ಕೆ.ಎಲ್.ಕುಂಡಂತಾಯ | Sep 18, 2012
ಭಾರತೀಯರಿಗೆ ದೇವರುಗಳೆಷ್ಟು? ಹೌದು,ನಮ್ಮ ದೇಶದ ಆರಾಧನಾ ವೈವಿಧ್ಯಗಳನ್ನು ಗಮನಿಸಿ ಗೊಂದಲಕ್ಕೊಳಗಾದವರ ಈ ಪ್ರಶ್ನೆ ಸಹಜ. ಆದರೆ ಕೋಟ್ಯಂತರದೇವ - ದೇವತೆಗಳನ್ನು ಆರಾಧಿಸುವ ಭಾರತೀಯ ನಂಬಿಕೆ, ಮನಸ್ಸು ಆತಂಕಿತವಾಗಲೇ ಇಲ್ಲ, ಬದಲಿಗೆ ನಿರಾಳವಾಗಿ, ಸಾಂದರ್ಭಿಕವಾಗಿ ಪ್ರಸ್ತುತ ದೇವರುಗಳ ಉಪಾಸನೆ ನಡೆಯುತ್ತಲೇ ಇದೆ. ಕಾಲಕಾಲಕ್ಕೆ ಸರಿಯಾಗಿ ರೂಪಾಂತರ, ನಿಷ್ಠಾಂತರ ಗೊಳ್ಳುತ್ತಾ ಮನುಕುಲದ ವಿಕಾಸದೊಂದಿಗೆ ನಮ್ಮ ಉಪಾಸನಾ ಪದ್ಧತಿಯೂ ಸಾಗಿ ಬಂತು. ಮುಗ್ಧತೆ, ಅತಿ ಆಸ್ತಿಕತೆ ಕಾರಣವಾಗಿ ವೈಭವೀಕರಣವೂ ನಡೆದಿದೆ, ನಡೆಯುತ್ತಿದೆ.
ವೈಭವೀಕರಣದ ಅಲಂಕರಣಗಳನ್ನು ಸ್ವಲ್ಪಬದಿಗೆ ಸರಿಸಿ ಮೂಲವನ್ನು ಗಮನಿಸಿದರೆ ಉಪಾಸನಾ ವಿಧಾನದ ಆದಿಯ ಆದ್ಯಂತ ವಿವರ ಲಭಿಸಬಹುದು. ಆದರೆ ಈ ಸತ್ಯಶೋಧನೆ ವಿನೀತವಾಗಿರಬೇಕು. ವಿಶ್ವಚೈತನ್ಯವನ್ನು ನಾವು ಅಂಗೀಕರಿಸಿದ್ದು ವೈವಿಧ್ಯಮಯ ವಾಗಿ, ವೈಶಿಷ್ಟಪೂರ್ಣವಾಗಿ. ಆದುದರಿಂದ ಆಸ್ತಿಕ ನಿಲುವು ಅನಿವಾರ್ಯ.
ಮಾನವ ಬದುಕಿನಲ್ಲಿ ವಿಘ್ನಗಳೆಷ್ಟು ಸ್ವಾಭಾವಿಕವೋ ವಿಘ್ನನಿವಾರಣೋಪಾಯವೂಅಷ್ಟೆಅಗತ್ಯ. ಕ್ರಿಯಾಶೀಲ ಮನುಷ್ಯನ ಜೀವನಕರ್ಮನಿರತವಾಗಿಯೇ ಇರುತ್ತದೆ. ಎಲ್ಲಿ ಕಾಯಕವು ಪ್ರಧಾನವಾಗಿ ಸ್ವೀಕರಿಸಲ್ಪಟ್ಟು ಮುಂದುವರಿಯುತ್ತದೊ ಅಲ್ಲೇ ವಿಘ್ನಗಳುಎದುರಾಗುತ್ತವೆ. ನಿವಾರಣೆ ಅನಿವಾರ್ಯವಾಗುತ್ತದೆ. ಆದುದರಿಂದ ವಿಘ್ನ ನಿವಾರಣೆಯು ಪ್ರಥಮ ಪ್ರಾಶಸ್ತ್ಯ ಪಡೆಯುತ್ತದೆ, ವಿಘ್ನ ನಿವಾರಕ ಮೊದಲ ಪೂಜೆಗೊಳ್ಳುತ್ತಾನೆ.
ಮೊದಲ ಪೂಜೆ ಎಂಬ ಕಲ್ಪನೆಯೇ ನಮ್ಮನ್ನು ಪ್ರಾಚೀನತೆಗೆ ಒಯ್ಯುತ್ತದೆ. ಮುಂದೆ ಕಾಲಾಂತರದಲ್ಲಿಸಕಾಲಿಕ ಆರಾಧನೆಗೊಂಡ ವಿಘ್ನ ನಿವಾರಕ ನಿಗ್ರಹ - ಅನುಗ್ರಹಕಾರಕನಾಗಿ ಮಾತ್ರ ಸೀಮಿತಗೊಳ್ಳದೆ ವಿಶ್ವಂಭರಮೂರ್ತಿಯಾಗಿ ವಿಶ್ವವಂದ್ಯನಾದುದು ಮಾತ್ರರೋಚಕ ವೃತ್ತಾಂತ.
ಆದಿಮ ಸಂಸ್ಕೃತಿಯ ಉಳಿಕೆಯಾಗಿ, ಪ್ರತೀಕವಾಗಿ ವೈದಿಕ ಸಂಸ್ಕೃತಿಯ ಕಾಲಕ್ಕೂ ಸಾಗಿಬಂದ "ಗಣಪ'ನ ಅಸ್ತಿತ್ವ ವಿಘ್ನಗಳಷ್ಟೇ ಸತ್ಯ, ನಿತ್ಯ ನೂತನ.
ಬೇಟೆ ಸಂಸ್ಕೃತಿಯಿಂದ ಆರಂಭಿಸಿ "ಬೆನಕ'ನಾಗಿ ಪೂಜೆಗೊಂಡ ಅಥವಾ ಪ್ರಥಮ ಪ್ರಾಶಸ್ತ್ಯಪಡೆದ ಗಣಪತಿ ಮುಂದಿನ ಪಶುಪಾಲನೆಮತ್ತು ಕೃಷಿ ಸಂಸ್ಕೃತಿಯಲ್ಲೂ ಭಿನ್ನ ಕಲ್ಪನೆಯೊಂದಿಗೆ ಪಡಿಮೂಡುತ್ತಾನೆ. ಸೆಗಣಿಗೆ ಗರಿಕೆ ಹುಲ್ಲನ್ನು ಸಿಕ್ಕಿಸಿ ಅಥವಾ ಸೆಗಣಿಯ ಮೇಲೆ ನೆಟ್ಟು ಪಶುಪಾಲನೆ ಮತ್ತು ಹಸಿರುಗರಿಕೆಯ ಮೂಲಕ ಕೃಷಿಯನ್ನು ಸ್ಮರಿಸಿಕೊಂಡ ಮಾನವನ ಪೂಜಾವಿಧಾನದ ಅಥವಾ ಶ್ರದ್ಧೆಯ ಕುರಿತ ಕಲ್ಪನೆ ಅಚ್ಚರಿ ಮೂಡಿಸುತ್ತದೆ.
ಈ ನಡುವೆ "ಮಣ್ಣು' ಪ್ರಧಾನವಾಗಿ ಕಂಡುಬರುತ್ತದೆ. ಕೃಷಿಗೆ ಮಣ್ಣು ಅಗತ್ಯ. ಮಣ್ಣಿನಷ್ಟೇಶ್ರಮವೂ ಅನಿವಾರ್ಯ. ಮಣ್ಣಿನಲ್ಲಿ ನಡೆಸುವ ಶ್ರಮದಿಂದಾಗಿಫಲಪ್ರಾಪ್ತಿ. ಗಣೇಶನಕುರಿತಾದ ಕಥೆ ಬಹುಶಃಕೃಷಿ ಸಂಸ್ಕೃತಿಯ ಕಾಲದಲ್ಲಿ ಹುಟ್ಟಿರುವಂತಿದೆ.ಕೃಷಿಯನ್ನು ಅನ್ವೇಷಿಸಿದವಳೇ ಹೆಣ್ಣು ಎಂಬ ಒಡಂಬಡಿಕೆಯೂ ಇದೆ. ತನ್ನ ಪ್ರಜನನ ಶಕ್ತಿಯಿಂದ ಸಾಮಾಜಿಕ ಸ್ಥಾನಮಾನವನ್ನೂ, ಬಹುಮಾನ್ಯತೆ ಯನ್ನು ಪಡೆಯುವ ಹೆಣ್ಣಿನ ದುಡಿಮೆಯ ಪ್ರತೀಕವಾಗಿ ಮೈಯ ಬೆವರು - ಮಣ್ಣು. ಗಣಪತಿಯ ಹುಟ್ಟಿಗೆ ಕಾರಣವಾದುದು ಜನಜನಿತ ಕಥೆ. ಗೌರಿ - ಗಣೇಶ, ತಾಯಿ- ಮಗ ಈ ಸಂಬಂಧವು ಮಣ್ಣಿನ ಉತ್ಪಾದನಾ ಫಲವತ್ತತೆಯನ್ನು ಅದರಿಂದ ಶ್ರಮದ ಫಲವಾಗಿ ಪಡಿಮೂಡುವ ಗಣಪ. ಈ ಚಿಂತನೆಯು ವಿವಿಧ ರೀತಿಯಿಂದ ಸ್ವೀಕರಿಸ ಲ್ಪಟ್ಟು ಇಂದಿಗೂ ಮಣ್ಣಿನಿಂದ ಗಣಪತಿಯನ್ನು ಸಿದ್ಧಗೊಳಿಸಿ "ಮಣ್ಣು ಎಂಬ ತಾಯಿಗೆ, ಮಣ್ಣಿ ನಿಂದ ಮೂಡಿದ ಗಣಪತಿಗೆ' ಪೂಜೆ ಮಾಡುವ ವಿಧಾನದಲ್ಲಿ ನಿಚ್ಚಳವಾಗಿ ಉಳಿದಿದೆ.
ಗಣಪತಿಯಲ್ಲಿ ವೈದಿಕ ದೇವತೆಗಳ ಸಮಾವೇಶವೇ ಇದೆ ಎಂದು ಪುರಾಣಗಳು ಹೇಳುತ್ತವೆ. ವಿಘ್ನನೆಂಬ ರಾಕ್ಷಸನ ವಧೆಗೆ ಗಣಪತಿ ಹೊರಟಾಗ (ವಿಘ್ನ ನಿವಾರಣೆಗಾಗಿ) ಶಿವ ತನ್ನ ಅರ್ಧ ಚಂದ್ರವನ್ನು, ಬ್ರಹ್ಮ ತನ್ನ ನಡುಪಟ್ಟಿಯನ್ನು, ಸೂರ್ಯ ತನ್ನ ಮಣಿ ಯನ್ನು, ವರುಣನು ಪಾಶವನ್ನು, ವಿಷ್ಣು ಶಂಖ ಮತ್ತು ಗದೆಯನ್ನು, ಇಂದ್ರನು ವಜ್ರವನ್ನು, ಯಮನು ದಂಡವನ್ನು ಕೊಟ್ಟರಂತೆ. ಮೂಲದ ತನ್ನ ಜನಪ್ರೀತಿಯಿಂದ, ವೇದ ಕಾಲಕ್ಕೂತನ್ನ ವರ್ಚಸ್ಸನ್ನು ಉಳಿಸಿಕೊಂಡು ಪೂಜೆ ಗೊಂಡ,ಪೂಜೆಗೊಳ್ಳುತ್ತಿರುವ ಗಣಪನ ಕಲ್ಪನೆ ಅಥವಾ ಅಸ್ತಿತ್ವಆಕರ್ಷಕ, ಜನಪ್ರಿಯ.
ಒಂದು ನಾಗರಿಕತೆಯ ಸಂಕೇತವಾಗಿ, ಮಣ್ಣಿನಿಂದ ಪಡಿಮೂಡಿದ ಚೈತನ್ಯವಾಗಿ,ಒಬ್ಬ ಗಣವಾಗಿ, ಬ್ರಹ್ಮಣಸ್ಪತಿಯಾಗಿ, ಗಣಾಧ್ಯಕ್ಷನಾಗಿ, ವಿಘ್ನನಿವಾರಕನಾಗಿ, ವಿಶ್ವಂಭರನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹೆಗೂ ನಿಲುಕದ್ದು. ಆದರೆ ಮೂಲ ಮಾತ್ರ ರೋಚಕ.
ಮೊದಲು ಗೌರಿ ಬರುವ ಬಳಿಕ ಮರುದಿನ ಗಣಪ ಆಗಮಿಸಿ ಪೂಜೆಗೊಳ್ಳುವ ಮುಂದೆ ವಿಸರ್ಜನೆಯ ಮೂಲಕ ಹೋಗುವ ಗಣಪ ವಿಶ್ವವಂದ್ಯ.