Tuesday, May 21, 2013
Last Updated: 8:47:59 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕೊನೆಗೂ ಕಸಬ್‌ ಕೊರಳಿಗೆ ಉರುಳು
  • ಮುಂಬೈ ದಾಳಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಏಕೈಕ ಉಗ್ರ ಅಜ್ಮಲ್‌ ಕಸಬ್‌ಗೆ ಕೊನೆಗೂ ಮರಣದಂಡನೆ.

    • Udayavani | Nov 21, 2012

      ಪುಣೆ: ಮುಂಬಯಿ ಮೇಲೆ ದಾಳಿ ಮಾಡಿದ ಪಾಕಿಸ್ಥಾನದ ಉಗ್ರ ಅಜ್ಮಲ್‌ ಮೊಹಮ್ಮದ್‌ ಕಸಬ್‌ನನ್ನು ಬುಧವಾರ ಬೆಳಗ್ಗೆ ನಡೆದ ಅತ್ಯಂತ ರಹಸ್ಯ ಕಾರ್ಯಾಚಣೆಯಲ್ಲಿ ಪುಣೆಯ ಯೆರವಡಾ ಜೈಲಿನಲ್ಲಿ ನೇಣಿಗೇರಿಸಿ ಅಲ್ಲಿಯೇ ದಫ‌ನ ಮಾಡಲಾಯಿತು.

      2008ರ ನ.26ರಂದು ನಡೆದ ಮುಂಬಯಿ ಮೇಲಣ ಭಯೋತ್ಪಾದಕ ದಾಳಿಗೆ ನಾಲ್ಕು ವರ್ಷ ತುಂಬಲು ಇನ್ನು ಕೆಲವು ದಿನ ಬಾಕಿಯಿರುವಂತೆಯೇ ಜೀವಂತವಾಗಿ ಸೆರೆ ಸಿಕ್ಕಿದ್ದ ಏಕೈಕ ಉಗ್ರನ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.

      ಬೆಳಗ್ಗೆ 7.50ರ ತನಕ ಎಲ್ಲವೂ ಮಾಮೂಲಿನಂತಿತ್ತು. ಮೈಕೊರೆಯುವ ಚಳಿಯಲ್ಲಿ ಬಿಸಿ ಚಹಾ ಗುಟುಕರಿಸುತ್ತಾ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಮತ್ತು ಟಿವಿ ಸುದ್ದಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದವರಿಗೆ ಇನ್ನು ಕೆಲವೇ ಕ್ಷಣಗಳಲ್ಲಿ ತಾವು ಜಗತ್ತಿನಾದ್ಯಂತ ಸಂಚಲನವುಂಟುಮಾಡಲಿರುವ ಭಾರೀ ಸುದ್ದಿಯೊಂದನ್ನು ನೋಡಲಿದ್ದೇವೆ ಎನ್ನುವ ಚಿಕ್ಕ ಸುಳಿವು ಕೂಡ ಇರಲಿಲ್ಲ. ಕಸಬ್‌ನನ್ನು ಪುಣೆಯ ಯೆರವಡಾ ಜೈಲಿನೊಳಗೆ ಗಲ್ಲಿಗೇರಿಸಲಾಗಿದೆ ಎನ್ನುವ ಸುದ್ದಿ ಪರದೆ ಮೇಲೆ ಸ್ಫೋಟಿಸಿದಾಗ ಜನರು ಒಮ್ಮೆಲೆ ಚಕಿತರಾದರು. ಒಂದು ಚಿಕ್ಕ ಸುಳಿವು ಕೂಡ ಸೋರಿಹೋಗದಷ್ಟು ರಹಸ್ಯವಾಗಿ ಕಸಬ್‌ನ ಕತೆ ಮುಗಿಸಿದ ಬಳಿಕ ಈ ಸುದ್ದಿಯನ್ನು ಬಹಿರಂಗಗೊಳಿಸಲಾಗಿತ್ತು.

      ತತ್‌ಕ್ಷಣ ನೆನಪಿಗೆ ಬಂದದ್ದು ಉಸಾಮ ಬಿನ್‌ ಲಾದನ್‌ನನ್ನು ಬೇಟೆಯಾಡಲು ಅಮೆರಿಕ ನಡೆಸಿದ ರಹಸ್ಯ ಕಾರ್ಯಾಚರಣೆ. ಅಮೆರಿಕ ಕೂಡ ಪಾಕಿಸ್ಥಾನಕ್ಕೆ ಒಂದು ಚಿಕ್ಕ ಸುಳಿವು ಕೂಡ ಬಿಟ್ಟುಕೊಡದೆ ರಾತೋರಾತ್ರಿ ಆ ದೇಶದೊಳಕ್ಕೆ ನುಗ್ಗಿ ಲಾದನ್‌ನನ್ನು ಕೊಂದು ಶವವನ್ನು ಎತ್ತಿಕೊಂಡು ಹೋಗಿತ್ತು.

      ಅನಂತರ ತುಸು ಹೊತ್ತಿನಲ್ಲಿ ಟಿವಿಯಲ್ಲಿ ಕಾಣಿಸಿಕೊಂಡ ಮಹಾರಾಷ್ಟ್ರದ ಗೃಹ ಸಚಿವ ಆರ್‌.ಆರ್‌. ಪಾಟೀಲ್‌ 25 ವರ್ಷ ಪ್ರಾಯವಾಗಿದ್ದ ಉಗ್ರ ಅಜ್ಮಲ್‌ ಕಸಬ್‌ನನ್ನು ಬುಧವಾರ ಬೆಳಗ್ಗೆ 7.30ಕ್ಕೆ ಪುಣೆಯ ಯೆರವಡಾ ಜೈಲಿನಲ್ಲಿ ನೇಣಿಗೆ ಹಾಕಲಾಗಿದೆ ಎಂದು ಅಧಿಕೃತ ಹೇಳಿಕೆ ನೀಡಿದರು. ಇದರ ಬೆನ್ನಿಗೆ ಕಸಬ್‌ನನ್ನು ಯೆರವಡಾ ಜೈಲಿನಲ್ಲಿ ದಫ‌ನ ಮಾಡಲಾಗಿದೆ ಎನ್ನುವ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಹೇಳಿಕೆ ಬಂತು. ಕಸಬ್‌ನನ್ನು ಯೆರವಡಾ ಜೈಲಿನ ಆವರಣದಲ್ಲಿಯೇ ದಫ‌ನ ಮಾಡಲಾಗಿದೆ ಹಾಗೂ ಅವನು ಯಾವುದೇ ಕೊನೆಯ ಆಸೆಯನ್ನು ಹೊಂದಿರಲಿಲ್ಲ ಎಂದು ಚವಾಣ ಮುಂಬಯಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.

      ಕೊನೆಗೂ ಕಸಬ್‌ ನೇಣಿನ ಉರುಳಿಗೆ ಕೊರಳೊಡ್ಡುವುದರೊಂದಿಗೆ ಮುಂಬಯಿ ಮೇಲೆ ನಾಲ್ಕು ವರ್ಷದ ಹಿಂದೆ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಮಡಿದಿರುವ 166 ಮಂದಿಗೆ ಮತ್ತು ಅವರ ಮನೆಯವರಿಗೆ ನ್ಯಾಯ ನೀಡಿದಂತಾಗಿದೆ. 2008 ನ. 26ರಂದು ರಾತ್ರಿ ಸಮುದ್ರ ಮಾರ್ಗವಾಗಿ ಮುಂಬಯಿಗೆ ನುಗ್ಗಿ ಬಂದ ಲಷ್ಕರ್‌-ಎ-ತಯ್ಯಬದ 10 ಉಗ್ರರು ಬೀದಿ ಬೀದಿಗಳಲ್ಲಿ ಮೃತ್ಯು ತಾಂಡವ ನಡೆಸಿ ಎದುರಿಗೆ ಸಿಕ್ಕಿದವರನ್ನೆಲ್ಲ ಗುಂಡಿಕ್ಕಿ ಸಾಯಿಸಿದ್ದಲ್ಲದೆ ಸುಮಾರು 60 ತಾಸು ಪೂರ್ತಿ ಮುಂಬಯಿಯನ್ನು ಒತ್ತೆಸೆರೆಯಲ್ಲಿಟ್ಟುಕೊಂಡ ಪೈಶಾಚಿಕ ಕೃತ್ಯ ಇನ್ನೂ ಜನಮನದಿಂದ ಮರೆಯಾಗಿಲ್ಲ. ಈ ಭಯೋತ್ಪಾದಕ ದಾಳಿಯ ಏಕೈಕ ಜೀವಂತ ಪ್ರತಿನಿಧಿಯಂತಿದ್ದವ ಕಸಬ್‌.

      ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನ. 5ರಂದು ಪ್ರಾಣಭಿಕ್ಷೆ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಜೀವಸಹಿತ ಉಳಿಯುವ ಎಲ್ಲ ಕಾನೂನು ಸಮ್ಮತ ದಾರಿಗಳು ಕಸಬ್‌ ಪಾಲಿಗೆ ಮುಚ್ಚಿ ಹೋಗಿತ್ತು. ಸೆರೆಯಾದಂದಿನಿಂದ ಮುಂಬಯಿಯ ಆರ್ಥರ್‌ ರೋಡ್‌ ಜೈಲಿನಲ್ಲಿದ್ದ ಕಸಬ್‌ನನ್ನು ನ. 18ರ ಮಧ್ಯರಾತ್ರಿ ದಾಟುತ್ತಿದ್ದಂತೆ ಗರಿಷ್ಠ ಭದ್ರತೆಯ ಸೆಲ್‌ನಿಂದ ಹೊರಗೆ ಕರೆದುಕೊಂಡು ಪುಣೆಗೆ ಸಾಗಿಸಲಾಯಿತು. ಮರುದಿನ ನಸುಕಿನ ಹೊತ್ತಿಗೆ ಕಸಬ್‌ ಯೆರವಡಾ ಜೈಲಿಗೆ ತಲುಪಿದ.

      ನ. 5ರಂದು ರಾಷ್ಟ್ರಪತಿ ತಿರಸ್ಕರಿಸಿದ್ದ ಕಸಬ್‌ನ ಪ್ರಾಣಭಿಕ್ಷೆ ಅರ್ಜಿಗೆ ನ.7ರಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಅಂಕಿತ ಹಾಕಿದರು ಹಾಗೂ ನ.8ರಂದು ಮಹಾರಾಷ್ಟ್ರ ಸರಕಾರಕ್ಕೆ ಕಸಬ್‌ನನ್ನು ಗಲ್ಲಿಗೇರಿಸುವ ತಯಾರಿ ನಡೆಸಲು ಸೂಚಿಸಲಾಯಿತು. ನ. 21ರಂದು ಬೆಳಗ್ಗೆ 7.30ಕ್ಕೆ ಕಸಬ್‌ ಕುತ್ತಿಗೆಗೆ ನೇಣು ಬಿಗಿಯುವುದೆಂದು ನಿರ್ಧರಿಸಲಾಗಿತ್ತು. ಎಲ್ಲ ಪ್ರಕ್ರಿಯೆ ಎಣಿಸಿದಂತೆ ಯೋಜನಾಬದ್ಧವಾಗಿ ನಡೆದು ನ. 21ರ ಬುಧವಾರದ ಶುಭ್ರ ಮುಂಜಾನೆ ಜಗತ್ತಿನ ಕಡು ಪಾತಕಿ ಪಾಪಿಯ ಕರಾಳ ಬದುಕಿನ ಅಧ್ಯಾಯ ಮುಗಿಯಿತು.

      ಕಾನೂನು ಅಗತ್ಯಗಳಿಗನುಧಿಗುಣವಾಗಿ ಪಾಕಿಸ್ಥಾನಕ್ಕೆ ಮತ್ತು ಕಸಬ್‌ನ ಮನೆಯವರಿಗೆ ಅವನನ್ನು ನೇಣಿಗೇರಿಸುವ ವಿಚಾರವನ್ನು ಮುಂಚಿತವಾಗಿಯೇ ತಿಳಿಸಲಾಗಿತ್ತು. ಆದರೆ ಪಾಕಿಸ್ಥಾನ ಭಾರತ ಕಳುಹಿಸಿದ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದಾಗ ಫ್ಯಾಕ್ಸ್‌ ಮೂಲಕ ಪತ್ರವನ್ನು ರವಾನಿಸಲಾಯಿತು. ಅಂತೆಯೇ ಕಸಬ್‌ನ ಮನೆಯವರಿಗೆ ಕೊರಿಯರ್‌ ಮೂಲಕ ಪತ್ರವನ್ನು ರವಾನಿಸಲಾಗಿದೆ.

      ನ.12ರಂದೇ ಕಸಬ್‌ಗ ನ. 21ರಂದು ಗಲ್ಲಿಗೇರಿಸುವ ಸಂಗತಿಯನ್ನು ತಿಳಿಸಿ ಡೆತ್‌ ವಾರಂಟ್‌ಗೆ ಅವನ ಸಹಿಯನ್ನು ಪಡೆದುಕೊಳ್ಳಲಾಗಿತ್ತು. ಪುಣೆಯ ಜೈಲಿಗೊಯ್ಯುವ ತನಕ ನಿರ್ಭಾವುಕನಾಗಿದ್ದ ಕಸಬ್‌ ತಾನು ಸಾಯುವ ಸಂಗತಿಯನ್ನು ತಾಯಿಗೆ ತಿಳಿಸಿ ಎನ್ನುವ ಚಿಕ್ಕ ಕೋರಿಕೆಯನ್ನು ಮಾತ್ರ ಇಟ್ಟಿದ್ದ. ಆದರೆ ಗಲ್ಲಿಗೇರುವ ಕ್ಷಣ ಸಮೀಪಿಸುತ್ತಿದ್ದಂತೆ ಅವನು ಅಧೀರನಾಗತೊಡಗಿದ. ಹಾವಭಾವಗಳನ್ನು ನೋಡುವಾಗಲೇ ಅವನು ಬಹಳ ವಿಚಲಿತನಾಗಿರುವಂತೆ ಕಾಣಿಸುತ್ತಿತ್ತು.ಜೈಲಿನ ಸೆಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಧಿಕಾರಿಗಳು ಅವನನ್ನು ಗಲ್ಲುಕಂಬದ ಬಳಿಗೆ ಕರೆದೊಯ್ದರು. ಗಲ್ಲಿಗೇರಿಸುವ ಪ್ರಕ್ರಿಯೆಯುದ್ದಕ್ಕೂ ಒಂದೇ ಒಂದು ಶಬ್ದವನ್ನು ಉಸುರದೆ ಮೌನವಾಗಿದ್ದ.

      ಕೊನೆಯಾಸೆ ಇಲ್ಲ ....
      ದೇವರಾಣೆಗೂ ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲ '

       ನೇಣಿಗೆ ಕೊರಳೊಡ್ಡಿ ನಿಂತ ಅಪರಾಧಿಯ ಬಳಿ ನಿನ್ನ ಕೊನೆಯ ಆಸೆ ಏನು ಎಂದು ಕೇಳುವುದು ಕ್ರಮ. ಆದರೆ ಕಸಬ್‌ ಮಾತ್ರ ಯಾವುದೇ ಕೊನೆಯ ಆಸೆಯನ್ನು ವ್ಯಕ್ತಪಡಿಸಲಿಲ್ಲ. 'ನನಗೆ ಯಾವುದೇ ಆಸೆ ಇಲ್ಲ 'ಎಂದು ಸ್ಪಷ್ಟವಾಗಿ ಹೇಳಿದನೆಂದು ಮಹಾರಾಷ್ಟ್ರ ಗೃಹ ಸಚಿವ ಆರ್‌. ಆರ್‌.ಪಾಟೀಲ್‌ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

      ನೇಣುಗಂಬವೇರುವ ಸ್ವಲ್ಪ ಮೊದಲು ಬುಧವಾರ (ಮುಂಜಾನೆ 7.30ಕ್ಕೆ ) ಕಸಬ್‌ ಯೆರವಡಾ ಜೈಲಿನ ಅಧಿಕಾರಿಯ ಬಳಿ ' ನನಗೆ ಕೊನೆಯ ಆಸೆ ಏನೂ ಇಲ್ಲ. ದೇವರಾಣೆಗೂ ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲ ' ಎಂದು ಹೇಳಿದ್ದ.

      ನಾನು ಮಾಡಿದ ತಪ್ಪನ್ನು ಅಲ್ಲಾಹು ಕೂಡ ಕ್ಷಮಿಸಲಾರ

      ' ನಾನು ಮಡಿದ ಘೋರ ತಪ್ಪನ್ನು ಅಲ್ಲಾಹು ಕೂಡ ಕ್ಷಮಿಸಲಾರ. ಓ ದೇವರೇ ... ನನ್ನನ್ನು ಕ್ಷಮಿಸು ' - ಇದು ನೇಣುಗಂಬಕ್ಕೆ ಕೊರಳೊಡ್ಡಿ ನಿಲ್ಲಲು ಬಂದ ಕಸಬ್‌ ಜೈಲರ್‌ ಬಳಿ ಹೇಳಿದ ಕೊನೆಯ ಮಾತು.
      ಸಾಯುವ ಹೊತ್ತು ಸಮೀಪಿಸುತ್ತಿದ್ದಂತೆ ಕಸಬ್‌ಗ ತಾನು ಮಾಡಿದ ಪಾಪಕೃತ್ಯದ ಬಗ್ಗೆ ಪಶ್ಚಾತ್ತಾಪವಾಗಿತ್ತು. ತನ್ನ ಬಗ್ಗೆಯೇ ಜುಗುಪ್ಸೆಯಾಗಿತ್ತು. ನೇಣಿಗೇರಿಸುವ ಮುನ್ನ ಎಲ್ಲ ವಿಚಾರಗಳನ್ನು ಕಸಬ್‌ಗ ಕ್ರಮಪ್ರಕಾರ ತಿಳಿಸಲಾಗಿತ್ತು. ಕಸಬ್‌ ಮರಣದಂಡನೆಯನ್ನು ಹೈ ಕೋರ್ಟ್‌ ಸೂಚನೆಯಂತೆ ಆತನ ಕುಟುಂಬವರ್ಗಕ್ಕೆ ಈಗಾಗಲೇ ತಿಳಿಸುವ ಪ್ರಯತ್ನಗಳನ್ನು ನಡೆಸಲಾಗಿದೆ.

      ನನ್ನ ತಾಯಿಗೆ ವಿಷಯ ತಿಳಿಸಿ

      ಇದಕ್ಕೂ ಮುನ್ನ ನ.5ರಂದು ಪ್ರಣವ್‌ ಮುಖರ್ಜಿ ಕಸಬ್‌ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದರು. ನೇಣಿನ ಶಿಕ್ಷೆ ಖಾಯಂ ಆಯ್ತು ಎಂದು ಮನವರಿಕೆಯಾದಾಗ ಆತ ಈ ವಿಷಯ ಪಾಕಿಸ್ಥಾನದಲ್ಲಿರುವ ತನ್ನ ತಾಯಿಗೆ ತಿಳಿಸಿಬಿಡಿ ಎಂದು ವಿನಂತಿಸಿದ್ದ. ಇದಕ್ಕೆ ಅಧಿಕಾರಿಗಳು ಸಮ್ಮತಿಸಿದ್ದರು. ಆದರೆ ಆತ ಕೊಟ್ಟ ಮಾಹಿತಿಯ ಆಧಾರದಲ್ಲೇ ಆತನ ಕುಟುಂಬದವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

      ಕಸಬ್‌ನನ್ನು ನೇಣಿಗೇರಿಸಿರುವುದನ್ನು ಭಾರತೀಯ ರಾಯಭಾರಿ ಮೂಲಕ ಪಾಕ್‌ ಸರಕಾರಕ್ಕೆ ಮತ್ತು ಆತನ ಕುಟುಂಬವರ್ಗದವರಿಗೆ ತಿಳಿಸಲಾಗಿದೆ . ಆದರೆ ಯಾರೊಬ್ಬರೂ ಶವವನ್ನು ಪಡೆದುಕೊಳ್ಳಲು ಮುಂದೆ ಬಂದಿಲ್ಲ ಎಂದು ಕೇಂದ್ರ ಗೃಹ ಖಾತೆಯ ಅಧಿಕೃತ ಮೂಲಗಳು ತಿಳಿಸಿವೆ.

      ಗಲ್ಲಿಗೆ ಮುನ್ನ ಅಧೀರನಾಗಿದ್ದ ಕಸಬ್‌

      ನೇಣುಗಂಬಕ್ಕೇರಿಸುವ ಕೆಲವೇ ನಿಮಿಷಗಳ ಮುನ್ನ ಅಜ್ಮಲ್‌ ಆಮಿರ್‌ ಕಸಬ್‌, ಸಂಪೂರ್ಣ ಅಧೀರನಾಗಿದ್ದನಲ್ಲದೆ ಮೌನಕ್ಕೆ ಶರಣಾಗಿ ಪ್ರಾರ್ಥನೆಗಳನ್ನು ಸಲ್ಲಿಸಿದ್ದ!.

      'ಆತನ ಶಾರೀರಿಕ ಭಾಷೆ, ಆತ ಸಂಪೂರ್ಣ ಧೃತಿಗೆಟ್ಟಿರುವುದನ್ನು ಸೂಚಿಸುತ್ತಿತ್ತು. ನೇಣುಗಂಬಕ್ಕೇರಿಸುವ ಸಲುವಾಗಿ ಆತನನ್ನು ಸೆಲ್‌ನಿಂದ ಹೊರ ಕರೆತರುವ ಸಂದರ್ಭದಲ್ಲಿ ಆತ ಮೌನಿಯಾಗಿ ಪ್ರಾರ್ಥಿಸುತ್ತಿದ್ದ. ತನ್ನನ್ನು ಗಲ್ಲಿಗೇರಿಸುತ್ತಿರುವ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆಯೇ? ಎಂದು ಆತ ನಮ್ಮಲ್ಲಿ ಪ್ರಶ್ನಿಸಿದ. ಈಗಾಗಲೇ ನಿನ್ನ ಕುಟುಂಬಕ್ಕೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ನಾವು ಉತ್ತರಿಸಿದೆವು ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.

      ಇದಕ್ಕೂ ಮುನ್ನ ಆರ್ಥರ್‌ ರೋಡ್‌ ಜೈಲಿನ ಹಿರಿಯ ಅಧಿಕಾರಿಯೋರ್ವರು, ಕಸಬ್‌ನ ಮರಣದಂಡನೆ ಶಿಕ್ಷೆ ಜಾರಿಯ ಆದೇಶವನ್ನು ಓದಿ ಆತನಿಗೆ ತಿಳಿಸಿದರು. ರಾಷ್ಟ್ರಪತಿಯವರು ನಿನ್ನ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿರುವರು ಎಂದು ಕಸಬ್‌ಗ ಮಾಹಿತಿ ನೀಡಿದರು. ಬಳಿಕ ಆತನಿಂದ ಈ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು. ಈ ಎಲ್ಲ ಪ್ರಕ್ರಿಯೆಗಳ ಬಳಿಕ ಕಸಬ್‌ನನ್ನು ಮರಣದಂಡನೆ ಶಿಕ್ಷೆಯ ಜಾರಿಗಾಗಿ ಭಾರೀ ಗೌಪ್ಯತೆಯೊಂದಿಗೆ ಯೆರವಡಾ ಜೈಲಿಗೆ ಕರೆದೊಯ್ಯಲಾಯಿತು.

      ಗಲ್ಲಿನ ವೀಡಿಯೊ ಚಿತ್ರೀಕರಣ

      ಕಸಬ್‌ನನ್ನು ಮುಂಬೈನ ಆರ್ಥರ್‌ ರಸ್ತೆ ಜೈಲಿನಿಂದ ಪುಣೆ ಯರವಾಡಾ ಜೈಲಿಗೆ ಸ್ಥಳಾಂತರ ಮಾಡಿ ಗಲ್ಲಿಗೇರಿಸುವವರೆಗೆ ಸಂಪೂರ್ಣ ವೀಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
      ಸಾಕ್ಷ್ಯ ಕಾಪಾಡುವ ಉದ್ದೇಶದಿಂದ ವೀಡಿಯೊ ಮಾಡಲಾಗಿದೆ ಎಂದು ಅವು ಹೇಳಿವೆ.

      ತಂದೆಯ ಜತೆಗೆ ಮಾಡಿದ ಜಗಳ ಸಾವಿನ ಮನೆಗೆ ಕರೆತಂದಿತು

      ಕಸಬ್‌ನ ಪಾತಕ ಲೋಕದ ಪ್ರಯಾಣ ಪ್ರಾರಂಭವಾಗುವುದು 2005ರಲ್ಲಿ ತಂದೆಯ ಜತೆಗೆ ಮಾಡಿದ ಜಗಳದಿಂದ. ಈದ್‌ ಹಬ್ಬದ ದಿನ ಕಸಬ್‌ ತಂದೆಯಲ್ಲಿ ಹೊಸ ಉಡುಪು ಕೇಳಿದ. ರಸ್ತೆ ಬದಿಯಲ್ಲಿ ತಿಂಡಿ ಮಾರಿ ಕುಟುಂಬ ಪೋಷಣೆ ಮಾಡುತ್ತಿದ್ದ ಬಡತಂದೆಗೆ ಮಗನಿಗೆ ಹೊಸ ಉಡುಪು ಖರೀದಿಸಿಕೊಡುವಷ್ಟು ಚೈತನ್ಯ ಇರಲಿಲ್ಲ. ಹೊಸ ಬಧಿಟ್ಟೆ ಕೊಟ್ಟಿಲ್ಲ ಎಂದು ತಂದೆಯ ಜತೆಗೆ ಜಗಳವಾಡಿ ಮನೆ ಬಿಟ್ಟು ಓಡಿ ಹೋದ ಕಸಬ್‌ಗ ಜತೆಯಾದವ ಮುಜಾಫ‌ರ್‌ ಲಾಲ್‌ ಖಾನ್‌ ಎನ್ನುವ ಪುಡಿ ಪಾತಕಿ. ಚಿಕ್ಕಪುಟ್ಟ ಕಳ್ಳತನ ಮಾಡಿಕೊಂಡಿದ್ದ ಅವರು ಅನಂತರ ಚಾಕು ಮಚ್ಚು ತೋರಿಸಿ ದರೋಡೆ ಮಾಡುವ ಕೃತ್ಯಕ್ಕಿಳಿದರು.

      2007ರ ಡಿ. 21ರಂದು ಅವರು ರಾವಲ್ಪಿಂಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದಾಗ ಕರಪತ್ರ ಹಂಚುತ್ತಿದ್ದ ಲಷ್ಕರ್‌ನ ರಾಜಕೀಯ ಮುಖವಾದ ಜಮಾತ್‌ ಉದ್‌ ದಾವಾದ ಕಾರ್ಯಕರ್ತನೊಬ್ಬನ ಕಣ್ಣಿಗೆ ಬಿದ್ದರು. ಇಲ್ಲಿಂದ ಕಸಬ್‌ ನೇರವಾಗಿ ಹೋದದ್ದು ಮರ್ಕಜ್‌ ತೈಬದಲ್ಲಿರುವ ಲಷ್ಕರ್‌ನ ಉಗ್ರ ತರಬೇತಿ ಶಿಬಿರಕ್ಕೆ. ಹೀಗೆ ಪಾತಕ ಲೋಕದಲ್ಲಿ ಹೆಜ್ಜೆಯಿಡುತ್ತಿದ್ದ ಕಸಬ್‌ ಉಗ್ರನಾಗಿ ಬದಲಾದ. ಅನಂತರದ್ದೆಲ್ಲ ಈಗ ಇತಿಹಾಸ. ತಂದೆಯ ಜತೆಗೆ ಹೊಸ ಬಟ್ಟೆಗಾಗಿ ಮಾಡಿದ ಜಗಳವೇ ಕೊನೆಗೆ ಕಸಬ್‌ನನ್ನು ಪುಣೆಯ ಯೆರವಡಾ ಜೈಲಿನ ನೇಣುಕಂಬದ ತನಕ ಕರೆತಂದಿತು.

      ಕಸಬ್‌ನನ್ನು ನೇಣಿಗೆ ಏರಿಸಿದ್ದು ಯಾರೆಂದೇ ಗೊತ್ತಿಲ್ಲ!

      ಈತ ಔರಂಗಾಬಾದ ಮೂಲದವ?


      ಪುಣೆ: ಈ ಹಿಂದೆ ಧನಂಜಯ ಚಟರ್ಜಿಯನ್ನು 2004ರಲ್ಲಿ ಗಲ್ಲಿಗೇರಿಸಿದಾಗ, ಆತನನ್ನು ಗಲ್ಲಿಗೆ ಏರಿಸಿದ ವ್ಯಕ್ತಿಯ ಕುರಿತು ಎಲ್ಲರಿಗೂ ಮಾಹಿತಿ ಇತ್ತು. ಇದೀಗ 8 ವರ್ಷಗಳ ಬಳಿಕ ಭಾರತದಲ್ಲಿ ವ್ಯಕ್ತಿಯೊಬ್ಬನಿಗೆ ಗಲ್ಲು ಶಿಕ್ಷೆ ಜಾರಿಮಾಡಲಾಗಿದೆ. ಆದರೆ ಕಸಬ್‌ನನ್ನು ಗಲ್ಲಿಗೇರಿಸಿದ್ದು ಯಾರು ಎಂಬ ವಿಚಾರವನ್ನು ಆತನ ಭದ್ರತಾ ಕಾರಣಕ್ಕೆ ಗೋಪ್ಯವಾಗಿಡಲಾಗಿದೆ.

      ಮೂಲಗಳ ಪ್ರಕಾರ, ಈತ ಔರಂಗಾಬಾದ್‌ ಮೂಲದವನು ಎನ್ನಲಾಗಿದೆ. ಗಲ್ಲು ಶಿಕ್ಷೆ ವಿಧಿಸುವ ವ್ಯಕ್ತಿಗೂ ಸ್ವತಃ ತಾನು ಯಾರನ್ನು ಗಲ್ಲಿಗೆ ಏರಿಸುತ್ತಿದ್ದೇನೆ ಎಂಬ ವಿಷಯವನ್ನು ಕೊನೆಯವರೆಗೂ ಹೇಳಿರಲಿಲ್ಲ. ಕೇವಲ ಉಗ್ರನೊಬ್ಬನನ್ನು ಗಲ್ಲಿಗೇರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಮಾತ್ರ ಆತನಿಗೆ ನೀಡಲಾಗಿತ್ತು. ಕಸಬ್‌ನನ್ನು ಗಲ್ಲಿಗೆ ಏರಿಸುವ ಕಡೇ ಹಂತದಲ್ಲಷ್ಟೇ ಅತನಿಗೆ ಈ ಮಾಹಿತಿ ನೀಡಲಾಗಿತ್ತು. ಗಲ್ಲಿಗೆ ಏರಿಸಿದ ವ್ಯಕ್ತಿಯ ಮಾಹಿತಿ ಬಹಿರಂಗವಾದರೆ ಆತ ಮುಂದೆ ಅಪಾಯ ಎದುರಿಸಬೇಕಾದ ಸಾಧ್ಯತೆ ಇದೆ ಎಂಬ ಅಂಜಿಕೆಯಲ್ಲಿ ಅತನ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

      ನೇಣಿಗೇರಿಸಿದವನಿಗೆ 5000 ರೂ ಸಂಭಾವನೆ

      ಪುಣೆ: 166 ಜನರನ್ನು ಕೊಂದ ಪಾಕ್‌ ಮೂಲದ ಉಗ್ರ ಕಸಬ್‌ ರಕ್ಷಣೆಗೆಂದೇ ಕಳೆದ 4 ವರ್ಷಗಳಲ್ಲಿ ಸರ್ಕಾರ 35 ಕೋಟಿ ರೂ.ಗೂ ಹೆಚ್ಚಿನ ಹಣ ಖರ್ಚು ಮಾಡಿತ್ತು. ಆದರೆ ಕೋಟ್ಯಂತರ ಜನರ ಆಸೆ ಮತ್ತು ನ್ಯಾಯಾಲಯ ತೀರ್ಪಿನಂತೆ ಬುಧವಾರ ಕಸಬ್‌ನನ್ನು ಗಲ್ಲಿಗೇರಿಸಿದವನಿಗೆ ಸಿಕ್ಕಿದ್ದು ಕೇವಲ 5000 ರೂ!

      ಇದು ಅಚ್ಚರಿಯಾದರೂ ಸತ್ಯ. ಕಸಬ್‌ನನ್ನು ಗಲ್ಲಿಗೇರಿಸಲು ಹಲವು ಜನ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೆ ಈ ಪೈಕಿ ಅನುಭವಿ ಮತ್ತು ಅಧಿಕೃತ ವ್ಯಕ್ತಿಯನ್ನೇ ಆಯ್ದುಕೊಂಡ ಮಹಾರಾಷ್ಟ್ರ ಸರ್ಕಾರ ಆತನ ಮೂಲಕವೇ ಗಲ್ಲು ಶಿಕ್ಷೆ ಜಾರಿ ಮಾಡಿಸಿತು. ಬಳಿಕ ಆತನಿಗೆ ಕೇವಲ 5000 ರೂ. ನೀಡಿ ರಹಸ್ಯವಾಗಿ ಕಳುಹಿಸಿಕೊಡಲಾಯಿತು. ಇನ್ನೂ ದುರಂತದ ವಿಷಯವೆಂದರೆ ಈ ಹಿಂದೆ ಹೀಗೆ ಗಲ್ಲಿಗೆ ಏರಿಸಿದವರಿಗೆ ನೀಡುತ್ತಿದ್ದ ಸಂಭಾವನೆ ಕೇವಲ 10 ರೂಪಾಯಿ!

      ಇನ್ನೂ 14 ಕ್ಷಮಾದಾನ ಅರ್ಜಿ ಬಾಕಿ

       ಕಸಬ್‌ ಕ್ಷಮಾದಾನ ಅರ್ಜಿ ತಿರಸ್ಕರಾಗೊಂಡ ನಂತರ ಕ್ಷಮಾದಾನ ಕೋರಿ ಇನ್ನು 14 ಅರ್ಜಿಗಳು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕೈಯಲ್ಲಿವೆ. ಇವುಗಳಲ್ಲಿ ಸಂಸತ್‌ ಮೇಲೆ ದಾಳಿ ಮಾಡಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಉಗ್ರ ಅಫ‌jಲ್‌ ಗುರು, ಪಂಜಾಬ್‌ ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರನ್ನು ಹತ್ಯೆ ಮಾಡಿದ ಬಲ್ವಂತ್‌ ಸಿಂಗ್‌ ರಜೋನ ಅರ್ಜಿ ಕೂಡ ಸೇರಿದೆ. ಕ್ಷಮಾದಾನ ನೀಡಬೇಕೆ ಬೇಡವೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳುವ ಕುರಿತು ಪ್ರಣಬ್‌ ಅವರು ಅಫ‌jಲ್‌ ಅರ್ಜಿಗೆ ಮೊದಲ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ.

      ರಾಜ್ಯದ 4 ಅರ್ಜಿ ಬಾಕಿ

      ಕರ್ನಾಟಕದ ನಾಲ್ವರ ಕ್ಷಮಾದಾನ ಅರ್ಜಿಗಳು ರಾಷ್ಟ್ರಪತಿ ಕಚೇರಿಯಲ್ಲಿವೆ. ವೀರಪ್ಪನ್‌ ಪ್ರಕರಣದ ಆರೋಪಿಗಳು ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಬೆಳಗಾವಿ ಜೈಲಿನಲ್ಲಿದ್ದಾರೆ. ಕರ್ನಾಟಕದಲ್ಲಿ ಒಟ್ಟು 60 ಮಂದಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇಡೀ ದೇಶದಲ್ಲಿ 400 ಮಂದಿಗೆ ನೇಣು ಶಿಕ್ಷೆ ವಿಧಿಸಲಾಗಿದ್ದು ಶಿಕ್ಷೆ ಜಾರಿಯಾಗಬೇಕಿದೆ.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    image
    • Copyright @ 2009 Udayavani.All rights reserved.
    • Designed & Hosted By 4cplus