Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಅಹಿಂಸೆ ಮತ್ತು ಮಾಂಸಾಹಾರ
    • ತೀರ್ಥರಾಮ ವಳಲಂಬೆ | Oct 08, 2010

      ಹಿಂಸೆಯಿಂದ ಮಾಂಸಾಹಾರವನ್ನು ದೂರವಿಟ್ಟಷ್ಟೂ ಪ್ರಕೃತಿಗೆ ಮನುಕುಲದ ಮೇಲೆ ದುಷ್ಪರಿಣಾಮ ಬೀರುವ ಅವಕಾಶ ಕಡಿಮೆಯಾಗುತ್ತದೆ.

      ಲಿವಾ ಫೆಂಗಜು ಎಂಬ ಚೀನಾದೇಶದ ಮಹಿಳೆಯೊಬ್ಬಳು ಮೇಯಲು ಬಿಟ್ಟ ತನ್ನ ಎಮ್ಮೆಗಳನ್ನು ಕರೆತರಲೆಂದು ಕಾಡಿನ ಬದಿಗೆ ಹೋದಾಗ ಇದ್ದಕ್ಕಿದ್ದಂತೆಯೇ ಕರಡಿಯೊಂದು ಆಕೆಯ ಮೇಲೆ ದಾಳಿ ಮಾಡಿತು. ತಮ್ಮ ಒಡತಿಯ ಕೂಗು ಕೇಳಿದ ಅಲ್ಲಿದ್ದ ಎಮ್ಮೆಗಳು ಆ ಕೂಡಲೇ ಓಡಿಬಂದು ಆಕೆಯನ್ನು ಸುತ್ತುವರಿದು ನಿಂತವು. ಅವುಗಳಲ್ಲಿ ಒಂದು ಎಮ್ಮೆ ಕರಡಿಯೊಂದಿಗೆ ಕಾದಾಟಕ್ಕೆ ನಿಂತು ಅದನ್ನು ಓಡಿಸಿತು. ಸಾಕು ಪ್ರಾಣಿಗಳ ಇಂತಹ ಕೆಲ ವಿಶೇಷತೆಗಳು ನಮ್ಮ ಸುತ್ತಮುತ್ತಲ ಊರುಗಳಲ್ಲೂ ದಾಖಲಾದದ್ದಿದೆ. ಎತ್ತರದಿಂದ ಉರುಳಿ ಬರುತ್ತಿರುವ ಮರದ ದಿಮ್ಮಿಗೆ ತಲೆಕೊಟ್ಟು ಆನೆಯೊಂದು ಯಜಮಾನನ ಪ್ರಾಣ ಉಳಿಸಿದ್ದು, ತನ್ನ ಯಜಮಾನನ ಸಾವಿನಿಂದ ಮನನೊಂದು ಅನ್ನ ನೀರು ತ್ಯಜಿಸಿದ ನಾಯಿ, ಕರು ಒಂದರ ಪ್ರಾಣ ಉಳಿಸಲು ಹುಲಿಯೊಂದಿಗೆ ಕಾದಾಡಿದ ಎತ್ತು, ಅನಾಥ ಬೆಕ್ಕಿನ ಮರಿಗೆ ಹಾಲುಣಿಸಿದ ಹಂದಿ... ಇಂತಹ ನೂರಾರು ಘಟನೆಗಳು ಸುದ್ದಿಯಾಗಿವೆ. ಜಾರ್ಜ್‌ ಬರ್ನಾರ್ಡ್‌ ಶಾ ಸಸ್ಯಾಹಾರಿಯಾಗಿದ್ದು ಇಂತಹದ್ದೇ ಒಂದು ಘಟನೆಯಿಂದ, ಒಮ್ಮೆ ಅವರು ಇಲಿಯೊಂದರ ಜಾಡು ಹಿಡಿದು ಅದನ್ನು ಕೊಲ್ಲಬೇಕೆಂದು ಹೊಂಚು ಹಾಕುತ್ತಿದ್ದಾಗ ಆ ಇಲಿಯು ಇನ್ನೊಂದು ಕುರುಡು ಇಲಿಯನ್ನು ಪ್ರಾಣಾಪಾಯದಿಂದ ರಕ್ಷಿಸಲು ಅದರ ಬಾಯಿಗೊಂದು ಪುಟ್ಟ ಕೋಲು ಕೊಟ್ಟು ಆ ಕೋಲನ್ನು ತಾನು ಎಳೆಯುತ್ತಾ ಮುಂದೆ ಸಾಗುತ್ತಿರುವುದನ್ನು ಕಂಡರಂತೆ. ಅದನ್ನು ಕಂಡಂದಿನಿಂದ ಪ್ರಾಣಿಗಳ ಬಗೆಗಿನ ಅವರ ಚಿಂತನೆಯೇ ಬದಲಾಗಿ ಬಿಟ್ಟಿತು.
      *
      *
      ಸಾಕು ಪ್ರಾಣಿಗಳು ಯೋಚಿಸುವ ರೀತಿ ತುಂಬಾ ವಿಚಿತ್ರ. ಅವು ಅದು ಹೇಗೆ ಚಿಂತನೆ ಮಾಡುತ್ತವೋ ತಿಳಿಯದು. ಆದರೆ ಕೆಲವೊಮ್ಮೆ ಅವುಗಳ ಚಿಂತನೆ ಮನುಷ್ಯನಿಗಿಂತಲೂ ಹೆಚ್ಚಿನ ಪ್ರಬುದ್ಧತೆಯಿಂದ ಕೂಡಿರುತ್ತದೆ. ಇತ್ತೀಚೆಗೆ ಹಳ್ಳಿಯೊಂದರಲ್ಲಿ ಒಂದು ವರ್ಷ ವಯಸ್ಸಿನ ನಾಯಿಯೊಂದನ್ನು ಆ ಮನೆಯವರು ಸುಮಾರು 30 ಮೈಲು ದೂರದಲ್ಲಿದ್ದ ತಮ್ಮ ಸಂಬಂಧಿ ಯೋರ್ವರಿಗೆ ಕೊಟ್ಟುಬಿಟ್ಟರು. ಹೆಚ್ಚು ತಕರಾರಿಲ್ಲದೆ ಅವರ ಜೊತೆಗೆ ನಡೆದ ನಾಯಿಗೆ ತಿಂಗಳಾದರೂ ತಾನು ಬಾಲ್ಯದಲ್ಲಿ ತಿಂದುಂಡು ಓಡಾಡಿದ ಮನೆ ಮತ್ತು ಮನೆಮಂದಿಯನ್ನು ಮರೆಯುವುದು ಸಾಧ್ಯವಾಗಲಿಲ್ಲ. ಒಂದು ದಿನ ಸಾಯಂಕಾಲ ಕಠಿನ ನಿರ್ಧಾರಕ್ಕೆ ಬಂದ ನಾಯಿ ಇಡೀ ರಾತ್ರಿ ಕಾಡು, ತೋಟ, ಹೊಲ, ನದಿಗಳನ್ನೆಲ್ಲ ದಾಟಿ ಮರುದಿನ ಮುಂಜಾನೆ ತನ್ನ ಹಿಂದಿನ ಮನೆಯನ್ನು ಬಂದು ತಲುಪಿತು. ಆದರೆ ಆ ಮನೆಯ ಆವರಣವನ್ನು ದಾಟಿ ಅಂಗಳಕ್ಕೆ ಕಾಲಿಡುವ ಮನಸ್ಸು ಮಾಡಲಿಲ್ಲ. ದಣಿವಿನಿಂದ ಗೇಟಿನ ಹೊರಗೆ ಮಲಗಿದ್ದ ನಾಯಿಯನ್ನು ಕಂಡ ಮನೆ ಯವರು ಅದೆಷ್ಟು ಪ್ರೀತಿಯಿಂದ ಬರಮಾಡಿಕೊಂಡರೂ ಅದು ಮನಸ್ಸು ಬದಲಿಸಲಿಲ್ಲ. ಅವರು ಹಾಕಿದ ಆಹಾರಕ್ಕೂ ಬಾಯಿಕ್ಕಲಿಲ್ಲ. ಕೆಲವು ದಿನ ಗೇಟಿನ ಹೊರಗೆ ಅದೇ ರೀತಿ ಅನ್ನ ನೀರು ತ್ಯಜಿಸಿ ಮಲಗಿದ್ದ ನಾಯಿ ಮುಂದೆ ಪಕ್ಕದ ಮನೆಯವರು ಹಾಕಿದ ಅನ್ನ ತಿಂದು ಜೀವ ಉಳಿಸಿಕೊಂಡರೂ ತಾನು ಪ್ರೀತಿಸುತ್ತಿದ್ದ ಮನೆಮಂದಿ ತನ್ನನ್ನು ದೂರಮಾಡಿದರಲ್ಲ ಎಂಬ ದುಃಖ ಮತ್ತು ಕೋಪ ಅದನ್ನು ನಿರಂತರವಾಗಿ ಕಾಡುತ್ತಲೇ ಇತ್ತು. ಮುಂದೆ ಆ ನಾಯಿ ಅದೇ ಪರಿಸರದಲ್ಲೇ ಇದ್ದುಬಿಟ್ಟರೂ ಯಾವುದೇ ಕಾರಣಕ್ಕೂ ಆ ಮನೆಯ ಅಂಗಳವನ್ನು ತುಳಿಯಲಿಲ್ಲ. ಆ ಮನೆಯವರು ನೀಡಿದ ತುತ್ತಿಗೆ ಬಾಯಿ ಹಾಕಲಿಲ್ಲ.
      ಲಿಂಡಾ ಗುಡ್‌ಮನ್‌ ಎಂಬ ಖ್ಯಾತ ಲೇಖಕಿ ತನ್ನ ಪುಸ್ತಕವೊಂದರಲ್ಲಿ ಮಾನವನ ನಡವಳಿಕೆ ಯಿಂದಾಗಿ ಪ್ರಾಣಿಗಳು ಹೊಂದುವ ದೈಹಿಕ, ಮಾನಸಿಕ ಹಿಂಸೆಯ ಸಾಕಷ್ಟು ವಿವರಣೆಗಳನ್ನು ಕೊಡುತ್ತಾರೆ. ಮಾಂಸಕ್ಕೆಂದೇ ಸಾಕಲಾಗುವ ದನಕರುಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜೀವಂತವಾಗಿ ಹಡಗುಗಳಲ್ಲಿ ಸಾಗಿಸುವಾಗ ಅದೆಷ್ಟೋ ಹಾಲುಣ್ಣುವ ಕರುಗಳನ್ನು ತಾಯಿ ಹಸುಗಳಿಂದ ಬೇರ್ಪಡಿಸಲಾಗುತ್ತದೆ. ಆಗ ಹಸು ಮತ್ತು ಕರುಗಳು ಪಡುವ ಸಂಕಟ ಕರುಣಾಜನಕವಾಗಿರುತ್ತದೆ. ವಾರಗಟ್ಟಲೆ ಆಹಾರ ನೀರು ಸೇವಿಸದೇ ಅವು ಪರಿತಪಿಸುತ್ತವೆ. ಮಾನವ, ಪ್ರಾಣಿಗಳನ್ನು ಅಮಾನವೀಯವಾಗಿಯೇ ನಡೆಸಿಕೊಳ್ಳುತ್ತಾನೆ. ಪ್ರಾಣಿಗಳು ಒಂದು ಇನ್ನೊಂದನ್ನು ಬೇಟೆಯಾಡುವುದಕ್ಕೂ ಮಾನವ ಇತರ ಪ್ರಾಣಿಗಳನ್ನು ಬೇಟೆಯಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಹುಲಿಯೊಂದು ತನ್ನ ಹೊಟ್ಟೆ ತುಂಬಿದ ಅನಂತರ ಜಿಂಕೆಯೊಂದು ಹತ್ತಿರ ಸುಳಿದರೂ ಏನೂ ಮಾಡುವುದಿಲ್ಲ. ಮಾನವ ಹಾಗಲ್ಲ. ಕೇವಲ ಮೋಜಿಗಾಗಿಯೇ ಪ್ರಾಣಿಗಳನ್ನು ಬೇಟೆಯಾಡುತ್ತಾನೆ. ಹಿಂಸಿಸುತ್ತಾನೆ. ಕಾರ್ಲ್ ಮಾರ್ಕ್ಸ್ ಹೇಳುವಂತೆ ಕ್ರಿ. ಶ. 1870-1875ರ ನಡುವಿನ 5 ವರ್ಷಗಳ ಅವಧಿಯಲ್ಲಿ ಯುರೋಪಿಯನ್ನರು 25 ಲಕ್ಷ ಕಾಡುಕೋಣಗಳನ್ನು, ಲಕ್ಷೋಪಲಕ್ಷ ತೋಳ, ಕರಡಿ, ನೀರುನಾಯಿಗಳಂಥ ಪ್ರಾಣಿಗಳನ್ನು ಮೋಜಿಗೆಂದೇ ಬೇಟೆಯಾಡಿದ್ದರು. ಈ ರೀತಿ ಪ್ರಾಣಿಗಳ ಮೇಲಿನ ದೌರ್ಜನ್ಯದ ಬಹಳಷ್ಟು ಉದಾಹರಣೆಗಳನ್ನು
      ನೀಡುವ ಮಾರ್ಕ್ಸ್, ಅದರಿಂದ ಜೀವ ಸಂಕುಲದಲ್ಲಿ ಮಹತ್ತರವಾದ ಅಸಮತೋಲನ ಸಂಭವಿಸಿತು ಎಂದು ವಿವರಿಸಿದ್ದಾರೆ.

      ಮನುಷ್ಯನ ಇಂತಹ ಕೆಟ್ಟ ನಡವಳಿಕೆಯೇ ಮನುಕುಲವನ್ನು ಶಾಪವಾಗಿ ಕಾಡುತ್ತದೆ ಎನ್ನುತ್ತದೆ ವೇದಾಂತ. ಪ್ರಕೃತಿಗೆ ನಾವು ಯಾವ ಭಾವನೆಯನ್ನು ತುಂಬುತ್ತೇವೆಯೋ ಅದನ್ನೇ ನಾವು ಪ್ರತಿಫಲವಾಗಿ ಪಡೆಯುತ್ತೇವೆ. ಈ ಪ್ರಕೃತಿ ಎಲ್ಲಾ ಜೀವಿಗಳ ಬದುಕು ಹೋರಾಟಮಯ ವಾಗಿರುವಂತೆ ಯೋಜಿಸಿದರೂ ಆ ಹೋರಾಟದ ಬದುಕಿನಲ್ಲೂ ಜೀವಿಗಳ ಬದುಕು ಕಟ್ಟಲು ಬೇಕಾದ ಅಗತ್ಯಗಳನ್ನು ನೀಡುತ್ತಲೇ ಬಂದಿದೆ. ಕಾಡಿನ ಉರಗವೊಂದು ಮರುಭೂಮಿ ಸೇರಿ ದರೆ ಬದುಕಿ ಉಳಿಯುವಂತಿಲ್ಲ. ಆದರೆ ತಮಗೆ ಮರುಭೂಮಿಯ ಬದುಕು ಅನಿವಾರ್ಯ ಎನ್ನುವ ಭಾವನೆ ಅವೇ ಉರಗಗಳಲ್ಲಿ ಪದೇಪದೇ ವ್ಯಕ್ತವಾಗುತ್ತಾ ಹೋದಂತೆ ಪ್ರಕೃತಿ ಅವುಗಳಿಗೆ ಮರು ಭೂಮಿಗೆ ಹೊಂದಿಕೊಳ್ಳಬಹುದಾದ ದೇಹರಚನೆ ಹಾಗೂ ಆಹಾರಕ್ರಮದಲ್ಲಿ ಬದಲಾವಣೆ ಯನ್ನು ರೂಪಿಸುತ್ತದೆ. ಹಿಮದಲ್ಲಿ, ನೀರಿನಲ್ಲಿ, ಮರದಲ್ಲಿ, ಕೊಳಚೆಯಲ್ಲಿ... ಹಿಗೆ ವಿಭಿನ್ನ ಪರಿಸರ ದಲ್ಲಿ ಬದುಕಬೇಕಾದ ಅನಿವಾರ್ಯತೆ ಬೆಳೆಸಿಕೊಂಡ ಜೀವಿಗಳನ್ನೆಲ್ಲ ಪ್ರಕೃತಿ ಅದೇ ರೀತಿ ಸಲಹುತ್ತದೆ. ಅವುಗಳ ಭಾವನೆಗಳ ಆಧಾರದಲ್ಲೇ ಅವುಗಳ ಬೇಕು-ಬೇಡಗಳನ್ನು ನಿರ್ಧರಿಸುತ್ತದೆ.
      ಈ ಪ್ರಕೃತಿಗೆ ಮಾನವನ ಬದುಕಿನಲ್ಲಿ ಕಾರಣವಿಲ್ಲದೇ ನೋವು ತುಂಬಲು ಅವಕಾಶ ಇರುವು ದಿಲ್ಲ. ಹಾಗಾಗಿ ಪ್ರಕೃತಿ ಮಾನವನಿಂದ ತಪ್ಪುಗಳು ನಡೆಯುವಂತೆ ಪ್ರೇರೇಪಿಸುತ್ತದೆ. ಅಂತಹ ತಪ್ಪುಗಳನ್ನು ಮಾಡಲು ಅವಕಾಶ ಕೊಡುತ್ತದೆ. ಪ್ರಾಣಿ, ಪಕ್ಷಿಗಳ ಮಾಂಸದಲ್ಲಿ ಮಾನವ ರುಚಿ ಕಾಣುವಂತೆ ಮಾಡಿ ಆ ಮೂಲಕ ಸಸ್ಯಾಹಾರದಿಂದ ಬದುಕಬಹುದಾದ ಮಾನವನನ್ನು ಹಿಂಸೆಗೆ ಉತ್ತೇಜಿಸಿ ಮಾಂಸಾಹಾರಿಯನ್ನಾಗಿಸಿದೆ. ಆ ಹಿಂಸೆಯ ಫಲವಾಗಿ ಮೂಡುವ ಪಾಪಕರ್ಮದ ಆಧಾರದಲ್ಲಿ ಈ ಮನುಕುಲವನ್ನು ಚಿತ್ರವಿಚಿತ್ರ ಸಂಕಟಗಳಿಗೆ ಈಡುಮಾಡುತ್ತದೆ. ಸಾವಿರಾರು ವರ್ಷಗಳ ಮೊದಲೇ ಬುದ್ಧ, ಮಹಾವೀರರಂತಹ ಮಹಾನುಭಾವರು ಈ ವಿಚಾರವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು. ವೇದೋಪನಿಷತ್ತುಗಳು ಹಾಗೂ ಭಗವದ್ಗೀತೆ ಕೂಡಾ ಅಹಿಂಸೆಯ ಮಹತ್ವವನ್ನು ಪ್ರಸ್ತಾಪಿಸಿದೆ. ಗೆಲಿಲಿಯೋ, ಐನ್‌ಸ್ಟೈನ್‌, ಗಾಂದೀಜಿ, ರವೀಂದ್ರನಾಥ ಠಾಗೋರರಂತಹ ಬಹಳಷ್ಟು ಗಣ್ಯರು ಪ್ರಾಣಿಗಳ ಮೇಲೆ ಮಾನವ ನಡೆಸುವ ಹಿಂಸೆ ನಿಲ್ಲದೆ ಮಾನವನೆಂದೂ ಈ ನೆಲದಲ್ಲಿ ನೆಮ್ಮದಿ ಕಾಣಲಾರ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಕ್ರಿ. ಪೂ. 580ರಲ್ಲಿ ಜನಿಸಿದ ಖ್ಯಾತ ಗಣಿತಜ್ಞ ಪೈಥಾಗೋರಸ್‌,  For as long as men mssacre animals, they will kill each other ಎಂದು ಹೇಳಿದ್ದ.
      *
      *
      ಮನೆಯ ಸದಸ್ಯರಂತೆ ಬಾಳಿ ಬದುಕುವ ಸಾಕು ಪ್ರಾಣಿಗಳನ್ನು ಅವುಗಳ ಮೈಯಲ್ಲಿ ಬಲವಿದ್ದಾಗ ಹತ್ತು ಹಲವು ರೀತಿಯಲ್ಲಿ ಬಳಸಿಕೊಂಡು ಮುಂದೆ ಕಟುಕರ ಕೈಗೆ ನೀಡಿದಾಗ ಅವು ಅನುಭವಿಸುವ ಮಾನಸಿಕ ವೇದನೆ ನಮಗೆ ಶಾಪವಾಗಿ ಪರಿಣಮಿಸುತ್ತದೆ ಎಂದು ವಿವರಿಸುತ್ತವೆ ಶಾಸ್ತ್ರಗಳು. ಹಾಗಾಗಿಯೇ ದನಕರು, ನಾಯಿ, ಬೆಕ್ಕುಗಳನ್ನು ಕೊಂದು ತಿನ್ನುವ ರೂಢಿ ಈ ದೇಶದ ಬಹುತೇಕರಲ್ಲಿ ಇಲ್ಲ. ಪ್ರಾಣಿಗಳಿಗೆ ನೋವು ಕೊಟ್ಟು ಪಡೆಯುವ ಮಾಂಸವನ್ನು ವೇದಗಳಲ್ಲಿ "ಪಿಶ' ಎಂದು ಕರೆಯಲಾಗಿದ್ದು ಅಂತಹ ಪಿಶವನ್ನು ಸೇವಿಸುವವರನ್ನು ಪಿಶಾಚಿಗಳು ಎನ್ನಲಾಗುತ್ತದೆ.

      ಹಿಂಸೆ ಮತ್ತು ಅಹಿಂಸೆಯ ಹಾದಿಯಲ್ಲಿ ಬದುಕುವ ಆಯ್ಕೆಗಳನ್ನು ಪ್ರಕೃತಿಯೇ ನಮ್ಮ ಮುಂದಿಡುತ್ತದೆ. "ನಿಮ್ಮ ಮಗ ಚೇತರಿಸಿಕೊಳ್ಳಬೇಕಾದರೆ ಅವನಿಗೆ ಮಾಂಸಾಹಾರ ನೀಡಿ' ಎಂದು ವೈದ್ಯರು ಸಲಹೆ ಮಾಡಿದಾಗ ಗಾಂದೀಜಿಯವರು "ನನ್ನ ಮಗನ ಪ್ರಾಣವೇ ಹೋದರೂ ಸರಿ ನಾನಾಗಿ ಆ ತಪ್ಪನ್ನು ಮಾಡುವುದಿಲ್ಲ' ಎಂದಿದ್ದರು. ನಮ್ಮ ಆಹಾರ ಕ್ರಮದಲ್ಲಿ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಮಾಂಸಾಹಾರ ಪ್ರಕೃತಿದತ್ತವಾದುದು, ಹಿಂಸೆ ಬದುಕಿನ ಒಂದು ಭಾಗ, ಹಾಗೇನೇ ಮಾಂಸಾಹಾರ ನಮ್ಮ ಹಕ್ಕು ಕೂಡಾ ಆಗಿದೆ ಎಂಬ ವಾದಗಳಿಗೂ ಈ ಪ್ರಕೃತಿಯಲ್ಲಿ ಅವಕಾಶವಿದೆ. ಆದರೆ ಭಗವಾನ್‌ ಮಹಾವೀರರ ಮಾತಿನಂತೆ ಹಿಂಸೆಯ ಮೂಲಕ ಪಡೆಯುವ ಮಾಂಸಾಹಾರವನ್ನು ದೂರವಿಟ್ಟಷ್ಟೂ ಪ್ರಕೃತಿಗೆ ಮನುಕುಲದ ಮೇಲೆ ದುಷ್ಪರಿಣಾಮ ಬೀರುವ ಅವಕಾಶ ಕಡಿಮೆಯಾಗುತ್ತದೆ. ಆದರೆ ಅಂತಹ ನಿರ್ಧಾರ ಅವರವರ ಆತ್ಮಸಾಕ್ಷಿಗೆ ಬಿಟ್ಟ ವಿಷಯವಾಗುತ್ತದೆ. 

      ಪ್ರತಿಕ್ರಿಯಿಸಿ: feedback@manipalmedia.com


    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus