Friday, May 24, 2013
Last Updated: 12:15:42 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಾರಂಪರಿಕ ಪೂರ್ವರಂಗ ಸಭಾಲಕ್ಷಣ ಸಹಿತ
    • ಶೋಭಿಸಿತು ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ
    • ಸಮಯಾವಕಾಶವನ್ನು ಗಮನಿಸಿ ಸಂಕ್ಷಿಪ್ತ ವಾಗಿ ಪಾರಂಪರಿಕ ಪೂರ್ವರಂಗವನ್ನು ಪ್ರದರ್ಶಿಸಲಾಗಿತ್ತು.

      • ನಿತ್ಯಾನಂದ ಕಾರಂತ ಪೊಳಲಿ | Aug 31, 2012

        ದಿನಾಂಕ 1-8-2012ರಂದು ಮಂಗಳೂರಿನ ಡಾನ್‌ಬಾಸ್ಕೋ ಹಾಲ್‌ನಲ್ಲಿ ಜರಗಿದ ಯಕ್ಷಗಾನ ಪ್ರದರ್ಶನದ ಪಕ್ಷಿನೋಟ ಇಲ್ಲಿದೆ.

        ಖ್ಯಾತ ಹರಿದಾಸ, ಅಗ್ರಮಾನ್ಯ ಅರ್ಥ ಧಾರಿ, ಯಕ್ಷಗಾನದ ವಿಸ್ಮಯ ದಿ| ಮಲ್ಪೆ ಶಂಕರನಾರಾಯಣ ಸಾಮಗ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ, ನಿಡ್ಲೆ ಗೋವಿಂದ ಭಟ್ಟರ ವ್ಯವಸ್ಥಾಪಕತ್ವದ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಈ ಯಕ್ಷಗಾನ ಪ್ರದರ್ಶನವನ್ನು ನೆರವೇರಿಸಿತ್ತು. ಈ ಸಂದರ್ಭದಲ್ಲಿ ಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರಿಗೆ ಸಾಮಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

        ಇಂದು ಯಕ್ಷಗಾನ ರಂಗ ಬದಲಾಗಿದೆ. ಪ್ರೇಕ್ಷಕರ ಅಭಿರುಚಿ, ಮಾತುಗಾರರ ಪ್ರವೇಶ, ಸಮಯಾವಕಾಶದ ಅಭಾವ, ಅನುಭವದ ಕೊರತೆ, ಪ್ರಭಾವಗಳಿಂದ ಯಕ್ಷಗಾನದ ಹಲವು ಸಂಪ್ರದಾಯಗಳು, ಪರಂಪರೆಗಳು ಕಣ್ಮರೆ ಯಾಗಿವೆ. ಈ ನಿಟ್ಟಿನಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರರ ಪ್ರಯತ್ನದಿಂದ ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನದ ಸೊಬಗನ್ನು ಪ್ರೇಕ್ಷಕರಿಗೆ ತಿಳಿಯಪಡಿಸುವ ನಿಟ್ಟಿ ನಲ್ಲಿ ಈ ಕಾರ್ಯಕ್ರಮವನ್ನು ಪ್ರತಿಷ್ಠಾನ ಹಮ್ಮಿಕೊಂಡಿತ್ತು.

        ಸಮಯಾವಕಾಶವನ್ನು ಗಮನಿಸಿ ಸಂಕ್ಷಿಪ್ತ ವಾಗಿ ಪಾರಂಪರಿಕ ಪೂರ್ವರಂಗವನ್ನು ಪ್ರದರ್ಶಿಸಲಾಗಿತ್ತು. ತ್ವರಿತ ತ್ರಿವುಡೆ ತಾಳದಲ್ಲಿ ಗಜ ಮುಖದವಗೆ ಗಣಪಗೆ ಎಂಬ ಹಾಡಿ ನೊಂದಿಗೆ ಚೌಕಿ ಪೂಜೆ ಪ್ರಾರಂಭ, ಪ್ರಸಾದ ಸ್ವೀಕರಿಸಿ ಸಂಪ್ರದಾಯದಂತೆ ರಂಗಕ್ಕೆ ಭಾಗವತರ ಆಗಮನವಾಗಿ ಮುದದಿಂದ ನಿನ್ನ ಕೊಂಡಾಡು ವೆನು ಎಂಬ ಗಣಪತಿ ಪ್ರಾರ್ಥನೆಯನ್ನು ನಾಟಿ ರಾಗದಲ್ಲಿ ಭಾಗವತರು ಹಾಡಿದರು. ಕೋಡಂಗಿ ವೇಷಗಳ ಕುಣಿತ ಪ್ರಾರಂಭವಾಯಿತು.

        ಕೋಡಂಗಿ ವೇಷವನ್ನು ವಹಿಸಿದವರು ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಮವ್ವಾರು ಬಾಲಕೃಷ್ಣ ಮಣಿಯಾಣಿ. ಸುಬ್ರಾಯ ಹೊಳ್ಳರು ಪ್ರಸಿದ್ಧ ವೇಷಧಾರಿ. ಹೀಗಿದ್ದರೂ ಕೋಡಂಗಿ ವೇಷ ಧರಿಸಿ ಬಂದು ಬೆರಗನ್ನು ಹುಟ್ಟಿಸಿದರು, ಅವರೊಬ್ಬ ನಿಜವಾದ ಕಲಾವಿದನೆಂದು ಬಹು ಮಂದಿ ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾ ಸಿದರು.

         ಆ ಬಳಿಕ ಭಾಗವತರು ಸಂಪ್ರದಾಯದಂತೆ ಶರಣು ತಿರುವಗ್ರ ಶಾಲಿವಾಹಿನಿ ಪದ್ಯವನ್ನು ಹಾಡಿದರು. ರಾಮಭದ್ರ ಗೋವಿಂದಾ...ಹರೇ ರಮಣ ಗೋವಿಂದಾ ಪದ್ಯಕ್ಕೆ ಬಾಲಗೋಪಾಲರ ಪ್ರವೇಶ. ಈ ಪಾತ್ರ ನಿರ್ವಹಿಸಿದವರು ನವೀನ ಶೆಟ್ಟಿ ಮತ್ತು ಸತೀಶ ಗೌಡ.

        ಮುಂದೆ ರಂಗದಲ್ಲಿ ಗಣಪತಿ ದೇವರ ಪೂಜೆ. ಮೇಳದಲ್ಲಿ ಕಿರೀಟ ಅಥವಾ ದೇವಸ್ಥಾನ ದಿಂದ ಲಭ್ಯವಾದ ದೇವರ ಮೂರ್ತಿಯನ್ನು ರಂಗಕ್ಕೆ ತರುತ್ತಾರೆ. ಅರ್ಚಕರೇ ರಂಗಕ್ಕೆ ದೇವರನ್ನು ತರುವ ಕ್ರಮವಿದೆ. ಈ ದಿನ ಕಿರೀಟವನ್ನು ಮಾತ್ರ ಇರಿಸಲಾಗಿತ್ತು.ಒಬ್ಬ ಅರ್ಚಕನ ವೇಷ ತೊಟ್ಟುಕೊಂಡು ಕಿರೀಟದ ಬಳಿ ನಿಲ್ಲುತ್ತಿದ್ದರೆ ಇನ್ನೂ ಹೆಚ್ಚಿನ ಪಾರಂಪರ್ಯ ಸೊಬಗು ಉಂಟಾಗಬಹುದಿತ್ತು. ಪರದೆ ತೆಗೆದೊಡನೆ ಗಜಮುಖದವಗೆ... ಎಂಬ ಹಾಡನ್ನು ಭಾಗವತರು ಹಾಡಿದ್ದಾರೆ.

        ಗಜಮುಖ ನಾನಿನ್ನ ಪಾದವ ನೆನೆವೆ ಎಂಬ ಅಷ್ಟ ತಾಳದ ಪದ ನಿತ್ಯ ವೇಷಗಳಿಗೆ ನೃತ್ಯ ಅಭ್ಯಾಸವಾಗಲು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಹೇ ಗೋಪಾಲಕ ಹೇ ಕೃಪಾಜಲ ನಿಧೇ ಎಂಬ ಶ್ಲೋಕಕ್ಕೆ ಅಭಿನಯ ಮುದ್ರೆಗಳನ್ನು ಕಾಣಿಸಿದ್ದು ತಕ್ಕಮಟ್ಟಿಗೆ ಸರಿಯಾಗಿದೆ.

        ಷಣ್ಮುಖ ಸುಬ್ರಾಯ ವೇಷ

        ಈ ವೇಷ ಸುಮಾರು 50 ವರ್ಷಗಳ ಹಿಂದೆಯೇ ಕಣ್ಮರೆಯಾಗಿದೆ. ಹಾಗಾಗಿ ಅಪರೂಪದಲ್ಲಿ ಕಾಣಸಿಕ್ಕಿದ ಈ ವೇಷದ ಸೊಬಗನ್ನು ಶ್ರೋತೃಗಳು ಆಸ್ವಾದಿಸಿದರು. ಪರದೆಯ ಹಿಂದೆ ಮೊಣಕಾಲಿನಿಂದ ಮೇಲೆ ಎದೆಯವರೆಗೆ ಪರದೆ ಹಿಡಿದು ನರ್ತಿಸುವು ದರಿಂದ ಮುಖದ ಭಾವ, ಕಾಲಿನ ಹೆಜ್ಜೆ ಸ್ಪಷ್ಟವಾಗಿ ಕಾಣುತ್ತಿತ್ತು. ಆರು ಚರಣಗಳ ಪದ್ಯ, ಭಾವಾಭಿನಯದಿಂದ ಏಕತಾಳದಿಂದ ಆರಂಭ ವಾಗಿ ತ್ವರಿತ ಅಷ್ಟ ತಾಳದ ವರೆಗಿನ ಪದ್ಯಗಳು ವೇಷದ ನೃತ್ಯಾಭಿನಯಕ್ಕೆ ಸಹಕಾರಿಯಾಯಿತು. ಈ ವೇಷ ನಿರ್ವಹಿಸಿದ ವಸಂತ ಗೌಡ ಕಾಯರ್ತಡ್ಕ ಈ ಪಾತ್ರವನ್ನು ಮನೋಜ್ಞವಾಗಿ ಚಿತ್ರಿಸಿರುತ್ತಾರೆ.

        ಅರ್ಧನಾರೀಶ್ವರ

        ಈ ವೇಷವೂ ಸುಮಾರು 60 ವರ್ಷಗಳ ಹಿಂದೆಯೇ ಕಣ್ಮರೆಯಾಗಿದೆ. ಇದು ಈಶ್ವರ ಪಾರ್ವತಿಯರ ಕಲ್ಪನೆ. ಪ್ರಸಿದ್ಧ ಸ್ತ್ರೀ ವೇಷಧಾರಿ ಅಂಬಾ ಪ್ರಸಾದ ಪಾತಾಳರು ಈ ವೇಷವನ್ನು ನಿರ್ವಹಿಸಿ ದರು. ಅಭಿನಯ, ನೃತ್ಯ ಅಂಬಾ ಪ್ರಸಾದರದ್ದು ಬಲು ಸೊಗಸಾಗಿತ್ತು.

        ಮುಖ್ಯ ಸ್ತ್ರೀವೇಷ

        ಈ ಪಾತ್ರಗಳನ್ನು ನಿರ್ವಹಿಸಿದವರು ಶರತ್‌ ಶೆಟ್ಟಿ ಮತ್ತು ಪುತ್ತೂರು ಗಂಗಾಧರ. ಸ್ತ್ರೀ ಸಹಜ ಅಭಿನಯವನ್ನು ಕಾಣಿಸಿ ದ್ದಾರೆ. ಬಾಲಕೃಷ್ಣ ಮಣಿಯಾಣಿ ಹೊಗಳಿಕೆ ಹಾಸ್ಯದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ರುತ್ತಾರೆ. ಕುತ್ತಿಕಾಲು ಹೆಜ್ಜೆಯ ಬಾಯಿ ತಾಳ, ಜಾರುಕುಪ್ಪೆ ನಾಟ್ಯಕ್ಕೆ ಬಾಯಿ ತಾಳ, ಸಲಾಂ ಹೆಜ್ಜೆಯ ಬಾಯಿತಾಳಕ್ಕೆ ಸಮರ್ಪಕವಾಗಿ ಸ್ತ್ರೀ ಪಾತ್ರಧಾರಿಗಳು ನರ್ತಿಸಿ ಪ್ರೇಕ್ಷಕರಿಗೆ ಸಂತೋಷವನ್ನುಂಟು ಮಾಡಿದರು.

        ಹನುಮಂತ

        ಅಗ್ರಮಾನ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರು ಹನುಮಂತನ ತೆರೆ ಕುಣಿತವನ್ನು ಅಚ್ಚುಕಟ್ಟಾಗಿ, ಮನಮೋಹಕವಾಗಿ ನಿರ್ವಹಿಸಿರುತ್ತಾರೆ. ಪ್ರಸಿದ್ಧ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಪ್ರಸಾದ ಬಲಿಪರು ದ್ವಂದ್ವ ಹಾಡುಗಾರಿಕೆಯೊಂದಿಗೆ ಈ ಭಾಗದ ಪದ್ಯಗಳನ್ನು ರಸವತ್ತಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

        ಭಾಗವತರು ಮತ್ತು ವೇಷಧಾರಿಗಳು ಮುಂದಾಗಿ ಈ ಬಗ್ಗೆ ಸಮಾಲೋಚಿಸಿ ಒಂದು ಖಚಿತ ನಿರ್ಧಾರಕ್ಕೆ ಬಂದು ಕಾರ್ಯಕ್ರಮ ವನ್ನು ನೀಡುತ್ತಿದ್ದರೆ ಇನ್ನೂ ಹೆಚ್ಚು ಯಶಸ್ವಿಗೊಳಿಸ ಬಹುದಿತ್ತು. ಯುವ ಕಲಾವಿದರು ಗಿರ್ಕಿ ಹೊಡೆಯುವ ಕಡೆಗೇ ಲಕ್ಷ್ಯ ಹರಿಸುತ್ತಿದ್ದಾರೆ ಎಂಬ ಅಪವಾದವೂ ಇದೆ. ಅಂತೂ ಕಲ್ಕೂರ ಪ್ರತಿಷ್ಠಾನದ ಪ್ರಯತ್ನ ಫ‌ಲಪ್ರದವಾಗಿದೆ. ಪ್ರೇಕ್ಷಕರೆಲ್ಲರಿಗೂ ತೃಪ್ತಿ ಉಂಟಾಗಿದೆ.

        ಸಭಾ ಕಾರ್ಯಕ್ರಮದ ಅನಂತರ ಹಿಡಿಂಬಾ ವಿವಾಹವೆಂಬ ಪ್ರಸಂಗ ಅನುಭವಿ ಕಲಾವಿದ ರಿಂದ ಅತ್ಯಂತ ಯಶಸ್ವಿಯಾಗಿ ಜರಗಿತು. ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಮತ್ತು ಪದ್ಮನಾಭ ಉಪಾಧ್ಯಾಯರು ಪ್ರಸಂಗ ಪೀಠಿಕೆ ಯಲ್ಲಿ ಚಂಡೆ ಜುಗಲ್‌ಬಂದಿಯ ಕೈಚಳಕವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಳಿದರು. ಇವರ ಪೀಠಿಕೆ ಸ್ತ್ರೀವೇಷ-ವಾದನಕ್ಕೆ ಸರಿಯಾಗಿ ನೇರೊಳು ಗಣಪತಿ ನಾಯಕರು ಮದ್ದಲೆಯನ್ನು ನುಡಿಸಿದರು. ಇದನ್ನು ಪದ್ಮನಾಭ ಶೆಟ್ಟಿ, ಕುಸುಮಾಧರ ವಹಿಸಿದ್ದರು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ಪ್ರಸಾದ ಬಲಿಪರ ದ್ವಂದ್ವ ಹಾಡುಗಾರಿಕೆಯೂ ಪ್ರದರ್ಶನಕ್ಕೆ ಮೆರುಗು ನೀಡಿತು.

        ಪಾರಂಪರಿಕ ತೆರೆಕುಣಿತ, ಪ್ರವೇಶ, ಸಭಾ ಕಲಾಸ್‌ನಿಂದ ಪ್ರಾರಂಭವಾದ ಪ್ರಸಂಗ ದಲ್ಲಿ ಹಿಡಿಂಬಾಸುರನ ಬಣ್ಣದ ವೇಷದ ರಂಗಪ್ರವೇಶ, ಹಿಡಿಂಬೆಯ ಹೆಣ್ಣು ಬಣ್ಣದ ಪ್ರವೇಶ ಪ್ರದರ್ಶನದ ಸೊಬಗನ್ನು ಹೆಚ್ಚಿಸಿತು. ಧರ್ಮರಾಯನಾಗಿ ಹಿರಿಯ ಅನುಭವಿ ವೇಷಧಾರಿ ಕುಂಬಳೆ ಶ್ರೀಧರ ರಾಯರು ಲಭ್ಯವಾದ ಚಿಕ್ಕ ಸಮಯದಲ್ಲಿ ಚೊಕ್ಕವಾಗಿ ಪಾತ್ರ ನಿರ್ವಹಿಸಿದರು. ಪ್ರಸಂಗದ ಮುಖ್ಯ  ಆಕರ್ಷಣೆ ಎನಿಸಿದ ಭೀಮನ ಪಾತ್ರವನ್ನು ನಿಡ್ಲೆ ಗೋವಿಂದ ಭಟ್ಟರು ವಹಿಸಿದ್ದರು. ಅರಳ ಗಣೇಶ್‌ ಅವರು ಸಭಾಕಲಾಸ್‌ ನೃತ್ಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು.

        ಕುಸುಮೋದರ ಕುಲಾಲ್‌, ಸತೀಶ್‌ ಗೌಡ ತಮ್ಮ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಹಿಡಿಂಬಾಸುರ ಪಾತ್ರ ನಿರ್ವಹಿಸಿದ ಶಿವಪ್ರಸಾದ್‌ ಭಟ್‌ ಪೆರುವಾಜೆ ಅಟ್ಟಹಾಸ, ತೆರೆಕುಣಿತ, ಮುಖಮಾರ್ಜನೆ, ಸ್ನಾನ, ಅಲಂಕಾರ, ಪೂಜೆ ಮೊದಲಾದ ಪಾರಂಪರಿಕ ಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುತ್ತಾರೆ. ಹಿಡಿಂಬೆ ಪಾತ್ರ ವಹಿಸಿದ ಹರಿನಾರಾಯಣ ಎಡನೀರು ಪಾರಂಪರಿಕ ಕ್ರಮಗಳನ್ನು ನಾಜೂಕಾಗಿ ನಿರೂಪಿಸಿದ್ದಾರೆ.

        ಮಾಯಾ ಹಿಡಿಂಬೆ ಪಾತ್ರ ವಹಿಸಿದ ಅಂಬಾಪ್ರಸಾದ ಪಾತಾಳ ತಮ್ಮ ಆಕರ್ಷಕ ನೃತ್ಯ, ವೇಷಭೂಷಣ, ಅಭಿನಯದಿಂದ ಪಾತ್ರವನ್ನು ಯಶಸ್ವಿಗೊಳಿಸಿರುತ್ತಾರೆ.

        ಮುಂದಿನ ಪ್ರಸಂಗ ಗರುಡ ಗರ್ವಭಂಗ. ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆ ಮನಮೋಹಕವಾಗಿತ್ತು. ವಯಸ್ಸು ಹೆಚ್ಚಾದಂತೆ ಅವರ ಕಂಠ ಇನ್ನಷ್ಟು ಮಾಧುರ್ಯವನ್ನು ಪಡೆದಂತೆ ಭಾಸವಾಗುತ್ತಿತ್ತು. ಅವರ ವೀರರಸದ ಪದ್ಯಕ್ಕೆ ನಿರ್ಬಲ ವೇಷಧಾರಿಯೂ ಹೊಂತಕಾರಿಯಾದಾನು.

        ಮೈಂದನಾಗಿ ಅಮ್ಮುಂಜೆ ಮೋಹನ ವೀರರಸದ ಪ್ರವಾಹವನ್ನೇ ಹರಿಸಿದರು. ದ್ವಿವಿಧನಾಗಿ ನವೀನ್‌ ಶೆಟ್ಟಿ ಮುಂಡಾಜೆ ಉತ್ತಮಜೊತೆಗಾರಿಕೆ ನೀಡುವಲ್ಲಿ ಯಶಸ್ವಿಯಾದರು. ಸಿಂಹಮುಖೀಯಾಗಿ ಈಶ್ವರ ಪ್ರಸಾದ ತಮ್ಮ ಪಾತ್ರಕ್ಕೆ ಯಾವುದೇ ನ್ಯೂನತೆ ಬಾರದಂತೆ ನೋಡಿಕೊಂಡರು. ಬಲರಾಮನಾಗಿ ಸುಪ್ರಸಿದ್ಧ ವೇಷಧಾರಿ ಗೋವಿಂದ ಭಟ್ಟರೇ ನಿರ್ವಹಿಸಿ ಉಳಿದ ಕಲಾವಿದರಿಗೆ ಉತ್ತೇಜನ ನೀಡಿರುತ್ತಾರೆ.

        ಗರುಡನಾಗಿ ಖ್ಯಾತ ಕಲಾವಿದ ಕಾಸರಗೋಡು ಸುಬ್ರಾಯ ಹೊಳ್ಳರು ಅತ್ಯುತ್ತಮವಾಗಿ ನಿರ್ವಹಿಸಿದರು. ಬಣ್ಣಗಾರಿಕೆಯೂ ಆಕರ್ಷಣೀಯವಾಗಿತ್ತು. ಸತ್ಯಭಾಮೆ, ರುಕ್ಮಿಣಿಯವರಿಗೆ ಹೆಚ್ಚಿನ ಅವಕಾಶವಿರಲಿಲ್ಲ.

        ಶ್ರೀಕೃಷ್ಣ ಒಡ್ಡೋಲಗ ಈ ಪ್ರಸಂಗದ ಜೀವಾಳ. ಕೃಷ್ಣ ವೇಷಧಾರಿ ವಸಂತ ಗೌಡರು ಹಿತಮಿತವಾಗಿ ಪಾತ್ರವನ್ನು ನಿರ್ವಹಿಸಿದರು. ಬಲಿಪರ ಆಕರ್ಷಕ ಹಾಡುಗಾರಿಕೆಯೂ ಇದಕ್ಕೆ ಪುಷ್ಟಿ ನೀಡಿತು.

        ವೀಳ್ಯ ಪಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಲಿಪರ ನಿರ್ದೇಶನದಲ್ಲಿ ಅಪರೂಪದ ಈ ದೃಶ್ಯ ಯಶಸ್ವಿಯಾಗಿ ಜರಗಿತು. ಕುತೂಹಲದಿಂದ ಹಲವಾರು ಪ್ರೇಕ್ಷಕರು ಕೊನೆಯ ಸ್ವಾರಸ್ಯಕರವಾದ ಈ ಕ್ರಮವನ್ನು ನೋಡಿ ಆನಂದಿಸಿದರು.

        ಕಲಾವಿದರೆಲ್ಲರೂ ನಿಷ್ಠೆಯಿಂದ, ಅತ್ಯುತ್ಸಾಹದಿಂದ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದರು. ನಿಡ್ಲೆ ಗೋವಿಂದ ಭಟ್ಟರ ನಿಡ್ಲೆ ಮಹಾಗಣಪತಿ ಯಕ್ಷಗಾನ ತಂಡದಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದೆಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಯಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus