಿ ರೈಲು ನಿಲ್ದಾಣ ಯಥಾಸ್ಥಿತಿಗೆ ಮರಳಿತ್ತು.

        ಈ ನಡುವೆ ಅರುಣಾಚಲ ಪ್ರದೇಶ ಸಂಸದ ಸಂಜಯ್‌ ತಾಕಂ ಮತ್ತು ನವದೆಹಲಿಯ ಅರುಣಾಚಲ ಪ್ರದೇಶ ಭವನದ ಸ್ಥಾನಿಕ ಆಯುಕ್ತ ಲೇಖಾ ಮಚ್‌ ಅವರು ಶನಿವಾರ ನಗರಕ್ಕೆ ಆಗಮಿಸಿ ಗೃಹ ಸಚಿವ ಆರ್‌. ಅಶೋಕ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಜತೆಗೆ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.

        ಸಿಟಿ ರೈಲು ನಿಲ್ದಾಣ

        ಬೆಂಗಳೂರು: ಯಥಾಸ್ಥಿತಿಗೆ ಮರಳಿದ ಸಿಟಿ ರೈಲು ನಿಲ್ದಾಣ. ನೂಕುನುಗ್ಗಲು, ಗೊಂದಲಗಳು ಮಾಯ. ನಂತರ ಗೂಡು ಸೇರಿದ ಈಶಾನ್ಯ ರಾಜ್ಯಗಳ ಹಕ್ಕಿಗಳು. ಅಳಿದುಳಿದವರಿಗೆ ಸಿಗಲಿಲ್ಲ ಗುವಾಹಟಿ ರೈಲು ಹತ್ತುವ ಭಾಗ್ಯ...

        -ಇವು ಕಳೆದ ಮೂರು ದಿನಗಳಿಂದ ಗಿಜಗುಡುತ್ತಿದ್ದ ಸಿಟಿ ರೈಲು ನಿಲ್ದಾಣದಲ್ಲಿ ಕಂಡುಬಂದ ದೃಶ್ಯಗಳು.

        ಶನಿವಾರ ಸಿಟಿ ರೈಲು ನಿಲ್ದಾಣದ ಚಿತ್ರಣವೇ ಬದಲಾಗಿತ್ತು. ತಳ್ಳಾಟ, ಅರಚಾಟ, ಕಣ್ಣು ಹಾಯಿಸಿದೆಡೆ ಕಂಡುಬರುತ್ತಿದ್ದ ಈಶಾನ್ಯ ರಾಜ್ಯಗಳ ಆತಂಕಭರಿತ ಮುಖಗಳು ಕಾಣಿಸಲಿಲ್ಲ. ಬದಲಾಗಿ ಎಂದಿನಂತೆ ನಾನಾಭಾಗಗಳಿಂದ ಬಂದಿಳಿಯುವ ಪ್ರಯಾಣಿಕರು ಕಂಡರು.

        ಅಲ್ಲೊಂದು ಇಲ್ಲೊಂದು ಬೆರಳೆಣಿಕೆಯಷ್ಟು ನಗರವನ್ನು ತೊರೆಯುತ್ತಿರುವ ಗುಂಪುಗಳು ಮಾತ್ರ ಕಾಣಿಸುತ್ತಿದ್ದವು. ಹಾಗಾಗಿ, ರೈಲು ನಿಲ್ದಾಣ ಪ್ರವಾಹ ಬಂದ ನಂತರದ ನೀರವಮೌನದಂತೆ ಭಾಸವಾಯಿತು. ಆದರೆ, ನಿಲ್ದಾಣದ ಆವರಣದಲ್ಲಿ ಎಂದಿನಂತೆ ಕೂಲಿಗಳ ಅಬ್ಬರ, ವೀಕೆಂಡ್‌ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಗಮನ-ನಿರ್ಗಮನಗಳು ಮಾತ್ರ ಸಾಮಾನ್ಯವಾಗಿದ್ದವು.

        ಆಗಾಗ್ಗೆ ವಿಚಾರಣಾ ಕೊಠಡಿಯಲ್ಲಿ ಕೆಲವರು ಗುವಾಹಟಿ ರೈಲಿನ ಸಮಯ ಕೇಳಿ, ನಿರಾಸೆಯಿಂದ ಹಿಂತಿರುಗುತ್ತಿದ್ದರು. ಮೂರು ದಿನಗಳಿಂದಿದ್ದ ಗುವಾಹಟಿಗೆ ತೆರಳುವ ವಿಶೇಷ ಅಥವಾ ದೈನಿಕ ರೈಲೂ ಇರಲಿಲ್ಲ. ಆದರೆ, ರಾತ್ರಿ ಹೊತ್ತಿಗೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬಹುದು ಎಂಬ ಆಶಾಭಾವನೆಯಿಂದ ಹೊರವಲಯದಲ್ಲಿ ಗಂಟುಮೂಟೆಗಳನ್ನು ಮುಂದಿಟ್ಟು ಠಿಕಾಣಿ ಹೂಡುತ್ತಿದ್ದರು.

        30 ಸಾವಿರ ಜನ ಪಯಣ

        ವದಂತಿ ವ್ಯಾಪಕವಾಗಿ ಹಬ್ಬಿದ ದಿನದಿಂದ ಅಂದರೆ ಆಗಸ್ಟ್‌ 15ರಿಂದ 17ರವರೆಗೆ ಸುಮಾರು 30 ಸಾವಿರ ಈಶಾನ್ಯ ರಾಜ್ಯಗಳ ಜನ ಜೀವಭಯದಿಂದ ನಗರವನ್ನು ತೊರೆದಿದ್ದಾರೆ. ಆದಾಗ್ಯೂ ನಗರ ತೊರೆಯುತ್ತಿರುವವರು ಗುಂಪು ಗುಂಪಾಗಿ ಸಾಗುತ್ತಲೇ ಇದ್ದರು. ಇದರ ಪ್ರಮಾಣ ಮಾತ್ರ ಕಡಿಮೆ ಇತ್ತು. ಹಾಗಾಗಿ, ನೂಕುನುಗ್ಗಲಿಗೆ ಅವಕಾಶ ಇರಲಿಲ್ಲ. ಈ ಮಧ್ಯೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌. ಮುನಿಯಪ್ಪ ಅವರನ್ನೂ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಗುಳೆ ಹೊರಟವರು ನಿಲ್ದಾಣದ ಜಾಗಬಿಟ್ಟು ಕದಲಲಿಲ್ಲ.

        ಈ ಸಂದರ್ಭದಲ್ಲಿ 'ಉದಯವಾಣಿ'ಯೊಂದಿಗೆ ಮಾತನಾಡಿದ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು, 'ಬೆಂಗಳೂರು-ಗುವಾಹಟಿ ರೈಲು ಪ್ರತಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಮಾತ್ರ. ಹಾಗಾಗಿ, ಶನಿವಾರ ಗುವಾಹಟಿಗೆ ರೈಲು ಸೇವೆ ಇಲ್ಲ. ಹಾಗೊಂದು ವೇಳೆ ಹೋಗಲೇಬೇಕೆಂದರೆ ಚೆನ್ನೈ, ವಿಜಯವಾಡ, ವಿಶಾಖಪಟ್ಟಣ ಅಥವಾ ಹೌರಾಕ್ಕೆ ತೆರಳಿ, ಅಲ್ಲಿಂದ ಅಸ್ಸಾಂಗೆ ಹೋಗುವ ರೈಲುಗಳನ್ನು ಹಿಡಿಯಬೇಕು. ಆದರೆ, ಅಲ್ಲೂ ಈಗ ಈ ವದಂತಿ ಹಬ್ಬಿದ್ದರಿಂದ ಬೆಂಗಳೂರಿನಿಂದ ತೆರಳುವವರು ಅಲ್ಲೂ ಕಸರತ್ತು ನಡೆಸಬೇಕಾಗುತ್ತದೆ ಎಂದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus