Udayavani | Aug 19, 2012
ಬೆಂಗಳೂರು: 'ತಂದೆ ಮೇಲಿನ ಸೇಡಿಗೆ ಬಲಿಯಾದ ಬಾಲಕಿ ಕವಿತಾ ಸಾವಿನಂತಹ ಅಮಾನವೀಯ ಪ್ರಕರಣಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೈತಿಕ ನಾಯಕತ್ವ ಹುಟ್ಟುಹಾಕುವ ತುರ್ತಿದೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಮತ್ತು 'ಜಗಜ್ಯೋತಿ ಶ್ರೀ ಬಸವೇಶ್ವರ ಕಾಯಕಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಂದೆಯ ಮೇಲಿನ ಸೇಡಿನ ಕಿಚ್ಚಿಗೆ ಕವಿತಾ ಸಾವನ್ನಪ್ಪಿದ ಸುದ್ದಿ ಆಘಾತ ಉಂಟುಮಾಡಿದೆ. ಇಂತಹ ಘಟನೆಗಳಿಂದ ವಿಕಾರವಾಗುತ್ತಿರುವ ಸಮಾಜದ ಪರಿವರ್ತನೆಗೆ ನೈತಿಕ ನಾಯಕತ್ವದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, ಕೆಲ ನಾಯಕರು ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಕದಡುವ ಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಪ್ರಶಸ್ತಿ ಪುರಸ್ಕೃತರು
ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್, ಸರೋಜಿನಿ ಭಾರದ್ವಾಜ್, ಸಿ.ಬಿ. ಚೆನ್ನಬೋರಯ್ಯ, ಮಲ್ಲಿಕಾರ್ಜುನ ದೋತರಬಂಡಿ, ಎಂ.ಎ. ಮಂಜುಳಾ, ಟಿ.ಆರ್. ಅನಸೂಯ, ಮುರುಗೇಶ್, ಎಸ್. ರಂಗಸ್ವಾಮಿ, ಎನ್. ಮೃತ್ಯುಂಜಯ, ಎನ್.ವಿ. ಸ್ವಾಮಿ, ಅನಿತಾ ಸಿ. ಪಾಟೀಲ್, ಡಾ.ಆಂಜಿನಪ್ಪ, ಎಂ.ಎನ್. ನಟರಾಜ್, ಟಿ. ನೀಲಪ್ಪ, ರೇವಣಸಿದ್ಧಪ್ಪ ಎಸ್. ಹಲಗೇರಿ, ಸಿ. ಜಯಲಕ್ಷ್ಮೀ, ಕೆ.ಸಿ. ವಾಗೀಶ್, ವೈ.ಎಸ್. ಸಿದ್ದರಾಮೇಗೌಡ, ಲಕ್ಷ್ಮಣ ವಿ. ಪಟಗಾರ, ಸಿ.ಎ. ಪುರುಷೋತ್ತಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
-ರಾಜಕೀಯದಲ್ಲಿ ದುರ್ಯೋಧನರೇ ಹೆಚ್ಚು-
'ಪ್ರಸ್ತುತ ರಾಜಕೀಯದಲ್ಲಿ ದುರ್ಯೋಧನರೇ ತುಂಬಿದ್ದು, ಅವರ ನಡುವೆ ರಾಜಕೀಯ ಧರ್ಮರಾಯರು ನೇಪಥ್ಯಕ್ಕೆ ಸರಿದಿದ್ದಾರೆ' ಎಂದು ಸಚಿವ ಸುರೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.
ರಾಜಕೀಯ ದೊಂಬರಾಟ ನೋಡಿ ಜನ ಬೇಸತ್ತಿದ್ದಾರೆ. ದುರ್ಯೋಧನರಂಥ ರಾಜಕಾರಣಿಗಳ ನಡುವೆ ಧರ್ಮರಾಯನಂತಿರುವ ರಾಜಕಾರಣಿಗಳ ಬಗ್ಗೆಯೂ ಜನ ವಿಶ್ವಾಸ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.