Monday, May 20, 2013
Last Updated: 5:58:35 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ರಮಥಾ ಗಾಥಾ
    • ಪ್ರಮಥಾ ಗಾಥಾ

      • ವಿ| ಉಮಾಕಾಂತ ಭಟ್‌ | Sep 16, 2012

        ಹರನ ಗಣಕ್ಕೆ "ಪ್ರಮಥ' ಎಂಬ ಸಾರ್ಥಕವಾದ ಹೆಸರಿದೆ. ರುದ್ರ ಲಯಕಾರಕ ದೇವತೆ. ಅವನ ಸಹಕಾರಕ್ಕೆ ನಿಯೋಜಿತವಾದ ಗುಂಪು ಪ್ರಮಥ. ಪ್ರಮಥ°ಂತಿ ವಿಶ್ಲೇಫ‌ಯಂತಿ ಪ್ರಪಂಚಂ ಇತಿ ಪ್ರಮಥಾಃ  ಪಾಂಚಭೌತಿಕವಾದ ಪ್ರಪಂಚವನ್ನು ವಿಭಜಿಸುತ್ತ ಅದರದರ ಪೂರ್ವ (ಕಾರಣ) ರೂಪದಲ್ಲಿ ಲೀನಗೊಳಿಸುವ ಲಯಕಾರ್ಯದಲ್ಲಿ ನಿರಂತರವಾಗಿ ಮಗ್ನರಾದವರು ಪ್ರಮಥರು. ಈ ಗಣವು ಅನವರತವಾಗಿ ವರ್ಧಿಸುತ್ತಲೇ ಇರುತ್ತದೆ. ರುದ್ರೋಪಾಸನೆಯಿಂದ ಸಿದ್ಧಿ ಪಡೆದವರೆಲ್ಲ ಈ ಶಿವಗಣದಲ್ಲಿ ಸೇರಿಕೊಳ್ಳುತ್ತ ಶಿವಸಾಮೀಪ್ಯ - ಶಿವಸಾಲೋಕ್ಯಗಳನ್ನು ಪಡೆಯುತ್ತಲಿರುತ್ತಾರೆ.

        ನಂದಿ, ಭೃಂಗಿ, ಭುÅಕುಟಿ, ವೀರಭದ್ರ ಮೊದಲಾದವರು ಈ ಗಣದ ಹಿರಿಯ ದೇವತೆಗಳು. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಮುಖ, ಒಂದೊಂದು ರೀತಿಯ ಸುಖ. ನಂದಿಗೆ ಧೇನುವಿನ ಆನನ. ಭುÅಕುಟಿಯ ಕಣ್ಣುಗಳು ವಕ್ರ. ವೀರಭದ್ರನಿಗೆ ದೈತ್ಯದೇಹ. ಈ ಗಣಕ್ಕೆ ಗಜಾನನ ಅಧಿಪತಿ ಆದುದರಿಂದ ಅವನನ್ನು ಗಣೇಶ, ಗಣಪತಿ, ಗಣಾಧ್ಯಕ್ಷ ಮುಂತಾಗಿ ಕೊಂಡಾಡುತ್ತಾರೆ. ಇವನು ಈ ಗಣದಲ್ಲಿ ಅತ್ಯಂತ ಕಿರಿಯನೂ ಹೌದು; ಅತ್ಯಂತ ಹಿರಿಯನೂ ಹೌದು. ಆನೆಯ ಮುಖ, ಕಿರಿದಾದ ಕಂಗಳು, ಅಗಲವಾದ ಕಿವಿಗಳು, ಗುಂಡಾದ ಹೊಟ್ಟೆ , ಸೀಳು ಬಾಯಿ, ಒಂದುವರೆ ಹಲ್ಲು , ಗಿಡ್ಡವಾದ ಮುರುಟಿದ ಕೈಕಾಲುಗಳು- ಹೀಗೆ ಗಣೇಶನ ಭದ್ರಾಕೃತಿಯನ್ನು ವರ್ಣಿಸಲು ಕವಿಗಳೇ ಸಮರ್ಥರು. ಪ್ರಣವವೆ ಗಜಾಕಾರದ ತೇಜಸ್ಸಾಗಿ ಆಕೃತಿಯನ್ನು ಪಡೆದಾಗ, ಪಡೆದ ಶಿವ ಶಿವೆಯರು ಪ್ರಣಯದಿಂದ ಕೂಗಿ ಕರೆದ ಹೆಸರು ಗಜಾನನ. ಇವನ ಸೇವೆಗೆ ಸಂದವರು ಭೂತಗಣಗಳು, ಹರಗಣದ ವರದೇವತೆಗಳು.

        ಹಿಮಾಲಯದ ಶಿಖರೋನ್ನತ ಪ್ರದೇಶಗಳಲ್ಲಿ ಅತ್ಯಂತ ಉತ್ಕೃಷ್ಟವಾದ ತಾಣ-ಕೈಲಾಸ. ಶಿವ ಶಿವೆಯರು ನಲ್ಮೆಯಿಂದ ನಲಿದಾಡುವ, ನೆಮ್ಮದಿಯಿಂದ ಧ್ಯಾನಲೀನರಾಗುವ ಯೋಗ ಭೂಮಿ ಅದು. ಲೋಕಹಿತಕ್ಕಾಗಿ ಆಗಾಗ ನಾಟ್ಯವಾಡುವ ರಸಶೃಂಗವೂ ಅದೇ. ಅಲ್ಲಿಂದಲೆ ಎಲ್ಲ ಬಗೆಯ ಕಲೆಗಳು, ರಸವಿದ್ಯೆಗಳು ಧಾರೆಯಾಗಿ ಧುಮ್ಮಿಕ್ಕಿ ದೇಶಮುಖವಾಗಿ ಹರಿದಿವೆ. ಅದೇ ನಟರಾಜನ ರಂಗಮಂಚ, ಲಾಸ್ಯ ಗೌರಿಯು ಮೆಚ್ಚುವ ವೇದಿಕೆ. ಪ್ರಮಥರೆಲ್ಲ ಅಲ್ಲಿ ಆಗಾಗ ಸೇರುತ್ತಾರೆ. ವಿನೋದಕ್ಕಾಗಿ, ವಿಚಾರಕ್ಕಾಗಿ, ವಿಹಾರಕ್ಕಾಗಿ. ಅವರು ಸೇರಿದಾಗ ವಿವಿಧಶೈಲಿಯ ಗಾನ, ವಾದನ, ನರ್ತನಗಳು ಜರುಗುತ್ತವೆ. ಆದುದರಿಂದ ಇಂದು ದೇಶದಲ್ಲಿ ಕಾಣಬರುವ ಸಕಲ ಶೈಲಿಗಳು ತಮ್ಮ ಉಗಮಭೂಮಿಯನ್ನು ಕೈಲಾಸದಲ್ಲಿಯೇ ಗುರುತಿಸಿಕೊಂಡಿವೆ.

        ಅಂದು... ಎಂದೋ... ಒಂದು... ದಿನ... ಗಣೇಶನಿಗೆ ಆಗ ಹನ್ನೆರಡು ತಿಂಗಳುಗಳು. ಸುಕುಮಾರ ಶಿಶುವಾತ. ತಾಯಿ ಗೌರಿಗೆ ಎಲ್ಲಿಲ್ಲದ ಹಿಗ್ಗು. ಮುದ್ದುಕಂದನಿಗೆ ಹಾಲು ಕುಡಿಸುವ, ಸ್ನಾನ ಮಾಡಿಸುವ, ಜೋಗುಳ ಹಾಡುವ ಸಂಭ್ರಮ. ಜೊತೆಗೆ ಎಷ್ಟು ಗೆಳತಿಯರು ಇದ್ದರೂ ಸಾಲದು. ಗಣೇಶನ ಬಾಲಲೀಲೆಗಳನ್ನು ಎಳೆ ಎಳೆಯಾಗಿ ಬಿಡಿಸಿ ವರ್ಣಿಸಿದಷ್ಟೂ ತಾಯಿಯ ಉತ್ಸಾಹ ಇಮ್ಮಡಿಸುತ್ತಲೇ ಇತ್ತು.
        ಅವನು ಬೇಗ ಬೆಳೆದು ದೊಡ್ಡವನಾಗಬೇಕು. ಘಂಟೆಯುಲಿದಂತೆ ಮಾತುಗಳನ್ನಾಡಬೇಕು, ಕುಣಿದು-ನರ್ತಿಸಿ ಹರಗಣವನ್ನು ಸಂತಸಪಡಿಸಬೇಕು. ಅವಳ ಆಸೆಗಳಿಗೆ ಕೊನೆಯೇ ಇರಲಿಲ್ಲ. ನಟರಾಜನ ಕಂದನಾಗಿ ನೃತ್ಯ ಮಾಡದಿದ್ದರೆ ಹೇಗೆ ಸರಿ? ನರ್ತನ ಪ್ರವೃತ್ತಿಯೇ ಇಲ್ಲದಿರೆ ತಾನೆ ಬೆಳೆಸಿ ಬೆಳಗಿಸಿದ ಲಾಸ್ಯವನ್ನು ತನ್ನ ಮಗನಿಗೆ ಕಲಿಸುವುದಾದರೂ ಎಂತು? ಅಮ್ಮನ ಅಪೇಕ್ಷೆ ಬೆಳೆಯುತ್ತಲಿತ್ತು. ತಂದೆಗೂ ಇದೇ ರೀತಿಯ ಕನಸಿತ್ತು. ಆದರೆ, ಅದನ್ನು ಬಾಯ್ದೆರೆಯಾಗಿ ಹೇಳಿರಲಿಲ್ಲ. ಗಣೇಶನನ್ನು ಆಟವಾಡಿಸಲು ಬಂದು ನೆರೆಯುವ ಮಕ್ಕಳಿಗೂ ಕುಣಿದು ಕುಪ್ಪಳಿಸುವ ಚಪಲ. ಮೂಲಾಧಾರಮೂರ್ತಿಗೆ ಇದೆಲ್ಲ ತಿಳಿಯಿತು.
        ಅಮ್ಮನ ತೆಕ್ಕೆಯಿಂದ ಫ‌ಕ್ಕನೆ ಜಾರಿಳಿದ. "ಥೇ-ಥೀ- ಥೇ-ಥೀ' ಎಂದು ತೊದಲು ಶಬ್ದವನ್ನು ಉಚ್ಚರಿಸುತ್ತ ಕುಣಿಯುವುದಕ್ಕೆ ಮೊದಲಾದ. ಇಟ್ಟ ಹೆಜ್ಜೆ, ತಾಳದ ಗತಿಯನ್ನು ಕಚ್ಚಿಕೊಂಡಿತು. ತುಟಿಯಂಚಿನಿಂದ ಜಾರಿದ ತೊದಲು ಶಬ್ದ ಪಾಟಾಕ್ಷರ ಮಾಲೆಯಾಯಿತು.

        ನೃತ್ಯವನ್ನು ಕಂಡ ತಾಯಿ ಹಿಗ್ಗಿದಳು; ತಂದೆ ಆಶ್ಚರ್ಯಚಕಿತನಾದ. ಪರಿವಾರದವರೆಲ್ಲ ಅಭಿನಂದಿಸಿದರು. ಅವರವರಿಗೆ ಗೊತ್ತಾಗದಂತೆ ಗೆಜ್ಜೆಕಟ್ಟಿ , ಹೆಜ್ಜೆಯಿಟ್ಟು , ಗಣೇಶನನ್ನು ಅನುಸರಿಸಿದರು. ಅನುಸರಣೆಯಿಂದ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ವಿಷ್ಣು , ದೇವೇಂದ್ರರನ್ನು ಮೊದಲ್ಗೊಂಡು ದೇವಾನುದೇವತೆಗಳೂ ಈ ನೈಸರ್ಗಿಕ ನೃತ್ಯದಲ್ಲಿ ಪಾಲ್ಗೊಂಡು "ಆತ್ಮಾರಾಮ'ರಾಗಿ, "ಆತ್ಮಕ್ರೀಡ'ರಾಗಿ ಬೆಳಗಲಾರಂಭಿಸಿದರು. ಆತ್ಮಾರಾಮತೆಗಿಂತ ಮಿಗಿಲಾದ ಪ್ರಯೋಜನವು ಕಲೆಗೆ ಇರಬಹುದೆ?

        ಗಣಪತಿಯ ನರ್ತನಲೀಲಾವಿನೋದವು ವಿಶ್ವವನ್ನೇ ವ್ಯಾಪಿಸಿತು.

        ಗೌರಿಗೆ ಗಾಬರಿಯಾಯಿತು. ಕೈಲಾಸದ ಆಸೆ ವಿಶ್ವವನ್ನೇ ಕಂಪಿಸುವಂತೆ ಮಾಡಿದರೆ ಹೇಗೆ ಸರಿ? ಹೆಂಗರುಳಿನ ಅಪೇಕ್ಷೆಯೊಂದು ಊರನ್ನೆ ಕುಣಿದಾಡಿಸಿದರೆ ಯಾರು ತಾನೆ ಒಪ್ಪಿಕೊಳ್ಳುತ್ತಾರೆ? ಮಗು ಗಣೇಶನಲ್ಲಿ ನೃತ್ಯ ಸಾಕೆಂದು ನಂಬಿಸುತ್ತಾಳೆ, ಹುಸಿಮುನಿಸಿನಿಂದ ಗದರಿಸುತ್ತಾಳೆ. ಮಕ್ಕಳಲ್ಲಿ ತಾಯಿಯೆಂದಿಗೂ ಅಸಹಾಯಕಳಷ್ಟೆ ! ಮಗುವಿನಾಟ ಮುಂದುವರಿಯುತ್ತದೆ.

        ಹೊಂಚು ಹಾಕಿ ಕುಳಿತಿದ್ದ ನೂಪುರಾಸುರನಿಗೆ ಇದೇ ಸದವಸರವಾಯಿತು. ಮಾಯಾವಿಯಾತ... ಮೋಡಿಗಾರ. ಗೆಜ್ಜೆಯ ಮೋಡಿಗೆ ಒಳಗಾಗದವರು ಯಾರಿದ್ದಾರೆ! ಗೆಜ್ಜೆಗೆ ಹೆಜ್ಜೆಯ ಜೋಡಿ; ಹೆಜ್ಜೆಗೆ ಗೆಜ್ಜೆಯ ಮೋಡಿ. ಕೆಲವೊಮ್ಮೆ ಬಾಹ್ಯವೆ ಆಡಂಬರವಾಗಿ, ಭೌತವೆ ಭಾರವಾಗಿ ಕಾಡುವುದುಂಟು. ಆಗ ಕಲೆಯ ಚೈತನ್ಯ ಬಾಡಿ ಬಸವಳಿಯುತ್ತದೆ. ನೂಪುರ ಈ ಹಿಂದೆ ಸುಂದರಿಯರ ಕಾಲುಗಳನ್ನು ಕಟ್ಟಿಕೊಂಡು ಅದೆಷ್ಟು ರಾಜಮಕ್ಕಳ ತಲೆಕೆಡಿಸಿದನೊ... ಅದೆಷ್ಟು ಬ್ರಾಹ್ಮಣ ಕುಮಾರರ ಅಧ್ಯಯನವನ್ನು ಹಾಳುಗೆಡವಿದನೊ... ಬಲ್ಲವರಾರು? ಸಾಧಕರ ಬುದ್ಧಿಗೆಡಿಸುವ ನೂಪುರಾಸುರ ಎಂದಿಗೂ ಭಯಂಕರ.

        ಮಗುವಿನ ಕಾಲುಗಳು ಮರಗೆಟ್ಟು ನಿಂತವು. ಗೆಜ್ಜೆ (ನೂಪುರ) ಭಾರವಾಯಿತು. ಕುಣಿಯುತ್ತ ತಾಳವನ್ನು ರೂಪಿಸುವ ಹೆಜ್ಜೆಗೆ ಗೆಜ್ಜೆಯೇ ಭಾರವಾದರೆ ಅದೇ ಅಸುರವಾಗುತ್ತದಷ್ಟೆ ! ನೂಪುರಾಸುರನ ಕೈವಾಡ. ತಾಯಿ ಮಗುವನ್ನು ಎತ್ತಿಕೊಳ್ಳೋಣವೆಂದರೆ ಯಮಭಾರ. ಯಾವ ತಾಯಿಗೂ ಮಗು ಭಾರವಲ್ಲ. ಆದರೆ, ತಾಯ್ತನವನ್ನು ವಂಚಿಸುತ್ತಿರುವ ಅಸುರ ನೂಪುರದಲ್ಲಿ ಸೇರಿಕೊಂಡಿರುವುದರಿಂದ ಆ ಮಹಾತಾಯಿಗೂ ಮಗು ಭಾರವಾಯಿತು. ಗೌರಿ ಹೌಹಾರಿದಳು. ಶೋಕ ಸಂವಿಗ್ನಳಾದಳು. ತಾಯಿಯ ನೋವು ಗಣೇಶನಿಗೆ ತಿಳಿದುಬಂತು.

        ಗಣೇಶ ಕಾಲುಗಳನ್ನು ಝಾಡಿಸಿದ - ನೂಪುರಾಸುರ ಸಿಡಿದುವಿಡಿದು ಬಿದ್ದ.

        ಬಹುಶಃ ಅಂದಿನಿಂದಲೆ ಗೆಜ್ಜೆಯನ್ನು ಪೂಜಿಸಿ, ಅದಕ್ಕೆ ಗುರುಗೌರವವನ್ನು ತೋರುವ ವಿನಯ ದೇಶದಲ್ಲಿ ಬೆಳೆದಿರಬೇಕು. ಆಗಲೆ, ನೂಪುರಕ್ಕೆ ಆಸುರಭಾವವು ಬರಲೊಲ್ಲದು. ಗೆಜ್ಜೆ ಕಟ್ಟಿ ಕುಣಿಯುವ ಹೆಜ್ಜೆಗೆ ಮಗುವಿನ ಮುಗ್ಧತೆ ಬೇಕು. ಆಗಲೇ  ಅದು ಸಿದ್ಧಿಯನ್ನು ಪಡೆಯುತ್ತದೆ. ಕಲಾಕಾರನಿಗೆ ಈ ರೀತಿಯ "ಬಾಲ್ಯ' ಎಂದೆಂದಿಗೂ ಇರಬೇಕು. ಆಗ ಕಲಾಮಾತೆಗೆ ಕಲಾವಿದನೆಂಬ ಮಗು ಭಾರವಾಗಲು ಸಾಧ್ಯವಿಲ್ಲ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus