ಇಸ್ಲಾಮಾಬಾದ್: ಈದ್ ರಜಾ ದಿನಗಳಲ್ಲಿ ಭೀತಿವಾದಿ ದಾಳಿಗಳ ಸಾಧ್ಯತೆ ಇದೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ, ಲಾಹೋರ್ ಮತ್ತು ಕರಾಚಿ ಸಹಿತ ಪಾಕಿಸ್ಥಾನದ ನಾಲ್ಕು ಪ್ರಮುಖ ನಗರಗಳಲ್ಲಿ ಸೆಲ್ಯುಲರ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಮೊಬೈಲ್ ಫೋನ್‌ಗಳ ಮೂಲಕ ಬಾಂಬ್ ಸ್ಫೋಟಿಸುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.ಒಳಾಡಳಿತ ಖಾತೆಯ ನಿರ್ದೇಶದ ಮೇರೆಗೆ ರವಿವಾರ ರಾತ್ರಿ 8ರಿಂದ ಸೆಲ್ಯುಲರ್ ಆಪರೇಟರ್‌ಗಳು ಎಲ್ಲ ಸೇವೆಗಳನ್ನು ಅಮಾನತುಗೊಳಿಸಿದ್ದಾರೆ. ಹೀಗಾಗಿ ಲಾಹೋರ್, ಮುಲ್ತಾನ್, ಕರಾಚಿ ಮತ್ತು ಕ್ವೆಟ್ಟಾದ ಲಕ್ಷಗಟ್ಟಲೆ ಜನರಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸುವುದು ಸಾಧ್ಯವಾಗುತ್ತಿಲ್ಲ.ನಗರಗಳ ಕೆಲವು ಭಾಗಗಳಲ್ಲಿ ಸೋಮವಾರ ಬೆಳಗ್ಗೆ ಸ್ವಲ್ಪ ಹೊತ್ತು ಸೆಲ್ಯುಲರ್ ಸೇವೆಗಳನ್ನು ಮರಳಿಸಲಾಗಿತ್ತು. ಈದ್ ಉಲ್ ಫಿತ್ರ ನಿಮಿತ್ತ ದೇಶಾದ್ಯಂತ ವಿಶೇಷ ಪ್ರಾರ್ಥನೆಗಳು ನಡೆದುದರಿಂದ ಬೆಳಗ್ಗೆ 7ರಿಂದ 10ರ ನಡುವೆ ಮತ್ತೆ ಸೆಲ್ಯುಲರ್ ಸೇವೆಗಳನ್ನು ಅಮಾನತುಗೊಳಿಸಲಾಯಿತು.ನಗರದ ಕೆಲವು ಭಾಗಗಳಲ್ಲಿ ಸುಮಾರು 10 ಗಂಟೆ ವೇಳೆಗೆ ಸೇವೆಗಳನ್ನು ಮತ್ತೆ ನೀಡಲಾಯಿತು ಎಂದು ಲಾಹೋರ್ ಮತ್ತು ಕರಾಚಿ ನಗರಗಳ ನಿವಾಸಿಗಳು ತಿಳಿಸಿದ್ದಾರೆ.ಸರಕಾರದ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸ್ನೇಹಿತರಿಗೆ ಮತ್ತು ಸಂಬಂಧಿಗಳಿಗೆ ಈದ್ ಸಂದರ್ಭದಲ್ಲಿ ಶುಭಾಶಯ ಸಲ್ಲಿಸಲು ಸಾಧ್ಯವಾಗಲಿಲ್ಲವೆಂದು ಹಲವರು ದೂರಿದ್ದಾರೆ.ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಅವರನ್ನು ಮತ್ತು ಮೊಬೈಲ್ ಸೇವೆಗಳ ಅಮಾನತನ್ನು ಟೀಕಿಸಲು ಹಲವು ಪಾಕಿಸ್ಥಾನಿಗಳು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡರು. ಯಾವುದೇ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಅಥವಾ ಸಂರಕ್ಷಣಾ ಸೇವೆಗಳನ್ನು ಬಳಸಲು ಜನರಿಗೆ ಸಾಧ್ಯವಾಗುವುದಿಲ್ಲವೆಂದು ಅವರು ಆಕ್ಷೇಪಿಸಿದರು.ಮೊಬೈಲ್ ಫೋನ್‌ಗಳನ್ನು ಬಳಸಿ ಬಾಂಬ್ ಸ್ಫೋಟಿಸುವುದನ್ನು ತಡೆಯಲು ನಾವು ಈ ಕ್ರಮ ಕೈಗೊಂಡಿದ್ದೇವೆ. ಜನರ ಜೀವಗಳನ್ನು ಉಳಿಸುವುದು ಸರಕಾರದ ಉದ್ದೇಶವಾಗಿದೆ. ಮೊಬೈಲ್ ಸೇವೆಗಳ ಕೊರತೆಯಿಂದ ಜನರಿಗೆ ಅನಾನುಕೂಲವಾಗಿದೆ. ಸಹಕರಿಸುವಂತೆ ಜನರನ್ನು ತಾನು ಕೋರುತ್ತೇನೆ ಎಂದು ಸಚಿವ ಮಲಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.