Udayavani | Sep 30, 2012
ಬೆಂಗಳೂರು : 'ಹಿರಿಯರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಬಿಜೆಪಿಯನ್ನು ಯಾವುದೇ ಒಬ್ಬ ವ್ಯಕ್ತಿ, ಶಕ್ತಿಯಿಂದ ನಾಶ ಮಾಡಲು ಸಾಧ್ಯವಿಲ್ಲ' ಎಂದು ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಅಲ್ಲದೆ, ಪಕ್ಷ ಒಡೆಯುವ ಕೆಲಸ ಮಾಡಬಾರದು ಎಂದೂ ಅವರು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಭಾನುವಾರ ನಗರದಲ್ಲಿ ನಡೆದ ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪಂಗಡ ಮೋರ್ಚಾದ ಸಮಾವೇಶಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯನ್ನು ಲಕ್ಷಾಂತರ ಕಾರ್ಯಕರ್ತರು ಮತ್ತು ಹಿರಿಯರು ಬೆವರು ಸುರಿಸಿ ಕಟ್ಟಿ ಬೆಳೆಸಿದ್ದಾರೆ. ಅವರಿನ ಬೆವರಿನ ಫಲ ನಾವು ಅನುಭವಿಸುತ್ತಿದ್ದೇವೆ. ಗಟ್ಟಿಯಾಗಿ ಬೆಳೆದ ಬಿಜೆಪಿಯನ್ನು ಯಾವುದೇ ಒಬ್ಬ ವ್ಯಕ್ತಿ, ಶಕ್ತಿಯಿಂದ ನಾಶ ಮಾಡಲು ಸಾಧ್ಯವಿಲ್ಲ. ಇದನ್ನು ಪಕ್ಷದ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ನಾಯಕರಾದ ನಿತಿನ್ ಗಡ್ಕರಿ, ಅನಂತ್‌ಕುಮಾರ್ ಹಾಗೂ ನನ್ನ ವಿರುದ್ಧ ಮಾತಾಡಿದ್ದಾರೆ. ಅವರು ಏನೇ ಮಾತನಾಡಿದರೂ, ಅದನ್ನು ಆರ್ಶಿàವಾದ ಎಂದು ಭಾವಿಸುತ್ತೇವೆ. ಆದರೆ, ಪಕ್ಷದ ಒಡೆಯುವ ಕೆಲಸ ಮಾಡಬಾರದು ಎಂಬ ಸಲಹೆ ನೀಡಿದರು.
ಪಕ್ಷದಲ್ಲಿ ಕೆಲವು ಗೊಂದಲಗಳು ಇರುವುದು ಸಹಜ. ಎಲ್ಲಾ ಪಕ್ಷಗಳಲ್ಲಿ ಇರುವಂತೆ ಬಿಜೆಪಿಯಲ್ಲೂ ಇದೆ. ಇದನ್ನು ಸರಿಮಾಡಿಕೊಂಡು ಉತ್ತಮ ಆಡಳಿತ ನಡೆಸಲಾಗುವುದು ಎಂದು ಈಶ್ವರಪ್ಪ ಪುನರುಚ್ಚರಿಸಿದರು.

ನಂತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರ ಪರವಾಗಿ ಮಾತನಾಡುವ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಸಂಪೂರ್ಣವಾಗಿ ದಲಿತರನ್ನು ಮರೆತಿದ್ದು, ಕೇವಲ ವೋಟ್‌ಬ್ಯಾಂಕ್ ಆಗಿ ಬಳಸಿಕೊಂಡಿದೆ. ದಲಿತರ ಶ್ರೇಯೋಭಿವೃದ್ಧಿಗಾಗಿ ಮಾಡಿರುವ ಕಾರ್ಯಗಳನ್ನು ಬಹಿರಂಗಪಡಿಸಲಿ ಎಂದು ಕಾಂಗ್ರೆಸ್, ಜೆಡಿಎಸ್‌ಗೆ ಸವಾಲು ಹಾಕಿದರು.
ಮುಂದಿನ 6-7 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಮತ್ತೂಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಆದರೆ, ಆ ಕನಸು ನನಸಾಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಅಧಿಕ ಬಹುಮತ ಗಳಿಸಲಿದ್ದು, ಇದಕ್ಕಾಗಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಹೋರಾಟದ ಮೂಲಕ ಬಂದಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲೂ ಅದೇ ದಾರಿಯಲ್ಲಿ ಸಾಗಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ವಿರುದ್ಧ ವೆಂಕಯ್ಯ ವಾಗ್ಧಾಳಿ

ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಬಡವರು ಬಡವರಾಗಿಯೇ ಇದ್ದು, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಅಧಿಕ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಿದೆ. ಬಡವರ ಪರ ಆಡಳಿತ ನೀಡುವ ಅಶ್ವಾಸನೆ ನೀಡಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಯುಪಿಎ ಸರ್ಕಾರ ವಿಶ್ವಾಸ ಘಾತುಕ ಕೆಲಸ ಮಾಡಿದೆ ಎಂದು ಕೇಂದ್ರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಮುಖಂಡ ವೆಂಕಯ್ಯ ನಾಯ್ಡು ವಾಗ್ಧಾಳಿ ನಡೆಸಿದರು.
ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವುದರಿಂದ ಲಕ್ಷಾಂತರ ವ್ಯಾಪಾರಿಗಳು ಬೀದಿಪಾಲಾಗಲಿದ್ದಾರೆ. ಅಮೆರಿಕವನ್ನು ಅಭಿವೃದ್ಧಿ ಮಾಡದ ವಾಲ್‌ಮಾರ್ಟ್ ಕಂಪನಿ ಭಾರತವನ್ನು ಹೇಗೆ ಅಭಿವೃದ್ಧಿಪಡಿಸುತ್ತದೆ ಎಂದು ಪ್ರಶ್ನೆ ಮಾಡಿದ ಅವರು, ದೇಶದ ವ್ಯಾಪಾರನ್ನು ಕೊಲೆ ಮಾಡಲಿದೆ. ಈ ಹಿಂದೆ ವಿದೇಶಿ ನೇರ ಬಂಡವಾಳವನ್ನು ಸ್ವತಃ ಪ್ರಧಾನಮಂತ್ರಿ ಅವರೇ ವಿರೋಧಿಸಿದ್ದರು. ಈಗ ಅವರೇ ಅದಕ್ಕೆ ಅನುಮತಿ ನೀಡಿರುವುದು ದುರದುಷ್ಟಕರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್, ಡಿ.ಬಿ.ಚಂದ್ರೇಗೌಡ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ಆರ್.ಅಶೋಕ್, ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ, ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ಇತರರು ಉಪಸ್ಥಿತರಿದ್ದರು.
'ಭ್ರಷ್ಟಾಚಾರ ಅಳಿಸಿ, ಭಾರತ ಉಳಿಸಿ' ಅಭಿಯಾನ
ಬೆಂಗಳೂರು : 2ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಗರಣಗಳಂತಹ ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಯುಪಿಎ ಸರ್ಕಾರ ವಿರುದ್ಧ ಜನರಿಗೆ ಅರಿವು ಮೂಡಿಸಲು ಬಿಜೆಪಿ 'ಭ್ರಷ್ಟಾಚಾರ ಅಳಿಸಿ, ಭಾರತ ಉಳಿಸಿ' ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಸಂಸದ ಅನಂತಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಸರ್ಕಾರವನ್ನು ಕಿತ್ತೂಗೆಯಲು ಈ ಅಭಿಯಾನ ಆಯೋಜಿಸಲಾಗಿದ್ದು, ರಾಷ್ಟ್ರೀಯ ರಾಜಕೀಯ ಮುತ್ಸದಿ ದಿ. ಜಯಪ್ರಕಾಶ್ ನಾರಾಯಣ ಅವರ ಜನ್ಮದಿನ ಅ.11ರಿಂದ ನ.20ರವರೆಗೆ ನಡೆಯಲಿದೆ ಎಂದು ಹೇಳಿದರು.
ಸುಮಾರು 40 ದಿನಗಳ ಕಾಲ ಅಭಿಯಾನ ನಡೆಯಲಿದ್ದು, ದೇಶದ ಐದೂವರೆ ಲಕ್ಷಕ್ಕೂ ಹೆಚ್ಚು ಹಳ್ಳಿ, ನಗರ ಪ್ರದೇಶಗಳಲ್ಲಿ ಯುಪಿಎ ಸರ್ಕಾರ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಈ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಕೈ ಮುಗಿಯುತ್ತೇನೆ ದುಡುಕಬೇಡಿ : ಯಡಿಯೂರಪ್ಪಗೆ ಈಶ್ವರಪ್ಪ ಕಿವಿಮಾತು
'ಯಡಿಯೂರಪ್ಪನವರೇ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಪಕ್ಷದೊಳಗಿನ ಸಣ್ಣ ಪುಟ್ಟ ಗೊಂದಲಗಳನ್ನು ನಮ್ಮಲ್ಲೇ ಬಗೆಹರಿಸಿಕೊಳ್ಳೋಣ. ದಯವಿಟ್ಟು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ'.
ಇದು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾಡಿಕೊಂಡ ಮನವಿ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದು ಹಾಗೂ ರಾಜಾÂಧ್ಯಕ್ಷ ಸ್ಥಾನ ಕೇಳಿದರೂ ಸಿಗದಿದ್ದರಿಂದ ತುಂಬಾ ನೋವಾಗಿದೆ. ಅದು ನಮಗೂ ಗೊತ್ತಿದೆ. ದಯಮಾಡಿ ಅವರಿಗೆ ಕೈ ಮುಗಿದು ಪ್ರಾರ್ಥಿಸುತ್ತೇನೆ. ಸಣ್ಣ ಪುಟ್ಟ ಗೊಂದಲ ಇದ್ದರೆ ಬಗೆಹರಿಸಿಕೊಳ್ಳೋಣ, ದುಡುಕುವುದು ಬೇಡ ಎಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಇದೇ ವೇಳೆ ಈಶ್ವರಪ್ಪ ಆಶಾವಾದ ವ್ಯಕ್ತಪಡಿಸಿದರು. ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕೆ ಪ್ರತಿಯೊಬ್ಬರೂ ಅನಿವಾರ್ಯ ಎಂದರು.