Thursday, May 23, 2013
Last Updated: 2:34:00 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕೆಎಂಎಫ್ ನಲ್ಲಿ ಮಾರಾಮಾರಿ
    • Udayavani | Sep 11, 2012

      ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲಧಿ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿ ವಿವಾದ ಸ್ಪಷ್ಟವಾಗಿ ಬೀದಿಗೆ ಬಂದಿದ್ದು, ಹಾಲಿ ವ್ಯವಸ್ಥಾಪಕ ನಿರ್ದೇಶಕ ಪ್ರೇಮ್‌ನಾಥ್‌ ಹಾಗೂ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮು ಅವರ ಪರ-ವಿರೋಧ ಗುಂಪುಗಳು ಸೃಷ್ಟಿಯಾಗಿವೆ.

      ಮಂಗಳವಾರ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆ ಸಂದರ್ಭದಲ್ಲಿ ಹಾಲಿ ವ್ಯವಸ್ಥಾಪಕ ನಿರ್ದೇಶಕ ಪ್ರೇಮ್‌ನಾಥ್‌ ಮೇಲೆ ಗುಂಪೊಂದು ಹಲ್ಲೆ ನಡೆಸಿ ಎಳೆದಾಡಿದ ಘಟನೆಯೂ ನಡೆದು ಸಂಸ್ಥೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಯಿತು.

      ಈ ಗದ್ದಲ ಮಧ್ಯೆಯೇ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮು ಅವರನ್ನು ಸೇವೆಯಿಂದ ಅಮಾನತು ಮಾಡಿ ಹಾಲಿ ವ್ಯವಸ್ಥಾಪಕ ನಿರ್ದೇಶಕ ಪ್ರೇಮ್‌ನಾಥ್‌ ಅವರನ್ನು ಮುಂದುವರಿಸುವ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಈ ಸಭೆ ಕಾನೂನು ಬಾಹಿರ, ಇಲ್ಲಿ ಕೈಗೊಂಡ ನಿರ್ಣಯ ಸಿಂಧುವಲ್ಲ. ನಾನೇ ವ್ಯವಸ್ಥಾಪಕ ನಿರ್ದೇಶಕ. ಅದೇ ಸ್ಥಾನದಲ್ಲಿ ನಾನು ಮುಂದುವರಿಯುವೆ ಎಂದು ವೆಂಕಟರಾಮು ತಿಳಿಸಿದ್ದಾರೆ.

      ಕೆಎಂಎಫ್ ನಿರ್ದೇಶಕರಲ್ಲೂ ಪ್ರೇಮ್‌ನಾಥ್‌ ಹಾಗೂ ವೆಂಕಟರಾಮು ಪರ ಬಣಗಳಾಗಿದ್ದು ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಆಡಳಿತ ಮಂಡಳಿ ಸಭೆ ನಡೆಯುವ ವೇಳೆ ಆವರಣದಲ್ಲಿ ಜಮಾಯಿಸಿದ್ದ ಒಂದು ಗುಂಪು ಪ್ರೇಮ್‌ನಾಥ್‌ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದರೆ, ಮತ್ತೂಂದು ಗುಂಪು ವೆಂಕಟರಾಮು ಮುಂದುವರಿಯಬೇಕು ಎಂದು ಆಗ್ರಹಿಸಿತು. ಆಡಳಿತ ಮಂಡಳಿ ಸಭೆ ಪೊಲೀಸರ ಬಿಗಿ ಭದ್ರತೆ ನಡುವೆ ಸಭೆ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು.

      'ಆಡಳಿತ ಮಂಡಳಿ ಸಭೆ ರದ್ದು ಮಾಡುವ ಅಧಿಕಾರ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗಿಲ್ಲ. ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಆಡಳಿತ ಮಂಡಳಿ ತೀರ್ಮಾನವೇ ಅಂತಿಮ. ಹಿರಿಯ ನಿರ್ದೇಶಕ ರೇವಣ್ಣಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಸಭೆ ನಡೆದು ವೆಂಕಟರಾಮು ಅವರನ್ನು ಅಮಾನುತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಮುಗಿಸಿ ಹೊರ ಬಂದಾಗ ಬಮೂಲ್‌ ನಿರ್ದೇಶಕ ಲಿಂಗೇಶ್‌ ಅವರು ತಮ್ಮ ಮೇಲೆ ಹಲ್ಲೆಗೆ ಮುಂದಾದರು' ಎಂದು ಪ್ರೇಮ್‌ನಾಥ್‌ ಆರೋಪಿಸಿದ್ದಾರೆ.

      ಇದಕ್ಕೆ ಪ್ರತಿಯಾಗಿ 'ಪ್ರೇಮ್‌ನಾಥ್‌ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಆಗಿರುವುದೇ ಅಕ್ರಮ. ಹೀಗಿರುವಾಗ ಅವರು ಸಭೆ ಕರೆಯಲು ಬರುವುದಿಲ್ಲ. ಇಂದಿನ ಸಭೆಯಲ್ಲಿ ಕೈಗೊಂಡ ಯಾವುದೇ ನಿರ್ಣಯ ಸಿಂಧುವಲ್ಲ. ಈ ಬಗ್ಗೆ ನಾನೂ ಹೋರಾಟ ಮಾಡುತ್ತೇನೆ' ಎಂದು ವೆಂಕಟರಾಮು ಸವಾಲು ಎಸೆದಿದ್ದಾರೆ.

      ಪ್ರೇಮ್‌ನಾಥ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಲಿಂಗೇಶ್‌, ಹಲ್ಲೆ ನಡೆಸಿದ ಆರೋಪ ಸುಳ್ಳು. ರೈತರು ಹಾಲಿನ ಬಡವಾಡೆ ಪಾವತಿ, ಪಶು ಆಹಾರ ಪೂರೈಕೆ ಕುರಿತು ಬೇಡಿಕೆ ಇಟ್ಟಿದ್ದು ಅವರ ಮನವಿ ಕೇಳಿ ಬನ್ನಿ ಎಂದು ಕರೆಯಲು ಹೋದೆ. ಒತ್ತಾಯವನ್ನೂ ಮಾಡಿದೆ ಎಂದು ಹೇಳಿದ್ದಾರೆ.

      ಸಭೆಯೇ ಕಾನೂನು ಬಾಹಿರ : ರೇವಣ್ಣ

      ಮತ್ತೂಂದೆಡೆ ಆಡಳಿತ ಮಂಡಳಿ ಸಭೆ ಕುರಿದು ಕಿಡಿಕಾರಿರುವ ಕೆಎಂಎಫ್ ನಿರ್ದೇಶಕರೂ ಹಾಗೂ ಮಾಜಿ ಸಚಿವರೂ ಆಗಿರುವ ಎಚ್‌.ಡಿ.ರೇವಣ್ಣ, ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯೇ ಕಾನೂನು ಬಾಹಿರ. ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸಭೆ ನಡೆಸದಂತೆ ಪತ್ರ ನೀಡಿದ್ದರೂ ಯಾಕೆ ಸಭೆ ನಡೆಸಲಾಯಿತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸೆ. 5 ರಂದು ನಡೆದ ಆಡಳಿತ ಮಂಡಳಿ ಸಭೆಯ ನಿರ್ಣಯ 7 ದಿನಗಳಲ್ಲಿ ನಿರ್ದೇಶಕರಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಿತ್ತು. ಅದನ್ನು ಮಾಡಿಲ್ಲ, ಜತೆಗೆ ಆ ದಿನದ ಸಭೆಯಲ್ಲಿ ಪ್ರೇಮ್‌ನಾಥ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕದ ನಿರ್ಣಯವೇ ಆಗಲಿಲ್ಲ. ಪ್ರಾಮಾಣಿಕ ಐಎಎಸ್‌ ಅಧಿಕಾರಿಯನ್ನು ನೇಮಕ ಮಾಡುವ ನಿರ್ಣಯವಾಗಿದೆ. ಸಭೆ ಮುಗಿದ ನಂತರ ಸಂಜೆ 7 ಗಂಟೆಯಲ್ಲಿ ಯಾರೋ ಮೂರ್‍ನಾಲ್ಕು ಜನ ಸೇರಿ ನಿರ್ಣಯ ಮಾಡಿ ಪ್ರೇಮ್‌ನಾಥ್‌ ಎಂಡಿ ಎಂದು ಘೋಷಿಸಿದ್ದಾರೆ. ಇದು ಅಸಿಂಧು. ಪ್ರೇಮ್‌ನಾಥ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು ಕಾನೂನು ಬಾಹಿರ. ಅವರ ಮೇಲೆ ಮೊದಲು ಎಫ್ಐಆರ್‌ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಮಂಗಳವಾರದ ಸಭೆಯ ಹಿನ್ನೆಲೆ

      ಈ ಹಿಂದೆ ಪ್ರೇಮ್‌ನಾಥ್‌ ಅವರು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ಆಯ್ಕೆ ಪ್ರಶ್ನಿಸಿ ರಾಮಲಿಂಗೇಗೌಡ ಅವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದು ಅವರೇ ಅಧ್ಯಕ್ಷರಾಗಿದ್ದರು. ಆ ನಂತರ ಸೋಮಶೇಖರರೆಡ್ಡಿ ಅವರು ಕೆಎಂಎಫ್ ಅಧ್ಯಕ್ಷರಾದ ನಂತರ ವೆಂಕಟರಾಮು ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಪ್ರಭಾರಿಯಾಗಿ ನೇಮಿಸಲಾಗಿತ್ತು.

      ಇತ್ತೀಚೆಗೆ ಸೆ.5 ರಂದು ಆಡಳಿತ ಮಂಡಳಿ ಸಭೆ ನಡೆಯಿತು. ಆಗ, ಪ್ರೇಮ್‌ನಾಥ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು ಎಂದು ಅಧಿಕಾರ ಸ್ವೀಕರಿಸಿದ್ದರು.

      ಆದರೆ, ಪ್ರೇಮ್‌ನಾಥ್‌ ಅವರಿಗೆ ಅಧಿಕೃತವಾಗಿ ಅಧಿಕಾರ ನೀಡದ ವೆಂಕಟರಾಮು ತಾವೇ ವ್ಯವಸ್ಥಾಪಕ ನಿರ್ದೇಶಕ ಎಂದು ಮುಂದುವರಿದಿದ್ದರು. ಈ ಕುರಿತು ಇತ್ಯರ್ಥಕ್ಕೆ ಪ್ರೇಮ್‌ನಾಥ್‌ ಅವರು ಮಂಗಳವಾರ ಆಡಳಿತ ಮಂಡಳಿ ಸಭೆ ಕರೆದಿದ್ದರು. ಆದರೆ, ಆ ಸಭೆ ಕಾನೂನು ಬಾಹಿರ ಎಂದು ವೆಂಕಟರಾಮು ಆರೋಪಿಸಿದ್ದರು.

      ಪಶು ಆಹಾರಕ್ಕೆ ರೈತರ ಆಗ್ರಹ

      ವ್ಯವಸ್ಥಾಪಕ ನಿರ್ದೇಶಕರ ಜಟಾಪಟಿ, ಆಡಳಿತ ಮಂಡಳಿ ಸಭೆ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಹಾಲು ಉತ್ಪಾದಕರ ಸಂಘದ ಸಾವಿರಾರು ರೈತರು ಕೇಂದ್ರ ಕಚೇರಿ ಆವರಣದಲ್ಲಿ ಜಮಾಯಿಸಿ ಎಂಟು ವಾರಗಳಿಂದ ಬಾಕಿ ಇರುವ ಬಟವಾಡೆ ಪಾವತಿಸಿ ಪಶು ಆಹಾರ ಪೂರೈಕೆಗೆ ಒತ್ತಾಯಿಸಿದರು. ಕೆಎಂಎಫ್ನಲ್ಲಿನ ಅವ್ಯವಹಾರದ ಬಗ್ಗೆ ತನಿಖೆಗೂ ಆಗ್ರಹಿಸಿದರು.


    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus