Udayavani | Sep 17, 2012
ದಾವಣಗೆರೆ: ಬಿಜೆಪಿಯಲ್ಲಿ ಇರಬೇಕೋ ಅಥವಾ ಹೊರ ನಡೆಯಬೇಕೋ ಎಂಬ ಹೊಯ್ದಾಟದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೂ ಹೊರ ಬಂದಂತಿಲ್ಲ.
ಭಾನುವಾರ ಹಾವೇರಿ ಜಿಲ್ಲೆಯಲ್ಲಿ ಮಾತನಾಡಿದ ಧಾಟಿಯಲ್ಲೇ ಸೋಮವಾರ ದಾವಣಗೆರೆ ಜಿಲ್ಲೆಯಲ್ಲಿ ಗುಡುಗಿರುವ ಯಡಿಯೂರಪ್ಪ, ಪಕ್ಷದಲ್ಲಿ ತಮ್ಮ ಆತ್ಮಗೌರವಕ್ಕೆ ಧಕ್ಕೆಯಾದರೆ ಹೊರ ನಡೆಯುವುದಾಗಿ ಪರೋಕ್ಷವಾಗಿ ಗುಡುಗಿದ್ದಾರೆ. ಅಲ್ಲದೆ, ಆತ್ಮಗೌರವಕ್ಕೆ ಧಕ್ಕೆಯಾಗುವಂಥ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ ಎಂದೂ ಸೂಕ್ಷ್ಮವಾಗಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಕ್ಷೇತ್ರವಾದ ಹೊನ್ನಾಳಿಗೆ ತೆರಳಿದ್ದ ಯಡಿಯೂರಪ್ಪ, ಒಮ್ಮೆ ಬಿಜೆಪಿ ಬಿಡುವ ಧ್ವನಿಯಲ್ಲಿ, ಮತ್ತೂಮ್ಮೆ ಸ್ಪಷ್ಟನೆ ನೀಡುವ ಧಾಟಿಯಲ್ಲಿ ಮಾತನಾಡಿದರು. ಅಲ್ಲದೆ, ಮತ್ತೆ ಮುಖ್ಯಮಂತ್ರಿ ಆಗುವೆ ಎನ್ನುವ ಮೂಲಕ ಬಿಜೆಪಿಯಲ್ಲಿ ಇರುವ ಬಗ್ಗೆ ಮತ್ತಷ್ಟು ಗೊಂದಲ ಸೃಷ್ಟಿಸಿದರು.
ಪಕ್ಷದಲ್ಲಿ ತಮ್ಮ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಇದನ್ನು ತಾವು ಗಮನಿಸುತ್ತಲೇ ಬಂದಿದ್ದು, ಇನ್ನೂ ಸ್ವಲ್ಪ ದಿವಸ ಕಾಯುತ್ತಾ ಸಹಿಸಿಕೊಳ್ಳುತ್ತೇನೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.
ಇದೇ ವೇಳೆ, 'ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ಗಳಿಗಿಂತ ರೈತರ ಸರ್ಕಾರದ ಅಗತ್ಯವಿದೆ' ಎಂದು ತಾವು ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಹೇಳಿದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದ ಯಡಿಯೂರಪ್ಪ, ಚುನಾವಣೆಗೆ ಮೊದಲು ಯಾವುದೇ ಪ್ರತಿನಿಧಿ ಪಕ್ಷಕ್ಕೆ ಸೇರಿದವನು. ಚುನಾವಣೆ ನಂತರ ಆತ ಜನರ ಪ್ರತಿನಿಧಿ. ಈ ಹಿನ್ನೆಲೆಯಲ್ಲಿ ಜನಪರ ಹೋರಾಟ ಮಾಡುವ ಜನಪ್ರತಿನಿಧಿಗಳ ಅವಶ್ಯಕತೆ ಇದೆ ಎಂಬುದಾಗಿ ಹೇಳಿದ್ದೇನೆಯೇ ಹೊರತು ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊರ ನಡೆವ ಮಾತು: ಮುಖ್ಯಮಂತ್ರಿ ಅಥವಾ ಪಕ್ಷದ ಅಧ್ಯಕ್ಷ ಪಟ್ಟ ಕೊಡಿ ಎಂಬುದಾಗಿ ತಾವೇನೂ ಕೇಳಿಲ್ಲ. ಯಾವುದೇ ವ್ಯಕ್ತಿಗೆ ಗೌರವ ಮುಖ್ಯ. ಅದಕ್ಕೆ ಚ್ಯುತಿ ಬಂದಾಗ ಅಧಿಕಾರ, ಸ್ಥಾನ ಮುಖ್ಯವಲ್ಲ ಎಂಬ ನಿಲುವು ಹೊಂದಿದ್ದೇನೆ. ತಮಗೆ ನೋವಾಗಿದೆ. ಇನ್ನೂ ಸ್ವಲ್ಪ ದಿನ ಕಾಯುತ್ತೇನೆ ಎಂದರು.
ರೈತರ ಸಾಲಮನ್ನಾ ಬಗ್ಗೆ ಈ ಹಿಂದೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದಾಗ ವಿರೋಧ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆಂದು ತಮ್ಮನ್ನು ಬಿಂಬಿಸಲಾಯಿತು. ತಾವು ಆ ರೀತಿ ಮಾತನಾಡಿದ್ದರಿಂದಲೇ ರೈತರ 24,000 ಕೋಟಿ ಸಾಲ ಮನ್ನಾ ಮಾಡಲು ನಾಂದಿಯಾಯಿತು. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಕೆಎಸ್‌ಆರ್‌ಟಿಸಿ ನೌಕರರ ಮತ್ತು ಸರ್ಕಾರದ ಮಧ್ಯೆ ನಡೆಯುತ್ತಿದ್ದ ಸಂಘರ್ಷದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದೆ. ತಾವು ಜನಪರ ಹೋರಾಟದಿಂದಲೇ ಜನಪ್ರತಿನಿಧಿ ಹಾಗೂ ಮುಖ್ಯಮಂತ್ರಿ ಆಗಿದ್ದು, ಅದ್ದರಿಂದ ಆ ಹೋರಾಟದ ಹಾದಿಯಲ್ಲೇ ಸಾಗುವುದಾಗಿ ಸ್ಪಷ್ಟ ಪಡಿಸಿದರು.
ಜನಪರ ಹೋರಾಟ ಮುಂದುವರಿಸುತ್ತೇನೆ ಎಂದರೆ ತಾವು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಆಡಳಿತಕ್ಕೆ ಅಡ್ಡಿ ಪಡಿಸುತ್ತೇನೆ ಎಂಬ ಅರ್ಥ ಕಲ್ಪಿಸಬೇಕಾಗಿಲ್ಲ. ಶೆಟ್ಟರ್ ಅವರನ್ನು ತಾವೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಅಂದಮೇಲೆ ಅವರನ್ನು ಕುರ್ಚಿಯಿಂದ ಕೆಳಗಿಸುವ ಪ್ರಯತ್ನ ತಮ್ಮಿಂದ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮತ್ತೆ ಸಿಎಂ ಆಗುವೆ: ತಾವು ಮುಖ್ಯಮಂತ್ರಿಯಾಗಿದ್ದಾಗ 5 ವರ್ಷದಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕಲ್ಪನೆಯಿತ್ತು. ಸ್ವಪಕ್ಷೀಯರೇ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಆ ಕನಸು ಸಾಕಾರಗೊಳಿಸಲು ಅಡ್ಡಿಯಾಯ್ತು ಎಂಬ ಬೇಸರವಿದೆ. ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭಕ್ಕಿಂತ ಹೆಚ್ಚು ಬೆಂಬಲ ತಮಗೆ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡಾಗ ಕಂಡು ಬರುತ್ತಿದೆ. ಮತ್ತೆ ತಾವೇ ಮುಖ್ಯಮಂತ್ರಿ ಆಗಬೇಕೆಂಬ ಭಾವನೆ ಜನರಲ್ಲಿ ವ್ಯಕ್ತವಾಗುತ್ತಿದೆ. ಮುಂದೆ ಯಡಿಯೂರಪ್ಪನೇ ಮುಖ್ಯಮಂತ್ರಿ ಆಗಬೇಕೆಂದು ಜನತೆ ಅಪೇಕ್ಷೆ ಪಟ್ಟರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾಡಿನ ಜನತೆ ನೆಮ್ಮದಿಯ ಬದುಕಿಗಾಗಿ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸ ಕೂಡ ತಮಗಿದೆ. ಅದಕ್ಕಾಗಿ ಒಂದೂವರೆ ತಿಂಗಳಲ್ಲಿ ಇನ್ನೂ 100 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದರು.
ರೇಣು, ರಾಜುಗೆ ಹೆಚ್ಚುವರಿ ಖಾತೆ: ಶೆಟ್ಟರ ಸಂಪುಟದಲ್ಲಿ ಖಾತೆ ಬದಲಾವಣೆ ಮಾಡಲು ಮುಂದಾದಲ್ಲಿ ಉತ್ತಮವಾಗಿ ಖಾತೆ ನಿರ್ವಹಿಸುತ್ತಿರುವ ಅಬಕಾರಿ ಸಚಿವ ರೇಣುಕಾಚಾರ್ಯ ಹಾಗೂ ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡರಿಗೆ ಹೆಚ್ಚುವರಿ ಜವಾಬ್ದಾರಿ ನೀಡಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.